ಇತ್ತೀಚೆಗೆ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುಹೆಚ್ಚಾಗಿ ಬೆಳಕಿಗೆ ಬರುತ್ತಿವೆ…. ಇದರರ್ಥ ಹಿಂದೆಯೂ ದೌರ್ಜನ್ಯಗಳು ನಡೆದಿದ್ದವು. ಆದರೆ ಬೆಳಕಿಗೆ ಬರುತ್ತಿರಲಿಲ್ಲ. ಏಕೆಂದರೆ ಯಾರಿಗೂ ಸಾಂಪ್ರದಾಯಿಕವಾಗಿ ನಡೆದುಬಂದ ವ್ಯವಸ್ಥೆ ವಿರುದ್ಧ ನಿಲ್ಲುವ ಧೈರ್ಯವಿರಲಿಲ್ಲ ಎಂಬ ಅರ್ಥವೇ ಗೋಚರಿಸುತ್ತದೆ. ಇಂಥ ಸಂದರ್ಭದಲ್ಲಿ ಧಾರ್ಮಿಕ ಕಟ್ಟುಪಾಡುಗಳೇ ಹೆಚ್ಚಿರುವ ದೇಶದಲ್ಲಿ ತನ್ನ ವಿರುದ್ಧದ ದೌರ್ಜನ್ಯದ ವಿರುದ್ಧ ಸೆಟೆದು ನಿಲ್ಲುತ್ತಾಳೆ. ಇದೇ ಸಂದರ್ಭದ ಬೇರೆಬೇರೆ ಸನ್ನಿವೇಶಗಳಲ್ಲಿ ಇನ್ನೀರ್ವರು ಮಹಿಳೆಯರು ತಮಗಾದ ದೈಹಿಕ-ಮಾನಸಿಕ ನೋವು, ಯಾತನೆಗಳ ವಿರುದ್ಧ ಸಿಡಿದು ನಿಲ್ಲುತ್ತಾರೆ. ಇದರ ಬೆಳವಣಿಗೆಗಳನ್ನು ಎಗ್ಫತ್ ದೇಶದ ಅರೇಬಿಕ್ ಭಾಷೆಯ “ಕೈರೋ 678” ಎಂಬ ಸಿನೆಮಾ ಸಶಕ್ತವಾಗಿ ಕಟ್ಟಿಕೊಡುತ್ತದೆ.

ಎಲ್ಲದೇಶ, ಕಾಲಮಾನಗಳಿಗೂ ಅನ್ವಯವಾಗಬಹುದಾದ ಯಾತನೆಗಳ ಬಗ್ಗೆ ಒಂದಿಷ್ಟು ಚರ್ಚಿಸಲು ಬಯಸುತ್ತೇನೆ. ಈ ಸಿನೆಮಾವನ್ನು ದೆಹಲಿ 678 ಎಂದಿಟ್ಟು ಹಿಂದಿ ಭಾಷೆಗೆ ಡಬ್ ಮಾಡಿದರೂ ಅದು ಇಲ್ಲಿಯ ಘಟನಾವಳಿಗೂ ಅನ್ವಯಿಸುತ್ತದೆ. ಯಾರೂ ಇದನ್ನು ಮತ್ತೊಂದು ದೇಶದ, ಭಾಷೆಯ ಸಿನೆಮಾ ಎಂದು ಪರಿಗಣಿಸುವುದಿಲ್ಲ. ಏಷಿಯಾದ ಬಹುತೇಕ ದೇಶಗಳ ರಾಜಧಾನಿಗಳ ಹೆಸರಿಟ್ಟು ಈ ಸಿನೆಮಾ ತೆಗೆದರೂ ಅನ್ವರ್ಥಕವೇ ಆಗಿರುತ್ತದೆ.

