ದೈನಂದಿನ ಜೀವನದಲ್ಲಿ ಹೊರಗೆ ಅಡ್ಡಾಡುವಾಗ ನಮ್ಮ ಕಿವಿಗೆ ಬೇರೆಬೇರೆ ಮಾತುಗಳು ಕೇಳುತ್ತವೆ. ಕಣ್ಣಿಗೆ ಅನೇಕ ನೋಟಗಳು ಕಾಣುತ್ತವೆ. ಅಂಥವುಗಳಲ್ಲಿ ಗಮನ ಸೆಳೆಯುವ ಸಂಗತಿಗಳಿರುತ್ತವೆ. ಆದರೆ ಹೆಚ್ಚಿನವರು ಅವುಗಳ ಬಗ್ಗೆ ಆಲೋಚಿಸುವುದಿಲ್ಲ. ಅಂಥ ವಿಷಯಗಳ ಬಗ್ಗೆ ಮಂಥನ ಮಾಡಿ ಅಮೃತದಂಥ ಚಿಂತನೆ ನೀಡುವ ಕೃತಿ “ನವಿರು” ಕಾಲೇಜು ಪ್ರಾಂಶುಪಾಲ, ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಮೈಸೂರು ನಗರ ನಿವಾಸಿ ಡಾ. ಹೆಚ್. ಎಂ. ಕುಮಾರಸ್ವಾಮಿ ಅವರು ಬರೆದಿರುವ ಪುಸ್ತಕವಿದು.
ಆರಂಭದ ತಮ್ಮ ಮಾತುಗಳಲ್ಲಿ ಅವರು ಹೇಳುವುದು ಹೀಗೆ “ ಈ ಹೊತ್ತಿಗೆಯಲ್ಲಿನ “ನವಿರು” ಬರೆಹಗಳು ಸೃಷ್ಟಿಯಾದದ್ದೇ ಒಂದು ಆಕಸ್ಮಿಕ. ನಾನು ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ನಮ್ಮ ಬಡಾವಣೆಯ ಹೊರವಲಯದಲ್ಲಿ ವಾಯುವಿಹಾರ ನಡೆಸುವ ಸಂದರ್ಭಗಳಲ್ಲಿ ನನ್ನ ಹಾಗೆ ಹಾದಿಯಲ್ಲಿ ನಡೆಯುವವರ ಸಂಭಾಷಣೆಗಳು ನನ್ನ ಕಿವಿ ಮೇಲೆ ಬೀಳುತ್ತವೆ. ಅನೇಕ ದೃಶ್ಯಚಿತ್ರಗಳು ಕಣ್ಣಿಗೆ ಕಾಣುತ್ತವೆ. ವಾಯುವಿಹಾರದ ನಂತರ ಪ್ರತಿದಿನ ಒಂದು ನಿರ್ದಿಷ್ಟ ಕಟ್ಟೆಯಲ್ಲಿ ಕುಳಿತು ನಾವು ನಾಲ್ಕಾರು ವಾಕಿಂಗರು ಮಾತನಾಡಿಕೊಳ್ಳುತ್ತೇವೆ. ಅಂಥ ಸಂದರ್ಭದಲ್ಲಿ ನನ್ನ ಅಂತರ್ಯಕ್ಕೆ ದಕ್ಕಿದ ಕೆಲವು ಸಂಗತಿಗಳು ನನ್ನನ್ನು ಚಿಂತನೆಗೆ ಒಳಪಡಿಸುತ್ತವೆ. ಅವುಗಳಿಗೆ ಬರೆಹದ ರೂಪ ಕೊಡಬೇಕೆ ಎಂದು ಯೋಚಿಸಿದ್ದರ ಫಲವೇ ಇಲ್ಲಿ ಸಂಕಲಿತಗೊಂಡಿರುವ ಕಿರುಲೇಖನಗಳು”
