“ಪೂರ್ಣಚಂದ್ರ ತೇಜಸ್ವಿ ಅವರನ್ನು ಕಾಡು ತನ್ನ ಅನಂತ ವಿಸ್ಮಯಗಳಿಂದ ಕಾಡು ಬಂಧಿಸಿತ್ತು. ಹುಲಿ, ಚಿರತೆಗಳ ಜಾಡನ್ನಿಡಿದು ಕಾಡಿನಲ್ಲಿ ಅಲೆದಾಡಿದ ಕೆನೆತ್ ಅಂಡರ್ಸನ್, ಪತ್ತೆದಾರಿಯಂಥ ಕಥನಗಳನ್ನು ರಚಿಸಿದರು. ಇದೇ ರೀತಿ ಇಲ್ಲಿ ಸಿದ್ದು ಕೂಡಾ, ತಮ್ಮ ಪತ್ರಕರ್ತನ ಸಹಜ ಪ್ರವೃತ್ತಿಯಂತೆ, ಕಾಡಿನಲ್ಲಿ ಜರುಗಿದ ಹಲವಾರು ಘಟನಾವಳಿಗಳನ್ನು ಚೆನ್ನಾಗಿ ದಾಖಲಿಸಿದ್ದಾರೆ” ಇದು ಅಂತರಾಷ್ಟ್ರೀಯ ಖ್ಯಾತಿಯ ವನ್ಯಜೀವಿ ತಜ್ಞರಾದ ಕೃಪಾಕರ – ಸೇನಾನಿ ಅವರು “ಪಿನಾಕಿ ದಿ ಫ್ಯಾಂಟಮ್” ಕೃತಿಯ ಬಗ್ಗೆ ತಮ್ಮ ಮುನ್ನುಡಿಯಲ್ಲಿ ಹೇಳಿರುವ ಅಭಿಪ್ರಾಯ. ಈ ಮಾತುಗಳೇ ಕೃತಿಯ ಕುರಿತು ಪರಿಚಯ ಮಾಡಿಕೊಡುತ್ತದೆ.
ಭಾರತೀಯ ಮಾಧ್ಯಮಗಳಲ್ಲಿ ಪರಿಸರ, ಕೃಷಿ, ಅರಣ್ಯಜೀವನ, ಮತ್ತು ವನ್ಯಮೃಗಗಳ ವಿಷಯಗಳಿಗೆ ಬದ್ದರಾಗಿ ವರದಿ ಮಾಡುವ ಪತ್ರಕರ್ತರ ಸಂಖ್ಯೆ ಬೆರಳೆಣಿಕೆ. ಅದರಲ್ಲಿಯೂ ಇಂಥವರು ಭಾರತದ ಇಂಗ್ಲಿಷ್ ಮಾಧ್ಯಮಗಳಲ್ಲಿ ಕಾಣುತ್ತಾರೆ. ಆದರೆ ಭಾರತೀಯ ಭಾಷೆಗಳ ಮಾಧ್ಯಮಗಳಲ್ಲಿ ಅಪರೂಪ. ಇದಕ್ಕೆ ಕಾರಣ. ಪತ್ರಕರ್ತರಿಗೆ ಆಸಕ್ತಿ ಇದ್ದರೂ ಸ್ಥಳೀಯ ಮಾಧ್ಯಮಗಳಿಗೆ ಆಸಕ್ತಿ ಇಲ್ಲದೇ ಇರುವುದೇ ಆಗಿದೆ.
ಇದರಿಂದ ಸ್ಥಳೀಯ ಭಾಷೆಗಳ ಪತ್ರಿಕಾ ಓದುಗರಿಗೆ, ಟಿವಿ ವೀಕ್ಷಕರಿಗೆ ಅರಣ್ಯ ಕುರಿತಾದ ಅದೆಷ್ಟೋ ವಿಷಯಗಳು ತಪ್ಪಿ ಹೋಗುತ್ತಿವೆ. ಇಂಥ ಕೊರತೆಯನ್ನು ಸ್ಪಲ್ಪವಾದರೂ ನಿವಾರಿಸುವ ನಿಟ್ಟಿನಲ್ಲಿ ಹಿರಿಯ ಪತ್ರಕರ್ತ ಸಿದ್ದು ಪಿನಾಕಿ ಕೆಲಸ ಮಾಡುತ್ತಿರುವುದು ಗಮನಾರ್ಹ. ಈ ವಿಷಯಗಳಿಗೆ ಸಾಮಾಜಿಕ ಜಾಲತಾಣ ಅದರಲ್ಲಿಯೂ ಫೇಸ್ಬುಕ್ ಅನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ಮೂಲಕ ಕಾಡಿನ ಅನೇಕ ಆಸಕ್ತಿದಾಯಕ ಸಂಗತಿ, ಘಟನಾವಳಿಗಳನ್ನು ಸರಣಿ ರೂಪದಲ್ಲಿ ಪ್ರಕಟಿಸುತ್ತಿದ್ದಾರೆ.
