“ಸಾಹಿತ್ಯ ಸಮ್ಮೇಳದ ಸಂದರ್ಭ ದಲ್ಲಿ ಸಾಹಿತ್ಯದ ವಿಚಾರ  ಮುನ್ನೆಲೆಗೆ ಬಾರದೆ ಊಟದ ವಿಚಾರವೇ ಅದರಲ್ಲೂ ಮಾಂಸಹಾರದ ಚರ್ಚೆಯೇ ದೊಡ್ಡ ಸುದ್ದಿಯಾಗುತ್ತಿರುವುದು ಬೇಸರದ ಸಂಗತಿ. ಸಾಹಿತ್ಯದ ಗೋಷ್ಠಿಗಳ ವಿಷಯಗಳೇನು,  ಸಂವಾದದ ವಿಚಾರಗಳೇನು  ಯಾವಯಾವ ಮುಖ್ಯ ಸಾಹಿತಿಗಳು ಭಾಗವಹಿಸುತ್ತಿದ್ದಾರೆ ಎಂಬುದರ ಸುತ್ತ ಆಗಬೇಕಿದ್ದ ಚರ್ಚೆಗಳು  ಮರೆಯಾಗಿರೋದು ದುಃಖಕರ” ಈ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸುತ್ತಿದ್ದಾರೆ.

ಇಂಥ ಅಭಿಪ್ರಾಯ ಖಂಡಿತವಾಗಿಯೂ ತಪ್ಪಲ್ಲ; ಆದರೆ ಇಂಥವರ ಗ್ರಹಿಕೆ ತಪ್ಪಾಗಿದೆ. ಏಕೆಂದರೆ ಚರ್ಚೆಯಾಗುತ್ತಿರುವುದು ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಹಾರ ಕೊಡಬೇಕೆನ್ನುವುದರ ಬಗ್ಗೆ ಅಲ್ಲ; “ಆಹಾರ ರಾಜಕಾರಣ” ಇದರ ಬಗ್ಗೆ ಚರ್ಚೆಯಾಗುತ್ತಿದೆ ! ಸಸ್ಯಹಾರವೇ ಶ್ರೇಷ್ಠ ಎಂಬ ಮನಸ್ಥಿತಿ ವಿರೋಧಿಸಿ ಮಾಂಸಹಾರವೂ ಇರಬೇಕು ಎಂಬ ಆಗ್ರಹ ಉಂಟಾಗಿದೆ !

“ಕನ್ನಡ ಸಾಹಿತ್ಯ ಪರಿಷತ್ ಮಾಂಸಾಹಾರವನ್ನು  ನಿಷೇಧಿಸಲಾಗಿದೆ ಎಂಬ ಸೂಚನೆ ನೀಡಿಲ್ಲ; ಅದನ್ನು ಸ್ಥಳೀಯ ಆಹಾರ ಸಮಿತಿ ನೀಡಿದೆ” ಎಂಬ ಹೇಳಿಕೆಯನ್ನು ಪರಿಷತ್ ಅಧ್ಯಕ್ಷ ಮಹೇಶ್ ಜೋಷಿ ನೀಡಿದ್ದಾರೆ. ಆದರೆ ಸಮ್ಮೇಳನದ ಉಸ್ತುವಾರಿ ವಹಿಸಿರುವುದು ಸಾಹಿತ್ಯ ಪರಿಷತ್. ಸಮ್ಮೇಳನಕ್ಕೆ ಸಂಬಂಧಿಸಿದ ಏನೇ ವಿಷಯ, ಪ್ರಕಟಣೆ ಇದ್ದರೂ ಅದರ ಜವಾಬ್ದಾರಿ ಪರಿಷತ್ನದೇ ಆಗಿರುತ್ತದೆ.

