ಕನ್ನಡ ಚಿತ್ರರಂಗದಲ್ಲಿ ಜನಪರ ಸಂವೇದನೆಯ ನಿರ್ದೇಶಕರು, ಸಿನೆಮಾಗಳು ಇಲ್ಲ ಎಂಬ ಮಾತುಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿವೆ. ಫೇಸ್ಬುಕ್ಕಿನಲ್ಲಿ ನನ್ನ ಸ್ನೇಹಿತರೊಬ್ಬರು ಇಂಥ ಪೋಸ್ಟ್‌ ಹಾಕಿದಾಗ ನನಗೆ ಬಹಳ ಆಶ್ಚರ್ಯವಾಯಿತು. ಇವರಿಗೆ ಬಹುಶಃ ಕನ್ನಡ ಸಿನೆಮಾಗಳ ಬಗ್ಗೆ ಹೆಚ್ಚು ಮಾಹಿತಿ ಇಲ್ಲ ಎನಿಸಿತು. ಏಕೆಂದರೆ ನಾನು ಶಾಲಾ ಬೇಸಿಗೆ ರಜೆಯಲ್ಲಿ ಊರಿಗೆ ಹೋದಾಗ ಬಹಳ ಹಳೆಯ ಸಿನೆಮಾಗಳನಷ್ಟೆ ಪ್ರದರ್ಶಿಸುತ್ತಿದ್ದ ಟೆಂಟಿನಲ್ಲಿ ಇಂಥ ಹಲವು ಕನ್ನಡ ಸಿನೆಮಾಗಳನ್ನು ನೋಡಿದ್ದೇನೆ.

ಜನಪರ ಸಂವೇದನೆ ಎಂದರೇನು ? ಸಮಾಜದಲ್ಲಿ ತುಳಿತಕ್ಕೊಳಗಾದವರು, ಬೇರೆಬೇರೆ ಕಾರಣಗಳಿಂದ  ನಿರ್ಲಕ್ಷ್ಯಕ್ಕೆ ಒಳಗಾದವರು, ಸಾಮಾಜಿಕ ಅವಹೇಳನಗಳಿಗೆ ಗುರಿಯಾದವರು ಇಂಥವರ ಬಗ್ಗೆ ಸಮ ಸಮಾಜದ ಹಿನ್ನೆಲೆಯಲ್ಲಿ ಬರೆಯುವುದು, ಸಿನೆಮಾ ನಿರ್ದೇಶಿಸುವುದು, ಸರ್ಕಾರದ ಮಟ್ಟದಲ್ಲಿ ಕಾರ್ಯಕ್ರಮಗಳು, ಯೋಜನೆಗಳು ರೂಪುಗೊಳ್ಳುವಂತೆ ಮಾಡುವುದೇ ಅಲ್ಲವೇ ?

ಜನರಪರ ಸಂವೇದನೆ ಉಳ್ಳ, ಅದನ್ನು ಅರ್ಥಪೂರ್ಣವಾಗಿ ಸಿನೆಮಾ ಪರಿಭಾಷೆಯಲ್ಲಿ ನಿರೂಪಿಸುವಂಥ ನಿರ್ದೇಶಕರು ಕನ್ನಡ ಚಲನಚಿತ್ರರಂಗದಲ್ಲಿ ದೊಡ್ಡಮಟ್ಟದಲ್ಲಿ ಕಾಣಿಸುತ್ತಾರೆ. ನೋಡುವ, ತಿಳಿದುಕೊಳ್ಳುವ ಸಹನೆ ನಮಗಿರಬೇಕಷ್ಟೆ !