ಈ ದಿಶೆಯಲ್ಲಿಯೇ ಅವರಿಂದ ರಚಿತವಾದ “ಪಿನಾಕಿ ದ ಫ್ಯಾಂಟಮ್” ಅರಣ್ಯ, ವನ್ಯಮೃಗಗಳ ಹತ್ತು ಹಲವು ಸಂಗತಿಗಳ ಬಗ್ಗೆ ಇದುವರೆಗೂ ಬೇರೆಡೆಗಳಿಂದ ತಿಳಿಯದ ಮಾಹಿತಿಗಳನ್ನು ತಿಳಿಸುತ್ತದೆ. ಈ ಪುಸ್ತಕದ ಅಡಿ ಶೀರ್ಷಿಕೆ “ನರ ಹಂತಕ ಇದ್ದಾನೆ ಒಳಗೆ” ನರಭಕ್ಷಕವಾದ ಹುಲಿಗಳು ಮತ್ತವುಗಳು ಮಾಡಿದ ದಾಳಿಗಳು, ಮತ್ತದರ ಸುತ್ತಲಿನ ಸಂಗತಿಗಳನ್ನು ಪರಿಣಾಮಕಾರಿಯಾಗಿ ಹೇಳಿದ್ದಾರೆ.
ನಾಗರಹೊಳೆ, ಬಂಡೀಪುರ, ಕಬಿನಿ ಅರಣ್ಯಗಳ ವಿವಿಧ ವಲಯಗಳಲ್ಲಿ ನಡೆದಿರುವ ಸಂಗತಿಗಳತ್ತ ವಿಶೇಷ ದೃಷ್ಟಿಕೋನದ ವಿವರಗಳನ್ನು ನೀಡಿದ್ದಾರೆ. ವೀರನ ಹೊಸಳಿಯಲ್ಲಿ ನರಭಕ್ಷಕ ವ್ಯಾಘ್ರ, ಪುಟ್ಟ ಬಾಲಕನನ್ನು ಕೊಂದಿದ್ದು, ನಂತರ ಇದನ್ನು ಸೆರೆಹಿಡಿದ ಆಪರೇಷನ್ ವಿವರಗಳು ಸವಿವರವಾಗಿ ಲೇಖಕರಿಂದ ದಾಖಲಾಗಿವೆ.
ಡಿ.ಬಿ. ಕುಪ್ಪೆ ವಲಯದ ಒಂಟಿಕಣ್ಣ ನರಭಕ್ಷಕ, ಅರಣ್ಯಾಧಿಕಾರಿ ಮಣಿಕಂಠ ಅವರನ್ನು ಕಾಡಾನೆ ಅನಿರೀಕ್ಷಿತವಾಗಿ ದಾಳಿ ಮಾಡಿ ಕೊಂದಿದ್ದು, ಕಾಡ ರಕ್ಷಣೆಗೆ ಪ್ರಾಣ ಕೊಟ್ಟ ಅರಣ್ಯ ನೌಕರರ ಸಂಗತಿ ಹೀಗೆ ಹತ್ತೆಂಟು ವಿವರಗಳು ತೆರೆದುಕೊಳ್ಳುತ್ತವೆ.
ಆನೆಗಳೆಂಬ ಕ್ಲಿಫ್ ಹ್ಯಾಂಗರ್ಸ್, ಕಾಡಾನೆ ಮೂಡ್ ಚೆನ್ನಾಗಿತ್ತು, ಬದುಕುಳಿದೆ, ಬುಡ್ಡನ ಧೈರ್ಯಕ್ಕೆ ಸಲಾಂ ಹೇಳಲೇಬೇಕು ಹೀಗೆ ಪ್ರತಿಯೊಂದು ಅಧ್ಯಾಯಗಳನ್ನು ಓದುವಾಗಲೂ ಅಲ್ಲಿನ ವಿವರಗಳಿಗೆ ಮನಸು ಬೆಚ್ಚುತ್ತದೆ. ರೋಮಗಳು ನವಿರೇಳುತ್ತವೆ. ಕಾಡಾನೆಗಳನ್ನು ಸಾಕಾನೆಗಳಿಗೆ ಪಳಗಿಸಿದ ನಂತರ ಅವುಗಳ ನಡವಳಿಕೆ, ವಿಶೇಷವಾಗಿ ಮೈಸೂರು ದಸರಾ ಅಂಬಾರಿ ಹೊತ್ತ ಅರ್ಜುನನ ಮೇಲೆ ಬಂದ ಮಾವುತನನ್ನು ಸಾಯಿಸಿದ ಆರೋಪ ಹೇಗೆ ಸುಳ್ಳಿನ ಸಂಗತಿಯಾಗಿತ್ತು ಎಂಬುದನ್ನು ದಾಖಲಿಸಿದ್ದಾರೆ.
