ಕಾಲ ಉರುಳಿದಂತೆ ಪ್ರಕೃತಿಯಲ್ಲಿನ ಪ್ರತಿಯೊಂದು ಮಾಗುತ್ತದೆ ಅರ್ಥಾತ್ ಪ್ರಕೃತಿಯೇ ಪರಿಪಕ್ವವಾಗುತ್ತಾ ಹೋಗುತ್ತದೆ. ಇದರದೇ ಭಾಗವಾದ ಮನುಷ್ಯರಿಗೂ ಅವರುಗಳು ಮಾಡುವ ನಿರ್ಮಾಣಕ್ಕೂ ಇದೇ ಮಾತು ಅನ್ವಯಿಸುತ್ತದೆಯೇ ? ಅನ್ವಯಿಸುತ್ತದೆ ಎಂಬುದು ಅರ್ಧಸತ್ಯ ! 12ನೇ ಶತಮಾನದಲ್ಲಿ ಹೊಯ್ಸಳ ಕಾಲದ ಶಿಲಾ ಸಂಕೀರ್ಣಗಳನ್ನು ಇಂದಿಗೆ ನಿರ್ಮಿಸಲು ಸಾಧ್ಯವೇ ? ಖಂಡಿತ ಇಲ್ಲ. ಕೆಲವು ಬಾರಿ 20ರ ವಯೋಮಾನದ ವ್ಯಕ್ತಿಗೆ ಇರುವ ಪ್ರಬುದ್ಧತೆಯು 60ರ ವಯೋಮಾನದ ವ್ಯಕ್ತಿಗೆ ಇರುವುದಿಲ್ಲ. ಅಂದರೆ ಕಾಲ ಉರುಳಿದಂತೆ ಎಲ್ಲವೂ ಪಕ್ವವಾಗುತ್ತದೆ ಎಂಬುದು ಸುಳ್ಳಲ್ಲವೇ ?
ಇದೇ ಮಾತು ಸಿನೆಮಾ ರಂಗಕ್ಕೂ ಅನ್ವಯಿಸುತ್ತದೆ. 60ರ ದಶಕದಲ್ಲಿ ನಿರ್ಮಾಣವಾದ ಕನ್ನಡ ಚಿತ್ರರಂಗದ ನಾಂದಿ, ಉಯ್ಯಾಲೆಯಂಥ ಪರಿಪಕ್ವ ಸಿನೆಮಾಗಳು 21ನೇ ಶತಮಾನದಲ್ಲಿ ಎರಡು ದಶಕ ಉರುಳಿದರೂ ಇದೇ ಚಿತ್ರರಂಗದಲ್ಲಿ ಬಂದಿಲ್ಲ !! ಕಾರಣಗಳೇನು ? ಸಿನೆಮಾ ನಿರ್ಮಿಸುವ ತಂತ್ರಜ್ಞಾನ ಅಚ್ಚರಿ ಮೂಡಿಸುವಷ್ಟು ಅಭಿವೃದ್ಧಿಯಾಗಿದೆ. ಸೆಲುಲ್ಯಾಯ್ಡ್ ನಿಂದ ಡಿಜಿಟಲ್ ಯುಗಕ್ಕೆ ಬರಲಾಗಿದೆ. ರೀಲ್ಗಳನ್ನು ಜತನವಾಗಿ ಬಳಸುತ್ತಿದ್ದ ಕಾಲದಿಂದ ಎಷ್ಟೇ ಚಿತ್ರೀಕರಿಸಿದರೂ ಮುಲಾಜಿಲ್ಲದೇ ಡಿಲೀಟ್ ಮಾಡಿ ಮರು ಚಿತ್ರೀಕರಿಸುವ ಹಂತ ಬಂದಾಗಿದೆ. ಆದರೆ “ಮಾಗಿದ ಸಿನೆಮಾ”ಗಳ ಸಂಖ್ಯೆ ಕ್ಷೀಣಿಸುತ್ತಿದೆ ಏಕೆ ? ಒಂದೊಳ್ಳೆಯ ಚಿತ್ರಕಥೆಗೆ, ಒಂದೊಳ್ಳೆಯ ಹಾಡಿಗೆ 60, 70 80ರ ದಶಕದ ಸಿನೆಮಾಗಳತ್ತಲೇ ಕಣ್ಣು ಹಾಯಿಸುವಂಥ ಸ್ಥಿತಿಯಲ್ಲೇ ಏಕೆ ಇದ್ದೇವೆ !
