ಬೀದಿಯಲ್ಲಿ ನಿಂತು ಪುಸ್ತಕಗಳನ್ನು ಮಾರುವುದು ಖಂಡಿತ ಅವಮಾನಕರವಲ್ಲ; ಅದೊಂದು ಹೆಮ್ಮೆಯ ಸಂಗತಿ. ಆದರೆ ಇಂಥ ಅನಿವಾರ್ಯತೆ ಕನ್ನಡ ಸಾಹಿತ್ಯಕ್ಕೆ ಏಕೆ ಉಂಟಾಗಿದೆ ಎಂಬುದೇ ನನ್ನ ಪ್ರಶ್ನೆ. ಇದು ದಿಢೀರ್ ಮೂಡಿದ್ದೇನು ಅಲ್ಲ; ಈ ಜಿಜ್ಞಾಸೆ ನನ್ನನ್ನೂ ಸೇರಿದಂತೆ ಅನೇಕ ಓದುಗರನ್ನು ಕಾಡುತ್ತಿದೆ.

ಸೆಪ್ಟೆಂಬರ್ ೧೦, ೨೦೨೩ರ ಭಾನುವಾರ ಕನ್ನಡದ ಕೆಲವಾರು ಲೇಖಕರು, ಲೇಖಕಿಯರು ಸೇರಿ ಮೈಸೂರಿನಲ್ಲಿ “ಬಾ ಗುರು ಪುಸ್ತಕ ತಗೋ” ಅಭಿಯಾನ ನಡೆಸಿದ್ದಾರೆ. ಸಾಂಸ್ಕೃತಿಕ ನಗರಿಯ ಕೆಲವು ಬೀದಿಗಳಲ್ಲಿ ಇದು ಸಾಗಿದೆ. ಲೇಖಕರ ಗುಂಪು ಕುಕ್ಕರಹಳ್ಳಿ ಕೆರೆಯ ಬಳಿ ಪುಸ್ತಕ ಮಾರುವಾಗ ಆಸಕ್ತಿಕರ ಚಿತ್ರಗಳನ್ನು ಗಮನಿಸಿದೆ. ಗಂಭೀರ ಸನ್ನಿವೇಶದಲ್ಲಿಯೂ ಆ ವಾತಾವರಣವನ್ನು ತಮ್ಮ ಹ್ಯೂಮರಸ್ ಪ್ರಜ್ಞೆಯಿಂದ ತಿಳಿಯಾಗಿಸುವ ಲೇಖಕ ಅಬ್ದುಲ್ ರಶೀದ್ ಅವರು ಒಂದು ಪುಸ್ತಕ ಖರೀದಿಸಿದರೆ ನಳ್ಳಿ ಉಚಿತ, ಮೊಬೈಲ್ ಗ್ಯಾಡ್ಜೆಟಿನ ಕವರ್ ಫ್ರಿ ಎಂದು ಹಾಸ್ಯಭರಿತ ಶೈಲಿಯಲ್ಲಿ ಹೇಳುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿವೆ.

ನನಗೆ ಆ ಕ್ಷಣ ರಶೀದರ ತಿಳಿಹಾಸ್ಯ ಪ್ರಜ್ಞೆ ನಗು ಮೂಡಿಸಿದರೂ ಇದು ಡಾರ್ಕ್ ಕಾಮಿಡಿ ಆಗಿರಬಹುದೇ, ಲೇಖಕ ತನ್ನ ಮನದ ನೋವನ್ನು ಮುಚ್ಚಿಟ್ಟುಕೊಂಡು ಹೀಗೆ ಜೊತೆಯಲ್ಲಿರುವವರ ಉತ್ಸಾಹ ಹೆಚ್ಚಿಸಲು ಹೀಗೆ ಮಾಡುತ್ತಿರಬಹುದೇ ಎನಿಸಿತು. ಹೀಗೆ ಅನಿಸಲು ಕಾರಣಗಳೂ ಇವೆ.