ಕನ್ನಡ ಚಿತ್ರರಂಗದ ಸಿನೆಮಾಗಳ ಬಗ್ಗೆ ಅಥೆಂಟಿಕ್‌ ಆಗಿ ಮಾತನಾಡುವವರಲ್ಲಿ ಒಬ್ಬರಾದ ಕರ್ನಾಟಕ ಸರ್ಕಾರದ ನಿವೃತ್ತ ಹಿರಿಯ ಅಧಿಕಾರಿ, ಸಾಹಿತಿ ಕೆ. ಪುಟ್ಟಸ್ವಾಮಿ ಅವರೊಂದಿಗೆ ಇಂಥ ಆತಂಕ ಹಂಚಿಕೊಂಡೆ. “ ದಕ್ಷಿಣ ಭಾರತದ ಇತರ ಚಿತ್ರರಂಗಗಳಲ್ಲಿ ಜನಪರ ಸಂವೇದನೆ ಸಿನೆಮಾಗಳು ಬರುವ ಮುನ್ನವೇ ಕನ್ನಡದಲ್ಲಿ ಇಂಥ ವಸ್ತು – ವಿಷಯಗಳಿರುವ ಸಿನೆಮಾಗಳು ಬಂದಿವೆ. ಇವುಗಳ ಬಗ್ಗೆ ಗೊತ್ತಿಲ್ಲದವರು ಇತ್ತೀಚಿನ ವರ್ಷಗಳಲ್ಲಿ ಬರುತ್ತಿರುವ ಸಿನೆಮಾಗಳ ಹಿನ್ನೆಲೆಯಲ್ಲಿ ಇಂಥ ಅಭಿಪ್ರಾಯ ಹೊಂದಿದ್ದಾರೆ” ಎಂದರು.

ಬಹಳ ಹಿಂದೆಯೇ ಅಂದರೆ ೧೯೭೫ರಲ್ಲಿ ತೆರೆಕಂಡ ಭಾಗ್ಯಜ್ಯೋತಿ, ಕಾವೇರಿ ಸಿನೆಮಾಗಳಲ್ಲಿ ಸಾಮಾಜಿಕ ಪಿಡುಗಾಗಿರುವ ಜಾತಿ ಸಮಸ್ಯೆ ವಿಷಯಗಳಿವೆ. ಭಾರತಿ, ರಾಜೇಶ್‌ ಅಭಿನಯದ, ಬಿ.ವೈ. ರಾಮದಾಸ್‌ ಅವರ ರಚನೆಯ ಕಥೆ ಆಧರಿಸಿದ ಭಾಗ್ಯಜ್ಯೋತಿ ಸಿನೆಮಾವನ್ನು ಹೆಚ್. ಎನ್.‌ ರೆಡ್ಡಿ ನಿರ್ದೇಶಿಸಿದ್ದಾರೆ. ಹರಿಜನ ಸಮುದಾಯದ ಕಷ್ಟಗಳನ್ನು ಈ ಸಿನೆಮಾ ಹೇಳುತ್ತದೆ. ಜೊತೆಗೆ ಹರಿಜನ ಸಮುದಾಯದ ಯುವತಿ ಮತ್ತು ಮೇಲ್ಜಾತಿಯ ಯುವಕನ ನಡುವಿನ ಪ್ರೇಮ, ಅವರಿಬ್ಬರು ಮದುವೆಯಾಗುವ ನಿರ್ಧಾರ ಭಾರಿ ಸಂಚಲನಕ್ಕೆ ಕಾರಣವಾಗುತ್ತದೆ. ಕೆ.ಎಸ್.ಎಲ್. ಸ್ವಾಮಿ ನಿರ್ದೇಶಿಸಿರುವ ಭಾಗ್ಯಜ್ಯೋತಿ  ಸಿನೆಮಾ, ಹರಿಜನ ಯುವತಿ, ಬ್ರಾಹ್ಮಣ ಯುವಕನ ನಡುವಿನ ಪ್ರೇಮ, ಅವರ ವಿವಾಹಕ್ಕೆ ಅಡ್ಡಿಯಾಗುವ ಅಂಶಗಳನ್ನು ಪರಿಣಾಮಕಾರಿಯಾಗಿ ಹೇಳುತ್ತದೆ. ಈ ಚಲನಚಿತ್ರದಲ್ಲಿ ಅಂದಿಗೆ ಭಾರಿ ಜನಪ್ರಿಯ ಕಲಾವಿದರಾದ ಭಾರತಿ ಮತ್ತು ವಿಷ್ಣುವರ್ಧನ್‌ ನಟಿಸಿದ್ದಾರೆ” ಎಂದು ಪುಟ್ಟಸ್ವಾಮಿ ಹೇಳಿದರು.

