ಅಜ್ಜಿಯಂದಿರು ತಮ್ಮ ಸುತ್ತ ಮೊಮ್ಮಕ್ಕಳನ್ನು ಕೂರಿಸಿಕೊಂಡು ಹೇಳುವ ಕಥೆಗಳನ್ನು ಕೇಳುತ್ತಾ ಬೆಳೆದವರಿಗೆ ಅದರ ಆನಂದ ಗೊತ್ತಿರುತ್ತದೆ. ಜಾನಪದ ಕಥೆಗಳಲ್ಲಿ ಮಂತ್ರವಾದಿಯ ಶಾಪದಿಂದ ಕಪ್ಪೆಯಾಗುವ ರಾಜಕುಮಾರ, ರಾಜಕುಮಾರಿಯ ಸ್ಪರ್ಶವಾದ ಕೂಡಲೇ ಮತ್ತೆ ಮನುಷ್ಯನಾಗುವುದು, ಮಂತ್ರವಾದಿಯನ್ನು ಸದೆ ಬಡಿಯುವುದು, ಏಳು ಸಮುದ್ರದಾಚೆಗಿನ ಕೀಳು ಸಮುದ್ರ, ಅಲ್ಲೊಂದು ದ್ವೀಪ, ಅಲ್ಲಿ ಅಡಗಿಸಿಟ್ಟ ರಾಜಕುಮಾರಿಯನ್ನು ಸಾಹಸದಿಂದ ಬಿಡಿಸಿ ತರುವುದು ಇತ್ಯಾದಿ ಕಥೆಗಳು ಮಕ್ಕಳ ಸೃಜನಾತ್ಮಕತೆಯನ್ನು ಅರಳಿಸಿವೆ. ಅಂದ ಹಾಗೆ ಕಥೆ ಹೇಳು ಅಂದ ಕೂಡಲೇ ಅಜ್ಜಿಯ ಕಥಾ ಭಂಡಾರದಿಂದ ಹೊಚ್ಚ ಹೊಸದೆನ್ನುವ ಕಥೆ ಹೊರ ಬೀಳುತ್ತಿತ್ತು ಎನ್ನುವುದೇ ಸೋಜಿಗದ ವಿಷಯ.

ಕಾಲ ಕಳೆದಂತೆ ಹೀಗೆ ಕಥೆ ಹೇಳುವವರು- ಕೇಳುವವರೂ ಕಡಿಮೆಯಾಗಿದ್ದಾರೆ. ಮಕ್ಕಳು ಶಾಲೆ – ಹೋಮ್ ವರ್ಕ್ ಸುತ್ತಲೂ ಗಿರಕಿ ಹೊಡೆಯುತ್ತಿದ್ದಾರೆ. ಮನೋವಿಜ್ಞಾನಿಗಳ ಅಭಿಪ್ರಾಯದಂತೆ ಕಥೆ ಕೇಳುವುದು ಮಾನಸಿಕ ಒತ್ತಡ ತಗ್ಗಿಸುತ್ತದೆ. ಮುಖ್ಯವಾಗಿ ಸೃಜನಾತ್ಮಕತೆ ಹೆಚ್ಚಿಸುತ್ತದೆ. ಇದು ವಯಸ್ಕರ ವಿಷಯದಲ್ಲಿಯೂ ಸತ್ಯ. ಮುಖ್ಯವಾಗಿ ದುಗುಡ – ದುಮ್ಮಾನ – ಒತ್ತಡ ಕಡಿಮೆಯಾಗಿ ಉತ್ಸಾಹ ಮೂಡುತ್ತದೆ. ಇದು ಅವರು ಮಾಡುವ ಕೆಲಸ ಕಾರ್ಯಗಳ ಮೇಲೆಯೂ ಪರಿಣಾಮ ಬೀರುತ್ತದೆ. ಖಿನ್ನತೆ ಆವರಿಸದಂತೆ ಕಾಪಾಡುತ್ತದೆ.

ಸಾಹಿತ್ಯ ಓದುವುದು ಕೂಡ ಆನಂದದಾಯಕ ಸಂಗತಿ. ಆದರೆ ಧಾವಂತದ ಬದುಕಿನಲ್ಲಿ ಅದಕ್ಕೆ ಸಮಯ ಒದಗಿಸಿಕೊಳ್ಳುವುದಾದರೂ ಹೇಗೆ ಎಂಬುದೇ ಅನೇಕರ ಪ್ರಶ್ನೆ. ಇದು ನಿಜ. ಬದುಕು ಓಡು ಓಡು ಮತ್ತು ಓಡುತ್ತಲೇ ಇರು ಎಂಬ ತತ್ವದ ಮೇಲೆ ನಡೆಯುತ್ತಿದೆಯೇನೊ ಎನ್ನಿಸುತ್ತದೆ. ಇಂಥ ಹೊತ್ತಿನಲ್ಲಿ “ಕಥೆ ಹೇಳುವುದು – ಕೇಳುವುದರ ಪ್ರಾಮುಖ್ಯತೆ ಅರಿತು ಕನ್ನಡದಲ್ಲಿ ಮೊಟ್ಟ ಮೊದಲು ಮೂಡಿ ಬಂದಿದ್ದೆ “ ಆಲಿಸಿರಿ “ ಆ್ಯಪ್.