ಬೀದಿಯಲ್ಲಿ ನಿಂತು ಪುಸ್ತಕ ಮಾರಿದವರು ಕನ್ನಡ ಸಾಹಿತ್ಯ ಲೋಕದ ಅನಾಮಿಕರೇನೂ ಅಲ್ಲ; ಅಬ್ದುಲ್ ರಶೀದರು ದಶಕಗಳ ಹಿಂದೆಯೇ ತಮ್ಮ ಸಶಕ್ತ ಬರೆವಣಿಗೆಯ ಮೂಲಕ ಗುರುತಿಸಿಕೊಂಡವರು. ಸ್ವಾಮಿ ಪೊನ್ನಾಚಿ, ಕುಸುಮಾ ಆಯರಹಳ್ಳಿ, ಹೆಚ್.ಎಸ್. ಮಧುರಾಣಿ, ಜಯರಾಮಚಾರಿ ಇವರೆಲ್ಲ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. “ವಿಜಯ ಕರ್ನಾಟಕ” ಪತ್ರಿಕೆಯಲ್ಲಿ ವರ್ಷಗಳ ಕಾಲ ಅಂಕಣ ಬರೆಹಗಳ ಮೂಲಕ ಕುಸುಮಾ ಆಯರಹಳ್ಳಿ ಅವರು ಬಹುತೇಕ ಕನ್ನಡ ಕುಟುಂಬಗಳಿಗೆ ಪರಿಚಿತರು.

“ನಾವು ಬರೀತೀವಿ; ಬೀದಿಲಿ ನಿಂತ್ಕೊಂಡು ಪುಸ್ತಕ ಮಾರ್ತೀವಿ” ಎಂಬ ಟ್ಯಾಗ್ ಲೈನ್ ಪೋಸ್ಟರಿನಲ್ಲಿ ಇವರುಗಳು ಸೇರಿದಂತೆ  ಮಂಜುನಾಥ್ ಕುಣಿಗಲ್, ರಂಗನಸ್ವಾಮಿ ಮೂಕನಹಳ್ಳಿ, ಶಶಿ ತರೀಕರೆ, ವಿನಾಯಕ ಅರಳಿಸುರಳಿ, ಸಂತೋಷ ತಾಮ್ರಪರ್ಣಿ, ನೌಶದ್ ಜನ್ನತ್, ಬಿ.ಕೆ. ವಿಕ್ರಮ್ ಇವರೆಲ್ಲ ತಮ್ಮ ಹೊಸ ಮಾದರಿಯ ಬರೆಹಗಳಿಂದ ಗಮನ ಸೆಳೆದವರು.

ಗಟ್ಟಿ ಸಾಹಿತ್ಯವನ್ನೇ ನೀಡಿರುವ ಇವರ ಕೃತಿಗಳು ಲಕ್ಷಗಳಿರಲಿ, ಸಾವಿರಾರು ಸಂಖ್ಯೆಯಲ್ಲಿ ಮಾರಾಟವಾಗಬೇಕಿತ್ತು. ಹಲವಾರು ಓದುಗರು ತಾವಾಗಿ ಪುಸ್ತಕದ ಮಳಿಗೆಗಳಲ್ಲಿ ಇವರ ಪುಸ್ತಕಗಳನ್ನು ಕೇಳಬೇಕಿತ್ತು. ಈ ಬೇಡಿಕೆ ಪೂರೈಸಲು ಪ್ರಕಾಶಕರು ಶ್ರಮಿಸಬೇಕಿತ್ತು. ಆದರೆ ಕನ್ನಡದಲ್ಲಿ ಇದಾಗುತ್ತಿಲ್ಲ ಏಕೆ ?

ಬೀದಿಯಲ್ಲಿ ನಿಂತು ಪುಸ್ತಕ ಮಾರಾಟ ಮಾಡುವುದು ಹೊಸದೇನಲ್ಲ, ಸಾಹಿತಿ ಗಳಗನಾಥರು ಅಕ್ಷರಶಃ ಪುಸ್ತಕಗಳನ್ನು ಹೆಗಲ ಮೇಲೆ ಹೊತ್ತು ಪೇಟೆ, ಹಳ್ಳಿಗಳಲ್ಲಿ ಮಾರಾಟ ಮಾಡಿದ್ದಾರೆ. ಅಂದು ಅದರ ಅಗತ್ಯವಿತ್ತು. ಅದು ಕೂಡ ಕನ್ನಡ ಪುಸ್ತಕಗಳ ಮಾರುಕಟ್ಟೆ ಸೃಷ್ಟಿಸುವ, ಹಿಗ್ಗಿಸುವ ಕಾರ್ಯ. ಆದರೆ ಹಲವು ದಶಕಗಳ ನಂತರವೂ ಇದೇ ಸ್ಥಿತಿ ಇದ್ದರೆ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಲ್ಲವೇ ?