ಭೂದಾನ ಕನ್ನಡ ಸಿನೆಮಾ, ಭೂಮಿ ಇಲ್ಲದ ತಳ ಸಮುದಾಯಗಳಿಗೆ ಭೂಮಿ ಹಂಚುವ ವಿಷಯ ಹೊಂದಿದೆ. ತಳ ಸಮುದಾಯಗಳವರು ಮತಾಂತರ ಆಗುವುದರ ಪರಿಸ್ಥಿತಿಗಳ ಬಗ್ಗೆಯೂ ಪ್ರಸ್ತಾಪ ಮಾಡುತ್ತದೆ. ಪಿ.ಎಸ್.‌ ಗೋಪಾಲಕೃಷ್ಣ, ಜಿ.ವಿ.ಅಯ್ಯರ್‌ ನಿರ್ದೇಶಿಸಿರುವ  ೧೯೬೨ನೇ ಇಸ್ವಿಯಲ್ಲಿ ತೆರೆಕಂಡ “ಭೂದಾನ”ದಲ್ಲಿ  ವರನಟ ರಾಜ್‌ ಕುಮಾರ್‌, ಉದಯ ಕುಮಾರ್‌, ಕಲ್ಯಾಣ‌ ಕುಮಾರ್, ಲೀಲಾವತಿ ನಟಿಸಿದ್ದಾರೆ.

ರಾಜ್‌ ಕುಮಾರ್‌, ಪ್ರತಿಮಾ ದೇವಿ ಅವರು ಅಭಿನಯಿಸಿರುವ ೧೯೬೨ರಲ್ಲಿ ತೆರೆಕಂಡ “ಭಕ್ತ ಚೇತ” ಸಿನೆಮಾವನ್ನು ಎಂ.ಬಿ. ಗಣೇಶ್‌ ಸಿಂಗ್‌ ನಿರ್ದೇಶಿಸಿದ್ದಾರೆ.  ಚಪ್ಪಲಿ ಹೊಲೆಯುವ ಚಮ್ಮಾರನ ದೈವಭಕ್ತಿ ಕುರಿತ ಈ ಚಿತ್ರ ಬಂಡಾಯದ ಕುರಿತೂ ಹೇಳುತ್ತದೆ. ಅಂದಿನ ಕಾಲಕ್ಕೆ ಇಂಥ ವಸ್ತುವುಳ್ಳ ಸಿನೆಮಾವನ್ನು ಅಪಾರ ಬಂಡವಾಳ ಹೂಡಿ ಸಿನೆಮಾ ಮಾಡುವ ನಿರ್ಮಾಪಕರು, ನಿರ್ದೇಶಕರ ಸಾಮಾಜಿಕ ಕಾಳಜಿಯನ್ನು ಅರ್ಥ ಮಾಡಿಕೊಳ್ಳಬೇಕು.

ಜನಪ್ರಿಯ ನಿರ್ದೇಶಕ ಸಿದ್ದಲಿಂಗಯ್ಯ ಅವರು ನಿರ್ದೇಶಿಸಿರುವ ಸಿನೆಮಾಗಳು ಸಹ ದಲಿತರು ಮತ್ತು ಅವರ ಸಂವೇದನೆಗಳ ಬಗ್ಗೆ ಹೇಳುತ್ತದೆ. ಇವುಗಳಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ಅವರು ರಚಿಸಿದ ಕಥೆ ಆಧರಿಸಿದ, ೧೯೭೭ರಲ್ಲಿ ಬಿಡುಗಡೆಯಾದ  ಹೇಮಾವತಿ ಜಾತಿ ಸಂಘರ್ಷ, ದಲಿತ ಯುವತಿಯ ಛಲದ ಬಗ್ಗೆ ಹೇಳುತ್ತದೆ. ಇದೇ ನಿರ್ದೇಶಕರು ಮತ್ತು ಕಥೆಗಾರರ “ಭೂತಯ್ಯನ ಮಗ ಅಯ್ಯು” ಸಾಮಾಜಿಕ ಹೆಣಿಗೆ, ತಾರತಮ್ಯ, ತಳ ಸಮುದಾಯ ಮತ್ತು ಮೇಲು ಜಾತಿಯ ವ್ಯಕ್ತಿಗಳ ನಡುವಿನ ಸಂಘರ್ಷವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ.

