ರಜನೀಕಾಂತ್ ಅಭಿನಯದ ‘ಕಬಾಲಿ’ ಹೆಚ್ಚು ಅರ್ಥವಾಗಬೇಕಾದರೆ ಮಲೇಶಿಯಾ ದೇಶಕ್ಕೆ ತಮಿಳರ ವಲಸೆ ಚರಿತ್ರೆ ಮತ್ತು ಅಲ್ಲಿ ಇವರ ಸಾಮಾಜಿಕ ಸ್ಥಿತಿಗತಿ ಬಗ್ಗೆಯೂ ಕೊಂಚ ತಿಳಿದಿರಬೇಕು. ಈ ವಲಸೆಗೆ ಸುಮಾರು 900 ವರ್ಷಗಳ ಇತಿಹಾಸವಿದೆ. ಮಹಾರಾಜ ರಾಜೇಂದ್ರ ಚೋಳ ಅಳ್ವಿಕೆ ಕಾಲದಲ್ಲಿಯೇ ತಮಿಳರು ಸೈನ್ಯ, ವ್ಯಾಪಾರ ಕಾರಣಗಳಿಂದ ಅಲ್ಲಿ ಹೋಗಿದ್ದಾರೆ, ಹೋದವರಲ್ಲಿ ಸಾಕಷ್ಟು ಮಂದಿ ಅಲ್ಲಿಯೇ ನೆಲೆ ನಿಂತಿದ್ದಾರೆ. ಸಾಮಾಜಿಕವಾಗಿ, ಆರ್ಥಿಕವಾಗಿ ಬಲಾಢ್ಯರಾಗಿದ್ದಾರೆ. ಆದರೆ ಬ್ರಿಟಿಷ್ ವಸಹಾತುಶಾಹಿ ಕಾಲಘಟ್ಟದಲ್ಲಿ ವಲಸೆ ಹೋದವರ ಪರಿಸ್ಥಿತಿ ಇದಕ್ಕಿಂತ ಭಿನ್ನ. ‘ಕಬಾಲಿ’ ಹೇಳಲು ಹೊರಟಿರುವುದು ಇವರ ದುರಂತ ಕಥೆಯನ್ನೆ…

ಬ್ರಿಟಿಷರು ಮಲೇಶಿಯಾದಲ್ಲಿ ಬಹು ವಿಸ್ತಾರ ರಬ್ಬರ್, ಪಾಮ್ ಆಯಿಲ್ ಪ್ಲಾಂಟೇಶನ್ಗಳನ್ನು ಮಾಡಿದಾಗ ಇಂಡಿಯಾದಿಂದ ಭಾರಿ ಸಂಖ್ಯೆಯಲ್ಲಿ ಕಾರ್ಮಿಕರನ್ನು ಕರೆದುಕೊಂಡು ಹೋದರು. ಇವರಲ್ಲಿ ಹೆಚ್ಚಿನವರು ತಮಿಳುನಾಡಿನ ದಲಿತರು. ಬದುಕಿಗೆ ಹೊಸ ಆಧಾರ, ಭರವಸೆ ದೊರೆಯಿತೆಂದು ಹೋದವರಿಗೆ ನಿರಾಶೆ ಕಾದಿತ್ತು. ಅಲ್ಲಿಯೂ ಇಂಡಿಯಾದ ತಾರತಮ್ಯ ಮುಂದುವರಿದಿತ್ತು.