ಮಲೆಯಾಳಂನ ಆಗಸ್ಟ್ 1 ಮತ್ತು ಆಗಸ್ಟ್ 15 ಸಿನೆಮಾಗಳನ್ನು ನೋಡಿದ ನಂತರ ನನ್ನಲ್ಲಿ ಈ ಕುರಿತ ಆಲೋಚನೆ ತೀವ್ರವಾಗಿದೆ. ಏಕೆ ಇವೆರಡೂ ಸಿನೆಮಾಗಳನ್ನೇ ಉದಾಹರಣೆಯಾಗಿ ತೆಗೆದುಕೊಂಡಿದ್ದೇನೆ ಎಂದರೆ ಇವೆರಡೂ ಬೇರೆಬೇರೆ ಕಾಲಘಟ್ಟಗಳಲ್ಲಿ ಒಂದೇ ಚಿತ್ರಕಥೆ ಆಧರಿಸಿ ನಿರ್ಮಾಣವಾದ ಚಿತ್ರಗಳು. ನಾಯಕ ನಟ ಕೂಡ ಒಬ್ಬರೇ ! ಪೋಷಕ ಪಾತ್ರದಲ್ಲಿರುವವರು ಎರಡರಲ್ಲಿಯೂ ನಟಿಸಿದ್ದಾರೆ ! ಪ್ರಬುದ್ಧತೆಯ ಅಂಶಗಳನ್ನು ಹೋಲಿಸಿ ನೋಡುವುದಕ್ಕೆ ಇದು ಪ್ರಮುಖ ಉದಾಹರಣೆಯಾಗಬಲ್ಲದು !!
ಆಗಸ್ಟ್ 1 ಸಿನೆಮಾ 1988ರಲ್ಲಿ ನಿರ್ಮಿತವಾಗಿದೆ. ಮಲೆಯಾಳಂ ಚಿತ್ರರಂಗದ ಖ್ಯಾತ ತಂತ್ರಜ್ಞ ಸಿಬಿ ಮಲಯಿಲ್ ಇದನ್ನು ಹೆಚ್.ಎನ್. ಸ್ವಾಮಿ ಅವರು ರಚಿಸಿದ ಚಿತ್ರಕಥೆ ಆಧರಿಸಿ ನಿರ್ದೇಶಿಸಿದ್ದಾರೆ. ಜನಪ್ರಿಯ, ದಕ್ಷ ಮತ್ತು ಪ್ರಾಮಾಣಿಕ ಮುಖ್ಯಮಂತ್ರಿಯನ್ನು ಕೊಲ್ಲುವ ಸಂಚನ್ನು ವಿಫಲಗೊಳಿಸುವ ಕಥಾ ಹಂದರವಿದು ! ಎಸ್. ಕುಮಾರ್ ಛಾಯಾಗ್ರಹಣ, ವಿ.ಪಿ. ಕೃಷ್ಣನ್ ಅವರ ಸಂಕಲನ ಕಾರ್ಯಗಳಿವೆ. ಇವೆರಡೂ ಕಾರ್ಯಗಳನ್ನು ನಿರ್ವಹಣೆ ಮಾಡಿರುವ ರೀತಿ ಅನನ್ಯ !
ಪ್ರತಿಯೊಂದು ಪಾತ್ರವೂ ಒಂದು ನಿರ್ದಿಷ್ಟ ದೇಹಭಾಷೆಯನ್ನು ಕೇಳುತ್ತದೆ. ಇದರ ಅನುಸಾರ ನಿರ್ದೇಶಕ ಸಿಬಿ ಮಲಯಿಲ್ ಅವರು ಪೊಲೀಸ್ ಅಧಿಕಾರಿ ಪಾತ್ರಕ್ಕೆ ಮಮ್ಮುಟ್ಟಿ, ಜಿ.ಕೆ. ಪಿಳ್ಳೈ, ಕೆ.ಪಿ.ಎ.ಸಿ. ಅಜೀಜ್ ಅವರನ್ನು ಆಯ್ಕೆ ಮಾಡಿದ್ದಾರೆ. ಇವರುಗಳು ಪೊಲೀಸ್ ಅಧಿಕಾರಿಗಳ ಹಾವಭಾವಗಳನ್ನು ಅಭ್ಯಸಿದ್ದಾರೆ. ಈ ಪಾತ್ರಗಳಿಗಿರುವ ಚೌಕಟ್ಟನ್ನು ಈ ಕಲಾವಿದರು ಮೀರದಂತೆ ನಿರ್ದೇಶಕರು ನೋಡಿಕೊಂಡಿದ್ದಾರೆ.