ಕನ್ನಡ ಪುಸ್ತಕಗಳ ಮಾರುಕಟ್ಟೆ ದೊಡ್ಡದಾಗದಿದ್ದರೂ ವರ್ಷದಿಂದ ವರ್ಷಕ್ಕೆ ಪ್ರಕಟವಾಗುವ ಪುಸ್ತಕಗಳ ಸಂಖ್ಯೆ ಹೆಚ್ಚಾಗಿಯೇ ಇದೆ. ಪ್ರತಿವರ್ಷ ಮೂರು ಸಾವಿರಕ್ಕೂ ಹೆಚ್ಚು ಶೀರ್ಷಿಕೆಗಳ ಪುಸ್ತಕಗಳು ಪ್ರಕಟವಾಗುತ್ತಿವೆ. ಆದರೂ ಬಹುತೇಕ ಲೇಖಕರ ಒಂದು ಪುಸ್ತಕದ ಐದುನೂರು, ಸಾವಿರ ಪ್ರತಿಗಳು ಮಾರಾಟವಾಗುವುದು ದುಸ್ತರವಾಗಿದೆ.

ಕರ್ನಾಟಕ ಸರ್ಕಾರ ಕನ್ನಡ ಸಾಹಿತ್ಯಕ್ಕೆ, ಪುಸ್ತಕಗಳ ಕ್ಷೇತ್ರಕ್ಕೆ ಸಾಕಷ್ಟು ಪ್ರೋತ್ಸಾಹ ಕೊಡುತ್ತಿದೆ. ಇದಕ್ಕಾಗಿಯೇ ಕನ್ನಡ ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ (ಸರ್ಕಾರದ ಅನುದಾನಗಳು ಸಿಗುವ ಸಂಸ್ಥೆ), ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ ಹೀಗೆ ಎಷ್ಟೊಂದು ಸಂಸ್ಥೆಗಳು ಕನ್ನಡಕ್ಕಾಗಿ, ಕನ್ನಡ ಸಾಹಿತ್ಯದ ಸಲುವಾಗಿ ಇವೆ. ಆದರೂ ಕನ್ನಡದ ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿ ಏಕೆ ಮಾರಾಟವಾಗುತ್ತಿಲ್ಲ ?

ಸ್ಮಾರ್ಟ್ ಪೋನ್ ಬಂದಿದೆ, ವೆಬ್ ಸೀರೀಸ್, ಸಿನೆಮಾಗಳನ್ನು ಕಡಿಮೆ ದರದಲ್ಲಿ ಪ್ರದರ್ಶಿಸುವ ಒಟಿಟಿ ಪ್ಲಾಟ್ ಫಾರಂಗಳು ಬಂದಿವೆ; ಇದರಿಂದ ಕನ್ನಡದ ಪುಸ್ತಕಗಳ ಮಾರಾಟ ಕುಸಿತವಾಗಿದೆ ಎಂದು ಹೇಳಿದರೆ ಅದಕ್ಕಿಂತ ಸುಳ್ಳು ಮತ್ತೊಂದು ಇರಲಾರದು. ಇವುಗಳು ಬರುವ ಮೊದಲು ಸಿನೆಮಾಗಳು ಇರಲಿಲ್ಲವೇ, ಆಗಲೂ ಈಗಲೂ ಟಿವಿ ಇಲ್ಲವೇ ? ಪ್ರತಿಯೊಂದು ಕಾಲಘಟ್ಟದಲ್ಲಿಯೂ ಏನಾದರೊಂದು ಪರ್ಯಾಯ ಮನರಂಜನೆ ಮಾಧ್ಯಮಗಳೂ ಇರುತ್ತವೆ. ಆದರೆ ಪುಸ್ತಕ ಓದುವುದು ಮನರಂಜನೆಗಾಗಿ ಮಾತ್ರ ಅಲ್ಲ; ಅದೊಂದು ಬೌದ್ದಿಕ ಬೆಳವಳಿಗೆಯ ಉದ್ದೀಪನ ಅಲ್ಲವೇ ?

ನೆರೆಯ ಕೇರಳದಲ್ಲಿ ಖ್ಯಾತ ಸಾಹಿತಿಯೊಬ್ಬರ ಪುಸ್ತಕ ಪ್ರಕಟವಾದರೆ ಅದೊಂದು ಸಂಭ್ರಮ. ಅಲ್ಲಿ ಖ್ಯಾತನಾಮರಿಗಷ್ಟೆ ಅಲ್ಲದೇ ಭರವಸೆಯ, ಉದಯೋನ್ಮುಖ ಸಾಹಿತಿಗಳ ಪುಸ್ತಕಗಳಿಗೂ ಬೇಡಿಕೆಯಿದೆ. ಉತ್ತಮ ಸಾಹಿತ್ಯ ಇರುವ ಕೃತಿಯೊಂದರ ಐದು ಸಾವಿರ ಪ್ರತಿ ಮಾರಾಟವಾದರೆ ಅದೇ ಅತೀ ಕಡಿಮೆ ಮಾರಾಟ ಎನ್ನುವಂಥ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿದೆ.

