ಏನೇಕಲ್ಲು, ದುರ್ಗಮ ಬಂಟಮಲೆಯ ನಡುವಿನ ವಾಟೆಕಜೆಯಿಂದ ಹೊರಟ ಪಯಣ ಸಾಗಿದ ಹಾದಿಯೇ ರೋಚಕ. ರೋಯ್ತ “ಪುರುಷೋತ್ತಮ”ನಾದ ಮತ್ತು ಈತ ಸಾಧಿಸಿದ ಯಶಸ್ಸು ಹಳ್ಳಿಗಳ ಹೈದರೆಲ್ಲರಿಗೂ ಬದುಕಿನೆಡೆಗೆ ಆತ್ಮವಿಶ್ವಾಸ ತುಂಬುವ, ಸಾಗಿಬಂದ ಹಾದಿಯ ಕಥನವಿದು. “ಕಾಗೆ ಮುಟ್ಟಿದ ನೀರು” ಸಾಗುವುದುದ್ದಕ್ಕೂ ಅಚ್ಚರಿ ಮೂಡಿಸುವ ಮೈಲಿಗಲ್ಲುಗಳು.

ಕನ್ನಡ ವಿದ್ವಾಂಸ ಪುರುಷೋತ್ತಮ ಬಿಳಿಮಲೆ ಅವರು ತಮ್ಮ 65ನೇ ವಯಸ್ಸಿನಲ್ಲಿ ಬರೆದ “ ಕಾಗೆ ಮುಟ್ಟಿದ ನೀರು” ಕೃತಿಗೆ  ಸುಲಭವಾಗಿ ಅಷ್ಟು ಸಲೀಸಾಗಿ ಆತ್ಮಕಥೆ ಎಂಬ ಹಣೆಪಟ್ಟಿ ಕಟ್ಟಲು ಆಗುವುದಿಲ್ಲ. ಹಾಗೆ ಕಟ್ಟುವುದಕ್ಕೂ ಕೃತಿ ಬಿಡುವುದಿಲ್ಲ. ಇಲ್ಲಿ “ನಾನು” ಎಂಬುದು ಮೆರೆಯದಿರುವುದೇ ಇದಕ್ಕೆ ಕಾರಣವಾದರೂ ಇದು ಜಗತ್ತಿನ ಬೇರೆಬೇರೆಡೆಯ ಸಾಂಸ್ಕೃತಿಕ ಚಲನೆಗಳನ್ನು ಗುರುತಿಸುತ್ತಾ ಕಟ್ಟಿಕೊಡುತ್ತಾ ಸಾಗುವುದೂ ಮುಖ್ಯಕಾರಣ.

ಆರಂಭದಲ್ಲಿ ಹೇಳಿದ ಹಾಗೆ ಇದು ಹಳ್ಳಿಹೈದರೆಲ್ಲರಿಗೂ ಆತ್ಮವಿಶ್ವಾಸ ತುಂಬುವ ಜೀವಂತ ಕಥನ. ಬಡತನವನ್ನೇ ಹಾಸುಹೊದ್ದ ಕುಟುಂಬದಿಂದ ಬಂದ ಹೈದ, ಆರ್ಥಿಕ ದುಸ್ಥಿತಿಯನ್ನಷ್ಟೇ ಕಂಡವನಲ್ಲ. ಕಾಡುವ ಕಾಯಿಲೆಗಳನ್ನು ಕಂಡವನು. ಇದುವರೆಗಿನ ಜೀವನದ ಹಾದಿಯಲ್ಲಿ ಮತ್ತೆಮತ್ತೆ ಸಾವಿಗೆ ಮುಖಾಮುಖಿಯಾಗಿ ಸೆಡ್ಡು ಹೊಡೆದು ಬದುಕಿದವನು. ಇವೆಲ್ಲ ಕಾಡುವ ಕಿರಿಕಿರಿ ಯಾತನೆಗಳ ನಡುವೆಯೂ ಈತ “ಕಟ್ಟಿದ್ದು” ಹೆಗ್ಗುರುತುಗಳು.

ಇವೆಲ್ಲವನ್ನೂ ಪುರುಷೋತ್ತಮ ಬಿಳಿಮಲೆ ಅವರು ಅನುಕಂಪ ಬಯಸುವ ಶೈಲಿಯಲ್ಲಿ ಹೇಳದೇ, ನಿರುಮ್ಮಳ, ನಿರುದ್ವೇಗವಾಗಿ ನಿರೂಪಿಸಿರುವುದು ಗಮನಿಸಬೇಕಾದ ಅಂಶ. ಹೊರರಾಜ್ಯದ ವಿಶ್ವವಿದ್ಯಾಲಯವೊಂದರಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದ ಇವರ ಮನಸಿನ ಮೇಲೆ ಅಲ್ಲಿನ ಅಚ್ಚ ದ್ರಾವಿಡ ಸಂಸ್ಕೃತಿ ಬೀರಿದ ಪ್ರಭಾವ, ಜೀವನ ಪಯಣದುದ್ದಕ್ಕೂ ಕಾಣುತ್ತದೆ.

ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ ಬಳಿಯ ಅನುದಾನರಹಿತ ಕಾಲೇಜಿಗೆ ಸೇರಿಕೊಳ್ಳುವ ಪುರುಷೋತ್ತಮ ಅದು ಅನುದಾನಸಹಿತ ಕಾಲೇಜಾದ ಗಳಿಗೆಯಲ್ಲಿಯೇ ಅಲ್ಲಿಂದ ತಾತ್ಕಾಲಿಕ ಉದ್ಯೋಗದ ಮೇಲೆ ಮಂಗಳೂರು ವಿಶ್ವವಿದ್ಯಾಲಯಕ್ಕೆ ತೆರಳುವುದು ಕೂಡ ಇವರ ಸುಪ್ತಮನಸಿನ ಅನಿಕೇತನದ ಸಂಕೇತ.

ಕಡಲತಡಿಯ ಮಂಗಳೂರಿನಿಂದ ತುಂಗಾಭದ್ರೆ ತಡಿಯ ಹಂಪೆಗೆ ಬಂದಿದ್ದು ಕೂಡ ಅನಿಕೇತನದ ಸಂಕೇತವೇ. ಎಲ್ಲಿಯೂ ನಿಲ್ಲದಿರು ಮನೆನ್ನೆಂದೂ ಕಟ್ಟದಿರು ಎನ್ನುವ ಹಾಗೆಯೇ. ಸುಸಜ್ಜಿತ ವಿಶ್ವವಿದ್ಯಾಲಯದ ಖಾಯಂ ಆಗಿದ್ದ ರೀಡರ್ ಹುದ್ದೆಯನ್ನು ಬಿಟ್ಟು ಕುಳಿತುಕೊಳ್ಳಲು ಕುರ್ಚಿಯೂ ಇರದಿದ್ದ ಸ್ಥಿತಿಯಲ್ಲಿದ್ದ, ಆರಂಭಿಕ ಪ್ರಕ್ರಿಯೆಯಲ್ಲಿದ್ದ ಕನ್ನಡ ವಿಶ್ವವಿದ್ಯಾಲಯಕ್ಕೆ ಬಂದು ಸೇರುತ್ತಾರೆ. ಆಗ ಪ್ರೊಫೆಸರ್ ಎಂಬ ಆಕರ್ಷಕ ಪದನಾಮ ಬಿಟ್ಟರೆ ಮತ್ತೇನೂ ಇರದ ಸ್ಥಿತಿಯದು.

ಕನ್ನಡ ವಿಶ್ವವಿದ್ಯಾಲಯ ಕಟ್ಟಿದವರ ಸಾಲಿನಲ್ಲಿ ನಿಲ್ಲುವ ಪುರುಷೋತ್ತಮ ಅದು ಹೆಮ್ಮರವಾಗಿ ಬೆಳೆದು ನೆರಳು ನೀಡುವ ಮುನ್ನವೇ ಸುಡುಕೆಂಡದಂಥ ಬಿಸಿಲೂ ಇರುವ ದೆಹಲಿಗೆ ಹೊರಟಿದ್ದೂ ಅನಿಕೇತನವಾಗಿಯೇ. ಅದೂ ಅನಿಶ್ಚಯದ ಹಾದಿ. ಇದಕ್ಕೆ ಕಾರಣಗಳೇನು ಎಂಬುದನ್ನು ಅವರು ವಿವರವಾಗಿಯೇ ಹೇಳಿದ್ದಾರೆ. ಆ ಬೆಳವಣಿಗೆಗಳು ಬೌದ್ಧಿಕ ಜಗತ್ತಿನ ಸಣ್ಣತನಗಳನ್ನು ಪರಿಚಯಿಸುತ್ತದೆ. ಆದರೆ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಅದು ಇದ್ದಿದ್ದೆ. ಚಿವುಟಿದರೂ ಹೊರ ಜಗತ್ತಿಗೆ ಗೊತ್ತಾಗದಷ್ಟು ಜೊರಾಗಿ ಚಿವುಟುವ, ಚಿವುಟಿಸಿಕೊಂಡವರೂ ತಳಮಳಿಸುವಂಥೆ ಮಾಡಿದ ಕಲುಪತಿ ಹೊರ ಹೋಗುವವರೆಗೆ ಸಹಿಸಿಕೊಂಡಿದ್ದರೂ ಕನ್ನಡದ ಸಾರಸ್ವತ ಲೋಕಕ್ಕೆ ಮತ್ತಷ್ಟೂ ಕೃತಿಗಳ ಕಾಣಿಕೆ ಖಂಡಿತ ದಕ್ಕುತ್ತಿತ್ತು. ಆದರೆ ಅನಿಕೇತನ –ಜೊತೆಗೆ ಬಂಡಾಯವೂ ಆದ ವ್ಯಕ್ತಿತ್ವದ ಬಿಳಿಮಲೆ ಹೊರಟ್ಟಿದ್ದು ಎಲ್ಲವೂ ಇಂಗ್ಲಿಷ್-ಹಿಂದಿಮಯವಾಗಿದ್ದ ದೆಹಲಿಯಲ್ಲಿದ್ದ ಸಂಸ್ಥೆಗೆ

“ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್ಗೆ ಹೋದಾಗ ಕೆಲಸಕ್ಕೆ ಅರ್ಜಿ ಬರೆಯುವಷ್ಟೂ ಇಂಗ್ಲಿಷ್ ಗೊತ್ತಿರಲಿಲ್ಲ” ಎಂದು ಹೇಳುತ್ತಾರೆ. ತೀರಾ ಕ್ಷೀಪ್ರವಾಗಿ ಅದೂ ಬಹುಶಃ 44-45 ರ ವಯಸ್ಸಿನಲ್ಲಿ ಅಗತ್ಯವಿರುವುದನ್ನೆಲ್ಲ ಕಲಿತದ್ದು ಸಣ್ಣ ಸಂಗತಿಯಂತೂ ಖಂಡಿತ ಅಲ್ಲ. ಛಲಬೇಕು ಮನುಷ್ಯಂಗೆ ಎನ್ನುವುದನ್ನು ಸಾಧಿಸುವ ಬಿಳಿಮಲೆ ಅಚ್ಚರಿ ಮೂಡಿಸುತ್ತಾರೆ.

ನಂತರ ಜಗತ್ತಿನ ಬೇರೆಬೇರೆ ದೇಶಗಳನ್ನು ಪರ್ಯಟನೆ ಮಾಡುವ ಇವರು ಅಲ್ಲಿಯ ಜನಪದ ಸಾಂಸ್ಕೃತಿಕ ಹೆಜ್ಜೆಗುರುತುಗಳನ್ನು ಹೇಳುತ್ತಾರೆ. ಮುಖ್ಯವಾಗಿ ಆಧುನಿಕ ಜಪಾನ್ ತನ್ನೊಳಗೆ ಜತನವಾಗಿ ಇರಿಸಿಕೊಂಡ ಮೌಖಿಕ ಪರಂಪರೆಯ ಜಾನಪದ ಜಗತ್ತನ್ನು ತೆರೆದಿಡುತ್ತಾರೆ. ಇದು ಬಹಳ ಮುಖ್ಯ ಆಂಶ.

ದೆಹಲಿಯ ಆರ್.ಕೆ. ಪುರುಂನಲ್ಲಿದ್ದ ಕನ್ನಡ ಸಂಘಕ್ಕೆ ಬಹು ಸುಸಜ್ಜಿತ ಭವ್ಯ ಕಟ್ಟಡ ನಿರ್ಮಿಸುವ ಪ್ರಯತ್ನದಲ್ಲಿ ಪಡುವ ಕಷ್ಟಗಳೂ ವಿವರವಾಗಿ ದಾಖಲಾಗಿವೆ. ನಾಡಿನಿಂದ ಬಹುದೂರದ ಊರಿನಲ್ಲಿ ಪರುಷೋತ್ತಮ ವ್ಯಕ್ತಿತ್ವವುಳ್ಳವರು ಇದ್ದರೆ ಅಮೂಲ್ಯ ಕೆಲಸಗಳಾಗುತ್ತವೆ ಎಂಬುದಕ್ಕೆ ಇದು ನಿದರ್ಶನ. ಆದರೆ ಈ ಎಲ್ಲ ಕ್ರೆಡಿಟ್ ಅನ್ನು ಅವರು ತಮಗೆ ಕೊಟ್ಟಿಕೊಳ್ಳುವ ಕಾರ್ಯಕ್ಕೆ ಹೋಗುವುದಿಲ್ಲ.