ಈ ವಿಷಯ ಮಹೇಶ್ ಜೋಷಿ ಅವರಿಗೆ ಗೊತ್ತಿಲ್ಲವೇ ? ಖಂಡಿತ ಗೊತ್ತಿರುತ್ತದೆ. ಇಂಥ ಸೂಚನೆಯೇ ಬಾರದಂತೆ ತಡೆಯುವ ಎಲ್ಲ ಅವಕಾಶಗಳೂ ಅವರಿಗಿದ್ದವು ! ಅದನ್ನು ಅವರು ಮಾಡಲಿಲ್ಲ; ಬದಲಿಗೆ ಪ್ರತಿಭಟನೆ ಜೋರಾದ ಮೇಲೆ ಆ ಹೇಳಿಕೆ ನನ್ನದಲ್ಲ ಎಂದು ಹೇಳಿದರೆ ಪ್ರಯೋಜನವೇನು ? ಹೋಗಲಿ ಅವರು ಈ ಹೇಳಿಕೆ ಜೊತೆಗೆ ವಾಣಿಜ್ಯ ಮಳಿಗೆಗಳ ಜೊತೆಗೆ ಮಾಂಸಹಾರ ಮಾರಾಟ ಮಾಡುವ ಮಳಿಗೆಗಳಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರಾ ? ಇಲ್ಲ !!

ಸಾಹಿತ್ಯ ಸಮ್ಮೇಳನಗಳು ನಡೆಯುವ ಸ್ಥಳದ ಆಹಾರದ ಅಸ್ಮಿತೆಯನ್ನು ಕೂಡ ತೋರಿಸಬೇಕಾದ್ದು ಮೇಳದ ಉಸ್ತುವಾರಿ ವಹಿಸಿದವರ ಕರ್ತವ್ಯ ! ಮಂಡ್ಯ ಜಿಲ್ಲೆಯಲ್ಲಿ ಮಾಂಸಹಾರವನ್ನೂ ಸೇವಿಸುವವವರು ಮನೆಗೆ ಮಾಂಸಹಾರ ಸೇವಿಸುವ ಅತಿಥಿಗಳು ಬಂದಾಗ ಕುರಿ,ಕೋಳಿ ಮಾಂಸದ ಖಾದ್ಯಗಳನ್ನು ಮಾಡಿ ಉಣ ಬಡಿಸುವ ಸಂಪ್ರದಾಯವಿದೆ. ಒಂದು ವೇಳೆ ಬಂದ ಅತಿಥಿಗಳು ಸಸ್ಯಾಹಾರಿಗಳಾಗಿದ್ದರೆ ಸಿಹಿ ಮಾಡಿ ಬಡಿಸುತ್ತಾರೆ. ವಿಶೇಷವಾಗಿ ಕಡಲೇವಡೆ, ಪಾಯಸ ಅಥವಾ ಸಿಹಿ ಬೂಂದಿ ಪಾಯಸ ಮಾಡುತ್ತಾರೆ. ಮೇಳದಲ್ಲಿ ಈ ಮೆನು ಇದ್ದಂತಿಲ್ಲ !

ಪರಿಷತ್ ನಡೆಸುವ ಸಾಹಿತ್ಯ ಮೇಳ ಎಂದರೆ ಅಲ್ಲಿ ಸಸ್ಯಹಾರ ಕಡ್ಡಾಯ ಎಂಬ ಅಲಿಖಿತ ನಿಯಮಾವಳಿ ಜಾರಿಯಲ್ಲಿದೆ. ಇದು ಹೇಗೆ ಏಕೆ ಬಂತು ಎಂಬುದು ಕೂಡ ಗಂಭೀರ ವಿಷಯ ! ಸಾಹಿತ್ಯ ಪರಿಷತ್ ಚುಕ್ಕಾಣಿ ಹಿಡಿದವರಲ್ಲಿ ಬಹುತೇಕರು ಸಸ್ಯಹಾರಿಗಳು ! ಸಮಾರಂಭ, ಸಮ್ಮೇಳನ ಎಂದರೆ ಸಸ್ಯಹಾರವೇ ಸೂಕ್ತ; ಶ್ರೇಷ್ಠ ಎಂದು ಭಾವಿಸಿದವರು ! ಇದರಿಂದಾಗಿ ಸಸ್ಯಹಾರವನ್ನಷ್ಟೇ ನೀಡುವುದು ರೂಢಿಯಾಗಿದೆ. ಇದು ಆಹಾರ ರಾಜಕಾರಣಕ್ಕೆ ಇಂಬು ನೀಡಿದೆ. ಸ್ಥಳೀಯ ಆಹಾರ ಸಂಸ್ಕೃತಿಗೆ ಮನ್ನಣೆ ನೀಡದ ಪ್ರವೃತ್ತಿ ಬೆಳೆಸಿದೆ.