ಸ್ಥಳೀಯರು, ಚೀನಾದಿಂದ ಬಂದವರಿಗೆ ನೀಡುತ್ತಿದ್ದಷ್ಟು ವೇತನವನ್ನು ತಮಿಳು ದಲಿತ ಕಾರ್ಮಿಕರಿಗೆ ನೀಡುತ್ತಿರಲಿಲ್ಲ. ಇದರ ವಿರುದ್ಧ ದೊಡ್ಡಮಟ್ಟದ ಹೋರಾಟಗಳೇ ನಡೆದಿವೆ. ಪ್ಲಾಂಟೇಶನ್ಗಳಲ್ಲಿ ಒಂದಿಷ್ಟು ಹೆಚ್ಚಿನ ವೇತನ ದೊರೆತರೂ ಸಾಮಾಜಿಕ ಶ್ರೇಣಿಯಲ್ಲಿ, ರಾಜಕೀಯ ಅಧಿಕಾರದಲ್ಲಿ ಸೂಕ್ತ ಸ್ಥಾನಮಾನ ಇನ್ನೂ ದೊರಕಿಲ್ಲ. ಆದರೆ ಶತಮಾನಗಳ ಹಿಂದೆ ಹೋದ ಮೇಲುಜಾತಿಗಳ ತಮಿಳರು ಅಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮುಂದುವರಿದ್ದಿದ್ದಾರೆ. ದುರದೃಷ್ಟ ಎಂದರೆ ಇವರು ತಮ್ಮದೇ ನಾಡಿನಿಂದ ಬಂದ ತಮಿಳು ದಲಿತರ ನಡುವೆ ಅಂತರ ಕಾಯ್ದುಕೊಂಡಿದ್ದಾರೆ.
ಕಾರ್ಮಿಕ ಹೋರಾಟ, ಸಾಮಾಜಿಕ, ರಾಜಕೀಯ ರಂಗಗಳಲ್ಲಿ ಸೂಕ್ತ ಸ್ಥಾನಮಾನಕ್ಕಾಗಿ ನಡೆದ ಹೋರಾಟಗಳಿಂದ ಅಲ್ಲಿನ ದಲಿತರ ನಡುವೆಯೇ ಪ್ರಮುಖ ನಾಯಕರು ಹೊಮ್ಮಿದ್ದಾರೆ. ಇಂಥವರ ಜೊತೆಗೆ ಕಬಾಲಿಯಂಥ ಭೂಗತ ಜಗತ್ತಿನ ಡಾನ್ ಸಹ ಚಿಮ್ಮಿದ್ದಾರೆ. ಈ ಎಲ್ಲ ಚಿತ್ರಣವನ್ನು ಸೂಕ್ಷ್ಮವಾಗಿ ಕಟ್ಟಿಕೊಡಲು ‘ಕಬಾಲಿ’ ಸಿನೆಮಾ ಯತ್ನಿಸುತ್ತದೆ.

ದಲಿತರ ನಾಯಕ
ಮುಖ್ಯವಾಗಿ ನಾವಿಲ್ಲಿ ಗಮನಿಸಬೇಕಿರುವುದು ಕಬಾಲಿ, ದಲಿತ. ಜೊತೆಗೆ ಮಲೇಶಿಯಾದ ಶೋಷಿತ ದಲಿತ ಸಮುದಾಯದ ಪ್ರತಿನಿಧಿ. ಈತ ದಲಿತ ಸಮುದಾಯದ ಒಂದು ಪ್ರಬಲ ಸಂಕೇತ. ತನ್ನವರನ್ನು ಎಲ್ಲ ರೀತಿಯ ಶೋಷಣೆಗಳಿಂದ ಮುಕ್ತಗೊಳಿಸಲು ಭೂಗತ ಜಗತ್ತಿನಂಥ ವಿಭಿನ್ನ ಹಾದಿ ಹಿಡಿದವನು. ಇದು ಈತನ ಸ್ವಂತ ಇಚ್ಛೆಯೇನಲ್ಲ. ಹೋರಾಟದ ಬದುಕಿನ ನಡುವೆ ವಿಧಿಯಿಲ್ಲದೆ ಹಾಯ್ದುಕೊಂಡ ಹಾದಿ. ಆದರೆ ಇದು ಕ್ಷಣಕ್ಷಣಕ್ಕೂ ಮುಳ್ಳುಗಳ ಮಾರ್ಗ.ಇಲ್ಲಿ ನಡೆಯುತ್ತಾ ಹೋರಾಡುತ್ತಾ ಹೊರಟವನ ವೈಯಕ್ತಿಕ ಬದುಕೂ ಹೇಗೆ ಬಿರುಗಾಳಿಗೆ ಸಿಲುಕಿ ತತ್ತರಿಸಿ ಹೋಗುತ್ತದೆ ಎಂಬುದನ್ನೂ ಚಿತ್ರ ಚಿತ್ರಿಸುತ್ತದೆ.