ಕೇರಳದಲ್ಲಿ, ತಮಿಳುನಾಡಿನಲ್ಲಿ ಸಾಹಿತ್ಯದ ಸಂಕಲನಗಳೇ ಆಗಿರುವ ವಾರಪತ್ರಿಕೆ, ಮಾಸಿಕಗಳು ಲಕ್ಷಾಂತರ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಆದರೆ ಕನ್ನಡದಲ್ಲಿ ? ಇಲ್ಲಿರುವ ಸಾಹಿತ್ಯಾಧಾರಿತ ವಾರಪತ್ರಿಕೆಗಳು, ಮಾಸಿಕಗಳ ಹೂರಣ ಉತ್ತಮವಾಗಿದ್ದರೂ ಬದಕಲು ಏದುಸಿರು ಬಿಡುತ್ತಿವೆ !

ಏಕೀಗೆ ? ಎಲ್ಲಿ ಎಡವಿದ್ದೇವೆ. ನನಗನ್ನಿಸುವುದು ಶಾಲಾ ಮಟ್ಟದಲ್ಲಿಯೇ ಮಕ್ಕಳಿಗೆ ಓದುವ ಅಭಿರುಚಿ ಮೂಡಿಸುವಲ್ಲಿ ಸೋತಿದ್ದೇವೆ, ಕನ್ನಡವನ್ನು ಅಕ್ಕರೆಯಿಂದ ತಬ್ಬಿಕೊಳ್ಳುವುದನ್ನೂ ಕಲಿಸುತ್ತಿಲ್ಲ. ಇಂಗ್ಲಿಷ್ ಮಾಧ್ಯಮದ ಮಾಯಾಗಾಳಿಗೆ ಮಾರು ಹೋಗಿರುವುದು ಒಂದು ಕಾರಣ. ಇದರ ಜೊತೆಗೆ ಪ್ರಾಥಮಿಕ ಶಾಲಾ ಹಂತದಿಂದ ಹಿಡಿದು ಪ್ರೌಢಶಾಲಾ ಹಂತದವರೆಗೆ ವಿವಿಧ ವಿಷಯ ಕಲಿಸುವ ಎಷ್ಟು ಮಂದಿ ಶಿಕ್ಷಕರಿಗೆ ಕನ್ನಡ ಸಾಹಿತ್ಯವನ್ನು ಆಳವಾಗಿ ಓದುವ ಅಭ್ಯಾಸವಿದೆ ? ಇವರು ತಾವು ಓದಿದ ಕನ್ನಡ ಪುಸ್ತಕಗಳ ಬಗ್ಗೆ ತರಗತಿಗಳಲ್ಲಿ ಒಂದೆರಡು ಮಾತು ಹೇಳಿದರೂ ವಿದ್ಯಾರ್ಥಿಗಳ ಕಿವಿ ನಿಮಿರುವುದಿಲ್ಲವೇ ?

ಹೀಗೆ ಸಾಲುಸಾಲು ಪ್ರಶ್ನೆಗಳೇ ಇವೆ. ಇದರ ನಡುವೆ “ಬಾ ಗುರು ಬುಕ್ ತಗೋ” ಅಭಿಯಾನ ಆರಂಭಿಸಿರುವ ಎಲ್ಲರಿಗೂ ಅಭಿನಂದನೆ. ನಿಮ್ಮ ನಡೆಯಿಂದ ಕನ್ನಡ ಪುಸ್ತಕೋದ್ಯಮ ಅರಳಿ – ಬೆಳೆಯಲಿ. ಪ್ರಕಾಶಕರ ತೆಕ್ಕೆಯಲ್ಲಷ್ಟೇ ಉಳಿಯದೇ ಸಾಹಿತಿಗಳೆಡೆಗೆ ಬರಲಿ; ಇದು ಆದರೂ ಅದೊಂದು ದೊಡ್ಡ ಮುನ್ನಡೆ !

Similar Posts

Leave a Reply

Your email address will not be published. Required fields are marked *