ಮಹಿಳೆಯರ ವಿರುದ್ಧ ದೌರ್ಜನ್ಯ ನಡೆದಾಗ ಸಾಮಾನ್ಯವಾಗಿ ಆಕೆಯನ್ನೇ ದೂರಲಾಗುತ್ತದೆ. ಆಕೆ ಪ್ರಚೋದಕ ಉಡುಪುಗಳನ್ನು ಧರಿಸಿದ್ದಳು, ಆಕೆಯ ಹಾವಭಾವ ಬಹು ಆಕರ್ಷಕವಾಗಿತ್ತು. ಗಾಂಭೀರ್ಯದ ನಡಾವಳಿ ಆಕೆಯದಾಗಿರಲಿಲ್ಲ. ಆಗಿರಲಿಲ್ಲವೇನೋ ಇತ್ಯಾದಿ ಇತ್ಯಾದಿ. ಆದರೆ ಸಾರ್ವಜನಿಕ ಸಾರಿಗೆಗಳಲ್ಲಿ, ನೂಕುನುಗ್ಗಲು ಇರುವ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರನ್ನು ನೋಡಿದಾಗ ಬಹು ಸಾರ್ವತ್ರಿಕ ಎನ್ನಿಸುವ ಇಂಥ ಹೇಳಿಕೆಗಳು ಎಷ್ಟು ಪೊಳ್ಳು ಎನ್ನಿಸುತ್ತವೆ.

ಕೈರೋ 678 ಸಿನೆಮಾ ಸಾಂಕೇತಿಕವಾಗಿ ಮೂರು ಮಹಿಳೆ ಪಾತ್ರಗಳ ಸುತ್ತಲೇ ತಿರುಗುತ್ತದೆ. ಈ ಮೂರು ಪಾತ್ರಗಳ ಯಾತನೆಗಳು ಯಾರದ್ದೂ ಆಗಿರಬಹುದು. ಸರ್ಕಾರದ ಸಣ್ಣ ನೌಕರಳಾದ ಫಾಯ್ಜ ಕಚೇರಿಗೆ ಹೋಗಿಬರಲು ಸಾರ್ವಜನಿಕ ಸಾರಿಗೆಯನ್ನೇ ಅವಲಂಬಿಸಿರುತ್ತಾಳೆ. ನಿತ್ಯವೂ ಆಕೆಯ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತಲೇ ಇರುತ್ತವೆ. ಅತ್ತ ಕಾಲ್ ಸೆಂಟರ್ ಉದ್ಯೋಗಿ ನೆಲ್ಲಿ, ಗ್ರಾಹಕರೊಂದಿಗೆ ಪೋನ್ ನಲ್ಲಿ ವ್ಯವಹರಿಸುವಾಗ ಮತ್ತೆಮತ್ತೆ ಅಶ್ಲೀಲ ಮಾತು, ಕರೆಗಳನ್ನು ಕೇಳಬೇಕಾಗುತ್ತದೆ. ಇತ್ತ ಪುಟ್ಬಾಲ್ ಪ್ರೇಮಿಯಾದ, ದಿಟ್ಟನಡೆನುಡಿಯ ಸೆಬಾ ಮೇಲೆ ಸ್ಟೇಡಿಯಂನಲ್ಲಿ ಪುರುಷರ ಗುಂಪೊಂದು ದೌರ್ಜನ್ಯ ಎಸಗುತ್ತದೆ. ಈ ಮೂವರು ಸೆಟೆದು ನಿಂತರೂ ನಿಂತ ನೀರಿನಂತ ಸಾಮಾಜಿಕ ವ್ಯವಸ್ಥೆ ಅವರನ್ನು ಮಣಿಸುಲು ಯತ್ನಿಸುತ್ತಲೇ ಇರುತ್ತದೆ. ಆದರೆ ನೆಲ್ಲಿ ಅಚಲ ಮನೋಭಾವ ಆಕೆ ಮೇಲೆ ದೌರ್ಜನ್ಯ ಎಸಗಿದವನಿಗೆ ಶಿಕ್ಷೆಯಾಗುವಂತೆ ಮಾಡುತ್ತದೆ. ಎಗ್ಫತ್ ಸರ್ಕಾರ ಕೂಡ ಲೈಂಗಿಕ ದೌರ್ಜನ್ಯಗಳ ವಿರುದ್ಧ ಕಾನೂನು ತರುವಂತೆ ಮಾಡುತ್ತದೆ.