ಇಂಥ ಒಂದು ಕಥೆಯನ್ನು ಹೇಳಲು ನಿರ್ದೇಶಕ ಪ. ರಂಜಿತ್ ತುಸು ಹೊಸತು ಎನಿಸುವ ಸಿನೆಮಾ ವ್ಯಾಕರಣ ಬಳಸಿದ್ದಾರೆ. ಆದ್ದರಿಂದಲೇ ಎಂದಿನ ರಜನಿ ಸಿನೆಮಾದ ಪರಿಭಾಷೆಯನ್ನು ಕಾಣಲು ಹೊರಟವರಿಗೆ ‘ಕಬಾಲಿ’ ನಿರಾಶೆ ಉಂಟು ಮಾಡಬಹುದು. ಆದರೆ ಈ ಎಲ್ಲ ಪೂರ್ವಾಗ್ರಹ ನಿರೀಕ್ಷೆಗಳನ್ನು ಬದಿಗಿಟ್ಟು ನೋಡಿದರೆ ಇದು ಒಂದು ಉತ್ತಮ ಸಿನೆಮಾ.
ಬಹುದೊಡ್ಡ ಸ್ಟಾರ್ ವ್ಯಾಲ್ಯೂ ಇರುವಂಥ ರಜನೀಕಾಂತ್ ಅಂಥವರನ್ನು ತಾರಾಗಣದಲ್ಲಿ ಇಟ್ಟುಕೊಂಡು ಅವರ ಎಂದಿನ ಮ್ಯಾನರಿಸಂಗಳು, ಪದೇಪದೇ ಹೊಮ್ಮುವ ಪಂಚಿಂಗ್ ಡೈಲಾಗ್ಸ್ ಇಲ್ಲದೇ ಇಂಥ ಒಂದು ಸಿನೆಮಾ ನಿರೂಪಿಸಲು ಹೊರಡುವುದು ಕಷ್ಟದ ಕೆಲಸ. ಆದರೆ ಇಂಥ ಸವಾಲು ಸ್ವೀಕರಿಸಿರುವ ನಿರ್ದೇಶಕ ಪ. ರಂಜಿತ್ ಗೆದ್ದಿದ್ದಾರೆ.
ಬಿಗಿಯಾದ ಚಿತ್ರಕಥೆ
ಮಲೇಶಿಯಾದ ತಮಿಳು ದಲಿತರ ಹಿಂದಿನ-ಇಂದಿನ ಸ್ಥಿತಿಗತಿಗಳನ್ನು ನಿರ್ದೇಶಕ, ಅಧ್ಯಯನ ಮಾಡಿದ್ದಾರೆ ಎಂಬುದು ಚಿತ್ರಕಥೆಯಲ್ಲಿಯೇ ಗೊತ್ತಾಗುತ್ತದೆ. ಸಿನೆಮಾ ಕೆಲವೊಮ್ಮೆ ನಿಧಾನಗತಿಯಲ್ಲಿ ಸಾಗುತ್ತದೆ. ಇದಕ್ಕೆ ಕಾರಣ ಚಿತ್ರಕಥೆ. ಉದ್ದೇಶಪೂರ್ವಕವಾಗಿಯೇ ಹೀಗೆ ಮಾಡಲಾಗಿದೆ. ಮುಖ್ಯವಾಗಿ ಅಲ್ಲಿನ ತಮಿಳು ದಲಿತ ಮಕ್ಕಳು, ಯವಜನತೆ, ಇಂಥವರ ಪೋಷಕರ ತೊಳಲಾಟಗಳನ್ನು ಮುಟ್ಟಿಸಲು ಹೀಗೆ ಮಾಡಲಾಗಿದೆ.

