ಕನ್ನಡಿಗರ ಪ್ರೀತಿ – ಅಭಿಮಾನಕ್ಕೆ ಪಾತ್ರವಾದ ಪುನೀತ್ ರಾಜಕುಮಾರ್ ಅವರ ಹಠಾತ್ ಸಾವು ನಾಡನ್ನು ದಿಗ್ಬ್ರಮೆಗೊಳಿಸಿತು. ಈ ಸಂದರ್ಭದಲ್ಲಿ ಅಭಿಮಾನಿಗಳು ಉದ್ವೇಗದಿಂದ ಸಂಯಮ ಕಳೆದುಕೊಳ್ಳದಂತೆ ಮುಖ್ಯಮಂತ್ರಿ ಬೊಮ್ಮಾಯಿ ನಿರ್ವಹಿಸಿದ ಜವಾಬ್ದಾರಿ ಗಮನಾರ್ಹ ಎಂಬುದು ಜನತೆ ಅಭಿಪ್ರಾಯ.

ಪವರ್ ಸ್ಟಾರ್ ಅಸ್ವಸ್ಥರಾಗಿದ್ದಾರೆ ಎಂಬ ಸುದ್ದಿ ತಿಳಿದ ತಕ್ಷಣ ಸಿಎಂ ಎಲ್ಲ ಕೆಲಸಗಳನ್ನು ಬದಿಗೊತ್ತಿ ವಿಕ್ರಮ್ ಆಸ್ಪತ್ರೆಗೆ ಧಾವಿಸಿದ್ದರು. ಪುನೀತ್ ಇನ್ನಿಲ್ಲ ಎಂಬ ಸುದ್ದಿ ಪ್ರಕಟವಾದ ತಕ್ಷಣ ಅಭಿಮಾನಿಗಳು ಉದ್ವೇಗಕ್ಕೆ ಒಳಗಾಗುತ್ತಾರೆ ಎಂಬುದು ಅವರಿಗೆ ಅರಿವಿತ್ತು. ಪದೇಪದೇ ಶಾಂತಿ ಸಂಯಮದಿಂದಿರುವಂತೆ ಮನವಿ ಮಾಡಿಕೊಂಡರು.

ಪರಿಸ್ಥಿತಿ ನಿಯಂತ್ರಣ ತಪ್ಪಿ ಹೋಗದಂತೆ ನಿರ್ವಹಣೆ ಮಾಡಲು ಪೊಲೀಸ್ ಇಲಾಖೆಗೂ ಸೂಚಿಸಿದರು. ಎಲ್ಲಿಯೂ ಅಭಿಮಾನಿಗಳೊಂದಿಗೆ ಒರಟಾಗಿ ವರ್ತಿಸದಂತೆ ಕಟ್ಟುನಿಟ್ಟಾಗಿ ಹೇಳಿದ್ದರು. ಪ್ರತಿಯೊಂದು ಸೂಕ್ಷ್ಮ ವಿಚಾರಗಳನ್ನು ಗಮನಿಸಿ ಮಾರ್ಗದರ್ಶನ ಮಾಡಿದರು.

ಕಂಠೀರವ ಸ್ಟೇಡಿಯಂನಲ್ಲಿ ಪಾರ್ಥೀವ ಶರೀರ ಇರಿಸಿದ ನಂತರ ಮತ್ತೆಮತ್ತೆ ಭೇಟಿ ನೀಡಿದರು. ಮತ್ತೆ ಸಂಯಮದಿಂದಿರುವಂತೆ ಅಭಿಮಾನಿಗಳನ್ನು ಕೋರಿದರು. ಪೊಲೀಸ್ ಸಿಬ್ಬಂದಿಯೂ ಬಂದವರು ಅಂತಿಮ ದರ್ಶನ ದೊರೆಯದೇ ರೊಚ್ಚಿಗೇಳಾದ ಹಾಗೆ ನಿಭಾಯಿಸಿದರು.

ಮೂರು ದಿನಗಳ ಕಾಲ ಅಭಿಮಾನಿಗಳು ಪ್ರವಾಹದ ಹಾಗೆ ಬಂದು ಪುನೀತ್ ಅಂತಿಮ ದರ್ಶನ ಪಡೆದರು. ಎಲ್ಲಿಯೂ ಅಚಾತುರ್ಯಗಳಾಗಲಿಲ್ಲ. ಬೆಳಗ್ಗೆ 10ರ ನಂತರ ಮತ್ತೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುತ್ತಾರೆ. ಅಂತಿಮ ಮೆರವಣಿಗೆ ಸಾಗುವಾಗ ಅವರು ಉದ್ವೇಗದಿಂದ ಸಂಯಮ ಕಳೆದುಕೊಳ್ಳಬಹುದು ಎನ್ನುವ ದೃಷ್ಟಿಯಿಂದ ಮುಂಜಾನೆಯೇ ಪಾರ್ಥೀವ ಶರೀರ ಕಂಠೀರತವ ಸ್ಟುಡಿಯೋ ತಲುಪುವಂತೆ ಮಾರ್ಗದರ್ಶನ ಮಾಡಿದರು.

ಜನಮನ್ನಣೆ ಗಳಿಸಿದ ಪುನೀತ್ ಅವರಿಗೆ ಅಂತಿಮ ವಿದಾಯ ಹೇಳುವಾಗ ಗೊಂದಲವಾಗದಂತೆ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆಗೆ ಸಂಬಂಧಿಸಿದ ಸಿದ್ಥತೆಗಳಲ್ಲಿ ಲೋಪವಾಗದ ಹಾಗೆ ನೋಡಿಕೊಂಡರು. ಹಿಂದಿನ ದಿನವೇ ಸ್ಟುಡಿಯೋಗೆ ತೆರಳಿ ಅಲ್ಲಿನ ಸಿದ್ಧತೆಗಳನ್ನು ವೀಕ್ಷಿಸಿ ಅಗತ್ಯ ಸಲಹೆಗಳನ್ನು ನೀಡಿದ್ದರು.