ಭಾರತದಲ್ಲಿ ಮಹಿಳಾ ದೌರ್ಜನ್ಯಗಳ ವಿರುದ್ಧ ಸಾಕಷ್ಟು ಕಾನೂನುಗಳಿವೆ. ಆದರೂ ಏಕೆ ಮತ್ತೆಮತ್ತೆ ಇಂಥ ಪ್ರಕರಣಗಳು ಮರುಕಳಿಸುತ್ತಲೇ ಇರುತ್ತವೆ. ಸಮಸ್ಯೆ ಇರುವುದಾದರೂ ಎಲ್ಲಿ ? ಇಲ್ಲಿ ಪದೇಪದೇ ಸಾರ್ವಜನಿಕ ಸಾರಿಗೆಗಳಲ್ಲಿ, ಸ್ಥಳಗಳಲ್ಲಿ, ಕಚೇರಿಗಳಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಲೇ ಇರುವ ಮಹಿಳೆಯರ ಯಾತನೆಗಳು ಏಕೆ ಕೊನೆಗಾಣುತ್ತಿಲ್ಲ. ಇಂಥ ಪ್ರಶ್ನೆಗಳು ಇಂಥ ದುರ್ಘಟನೆ ನಡೆಯುವ ಎಲ್ಲ ದೇಶಕಾಲಗಳಿಗೂ ಅನ್ವಯಿಸುತ್ತದೆ.

ಅಂದಹಾಗೆ ಸಾಮಾಜಿಕ-ಧಾರ್ಮಿಕ ಕಟ್ಟುಪಾಡು ಅಪಾರವಾಗಿರುವ ದೇಶದಲ್ಲಿ ಕೈರೋ 678 ಸಿನೆಮಾ ಬಿಡುಗಡೆಗೆ ಬಂದ ಅಡಚಣೆಗಳು ನೂರಾರು. ಅವೆಲ್ಲವುಗಳನ್ನು ಸಹಿಸಿಕೊಂಡ ನಿರ್ದೇಶಕ ಮಹಮ್ಮದ್ ದಿಯಾಬ್ ಚಿತ್ರವನ್ನು ಬಿಡುಗಡೆಗೊಳಿಸುತ್ತಾರೆ. ಅಂತರಾಷ್ಟ್ರೀಯ ಸಿನೆಮೋತ್ಸವಗಳಲ್ಲಿಯೂ ಇದು ಪ್ರಶಂಸೆಗೆ ಒಳಗಾಗಿದೆ. ನಿರ್ದೇಶಕರೇ ಚಿತ್ರಕಥೆಯನ್ನೂ ಬರೆದಿದ್ದಾರೆ.

ಡಾಕ್ಯುಮೆಂಟರಿಯ ಹಂತಕ್ಕೆ ನಿಲ್ಲಬಹುದಾಗಿದ್ದ ಚಿತ್ರಕಥೆಯನ್ನು ಉತ್ತಮ ಸಿನೆಮಾವಾಗಿ ರೂಪಿಸುವಲ್ಲಿನ ನಿರ್ದೇಶಕರ ಪರಿಶ್ರಮ ಪ್ರತಿಫ್ರೇಮಿನಲ್ಲಿಯೂ ಗೋಚರಿಸುತ್ತದೆ. ಛಾಯಾಗ್ರಾಹಕರು ಚಿತ್ರಕಥೆಯ ಹೂರಣವನ್ನು ಅರ್ಥಮಾಡಿಕೊಂಡಿದ್ದಾರೆ ಎನ್ನುವುದು ಕ್ಯಾಮೆರಾ ಇಟ್ಟ ಆ್ಯಂಗಲುಗಳಿಂದಲೇ ತಿಳಿಯುತ್ತದೆ. ನಟಿಯರಾದ ಬುಷ್ರಾ, ನೆಲ್ಲಿ ಕರೀಮ್ ಮತ್ತು ಮಾಗೇದ್ ಇ ಕೆದ್ವಾನಿ  ಅವರುಗಳು ಪಾತ್ರಗಳೇ ತಾವಾಗಿ ಅಭನಯಿಸಿದ್ದಾರೆ. ಸಿನೆಮಾ ಯೂಟ್ಯೂಬ್ ನಲ್ಲಿ ಲಭ್ಯವಿದೆ. ಆಸಕ್ತರು ವೀಕ್ಷಿಸಬಹುದು.

Similar Posts

Leave a Reply

Your email address will not be published. Required fields are marked *