ಸೂಕ್ಷ್ಮತೆಗಳು:
ನೂರಾರು ಮಾತುಗಳು, ಅನೇಕ ಫ್ರೇಮುಗಳಲ್ಲಿ ಹೇಳಬೇಕಾದ ವಿಷಯಗಳನ್ನು ಒಂದೇ ಫ್ರೇಮಿನಲ್ಲಿ, ಕೆಲವೊಮ್ಮೆ ಮಾತಿಲ್ಲದೆಯೇ ಕಟ್ಟಿಕೊಡಲಾಗಿದೆ. ಜೈಲಿನಲ್ಲಿ 25 ವರ್ಷ ಕಳೆದ ಕಬಾಲಿ ಬಿಡುಗಡೆಯಾಗಿದೆ. ಜೈಲಿನ ಅಧಿಕಾರಿಗಳು ಆತನನ್ನು ಹೊರಗೆ ಕರೆದೊಯ್ಯಲು ಬಂದಿದ್ದಾರೆ. ಆಗ ಕಬಾಲಿ, ‘ಆಂಧ್ರದ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಇಂಗ್ಲಿಷಿನಲ್ಲಿ ಬರೆದ ‘ಮೈ ಫಾದರ್ ಬಾಲಯ್ಯ’ ಓದುತ್ತಾ ಕುಳಿತಿರುತ್ತಾನೆ. ನಂತರ ಎದ್ದು ಹೊರಹೋಗುವಾಗ ಬಾಗಿಲ ಮೇಲಿನ ಬಾರ್ ಹಿಡಿದು ಪುಲ್ ಅಪ್ ವ್ಯಾಯಾಮ ಮಾಡುತ್ತಾನೆ.
ಇವೆಲ್ಲ ಕಬಾಲಿ ಅಧ್ಯಯನಶೀಲತೆ, ಭಾರತದಲ್ಲಿನ ದಲಿತರ ಸ್ಥಿತಿಗತಿಗಳನ್ನು ತಿಳಿದುಕೊಂಡಿರುವಿಕೆ, ಜೊತೆಗೆ ತನ್ನ ದೇಹವನ್ನು ಸದಾ ಹುರಿಗಟ್ಟಿಸಿದಂತೆ ಇಟ್ಟುಕೊಂಡಿರುವ ಮನಸ್ಥಿತಿ, ದೇಹಸ್ಥಿತಿಯನ್ನು ಸೂಚಿಸುತ್ತದೆ. ಮೈಮನಸುಗಳನ್ನು ಸದಾ ಎಚ್ಚರದಲ್ಲಿ, ಶಕ್ತಿಯುತವಾಗಿ ಇಟ್ಟುಕೊಂಡಿರಬೇಕೆಂಬ ಪ್ರಜ್ಞೆ ಕಬಾಲಿಗಿದೆ ಎಂಬುದನ್ನೂ ಸಂಕೇತಿಸುತ್ತದೆ.
ಕಬಾಲಿ ಪತ್ನಿ ಕುಮುದವಲ್ಲಿ ತೀರಾ ಸಣ್ಣಮನೆ ಮುಂದೆ ನಿಂತು ಗಂಡನೊಂದಿಗೆ ಮಾತನಾಡುತ್ತಿದ್ದಾಳೆ, ಮತ್ತೆ ಮೊದಲಿಗಿಂತ ಮನೆಗಿಂತ ಉತ್ತಮ ಸ್ಥಿತಿ ಇರುವ ಮನೆ ಮುಂದೆ ನಿಂತು ಹೇಳುತ್ತಾಳೆ. ನಂತರ ಬೆಲೆಬಾಳುವ ಕಾರು ನಿಂತಿರುವ ದೊಡ್ಡಮನೆಯೊಂದರ ಮುಂದೆ ನಿಂತು ಮಾತನಾಡುತ್ತಾಳೆ. ಈ ಮೂರರಲ್ಲಿಯೂ ಆಕೆಯ ವೇಷಭೂಷಣ ಹಿನ್ನೆಲೆಗೆ ತಕ್ಕಂತೆ ಬದಲಾಗುತ್ತದೆ. ಇದರ ಮೂಲಕ ಕಬಾಲಿಯ ಆರ್ಥಿಕ ಸ್ಥಿತಿಯಲ್ಲಾದ ಬದಲಾವಣೆಗಳನ್ನು ಒಂದೇ ಒಂದು ಫ್ರೇಮಿನಲ್ಲಿ ಹೇಳಲಾಗಿದೆ. ಇದು ಸಿನೆಮಾ ಸಾಧ್ಯತೆಯನ್ನು ದುಡಿಸಿಕೊಳ್ಳುವ ರೀತಿ.