ದೆಹಲಿಯಲ್ಲಿರುವ ಭಾರತದಲ್ಲಿಯೇ ಪ್ರತಿಷ್ಠಿತವಾದ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಜವಾಹರ್ ಲಾಲ್ ನೆಹರು ವಿವಿಯ ಕನ್ನಡ ಪೀಠ ಗಮನಾರ್ಹವಾಗಿ ಬೆಳದಿದೆ. ಅದೂ ಕೇವಲ ಐದೇ ವರ್ಷಗಳ ಅವಧಿಯಲ್ಲಿ. ಇದನ್ನು ಆಗು ಮಾಡುವ ಪುರುಷೋತ್ತಮ ಬಿಳಿಮಲೆ ಅದಕ್ಕೆ ಕಾರಣವಾಗುವ ಅಂಶಗಳನ್ನೂ ವಿವರಿಸುತ್ತಾರೆ. ಜೊತೆಜೊತೆಗೆ ಅಲ್ಲಿಯ ಶೈಕ್ಷಣಿಕ ವಾತಾವರಣದ ಮೇಲೆ ಬಿದ್ದ ಕರಿಛಾಯೆಗಳನ್ನು ಪ್ರತ್ಯಕ್ಷದರ್ಶಿಯಾಗಿ ವಿವರಿಸುತ್ತಾರೆ. ಯಾರಿಗಾದರೂ ಜೆ.ಎನ್.ಯು ಬಗ್ಗೆ ನಕಾರಾತ್ಮಕ ಪೂರ್ವಾಗ್ರಹಗಳಿದ್ದರೆ ಅದನ್ನು ಈ ವಿವರ ಖಂಡಿತ ನಿವಾರಿಸಿ ಸ್ಪಷ್ಟ ಚಿತ್ರಣವೊಂದನ್ನು ಮುಂದಿಡುತ್ತದೆ.

ಬಾಲ್ಯಪರ್ವ- ಉದ್ಯೋಗಪರ್ವ – ವಿದೇಶಗಳ ಶೈಕ್ಷಣಿಕ ಪ್ರವಾಸಪರ್ವ – ಅನಾರೋಗ್ಯಪರ್ವಗಳ ನಡುವೆ ಅವರ ಯೌವನ- ಕೌಟುಂಬಿಕ ಪರ್ವಗಳ ವಿವರವೂ ಬರುತ್ತಾದರೂ ಅದನ್ನು ಸಂಕ್ಷಿಪ್ತವಾಗಿ ಹೇಳಿದ್ದಾರೆ. ಈ ಯಾವುದೇ ಪರ್ವಗಳಲ್ಲಿಯೂ ತಮ್ಮನ್ನು ತಾವು ವಿಜೃಂಭಿಸಿಕೊಳ್ಳದ ಕಾರಣಕ್ಕೆ “ಕಾಗೆ ಮುಟ್ಟಿದ ನೀರು” ಇಷ್ಟವಾಗುತ್ತದೆ. ಅಂದಹಾಗೆ ಕಾಗೆ ಮುಟ್ಟಿದ ನೀರು ಅಪವಿತ್ರ ಎಂಬ ಭಾವನೆಯಿದೆ. ಆದರೆ ತಮ್ಮನ್ನು ತಾವೇ ಕಾಗೆ ಎಂದುಕೊಂಡ “ಪುರುಷೋತ್ತಮ” ಮುಟ್ಟಿದ್ದೆಲ್ಲವೂ ಪವಿತ್ರವಾಗುತ್ತಾ ಹೋಗುವ ಕಥನವಿದು

ಕೃತಿಯಲ್ಲಿ ಒಂದಷ್ಟು ಪುನರಾವರ್ತನೆಗಳಿವೆ. ಕೆಲವೊಮ್ಮೆ  ಭಾಷೆ ದೈನಂದಿನ ಶುಷ್ಕ ಡೈರಿ ಬರೆವಣಿಗೆಯಲ್ಲಿಯೇ ಸಾಗುತ್ತದೆ. ಸಾಗಿಬಂದ ಹಾದಿಯನ್ನು ಹಿಂದಿರುಗಿ ನೋಡಿ ಬರೆಯುವಾಗ ಡೈರಿ ಸಹಾಯವಾಗುತ್ತದೆಯಾದರೂ ಅದೇ ಮಾದರಿ, ಸಾಹಿತ್ಯಮಯ ಕಥನದಲ್ಲಿ ಬರಬಾರದು.

ಈ ಪುಸ್ತಕವನ್ನು ಶಿವಮೊಗ್ಗದ “ಅರ್ಹನಿಶಿ” ಪ್ರಕಟಿಸಿದೆ. ಕೃತಿಗಳಿಗಾಗಿ ಆಸಕ್ತರು ಈ ದೂರವಾಣಿ ಸಂಖ್ಯೆ ಸಂಪರ್ಕಿಸಬಹುದು: 9449174662

Similar Posts

Leave a Reply

Your email address will not be published. Required fields are marked *