ವಿಭಿನ್ನ ಮಾದರಿಯ ಸಿನಿಮಾ ನೌವೆಲ್ ವ್ಹಾಗ್
ಫ್ರಾನ್ಸ್ ಚಿತ್ರರಂಗ ಹಲವು ನೂತನ ಪ್ರಯೋಗಗಳಿಗೆ ಹೆಸರುವಾಸಿ ! ಹೊಸತನ್ನು ಮಾಡುವ ತುಡಿತ ಇರುವ ತಂತ್ರಜ್ಞರು – ಕಲಾವಿದರು ಅಲ್ಲಿದ್ದಾರೆ. ೧೯೫೦-೧೯೬೦ರ ದಶಕದಲ್ಲಿ ವಿಭಿನ್ನ ಮಾದರಿಯ, ತುಷ್ಟೀಕರಣ ಇಲ್ಲದ ಸಿನಿಮಾ ವಿಮರ್ಶೆಗಳಿಗೆ ಜೀನ್-ಲುಕ್ ಗೊಡಾರ್ಡ್ ಭಾರಿ ಹೆಸರುವಾಸಿ. ಸಾಮಾನ್ಯ ಓದುಗರಲ್ಲದೇ ಚಿತ್ರರಂಗದ ಖ್ಯಾತನಾಮರು ಆತನ ಬರೆಹಗಳ ಅಭಿಮಾನಿಯಾಗಿದ್ದರು.
ಸಿನಿಮಾಗಳ ಪ್ರೀಮಿಯರ್ ಶೋಗಳಿಗೆ ಖಾಯಂ ಆಹ್ವಾನಿತನಾಗಿದ್ದ ಗೊಡಾರ್ಡ್ ತಾನು ಏಕೆ ಸಿನಿಮಾ ಮಾಡಬಾರದು ಎಂದು ಆಲೋಚಿಸುತ್ತಾನೆ. ಅದರ ಫಲವೇ À bout de souffle (Breathless) ಸಿನಿಮಾ. ಇದನ್ನು ಆತ ನಿರ್ದೇಶಿಸಿದ ಶೈಲಿ, ಆತನ ಮನೋಭಾವ ಸಿನಿಮಾದ ನಿರ್ಮಾಪಕನಿಗೂ, ಕಲಾವಿದರಿಗೂ ರೇಜಿಗೆ ಹುಟ್ಟಿಸುತ್ತದೆ. ಆದರೆ ಗೊಡಾರ್ಡ್ ಅದೃಷ್ಟ ಆತನ ಶೈಲಿಗೆ ತಕರಾರಿಲ್ಲದೇ ಸ್ಪಂದಿಸುವ ತಂತ್ರಜ್ಞರು ಸಿಕ್ಕಿರುತ್ತಾರೆ.
ಅಂದಿನ ಫ್ರಾನ್ಸ್ ಚಿತ್ರರಂಗದ ಸಿನಿಮಾ ಬಜೆಟ್ ಗಳಿಗೆ ಹೋಲಿಸಿದರೆ ಬ್ರೀತ್ ಲೆಸ್ ( Breathless ) ಅತೀ ಕಡಿಮೆ ಬಜೆಟ್ ನಲ್ಲಿ ತಯಾರಾಯಿತು. ಗೋಡಾರ್ಡ್ ಚಿತ್ರೀಕರಣ ಶೈಲಿಯೇ ವಿಕ್ಷಿಪ್ತ. ಮುಂಚಿತವಾಗಿಯೇ ಸ್ಕ್ರಿಪ್ಟ್ ರೂಪುಗೊಂಡಿರಲಿಲ್ಲ. ಚಿತ್ರೀಕರಣದ ಸಮಯದಲ್ಲಿ ಅಥವಾ ಬೆಳಗ್ಗಿನ ವೇಳೆ ಒಂದರ ಮೇಲೊಂದು ಸಿಗರೇಟ್ ಸೇದುತ್ತಾ ಅಂದಿನ ಚಿತ್ರೀಕರಣದ ಸ್ಕ್ರಿಪ್ಟ್ ಬರೆಯುವುದು, ಸಮಾಧಾನವಾಗದಿದ್ದರೆ ಚಿತ್ರೀಕರಣವನ್ನೇ ರದ್ದುಗೊಳಿಸಿ ಹೊರನಡೆಯುವುದು, ಕಂಟಿನ್ಯೂಟಿಗೆ ಪ್ರಾಶಸ್ತ್ಯ ನೀಡದಿರುವುದು.