ಉಡುಪು ಮತ್ತು ಭಾಷೆ
ದಲಿತರು ತಮ್ಮನ್ನು ಮೇಲುಜಾತಿಗಳು ಇರಿಸಿರುವ ಸ್ಥಿತಿಗತಿಯಿಂದ ವಿಮೋಚನೆಗೊಳ್ಳಲು ವಿದ್ಯೆ ಜೊತೆಗೆ ಉಡುಪು ಮತ್ತು ಭಾಷೆಯೂ ಸಹಕಾರಿ ಅಂಶಗಳು ಎಂದು ಕಬಾಲಿ ನಂಬಿರುತ್ತಾನೆ. ಈ ಪ್ರಜ್ಞೆಯಿಂದಲೇ ಉತ್ತಮವಾದ ಇಂಗ್ಲಿಷ್ ಮಾತನಾಡುತ್ತಾನೆ. ಆಧುನಿಕ ಶೈಲಿಯ ಸೂಟು-ಬೂಟು ತೊಡುತ್ತಾನೆ. ಈತನ ವೇಷಭೂಷಣಗಳು ಸಹ ಪಟ್ಟಭದ್ರ ಹಿತಾಸಕ್ತಿಗಳಿಗೆ ಸಹಿಸಲು ಆಗುವುದಿಲ್ಲ. ಇದಕ್ಕಾಗಿ ಮತ್ತೆಮತ್ತೆ ಈತನನ್ನು ರೌಡಿ, ಎದುರಾಳಿ ವೀರಶೇಖರನ್ ವ್ಯಂಗ್ಯವಾಡುತ್ತಾನೆ. ಹೀಯಾಳಿಸುತ್ತಾನೆ. ಆತನ ದಾಳಿಗೆ ಮೊದಲು ಕಬಾಲಿಯ ಕೂಲಿಂಗ್ ಗ್ಲಾಸ್, ಸೂಟು ಗುರಿಯಾಗುತ್ತದೆ. ಇದನ್ನು ಬಲವಂತವಾಗಿ ಬಿಚ್ಚಿಸಲಾಗುತ್ತದೆ. ಇವೆಲ್ಲ ದಲಿತರು ಒಳಗಾಗುತ್ತಿರುವ ಕ್ರೌರ್ಯ, ಶೋಷಣೆಯನ್ನು ಸಮರ್ಥವಾಗಿ ಚಿತ್ರಿಸುತ್ತದೆ.
ಕಾರ್ಮಿಕ
ರಬ್ಬರ್ ಪ್ಲಾಂಟೇಶನ್ನಲ್ಲಿ ಕಬಾಲಿ ಕೂಡ ಓರ್ವ ಕಾರ್ಮಿಕ. ವೇತನ ತಾರತಮ್ಯದ ವಿರುದ್ಧ ಸಿಡಿದೆದ್ದವನು. ಈ ಹೋರಾಟದಲ್ಲಿ ಈತನ ಬೌದ್ಧಿಕ ಶಕ್ತಿಯೂ ಹೇಗೆ ನೆರವಾಗುತ್ತದೆ ಎಂದು ಬಹುಸೂಚ್ಯವಾಗಿ ಹೇಳಲಾಗಿದೆ. ಇಂಥ ಬುದ್ದಿಶಕ್ತಿಯ ನೆರವಿನಿಂದಲೇ ಆತ ದಲಿತರನ್ನು ಕಾಡುತ್ತಿರುವ ಪಿಡುಗುಗಳಿಂದ ಪಾರು ಮಾಡಲು ತನ್ನದೇ ಆದ ರೀತಿಯಲ್ಲಿ ಪ್ರಯತ್ನಿಸುತ್ತಾನೆ.