ಸಿದ್ದಲಿಂಗಯ್ಯ ಅವರ ನಿರ್ದೇಶನದ ಬಿಳಿಗಿರಿಯ ಬನದಲ್ಲಿ ಸಿನೆಮಾ ಪರಿಶಿಷ್ಟ ಪಂಗಡದ ಅಂದರೆ ಬುಡಕಟ್ಟು ಸಮುದಾಯದ ಯುವತಿ ಮತ್ತು ಮೇಲ್ಜಾತಿ ಯುವಕನ ನಡುವಿನ ಪ್ರೇಮವನ್ನು ಹೇಳುತ್ತದೆ. ಬಂಗಾರದ ಮನುಷ್ಯ ಮುಖ್ಯವಾಗಿ ಯಶಸ್ವಿ ಕೃಷಿಕನಾದ ನಗರ ಮೂಲದ ಯುವಕನ ಬದುಕಿನ ಕಥೆಯನ್ನೇ ಪ್ರಧಾನವಾಗಿ ಹೊಂದಿದ್ದರೂ ಸಾಮಾಜಿಕ ಹೆಣಿಗೆಯನ್ನು ಅರ್ಥಪೂರ್ಣವಾಗಿ ಚಿತ್ರಿಸುತ್ತದೆ.

ಜನಪ್ರಿಯ ನಿರ್ದೇಶಕ ಎಂ.ಎಸ್.‌ ಸತ್ಯು ನಿರ್ದೇಶನದ ೧೯೮೨ರಲ್ಲಿ ತೆರೆಕಂಡ “ಬರ ಸಿನೆಮಾ ಸಾಮಾಜಿಕ ಪರಿಸ್ಥಿತಿಗಳು ಮತ್ತು ಅವುಗಳನ್ನು ಬಳಸಿಕೊಳ್ಳುವ ರಾಜಕೀಯ ಹುನ್ನಾರಗಳ ಬಗ್ಗೆ ಪರಿಣಾಮಕಾರಿಯಾಗಿ ಹೇಳುತ್ತದೆ.

ಜನಪ್ರಿಯ ನಿರ್ದೇಶಕ ನಾಗಾಭರಣ ನಿರ್ದೇಶನದ “ಗ್ರಹಣ” ಸಿನೆಮಾ ಪರಿಶಿಷ್ಟ ಜಾತಿಯ ಸಂಕಷ್ಟಗಳ ಬಗ್ಗೆ ಹೇಳುತ್ತದೆ. ದಲಿತನೋರ್ವ ಒಂದು ದಿನ ಮಟ್ಟಿಗೆ ಬ್ರಾಹ್ಮಣನಾಗುವ, ಅದೇ ಸಮಯದಲ್ಲಿ ಆತ ಸಾವಿಗೀಡಾಗಿ ಆತನ ಸಂಸ್ಕಾರವನ್ನು ಸಂಕೀರ್ಣವಾಗಿಸುವ ಕಥೆಯಿದು.

ಕುಷ್ಠರೋಗದ ಬಗ್ಗೆಗಿನ ತಪ್ಪು ತಿಳಿವಳಿಕೆ ನಿವಾರಿಸುವ ಬಂಗಾರದ ಹೂವು ಮನೋಜ್ಞ ಸಿನೆಮಾ. ರಾಜ್‌ ಕುಮಾರ್‌ ಅಭಿನಯದ, ೧೯೬೭ರಲ್ಲಿ ತೆರೆ ಕಂಡ ಈ ಚಿತ್ರವನ್ನು ಬಿ.ಎ. ಅರಸು ಕುಮಾರ್‌ ಅವರು ನಿರ್ದೇಶಿಸಿದ್ದಾರೆ. ಈ ರೋಗದ ಬಗ್ಗೆ ಸಮಾಜದಲ್ಲಿ ಇರುವ ತಪ್ಪು ತಿಳಿವಳಿಕೆ, ಅವುಗಳ ನಿವಾರಣೆಯ ರೀತಿಯನ್ನು ಸಿನೆಮ್ಯಾಟಿಕ್‌ ಪರಿಭಾಷೆಯಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ.