ಇವೆಲ್ಲದರಿಂದ ಆತಂಕಗೊಳ್ಳುವ ನಿರ್ಮಾಪಕನೊಂದಿಗೆ ಜಗಳ, ಕಡಿಮೆ ಕಲಾವಿದರು, ತಂತ್ರಜ್ಞರನ್ನೇ ಬಳಸಿ ಅಂತೂ ಇಂತೂ ಚಿತ್ರೀಕರಣ ಮುಕ್ತಾಯಗೊಳಿಸುತ್ತಾನೆ. ಪ್ರೀಮಿಯರ್ ಶೋನಲ್ಲಿ ಬಹುತೇಕರಿಗೆ ಬ್ರೀತ್ ಲೆಸ್ ಇಷ್ಟವಾಗುವುದಿಲ್ಲ. ಆದರೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ಅಚ್ಚರಿ ಎಂಬಂತೆ ಸಿನಿಮಾ ಯಶಸ್ಸು ಕಾಣುತ್ತದೆ. ಈ ಮೂಲಕ ಫ್ರೆಂಚ್ ನ್ಯೂ ವೇವ್ ಚಳವಳಿ ಜನ್ಮ ತಳೆಯುತ್ತದೆ.
ಬ್ರೀತ್ ಲೆಸ್ ಬಿಡುಗಡೆಯಾದ ೬೬ ವರ್ಷಗಳ ತರುವಾಯ ನಿರ್ದೇಶಕ ರಿಚರ್ಡ್ ಲಿಂಕ್ಲೇಟರ್ ಗೆ ಗೊಡಾರ್ಡ್ ಬ್ರಿತ್ ಲೆಸ್ ಸಿನಿಮಾ ಮಾಡಿದ ರೀತಿಯನ್ನು ಏಕೆ ಮರುಕಟ್ಟಬಾರದು ಎನಿಸುತ್ತದೆ. ಇದಕ್ಕೆ ಆತನ ಖಾಯಂ ಸಹವರ್ತಿಗಳಾದ ಹಾಲಿ ಜೆಂಟ್, ವಿನ್ಸೆಂಟ್ ಪಾಮೊ ಜೂನಿಯರ್ ಸಾಥ್ ನೀಡಿ ಚಿತ್ರಕಥೆ ರಚಿಸಿದ್ದಾರೆ. ಗಮನಾರ್ಹ ಸಂಗತಿ ಎಂದರೆ Breathless ಸಿನಿಮಾ ಚಿತ್ರೀಕರಣ ನಡೆದಿರುವ ನ್ಯೂ ವೇವ್ ಸ್ಟೈಲ್ನಲ್ಲಿಯೇ ನೌವೆಲ್ ವ್ಹಾಗ್ ಚಿತ್ರೀಕರಣ ನಡೆದಿದೆ. ಅಂದಿನ ಸಂದರ್ಭದ ಗೇಲಿ, ತಮಾಷೆ, ಗೊಡಾರ್ಡ್ ನ ವಿಕ್ಷಿಪ್ತ ಮನೋಭಾವ, ಕಲಾವಿದರ ನಡವಳಿಗಳು ಮರು ಅವತರಿಸಿದ ಮಾದರಿಯಲ್ಲಿ ಚಿತ್ರೀಕೃತವಾಗಿವೆ.