ಮುಖ್ಯಮಂತ್ರಿ ಪಾತ್ರದ ಸುಕುಮಾರನ್, ಇವರ ಆಪ್ತ ಸಹಾಯಕ ಪಾತ್ರದ ಜಗತಿ ಶ್ರೀಕುಮಾರ್, ಮುಖ್ಯಮಂತ್ರಿ ಪತ್ನಿ ಪಾತ್ರದ ಊರ್ವಶಿ, ರಾಜಕೀಯ ಸಂಚುಗಾರರ ಪಾತ್ರಗಳಾದ ಪ್ರತಾಪ ಚಂದ್ರನ್, ಜನಾರ್ದನ್, ಸಂಚುಗಾರ ಉದ್ಯಮಿ ಪಾತ್ರದ ಕೆ.ಪಿ.ಎ.ಸಿ. ಸನ್ನಿ, ಕೊಲೆಗಾರ ಪಾತ್ರದ ಕ್ಯಾಪ್ಟನ್ ರಾಜು ಇವರೆಲ್ಲರೂ ತಮ್ಮತಮ್ಮ ಪಾತ್ರಗಳಲ್ಲಿ ಜೀವಿಸಿದ್ದಾರೆ.
ಮುಖ್ಯವಾಗಿ ಇಲ್ಲಿ ಪ್ರತಿಯೊಂದು ಪಾತ್ರಕ್ಕೂ ಅದು ಸಣ್ಣದಿರಲಿ, ದೊಡ್ಡದಿರಲಿ ಸೂಕ್ತ ನ್ಯಾಯ ಒದಗಿಸಲಾಗಿದೆ. ಅವುಗಳು ಅಭಿನಯಕ್ಕೆ ಕೇಳುವ ಸ್ಪೇಸ್ ಒದಗಿಸಲಾಗಿದೆ. ಅವರಿಗೆ ಒದಗಿಸಲಾದ ಕ್ಯಾನ್ವಾಸ್ ನಲ್ಲಿ ಎಷ್ಟು ಬೇಕಾದರೂ ಮಿಂಚುವ ಅವಕಾಶ ಒದಗಿಸಲಾಗಿದೆ.
ಆಗಸ್ಟ್ 1 ಸಿನೆಮಾದ ನಿಜವಾದ ನಾಯಕ ಅದರ ಚಿತ್ರಕಥೆ. ಎಲ್ಲಿಯೂ ಅದು ತನ್ನ ಉತ್ಕರ್ಷದ ಗತಿ ಕಳೆದುಕೊಳ್ಳದಂತೆ ಜತನ ವಹಿಸಲಾಗಿದೆ. ಸಂಭಾಷಣೆಗಳು ಜಾಳುಜಾಳು ಆಗದಂತೆ ಮುತುವರ್ಜಿ ವಹಿಸಲಾಗಿದೆ. ಇದರ ಜೊತೆಗೆ ಮುಲಾಜಿಲ್ಲದೇ ಸಂಕಲನ ಕಾರ್ಯದ ಟೇಬಲಿನಲ್ಲಿ ಬೇಡದ ಭಾಗಗಳನ್ನು ಮುಲಾಜಿಲ್ಲದೇ ಕತ್ತರಿಸಲಾಗಿದೆ ! ಇವೆಲ್ಲವುಗಳ ಸೂತ್ರಧಾರರಾದ ನಿರ್ದೇಶಕರು ತಮ್ಮ ಕಾರ್ಯದ ಮಹತ್ವವನ್ನು ಜವಾಬ್ದಾರಿಯಿಂದ ನಿರ್ವಹಿಸಿದ್ದಾರೆ ! ಇವೆಲ್ಲ ಕಾರ್ಯಗಳಿಂದ ಈ ಸಿನೆಮಾ ಅಭೂತಪೂರ್ವ ಎನ್ನುವ ಯಶಸ್ಸು ಪಡೆಯಿತು. ತೆಲುಗಿನಲ್ಲಿ ಖ್ಯಾತ ಕಲಾವಿರಾದ ಅಕ್ಕಿನೇನಿ ನಾಗೇಶ್ವರರಾವ್, ಕೃಷ್ಣ ಅವರುಗಳ ಅಭಿನಯದಲ್ಲಿ ರಿಮೇಕ್ ಆಯಿತು !