ಡ್ರಗ್ಸ್ ರಾಕೆಟ್ಗಳು ತಮಿಳು ದಲಿತ ಬಾಲಕ, ಬಾಲಕಿಯರನ್ನ, ಯುವಜನತೆಯನ್ನ ದುರುಪಯೋಗ ಮಾಡಿಕೊಳ್ಳುವುದನ್ನು ತಡೆಯಲು ಯತ್ನಿಸುತ್ತಾನೆ. ಬಲಿಪಶುಗಳಾದ ಇಂಥವರನ್ನು ಸರಿದಾರಿಗೆ ತರಲು ವಸತಿ ಸಹಿತ ಶಾಲೆಗಳನ್ನು ಕೂಡ ಸ್ಥಾಪಿಸುತ್ತಾನೆ. ಇಂಥವರ ಜೊತೆ ತಾನೋರ್ವ ದೊಡ್ಡ ಡಾನ್ ಎಂಬ ಬಿಂಕ ತೋರದೆ ಸರಳವಾಗಿ, ಆತ್ಮೀಯವಾಗಿ ಸಂವಾದಿಸುತ್ತಾನೆ. ಇದೆಲ್ಲ ಮಲೇಶಿಯಾದಲ್ಲಿನ ಸ್ಥಿತಿಯನ್ನು ವಿವರವಾಗಿ ಹೇಳುವುದೇ ಆಗಿದೆ.ಈ ಶಾಲೆಯಲ್ಲಿ ಬರುವ ಒಂದೊಂದು ಪಾತ್ರವೂ ಮಲೇಶಿಯಾದಲ್ಲಿನ ಇಂಥ ಸಾವಿರಾರು, ಲಕ್ಷಾಂತರ ಪಾತ್ರಗಳನ್ನು ಪ್ರತಿನಿಧಿಸುತ್ತವೆ.
ಎಲ್ಲ ರೀತಿಯ ಶೋಷಣೆ ವಿರುದ್ಧ ಹೋರಾಡುತ್ತಲೇ ಮಾದಕ ಪದಾರ್ಥಗಳು, ವೈಶ್ಯಾವಾಟಿಕೆಗಳನ್ನು ಚೈನ್ ಲಿಂಕ್ ಮಾದರಿ ನಡೆಸುವ ಡಾನ್ ಅನ್ನು ಕೊಲ್ಲುತ್ತಾನೆ. ಅದಕ್ಕಿಂತಲೂ ಬಹುಮುಖ್ಯವಾಗಿ ತಾರತಮ್ಯ ನೀತಿ ಪ್ರತಿಪಾದಿಸುವ ವೀರಶೇಖರ್ ನನ್ನು ಬಲಿ ತೆಗೆದುಕೊಳ್ಳುತ್ತಾನೆ.
ಈ ಘಟನೆಗಳೆಲ್ಲ ನಡೆಯುವುದು ಬಹು ಅಂತಸ್ತಿನ ಕಟ್ಟಡವೊಂದರ ಅಲಂಕೃತ ತಾರಸಿ ಹೋಟೆಲಿನಲ್ಲಿ. ಇಲ್ಲಿಂದ ಡಾನ್ ಶವವನ್ನು ಒದ್ದು ಕೆಳಗೆ ತಳ್ಳುತ್ತಾನೆ. ಇದು ಬಹು ಸಾಂಕೇತಿಕವಾಗಿ ಗೋಚರಿಸುತ್ತದೆ. ಈ ದೃಶ್ಯಗಳನ್ನು ಎಲ್ಲಿ ಬೇಕಾದರೂ ಚಿತ್ರಿಸಬಹುದಿತ್ತು. ಆದರೆ ಬಹುಮಹಡಿ ಕಟ್ಟಡ ಶ್ರೇಣಿಕೃತ ವ್ಯವಸ್ಥೆಯನ್ನು, ಡಾನ್ ಮತ್ತು ವೀರಶೇಖರನ್ ಆ ವ್ಯವಸ್ಥೆಯ ಉತ್ತುಂಗದಲ್ಲಿರುವ ಪಟ್ಟಭದ್ರ ಹಿತಾಸಕ್ತಿಗಳೆಂದು ಹೇಳಲ್ಪಟ್ಟಿವೆ. ಡಾನ್ ಅನ್ನು ಕೆಳಗೆ ತಳ್ಳಿ ಕಬಾಲಿ ಅಲ್ಲಿ ವಿರಾಜಮಾನನಾಗುವುದು ದಲಿತರು ಹಿಡಿಯಬೇಕಾದ ಸ್ಥಾನಮಾನಗಳನ್ನು ಸೂಚಿಸುತ್ತದೆ.