ಮುಖ್ಯವಾಗಿ ಇದು ಕಪ್ಪು –ಬಿಳುಪುವಿನಲ್ಲಿ ನಿರ್ಮಿತವಾದ ಸಿನಿಮಾ. ಅದೂ Breathless ನಿರ್ಮಾಣವಾದ ೩೫ ಎಂಎಂ ಮಾದರಿಯಲ್ಲಿಯೇ ನಿರ್ಮಿತವಾಗಿದೆ. ಆದರೆ ಸಿನಿಮಾ ಗಮನಿಸಿದಾಗ ಡಿಜಿಟಲ್ ಕ್ಯಾಮೆರಾ ಬಳಕೆ ಮಾಡಿರುವುದು ತಿಳಿಯುತ್ತದೆ. ಕೆಲವು ಶಾಟ್ಸ್ ಗಳನ್ನು ಚಿತ್ರೀಕರಿಸಲು ARRI 2C ಫಿಲ್ಮ್ ರೋಲ್ಗಳು ಬಳಕೆಯಾಗಿದೆ
ನೌವೆಲ್ ವ್ಹಾಗ್ (Nouvelle Vague )ನಿರ್ದೇಶಕ ರಿಚರ್ಡ್ ಲಿಂಕ್ಲೇಟರ್ ಮನೋಭಾವಕ್ಕೆ ಛಾಯಾಗ್ರಹಕ ಡೇವಿಡ್ ಚಂಬಿಲ್ಲೆ ಸ್ಪಂದಿಸಿದ್ದಾರೆ. ಇದರ ಪರಿಣಾಮವಾಗಿ ದೃಶ್ಯಗಳು ಅನನ್ಯವಾಗಿ ಮೂಡಿ ಬಂದಿವೆ. ಚಿತ್ರದ ಸಂಕಲನವೂ ವಿಶಿಷ್ಟ.
ಜೀನ್-ಲುಕ್ ಗೊಡಾರ್ಡ್ ಪಾತ್ರಧಾರಿ ಗುಯಿಲೌಮ್ ಮಾರ್ಬೆಕ್, ಜೀನ್ ಸೆಬರ್ಗ್ ಆಗಿ ಜೊಯಿ ಡಚ್, ಜೀನ್-ಪಾಲ್ ಬೆಲ್ಮಂಡೊ ಆಗಿ ಆಬ್ರಿ ಡಲ್ಲಿನ್ ಅಭಿನಯ ಮೋಹಕ. ಅವರು ಪಾತ್ರಗಳೇ ಆಗಿ ಮರುಜೀವಿಸಿದ್ದಾರೆ.
೫೦ರ ದಶಕದ ಸಿನಿಮಾವನ್ನು ನಿರ್ಮಿಸುವುದು ಅತೀ ಕಠಿಣ, ಅಂದಿನ ಕಾಲಘಟ್ಟದಲ್ಲಿ ಬಳಕೆಯಲ್ಲಿದ್ದ ವೇಷಭೂಷಣಗಳು, ಕೂದಲಿನ ಶೈಲಿ, ವಾಹನಗಳು ಎಲ್ಲವನ್ನೂ ಮರು ಜೋಡಿಸುವಿಕೆ ಸವಾಲಿನ ಕೆಲಸ. ಇದನ್ನು ನಿರ್ದೇಶಕ ರಿಚರ್ಡ್ ಲಿಂಕ್ಲೇಟರ್ ಸ್ವೀಕರಿಸಿ ಗೆದ್ದಿದ್ದಾರೆ.
ನ್ಯೂ ವೇವ್ ಮಾದರಿ ಸಿನಿಮಾಗಳನ್ನು ನೋಡಿಲ್ಲದವರಿಗೆ ನೌವೆಲ್ ವ್ಹಾಗ್ (Nouvelle Vague ) ಬೋರ್ ಎನಿಸಬಹುದು. ಇದೇ ಕಾರಣದಿಂದ ೧೭ನೇ ಬೆಂಗಳೂರು ಫಿಲ್ಮ್ ಫೆಸ್ಟಿವಲ್ ನಲ್ಲಿ ಈ ಸಿನಿಮಾ ನೋಡಲು ಬಂದವರಲ್ಲಿ ಅನೇಕರು ಎದ್ದು ಹೊರ ನಡೆದರು. ಕೊಂಚ ತಾಳ್ಮೆ ವಹಿಸಿ ನೋಡಿದರೆ ಚಿತ್ರದ ಮೂಲ ದ್ರವ್ಯವಾದ ಲವಲವಿಕೆ ವೀಕ್ಷಕರನ್ನೂ ಆವರಿಸಿಕೊಳ್ಳುತ್ತದೆ.