ಆಗಸ್ಟ್ 15 ಸಹ ಮುಖ್ಯಮಂತ್ರಿಯನ್ನು ಕೊಲೆ ಮಾಡುವ ಪ್ರಯತ್ನವನ್ನು ವಿಫಲಗೊಳಿಸುವ ಸಿನೆಮಾ. ಇದು 2011ರಲ್ಲಿ ತೆರೆಕಂಡಿದೆ. ಅಂದರೆ ಇದೇ ಚಿತ್ರಕಥೆ ಹೊಂದಿದ್ದ ಆಗಸ್ಟ್ 1 (1988) ತೆರೆಕಂಡು 23 ವರ್ಷಗಳ ನಂತರ !! ಸರಿ ಸುಮಾರು ಎರಡೂವರೆ ದಶಕದಲ್ಲಿ ಮಲೆಯಾಳಂ ಚಿತ್ರರಂಗ ತಾಂತ್ರಿಕವಾಗಿ ಗಮನಾರ್ಹ ಪ್ರಗತಿ ಸಾಧಿಸಿತ್ತು ! ಸಿನೆಮಾಕ್ಕೆ ಹೂಡುವ ಬಂಡವಾಳ, ಕಲಾವಿದರಿಗೆ ನೀಡುವ ಸಂಭಾವನೆ ಹಲವು ಪಟ್ಟು ಹೆಚ್ಚಿತ್ತು. ಆದರೂ ಆಗಸ್ಟ್ 1 ಗಳಿಸಿದ ಅಪಾರ ಜನಮನ್ನಣೆ, ತಂತ್ರಜ್ಞರ ವಿಶೇಷ ಮನ್ನಣೆಯು ಆಗಸ್ಟ್ 15ಕ್ಕೆ ದಕ್ಕಲಿಲ್ಲ.
ಇದಕ್ಕೆ ಸಾಕಷ್ಟು ಕಾರಣಗಳಿವೆ. ಪ್ರಮುಖ ಕಾರಣವೇನೆಂದರೆ ಆಗಸ್ಟ್ 15 ಅನ್ನು ನಿರ್ದೇಶಿಸಿದ ಶಾಜಿ ಕೈಲಾಸ್ ಅವರು ತಮ್ಮ ಸ್ಥಾನದ ಮಹತ್ವವನ್ನು ಅರಿಯದೇ ಹೋಗಿರುವುದು; ಚಿತ್ರಕಥೆ ಬೇಡುವುದನ್ನು ಕೊಡಲು ಸಾಧ್ಯವಾಗದಿರುವುದು, ಪೊಲೀಸ್ ತನಿಖಾಧಿಕಾರಿ ಪಾತ್ರದ ಮಮ್ಮುಟ್ಟಿ, ಮುಖ್ಯಮಂತ್ರಿ ಪಾತ್ರದ ನೆಡುಮುಡಿ ವೇಣು (ಈ ಪಾತ್ರಕ್ಕೂ ಸೂಕ್ತ ಸ್ಪೇಸ್ ಒದಗಿಸಿಲ್ಲ), ಮುಖ್ಯಮಂತ್ರಿ ಸಹಾಯಕ ಪಾತ್ರದ ಜಗತಿ ಶ್ರೀಕುಮಾರ್ ಅವರುಗಳನ್ನು ಹೊರತುಪಡಿಸಿ ಆಯ್ಕೆ ಮಾಡಿದ ಕಲಾವಿದರು ತಾವು ಅಭಿನಯಿಸಿದ ಪಾತ್ರಗಳ ಚೌಕಟ್ಟಿಗೆ ಹೊಂದಲಾಗದ್ದು ಅಥವಾ ಇವರು ಹೊಂದುವಂತೆ ಮಾಡುವಲ್ಲಿ ನಿರ್ದೇಶಕ ವಿಫಲವಾಗಿರುವುದು
ಎರಡನೇ ಪ್ರಮುಖ ಕಾರಣ ಸಿನೆಮಾದ ಛಾಯಾಗ್ರಹಣ (ಪ್ರದೀಪ್ ನಾಯರ್ ) ಚಿತ್ರಕಥೆಗೆ ಪೂರಕವಾಗಿ ಇಲ್ಲದಿರುವುದು, ಸಂಕಲನ (ಭೂಮಿನಾಥನ್) ಕಾರ್ಯ ಸಂಪೂರ್ಣ ವಿಫಲಗೊಂಡಿರುವುದು. ಸಮರ್ಪಕವಾಗಿ ಕತ್ತರಿಯಾಡಿಸಿದ್ದರೆ ಸಿನೆಮಾದ ಅವಧಿಯನ್ನು ಕನಿಷ್ಟ 30 ನಿಮಿಷ ಕಡಿಮೆ ಮಾಡುವ ಅವಕಾಶವಿತ್ತು !