ಜನಪ್ರಿಯ ನಿರ್ದೇಶಕ ಲಕ್ಷ್ಮಿನಾರಾಯಣ ಅವರ ನಾಂದಿ ಸಹ ಕಿವುಡು ಮೂಕರ ಬಗ್ಗೆ ಸಮಾಜದಲ್ಲಿ ಇರುವ ತಪ್ಪು ತಿಳಿವಳಿಕೆ ನಿವಾರಿಸುವ ಸಿನೆಮಾ. ಇದರಲ್ಲಿ ರಾಜ್‌ ಕುಮಾರ್‌ ಅವರು ಕಿವುಡು – ಮೂಕ ಯುವತಿಯನ್ನು ಮದುವೆಯಾಗುವ ಶಾಲಾ ಮಾಸ್ತರ್‌ ಪಾತ್ರದಲ್ಲಿ ನಟಿಸಿದ್ದಾರೆ. ಇದೇ ನಿರ್ದೇಶಕರ ಬೆಟ್ಟದ ಹೂವು “ ಸಾಕ್ಷರತೆ” ಅಗತ್ಯದ ಬಗ್ಗೆ ಹೇಳುತ್ತದೆ.

ಅನಂತಮೂರ್ತಿ ಅವರ ಕಥೆ ಆಧರಿಸಿದ ಘಟಶ್ರಾದ್ದ ಸಿನೆಮಾ ಬ್ರಾಹ್ಮಣ ವಿಧವೆಯರು ಎದುರಿಸುವ ದುಸ್ಥಿತಿ, ಸಾಮಾಜಿಕ ತಪ್ಪು ತಿಳಿವಳಿಕೆ ಬಗ್ಗೆ ಹೇಳುತ್ತದೆ.

ಚೋಮನದುಡಿ ಸಿನೆಮಾದಲ್ಲಿ ವಾಸುದೇವರಾವ್‌ ಅಭಿನಯದ ದೃಶ್ಯ

ಶಿವರಾಮ ಕಾರಂತರ “ಚೋಮನದುಡಿ” ಕಾದಂಬರಿ ರಂಗಭೂಮಿಯ ಜನಪ್ರಿಯ ನಿರ್ದೇಶಕ ಬಿ.ವಿ. ಕಾರಂತರು ನಿರ್ದೇಶನದಲ್ಲಿ ಸಿನೆಮಾವಾಗಿದೆ. ದಲಿತ ತನ್ನದೇ ಸ್ವಂತ ಕೃಷಿಭೂಮಿ ಹೊಂದುವ ಕಥೆಯ ಜೊತೆಗೆ ಜಾತಿ ಸಮಸ್ಯೆ, ಅಸ್ಪೃಶ್ಯತೆಯ ಕರಾಳ ಆಚರಣೆ, ಅದರಿಂದುಂಟಾಗುವ ದುರಂತಗಳ ಬಗ್ಗೆ ಈ ಸಿನೆಮಾ ಪರಿಣಾಮಕಾರಿಯಾಗಿ ಹೇಳುತ್ತದೆ. ೧೯೬೨ರಲ್ಲಿ ತೆರೆಕಂಡ  “ಭೂದಾನ” ಸಿನೆಮಾ ಸಹ “ಚೋಮನದುಡಿ” ಆಧರಿಸಿದ್ದು ಗಮನಾರ್ಹ

ಹೀಗೆ ಜನಪರ ಸಂವೇದನೆಯುಳ್ಳ ಸಿನೆಮಾಗಳು ಕನ್ನಡದಲ್ಲಿ ಬಂದಿವೆ. ಇಂಥ ಚಿತ್ರಗಳು ಕನ್ನಡದಲ್ಲಿ ಬಂದೇ ಇಲ್ಲ; ಇಂಥ ಚಿತ್ರಗಳನ್ನು ನಿರ್ದೇಶಿಸುವ ನಿರ್ದೇಶಕರು ಕನ್ನಡದಲ್ಲಿ ಇಲ್ಲವೇ ಇಲ್ಲ ಎಂಬ ಮಾತುಗಳನ್ನು ಆಡುವ ಮುನ್ನ ಕನ್ನಡ ಸಿನೆಮಾ ಇತಿಹಾಸದತ್ತಲೂ ಒಮ್ಮೆ ಕಣ್ಣು ಹಾಯಿಸಬೇಕು

Similar Posts

Leave a Reply

Your email address will not be published. Required fields are marked *