142 ಪುಟಗಳ ಕೃತಿಯಲ್ಲಿ 42 ನವಿರಾದ ಲೇಖನಗಳಿವೆ. ಹೆಸರಿಗೆ ತಕ್ಕಹಾಗೆ ಯಾರನ್ನೂ ವ್ಯಂಗ್ಯ ಮಾಡದೇ, ಛೇಡಿಸದೇ, ತನ್ಮೂಲಕ ನೋಯಿಸದೇ, ಅಹಂ ಪ್ರದರ್ಶನ ಮಾಡದೇ ಮನವನ್ನು ನವಿರಾಗಿ ಸ್ಪರ್ಶಿಸಿ ಹೌದಲ್ಲವವೇ ಎಂದು ಅನಿಸುವಂತೆ, ಇನ್ನಷ್ಟು ಆಲೋಚಿಸುವಂತೆ ಮಾಡುವ ಬರೆಹಗಳಿವು. “ಬರೀ ಮಾತಿನ ಭರ್ಜರಿ ಬಾಯಿ ಉಪಚಾರ” ಲೇಖನದಲ್ಲಿ ಕೆಲವರು ತಮ್ಮ ಮನೆಗೆ ಬಂದ ಅಪರೂಪದ ಅತಿಥಿಗಳನ್ನು ಬಾಯಿಯುಪಚಾರದಲ್ಲಿ ಕಾಫಿ – ತಿಂಡಿ ಆಯ್ತೆ ಎಂದು ವಿಚಾರಿಸಿ ಬಿಳ್ಕೊಡುವ ಪ್ರಸಂಗಗಳ ಬಗ್ಗೆ ಪ್ರಸ್ತಾಪಿಸುತ್ತಾರೆ. ಇಂಥ ಸಂದರ್ಭದಲ್ಲಿ ಅತಿಥಿಗಳಿಗೆ ಅಸಮಾಧಾನ ಆಗುವುದು ಸಹಜ. ಆದರೆ ಹಾಗೆ ಮಾಡುವವರನ್ನು ಟೀಕಿಸುವುದಿಲ್ಲ. ಧಾವಂತದ ಬದುಕು ಹೀಗೆ ಮಾಡಿಸುತ್ತದೆ ಎಂದು ಸಮಾಧಾನ ಮಾಡುತ್ತಾರೆ.
“ಅವಸರ ಅಸವರದಲ್ಲಿ ವಾಕಿಂಗಿಗೆ ಬಂದವರಂತೆ, ಧಾವಂತದಲ್ಲಿರುವ<ತೆ ಕಾಣುತ್ತಿದ್ದ ಮಹಿಳೆಯರಿಬ್ಬರು ತಮ್ಮ ಮನೆಗಳಲ್ಲಿ ವೃದ್ಧ ಅತ್ತೆ-ಮಾವಂದಿರ ಆರೈಕೆ ಮಾಡಬೇಕಿರುವ ಕುರಿತು ಆಡುತ್ತಿದ್ದ ಮನದಾಳದ ಮಾತುಗಳ ಕುರಿತ ಚಿಂತನೆ “ ಹಿರಿಕಿರಿಯರ ಸಮ್ಮಿಲನ; ಸಂತಸಕ್ಕೆ ರಹದಾರಿ” ಎಂಬ ಲೇಖನವಾಗಿ ಹೊರಹೊಮ್ಮಿದೆ. ಅವಿಭಕ್ತ ಕುಟುಂಬಗಳು ಹೋಗಿ ವಿಭಕ್ತ ಕುಟುಂಬಗಳಾಗುತ್ತಿವೆ. ಬಹುತೇಕರು ಮನೆಯಲ್ಲಿರುವ ಹಿರಿಯರ ಬಗ್ಗೆ ಸಾಮರಸ್ಯದಿಂದಿರುವುದಿಲ್ಲ. ತಂದೆ-ತಾಯಿಯನ್ನು ವೃದ್ಧಾಶ್ರಮದಲ್ಲಿರಿಸಿರುತ್ತಾರೆ. ಇದು ಕೆಲವರಿಗೆ ಕೆಲಸದ ತೀವ್ರ ಒತ್ತಡದಿಂದ ಅನಿವಾರ್ಯವಾಗಿರಬಹುದು. ಆದರೆ ಎಲ್ಲರಿಗೂ ಅಲ್ಲ. “ಹಳೇಬೇರು- ಹೊಸ ಚಿಗುರು” ಸಾಮರಸ್ಯದಿಂದ ಇದ್ದರೆ ಅದೊಂದು ಅವಿಸ್ಮಿತ ಆನಂದ ಎನ್ನುತ್ತಾರೆ. ಮಗ ತನ್ನನ್ನು ವೃದ್ಧಾಶ್ರಮದಲ್ಲಿರಿಸಿದ್ದರೂ ಅಸಮಾಧಾನಗೊಳ್ಳದ ಹಸನ್ಮುಖಿ ಜೀವವೊಂದನ್ನು ಪರಿಚಯಿಸುತ್ತಾರೆ.