ಸಸ್ಯಹಾರ ಎಂದ ಕೂಡಲೇ ಸರ್ವಜನರೂ ಸ್ವೀಕರಿಸಿ ಸೇವಿಸುತ್ತಾರೆ ಎಂಬುದು ತಪ್ಪು. ಕೆಲವರು ಈರುಳ್ಳಿ, ಬೆಳ್ಳುಳ್ಳಿ ಹಾಕಿದ್ದರೆ ಅಂಥ ಆಹಾರ ಸೇವಿಸುವುದಿಲ್ಲ ! ಕೆಲವರು ಗೆಡ್ಡೆಗೆಣಸು ಇದ್ದರೆ ತಿನ್ನುವುದಿಲ್ಲ!!  ಹೀಗೆ ಇರುವಾಗ ಸರ್ವರಿಗೂ ಪ್ರಿಯವಾಗುವ ಆಹಾರ ನೀಡುತ್ತೇವೆ ಎಂಬುದೇ ತಪ್ಪು ಗ್ರಹಿಕೆ !

ಸಸ್ಯಹಾರ, ಮಾಂಸಹಾರ ಎಂದಾಗ ಎರಡನ್ನೂ ಒಟ್ಟಿಗೆ ಅಕ್ಕಪಕ್ಕದಲ್ಲಿಯೇ ಮಾಡುವುದಿಲ್ಲ; ಅಂತರ ಇಟ್ಟುಕೊಂಡು ತಯಾರಿಸುತ್ತಾರೆ. ಬೇರೆಬೇರೆ ಕೌಂಟರ್ ಗಳಲ್ಲಿ ಬಡಿಸುತ್ತಾರೆ. ಇದರಿಂದ ಮಾಂಸಹಾರ ಸೇವನೆ ಮಾಡದೇ ಇರುವವರಿಗೆ ಮುಜುಗರ ಆಗುತ್ತದೆ ಎಂಬ ಪ್ರಶ್ನೆಯೇ ಇರುವುದಿಲ್ಲ !

ರಾಗಿಮುದ್ದೆ-ಮಾಂಸಹಾರವು ಮಂಡ್ಯ ಜಿಲ್ಲೆಯ ಅಸ್ಮಿತೆ

ಇನ್ನೂ ಕೆಲವರು “ ಮಾಂಸಹಾರವನ್ನೂ ನೀಡಿದರೆ ನೂಕುನುಗ್ಗಲಾಗುತ್ತದೆ; ಆಹಾರದ ಕೊರತೆ ಎದುರಾದರೆ ಗಲಾಟೆಯಾಗುತ್ತದೆ” ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಬರೀ ಸಸ್ಯಹಾರವನ್ನೇ ಬಡಿಸುವ ಸ್ಥಳಗಳಲ್ಲಿ ಸರದಿ ಸಾಲಿನಲ್ಲಿ ಕೊನೆಯಲ್ಲಿ ನಿಂತವರಿಗೆ ಆಹಾರದ ಕೊರತೆ ಆದಾಗ ಪ್ರತಿಭಟನೆ ಆದ ಉದಾಹರಣೆಗಳೂ ಇವೆ.

ಇಂಥ ಘಟನೆಗಳು ಆಗದಂತೆ ನೋಡಿಕೊಳ್ಳಬಹುದು ! ಸಸ್ಯಹಾರ ಸೇವಿಸುವವರು ಎಷ್ಟು ಮಂದಿ, ಮಾಂಸಾಹಾರ ಸೇವಿಸುವವರು ಎಷ್ಟು ಮಂದಿ ಎಂಬ ಲೆಕ್ಕ ಮೊದಲೇ ಸಿಗಬೇಕು. ಹಾಗೆ ಇದ್ದಾಗ ಮಾತ್ರ ಯಾರಿಗೂ ಕೊರತೆ ಆಗದಂತೆ ಎರಡೂ ಬಗೆ ಆಹಾರ ಸಿದ್ದಪಡಿಸಬಹುದು; ಆಗ ಗಲಾಟೆಗಳು ಆಗುವ ಸಾಧ್ಯತೆಗಳು ಇರುವುದಿಲ್ಲ.