ಮೂರನೇ ಪ್ರಮುಖ ಕಾರಣ ಪೊಲೀಸ್ ಇಲಾಖೆ ರೀತಿ ರಿವಾಜುಗಳು, ತನಿಖೆ ಸಾಗುವ ಕ್ರಮ, ತನಿಖಾಧಿಕಾರಿ ಹಾವಭಾವಗಳು, ಆತ ಧರಿಸುವ ಉಡುಪುಗಳು, ಬಳಸುವ ವಾಹನಗಳು ಇವ್ಯಾವುದಕ್ಕೂ ಗಮನ ಕೊಡದೇ ಇರುವುದು, ಪೊಲೀಸ್ ಅಧಿಕಾರಿ ಎಂದರೆ ಹೆಲ್ಮೇಟ್ ಇಲ್ಲದೆಯೂ ದ್ವಿಚಕ್ರ ವಾಹನ ಚಾಲನೆ ಮಾಡಬಹುದು ಎನ್ನುವಂತಿದೆ. ಒಂದು ಹಂತದಲ್ಲಿ ಹೆಲ್ಮೇಟ್ ಇಲ್ಲದಕ್ಕೆ ತನಿಖಾಧಿಕಾರಿ (ಮಮ್ಮುಟ್ಟಿ) ದಂಡ ಕಟ್ಟುವ ಸನ್ನಿವೇಶವಿದೆ. ಹೀಗಿದ್ದೂ ಸಿನೆಮಾ ಮುಕ್ತಾಯದ ತನಕವೂ ಹೆಲ್ಮೇಟ್ ಕಾಣುವುದೇ ಇಲ್ಲ !!
ನಾಲ್ಕನೇಯ ಪ್ರಮುಖ ಅಂಶ ಜನಪ್ರಿಯ ನಟರ ಮ್ಯಾನರಿಸಂಗಳಿಗೆ ಒತ್ತು ಕೊಟ್ಟಿರುವುದು, ತನಿಖಾಧಿಕಾರಿ ಬಹಳ ಸ್ಟೈಲಾಗಿ ಬುಲ್ಲೆಟ್ ಬೈಕ್ ಏರುವುದನ್ನು ಪದೇಪದೇ ತೋರಿಸಲಾಗಿದೆ. ಬಹುಶಃ ನಾಯಕ ನಟನ ಹೇರ್ ಸ್ಟೈಲ್ ಹಾಳಾಗುತ್ತದೆ ಎಂಬ ಕಾರಣಕ್ಕೂ ಹೆಲ್ಮೇಟ್ ಹಾಕಿಸಿಲ್ಲ. ಈ ಥರದ ಅಭಾಸಗಳು ಚಿತ್ರದುದ್ದಕ್ಕೂ ಇವೆ.
ಒಂದು ಚಿತ್ರಕಥೆ ಬೇಡುವುದನ್ನು ಒದಗಿಸಲು ಸಾಧ್ಯವಾಗದಿದ್ದರೆ ಒಂದು ಉತ್ತಮ ಸಿನೆಮಾ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎನ್ನುವುದಕ್ಕೆ ಆಗಸ್ಟ್ 15 ಅತ್ಯುತ್ತಮ ಉದಾಹರಣೆಯಾಗಬಲ್ಲದು. ಏಕೆಂದರೆ ಇದೇ ಚಿತ್ರಕಥೆ ಆಧರಿಸಿ ಉತ್ತಮ ಸಿನೆಮಾ ಎನಿಸಿಕೊಂಡ ಆಗಸ್ಟ್ 1ರ ಹೋಲಿಕೆಯೂ ಜೊತೆಗಿದೆ ಅಲ್ಲವೇ !? ಮೇಲಿನ ಎರಡೂ ಸಿನೆಮಾಗಳೂ ಯೂ ಟ್ಯೂಬ್ ನಲ್ಲಿವೆ. ಆಸಕ್ತರು ವೀಕ್ಷಿಸಬಹುದು !