ಬಡಾವಣೆಯಲ್ಲಿ ಸೊಪ್ಪು ಮಾರುವ ಮಹಿಳೆಯರೊಬ್ಬರು ಸೊಪ್ಪು ಖರೀದಿಸಲು ಬಂದ ಪುರುಷರಿಗೆ “ಅಣ್ಣಾ ಇಲ್ಲಿ ಬೀಡಿ ಸೇದಬ್ಯಾಡಿ, ಇಲ್ಲಿಗೆ ಬರುವ ಜನ ಬೈತಾರೆ, ಬೇಕಾದ್ರೆ ತೂಕ ಆದ್ಮೆಲೆ ಸೇಯ್ಕಳಿ” ಅಂತಾರೆ. ಅದಕ್ಕೆ ಧೂಮಪಾನಿಗಳು ನೀಡಿದ ಉತ್ತರ “ ಯಾವತ್ತಿದ್ರೂ ಹೋಗೊದೆಯಾ ಬುಡಿ” ಎಂಬ ಮಾತು ಚಿಂತನೆಯಾಗಿ ಇದೇ ಹೆಸರಿನ ಶೀರ್ಷಕೆಯ ಲೇಖನವಾಗಿದೆ. ಇದರಲ್ಲಿ ಧೂಮಪಾನಿಗಳ ಚಿತ್ತಲಹರಿ, ಅನೇಕರ ಉಢಾಪೆ, ಕೆಲವರು ತೀವ್ರ ಒತ್ತಡ ಪರಿಹರಿಸಿಕೊಳ್ಳಲು ಹೋಗಿ ಧೂಮಪಾನದ ದಾಸರಾಗುವ ಬಗ್ಗೆ ವಿವಿಧ ನೋಟಗಳನ್ನು ನೀಡುತ್ತಾರೆ. ಸೇದುವವರ ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತಾ “ಧೂಮಪಾನ ನಿಷಿದ್ಧ” ಎಂಬ ಮಾತು ಸಾರ್ವಕಾಲಿಕ ಸತ್ಯವಾಗಬಾರದೇ ಎಂದು ಹಂಬಲಿಸಿತ್ತಾರೆ.
“ದಾರಿಯಲ್ಲಿ ಸಿಕ್ಕ ಕಾಯಕ ಯೋಗಿ”, “ಅರ್ಧ ವಯಸ್ಸಿನ ನಂತರ ಆರೋಗ್ಯದ ಹುಡುಕಾಟ”, “ ಅಧಿಕಾರದ ಹಂಬಲ; ಮೌಢ್ಯಾಚಾರಣೆಗೆ ಬೆಂಬಲ” ಇತ್ಯಾದಿ ಲೇಖನಗಳಲ್ಲಿ ಬಹು ಮಹತ್ವದ ಸಂಗತಿಗಳನ್ನು ಪ್ರಸ್ತಾಪಿಸುತ್ತಾರೆ. ಇಲ್ಲಿನ ಲೇಖನಗಳು ಸಮಕಾಲೀನ ಸಂಗತಿಗಳನ್ನು ಪದರಪದರವಾಗಿ ವಿಶ್ಲೇಷಿಸುವ ಪರಿ, ಓದುಗರು ಅವುಗಳಿಗೆ ಇಂಥ ಆಯಾಮಗಳಿವೆಯೇ ಎಂದು ಅಚ್ಚರಿಗೊಳ್ಳುವಂತೆ ಮಾಡುತ್ತವೆ.
ಬಾಲಕರಿಂದ ಆರಂಭಿಸಿ ವೃದ್ಧರವರೆಗೆ ಎಲ್ಲರೂ ಓದಬೇಕಾದ ಲೇಖನಗಳು ಇಲ್ಲಿವೆ. ಇವುಗಳನ್ನು ಓದುವುದೇ ಚೇತೋಹಾರಿ ಸಂಗತಿ. ಕೃತಿ ಓದಿ ಮುಗಿಸಿದ ನಂತರ ತಂಗಾಳಿಯಲ್ಲಿ ವಾಕಿಂಗ್ ಹೋಗಿ ಬಂದಷ್ಟೇ ಮನಸು ತಾಜಾ, ಹಗುರುವಾಗಿರುತ್ತದೆ. ಆಕರ್ಷಕ ಮುಖಪುಟ, ಉತ್ತಮ ಗುಣಮಟ್ಟದ ಕಾಗದದಲ್ಲಿ ಮುದ್ರಣವಾಗಿದ್ದರೂ 110 ರೂ ಬಲೆ ಹೊಂದಿರುವ  “ ನವಿರು” ಕೃತಿಯನ್ನು ಮಹಿಮಾ ಪ್ರಕಾಶನದವರು ಪ್ರಕಟಿಸಿದ್ದಾರೆ. ಕೃತಿಗಾಗಿ ಸಂಚಾರಿ ದೂರವಾಣಿ ಸಂಖ್ಯೆ : 9448445704 ಕರೆ ಮಾಡಬಹುದು.

Similar Posts

Leave a Reply

Your email address will not be published. Required fields are marked *