ಸಮ್ಮೇಳನಕ್ಕೆ ಬರುವವರಿಗೆ ಬೆಳಗ್ಗೆ 9 ಗಂಟೆಯಿಂದಲೇ ಪ್ರವೇಶ ದ್ವಾರದ ಬಳಿಯೇ ಪ್ರತ್ಯೇಕವಾಗಿ ಸಸ್ಯಹಾರ, ಮಾಂಸಹಾರ ಎಂಬ ಶೀರ್ಷಿಕೆ ಇರುವ ಟೋಕನ್ ಗಳನ್ನು ವಿತರಿಸಲು ಆರಂಭಿಸಬೇಕು ! ಯಾರಿಗೆ ಯಾವ ಟೋಕನ್ ಬೇಕೋ ಅದನ್ನು ಪಡೆದುಕೊಳ್ಳುತ್ತಾರೆ. ಗರಿಷ್ಠ 12 ಗಂಟೆ ತನಕ ಅಷ್ಟೇ ಟೋಕನ್ ವಿತರಣೆ ಮಾಡಬೇಕು. ಆಹಾರ ನೀಡುವ ಕೌಂಟರ್ ಗಳಲ್ಲಿ ಟೋಕನ್ ಇದ್ದವರಿಗಷ್ಟೇ ನೀಡಲಾಗುತ್ತದೆ ಎಂದು ಆಗಾಗ ಮೈಕಿನಲ್ಲಿ ಅನೌನ್ಸ್ ಮಾಡಬೇಕು.

ಈ ರೀತಿ ಮಾಡಿದಾಗ ಇಂಥ ಆಹಾರ ಪದ್ಧತಿಗೆ ಇಂತಿಷ್ಟು ಟೋಕನ್ ಗಳು ವಿತರಣೆಯಾಗಿವೆ ಎಂದು ತಿಳಿದು ಅಡುಗೆ ಸಿದ್ಧಪಡಿಸಿಕೊಳ್ಳಲು ಸಹಕಾರಿಯಾಗುತ್ತದೆ. ಹೀಗೆ ಮಾಡದೇ ದಿಢೀರನೇ ಯಾವುದೇ ಆಹಾರ ಪದ್ಧತಿ ನೀಡುವ ಕೌಂಟರ್ ಗಳ ಮುಂದೆ ನಿರೀಕ್ಷೆಗೂ ಮೀರಿದ ಸಾಲುಗಳು ಉಂಟಾದರೆ ಸಂಘಟಕರ ಮೇಲೂ; ಅಡುಗೆ ತಯಾರಿಸುವವರ ಮೇಲೂ ಭಾರಿ ಒತ್ತಡ ಉಂಟಾಗುತ್ತದೆ. ಮನೆಯಲ್ಲಿಯೇ ಆಗಲಿ ದಿಢೀರನೇ ಅನಿರೀಕ್ಷಿತವಾಗಿ ಅತಿಥಿಗಳು ಬಂದಾಗ ಅವರಿಗೆ ಆಹಾರ ತಯಾರಿಸಿ ಬಡಿಸಲು ಪರದಾಟ ಉಂಟಾಗುತ್ತದೆ; ಇನ್ನು ಸಾವಿರಾರು ಮಂದಿ ಊಟಕ್ಕೆ ಬರುವ ಸ್ಥಳಗಳಲ್ಲಿ ಹೀಗಾದರೆ ಎಂಥಾ  ಸ್ಥಿತಿ ಉಂಟಾಗಬಹುದು ಯೋಚಿಸಿ

ಸಿಸಿ ಕ್ಯಾಮೆರಾಗಳೂ ಇರಬೇಕು !

ಮಾಂಸಹಾರ ಎಂದಾಗ ಅದನ್ನು ಸೇವಿಸುವ ಅಧಿಕಾರಿ ವರ್ಗ, ಸಿಬ್ಬಂದಿ ವರ್ಗದ ಕೆಲವರಾದರೂ ತಮಗೆ ಬೇಕಾದವರ ಜೊತೆ ಕೊರತೆಯಿಲ್ಲದಂತೆ ಸೇವಿಸಲು ಬಕೇಟುಗಳಲ್ಲಿ ಮಾಂಸ ತುಂಬಿಕೊಂಡು ಹೋಗುವ ಸಾಧ್ಯತೆಯೂ ಇರುತ್ತದೆ. ಇದಕ್ಕೂ ಅವಕಾಶ ಕೊಡಬಾರದು. ಕೊಟ್ಟಿದ್ದೇ ಆದರೆ ಆಹಾರದ ಕೊರತೆಯಾಗುವುದು ನಿಶ್ಚಿತ

ಚಿತ್ರಕೃಪೆ: ಅಂತರ್ಜಾಲ

Similar Posts

Leave a Reply

Your email address will not be published. Required fields are marked *