ಕಾಡು, ಕಾಡಿನ ಜೀವನ, ಕಾಡಿನ ರಕ್ಷಣೆ ಇವೆಲ್ಲ ಒಂದು ದಿನದ ಪ್ರವಾಸದಲ್ಲಿ ನೋಡಲು, ಕೇಳಲು ಚೆನ್ನ. ಆದರೆ ಅಲ್ಲಿನ ದೈನಂದಿನ ಬದುಕಿನಲ್ಲಿ ಅಪಾಯ ಎನ್ನುವುದು ಅಡಿಗಡಿಗೂ ನೆರಳಿನಂತೆ ಹಿಂಬಾಲಿಸುತ್ತಿರುತ್ತದೆ. ಅರಣ್ಯ ಕಾಯುವ ನೌಕಕರ ಬದುಕು ಯಾವ ಕ್ಷಣದಲ್ಲಿ ಏನೋ ಎನ್ನುವ ಅನಿಶ್ಚಿತತೆಯಲ್ಲಿ ಸಾಗುತ್ತಿರುತ್ತದೆ ಎಂಬುದನ್ನು “ಪಿನಾಕಿ ದಿ ಫ್ಯಾಂಟಮ್” ಕೃತಿ ಸವಿವರವಾಗಿ, ಚಿತ್ರಗಳ ಸಮೇತ ಹೇಳುತ್ತದೆ.
“ಪಿನಾಕಿ ದಿ ಫ್ಯಾಂಟಮ್” ಕೃತಿಯ ವಿಶೇಷತೆ ಎಂದರೆ ಇಲ್ಲಿ ನರಭಕ್ಷಕ ಆಗಲಿ, ದಾಳಿ ಮಾಡಿದ ಕಾಡಾನೆಯಾಗಲಿ, ಆಯಾ ಸಂದರ್ಭದಲ್ಲಿ ಪ್ರತಿಭಟನೆ ಮಾಡಿದ ಸ್ಥಳೀಯ ಗ್ರಾಮಸ್ಥರಾಗಲಿ, ಕಾಡಿನಲ್ಲಿ ಏನೇ ಆದರೂ ಜನತೆ, ಸರ್ಕಾರದ ಆಕ್ರೋಶಕ್ಕೆ ಪಾತ್ರವಾಗುವ ಅರಣ್ಯ ಇಲಾಖೆ ನೌಕರರಾಗಲಿ ಯಾರೂ ವಿಲನ್ ಗಳಂತೆ ಚಿತ್ರಿತವಾಗಿಲ್ಲ. ಎಲ್ಲವೂ, ಎಲ್ಲರೂ ಆಯಾ ಸಾಂದರ್ಭಿಕ ಶಿಶುಗಳು, ಇಲ್ಲಿ ಯಾವುದೇ ಉದ್ದೇಶಪೂರ್ವಕ ತಪ್ಪು ಇಲ್ಲ ಎಂಬುದು ದಾಖಲಾಗಿದೆ.
ಪುಸ್ತಕ ಖರೀದಿ ಹೇಗೆ
“ಪಿನಾಕಿ ದಿ ಫ್ಯಾಂಟಮ್” ಕೃತಿಯ 180 ಪುಟಗಳು ಸಹ ಗುಣಮಟ್ಟದ ಕಾಗದಲ್ಲಿ, ಬಹುವರ್ಣದಲ್ಲಿ ಮುದ್ರಿತವಾಗಿವೆ. ಇದರ ಬೆಲೆ 300, ಕೃತಿಯನ್ನು ಆನ್ ಲೈನ್ ಮುಖಾಂತರವೂ ತರಿಸಿಕೊಳ್ಳಬಹುದು. ಇದಕ್ಕಾಗಿ ದೂರವಾಣಿ ಸಂಖ್ಯೆ: 9620699117 ಅನ್ನು ಸಂಪರ್ಕಿಸಬಹುದು.