ಇಂದು ಪುನೀತ್ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸುವಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದುಃಖತಪ್ತರಾದರು.. ಅವರ ಕಣ್ಣಾಲಿಗಳಲ್ಲಿ ನೀರು ತುಂಬಿತ್ತು. ಪುನೀತ್ ಮುಖವನ್ನು ಅಂಗೈಗಳಿಂದ ಮೆಲುವಾಗಿ ಸವರಿದರು. ಹಣೆಗೆ ಮುತ್ತಿಟ್ಟರು.

ರಾಜಕುಮಾರ್ ಅವರ ಕುಟುಂಬದೊಂದಿಗೆ ಆಪ್ತತೆ ಹೊಂದಿರುವ ಬೊಮ್ಮಾಯಿ ಅವರು ಪುನೀತ್ ಅವರನ್ನು ಸಣ್ಣಮಗುವಿನಿಂದಲೂ ನೋಡಿದವರು. ಮಾತನಾಡಿಸಿದವರು. ಇವರನ್ನು ಪುನೀತ್ ಆಕ್ಕರೆಯಿಂದ ಮಾಮ ಎಂದೇ ಕರೆಯುತ್ತಿದ್ದರು. ಅವೆಲ್ಲವೂ ನೆನಪಾಗಿ ಸಿಎಂ ಗದ್ಗದಿತರಾಗಿದ್ದರು.

ಇಡೀ ನಾಡಿಗೆ ನಾಡೇ ಪುನೀತ್ ರಾಜಕುಮಾರ್ ಅವರನ್ನು ಶಾಂತಿ ಸಂಯಮದಿಂದ ಬಿಳ್ಕೊಟ್ಟಿತು. ಇದಕ್ಕೆ ಸಂಪುಟದ ಸಚಿವರುಗಳು ಅಧಿಕಾರಿಗಳು ಶ್ರಮಿಸಿದ್ದಾರೆ. ಪುನೀತ್ ಅವರ ಕುಟುಂಬ ಸದಸ್ಯರು ಸಹಕಾರ ನೀಡಿದ್ದಾರೆ. ವರನಟ ರಾಜಕುಮಾರ್ ಅವರ ಸಾವು, ಅಂತ್ಯಕ್ರಿಯೆ ಸಂದರ್ಭದಲ್ಲಿ ಆದ ಕಹಿ ಘಟನೆಗಳು ಮರುಕಳಿಸದಿರಲಿ ಎಂಬುದೇ ಎಲ್ಲರ ಆಶಯವಾಗಿತ್ತು.

ರಾಜಕುಮಾರ್ ಅವರ ಅಂತಿಮ ಯಾತ್ರೆ ಸಂದರ್ಭದಲ್ಲಿ ಆದ ದುರ್ಘಟನೆಗಳು ಮರುಕಳಿಸಿದಂತೆ ಸರಕಾರ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಿತು. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜವಾಬ್ದಾರಿ ನಿರ್ವಹಿಸಿದ ರೀತಿ ಕಾರಣ ಎಂಬುದೇ ಅಂತ್ಯಕ್ರಿಯೆ ಸಂದರ್ಭದಲ್ಲಿ ಹಾಜರಿದ್ದವರ ಮಾತಾಗಿತ್ತು.

Similar Posts

2 Comments

  1. ಬೊಮ್ಮಾಯಿಯವರ ಅಪ್ಪು ಪ್ರೀತಿಯ ಮತ್ತು ಎಚ್ಚರಿಕೆಯ ನಡೆ ಶ್ಲಾಘನೀಯ. ಇದೇ ಅಭಿಪ್ರಾಯ ಪ್ರಜಾವಾಣಿಯಲ್ಲಿಯೂ ಪ್ರಕಟವಾಗಿದೆ

  2. ಈ ಲೇಖನ ವಿಚಿತ್ರವಾಗಿದೆ. ಒಳ್ಳೆಯದನ್ನು ಶ್ಲಾಘಿಸಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಬೆಂಗಳೂರು ಪೊಲೀಸ್ ಕಮೀಷನರ್ ಮಾಡಬೇಕಾದ ಕೆಲಸವನ್ನು ಸಿಎಂ ಮಾಡಿದ್ದಕ್ಕೆ ಇಷ್ಟೊಂದು ಶ್ಲಾಘಿಸುವ ಅಗತ್ಯವಿರಲಿಲ್ಲ.‌

    ಎರಡು ದಿನ ಸಿಎಂ ಇದರಲ್ಲಿ ನಿರತರಾಗಿದ್ದೂ ಸರಿಯಲ್ಲ.

    ಪುನೀತ್ ಸಾವು ಮನಸ್ಸಿಗೆ ಬಹಳ ನೋವು ತಂದಿದೆ ಮತ್ತು ಇನ್ನೂ ವಿಷಾದ ತುಂಬಿದ ಸ್ಥಿತಿ ನನ್ನಲ್ಲಿದೆ. ಆದರೆ ಸಿಎಂ ಕೆಲಸ ಇದಲ್ಲ. ಇದನ್ನು ಈ ರೀತಿ ಶ್ಲಾಘಿಸುವುದು ಮಾಧ್ಯಮದ ಕೆಲಸವಲ್ಲ.

Leave a Reply

Your email address will not be published. Required fields are marked *