ಅಭಿನಯ:
ಕಬಾಲಿಯಲ್ಲಿ ಬರುವ ಪಾತ್ರಗಳ ಪೋಷಣೆ ಉತ್ತಮ. ಯಾವ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಕೊಡಬೇಕೊ ಅಷ್ಟು ನೀಡಲಾಗಿದೆ. ಇನ್ನು ಅಭಿನಯಕ್ಕೆ ಬರುವುದಾದರೆ ಎಲ್ಲ ಪಾತ್ರಧಾರಿಗಳು ಕೂಡ ತಮ್ಮ ಪಾತ್ರಗಳ ಇತಿಮಿತಿ ಅರಿತು ನಟಿಸಿದ್ದಾರೆ ಎಂದು ಹೇಳಬಹುದು. ಇದೇ ಮಾತು ಮಲೇಶಿಯಾ, ತೈವಾನ್ಗಳ ನಟನಟಿಯರಿಗೂ ಅನ್ವಯಿಸುತ್ತದೆ.
ಕುಮುದವಲ್ಲಿ ಪಾತ್ರ ಮಾಡಿರುವ ರಾಧಿಕಾ ಅಪ್ಟೆ ಅವರ ಅಭಿನಯ ಮನೋಜ್ಞ, ಸಿನೆಮಾದಲ್ಲಿ ಅವರು ಕುಮುದವಲ್ಲಿ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ. ತುಂಬ ಭಾವುಕ ಸನ್ನಿವೇಶಗಳಲ್ಲಿಯೂ ಓವರ್ ಆಕ್ಟಿಂಗ್ ಇರದಂತೆ ಎಚ್ಚರ ವಹಿಸಲಾಗಿದೆ. ತನ್ನ ಮಗಳನ್ನು ಆಕಸ್ಮಿಕವಾಗಿ ಭೇಟಿಯಾಗುವ ಕಬಾಲಿ ಪಾತ್ರಧಾರಿ ರಜನಿ ಕಣ್ಣುಗಳ ಮೂಲಕವೇ ತನ್ನ ಆಶ್ಚರ್ಯವನ್ನು, ದಿಗ್ಬ್ರಮೆಯನ್ನು, ಪ್ರೀತಿಯನ್ನು ಹೊರಹೊಮ್ಮಿಸುವ ರೀತಿ ಮೆಚ್ಚುಗೆಗೆ ಕಾರಣವಾಗುತ್ತದೆ. ಇದು ರಜನಿ ಅಭಿನಯದ ಶಕ್ತಿಯನ್ನೂ ತೋರಿಸುತ್ತದೆ.
ಮೈತುಂಬ ಚಿನ್ನಾಭರಣ ಧರಿಸಿರುವ, ಸದಾ ದ್ವೇಷವನ್ನೇ ಉಸಿರಾಡುವ ಸಹ ಡಾನ್ ವೀರಶೇಖರನ್ ಪಾತ್ರದಲ್ಲಿ ಅಭಿನಯಿಸಿರುವ ಕಿಶೋರ್, ಡಾನ್ ಟೋನಿ ಲೀ ಪಾತ್ರಧಾರಿ ವಿನ್ಸ್ಟನ್ ಚಾವೋ, ಜೀವಾ ಪಾತ್ರಧಾರಿ ದಿನೇಶ್ ರವಿ, ಕಬಾಲಿ ಮಗಳು ಯೋಗಿ ಪಾತ್ರಧಾರಿ ಧನಿಷ್ಕಾ, ಅಮೀರ್ ಪಾತ್ರಧಾರಿ ಜಾನ್ ವಿಜಯ್ ಅಭಿನಯ ಗಮನ ಸೆಳೆಯುತ್ತದೆ.

ತಂತ್ರಜ್ಞರು
ಈ ಮೋದಲೇ ಹೇಳಿದಂತೆ ನಿರ್ದೇಶಕ ಪ. ರಂಜಿತ್, ಚಿತ್ರಕಥೆ ತಯಾರಿಕೆಯಲ್ಲಿ, ನಿರ್ದೇಶನದಲ್ಲಿ ಅಪಾರ ಪರಿಶ್ರಮ ವಹಿಸಿದ್ದಾರೆ. ಕ್ಯಾಮೆರಾಮನ್ ಜಿ. ಮುರುಳಿ ಅವರು ಚಿತ್ರಕಥೆ ಬೇಡುವ ಮಾದರಿಯ ಛಾಯಾಗ್ರಹಣ ಮಾಡಿದ್ದಾರೆ. ಒಂದು ವೇಳೆ ಇವರು ರಮ್ಯತೆಗೆ ಶರಣಾಗಿದ್ದರೆ ಚಿತ್ರ ಖಂಡಿತ ಡಲ್ ಆಗುತ್ತಿತ್ತು. ತುಸು ಹೊಸ ವ್ಯಾಕರಣದ ಸಿನೆಮಾ ಕೇಳುವ ಮಾದರಿಯಲ್ಲಿಯೇ ಪ್ರವೀಣ್ ಕೆ.ಎಲ್. ಸಂಕಲನ ಮಾಡಿದ್ದಾರೆ. ಸಂಗೀತ ನಿರ್ದೇಶಕ ಸಂತೋಷ್ ನಾರಾಯಣ್ ಸೂಕ್ತ ಹಿನ್ನೆಲೆ ಸಂಗೀತ ನೀಡಿದ್ದಾರೆ. ಹೊಸ ರೀತಿಯ ಸಿನೆಮಾ ನಿರ್ಮಾಣಕ್ಕೆ ಬಹುಕೋಟಿ ವೆಚ್ಚ ಮಾಡಿರುವ ವಿ. ಕ್ರಿಯೇಷನ್ಸ್ ಸಂಸ್ಥೆ ಪ್ರಯತ್ನವನ್ನು ಮೆಚ್ಚಲೇಬೇಕು.
ಸಾವಿರಾರು ವರ್ಷಗಳಿಂದ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇವೆ. ಅವರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಕ್ಕುಗಳನ್ನು ದಮನ ಮಾಡಲಾಗಿದೆ. ಇದೀಗ ಅವರ ಹಕ್ಕಿನ ಆಹಾರದ ತಟ್ಟೆಗೂ ಕೈ ಇಟ್ಟು ಕಿತ್ತುಕೊಳ್ಳಲಾಗುತ್ತಿದೆ. ಇಂಥ ಸಂದರ್ಭದಲ್ಲಿ ದಲಿತ ನಾಯಕ ಕಬಾಲಿ ನಡೆಸುವ ಹೋರಾಟ ಹೊಸ ಮಾದರಿ ಸಂಕೇತಿಸುತ್ತಿದೆಯೇ…? ಈ ಪ್ರಶ್ನೆ ಮತ್ತೆಮತ್ತೆ ಕಾಡುತ್ತಿದೆ. ಅಂದಹಾಗೆ ತಮಿಳು ದಲಿತರು ಮಾತ್ರ ಇಟ್ಟುಕೊಳ್ಳುವ ಹೆಸರು “ಕಬಾಲಿ” ಇಂದು ವಿಶ್ವದಾದ್ಯಂತ ಇದು ಬೇರೆಬೇರೆ ಕಾರಣಗಳಿಂದ ಮೆರೆದಾಡುತ್ತಿದೆ. ಇದು ದಲಿತರ ಮುಂಬರುವ ಭವಿಷ್ಯದ ಸಾಧ್ಯತೆಯೂ ಆಗಿರಬಹುದಲ್ಲವೆ…???

Similar Posts

Leave a Reply

Your email address will not be published. Required fields are marked *