ವೃತ್ತಿಯಿಂದ ಸಾಫ್ಟ್ವೇರ್ ಇಂಜಿನಿಯರ್, ಪ್ರವೃತ್ತಿಯಿಂದ ಕನ್ನಡದ ಬರೆಹಗಾರರಾಗಿರುವ ದಾವಣಗೆರೆಯ ಶ್ರೀಹರ್ಷ ಸಾಲಿಮಠ್ ಇಂಥದೊಂದು ಸಾಧ್ಯತೆ ಬಗ್ಗೆ ಚಿಂತನೆ ಮಾಡಿ, ಸಮಾನಮನಸ್ಕ ಸ್ನೇಹಿತರು, ಸಾಹಿತಿಗಳೊದಿಗೆ ಚರ್ಚಿಸಿ “ಆಲಿಸಿರಿ” ಆ್ಯಪ್ ಅಭಿವೃದ್ಧಿಪಡಿಸಿದರು. ಆರಂಭದಲ್ಲಿಯೇ ಕಥಾಲೋಕದ ದಿಗ್ಗಜರು ಬೆನ್ನು ತಟ್ಟಿದ್ದರಿಂದ ಪ್ರಮುಖ ಕೃತಿಗಳು “ಆಲಿಸಿರಿ” ಆ್ಯಪ್ ಮಡಿಲೊಳಗೆ ಸೇರ್ಪಡೆಯಾದವು.
ಪ್ರಸ್ತುತ ಇದರಲ್ಲಿ ಕುಮಾರ ವ್ಯಾಸರು ರಚಿಸಿದ “ಭಾರತ” ದಿಂದ ಇತ್ತೀಚಿನ ಯುವ ಸಾಹಿತಿಗಳ ಕೃತಿಗಳೂ ಲಭ್ಯವಿವೆ. ವಿಷಯಗಳು ವೈವಿಧ್ಯವಾಗಿವೆ. ಕೇಳುಗರು ತಮಗೆ ಇಷ್ಟವೆನ್ನಿಸಿದ ಕೃತಿಯನ್ನು ಕೇಳಬಹುದು. “ಪ್ರತಿಯೊಂದು ಕೃತಿಗೂ ತನ್ನದೇ ಆದ ಪ್ರಾದೇಶಿಕ ವೈಶಿಷ್ಟ ಇರುತ್ತದೆ. ಸಾಹಿತಿಗಳು – ಲೇಖಕರು ತಮ್ಮ ಹುಟ್ಟೂರಿನ ಪ್ರದೇಶದ ಮಾತಿನ ಶೈಲಿ – ನುಡಿಕಟ್ಟುಗಳನ್ನು ತಂದಿರುತ್ತಾರೆ. ಅವುಗಳು ಆ ವೈಶಿಷ್ಟತೆಯಲ್ಲಿಯೇ ಬರಬೇಕು. ಮಹಾನಗರಗಳ ಕನ್ನಡ ಅಲ್ಲಿಯೂ ಇಣುಕಬಾರದು. ‘ಆಲಿಸಿರಿ” ಕೇವಲ ವಿವಿಧ ಸಾಹಿತ್ಯಗಳ ಕೇಳುವಿಕೆ ಆ್ಯಪ್ ಮಾತ್ರವಲ್ಲ. ಪ್ರಾದೇಶಿಕ ನುಡಿಕಟ್ಟು, ಶೈಲಿಗಳ ದಾಖಲೀಕರಣವೂ ಹೌದು. ಮುಂದಿನ ಪೀಳಿಗೆಗಳಿಗೂ ಇದು ಅನುಕೂಲವಾಗಬೇಕು” ಎಂಬ ಆಶಯವೂ ಇದರಲ್ಲಿ ಅಡಕವಾಗಿದೆ.
ಆ್ಯಪ್ ತಾಂತ್ರಿಕತೆ ಆಗಾಗ ಅಭಿವೃದ್ಧಿಯಾಗುತ್ತಲೇ ಇರುತ್ತದೆ. ಅದಕ್ಕೆ ತಕ್ಕಂತೆ “ಆಲಿಸಿರಿ” ಕೂಡ ಪರಿಷ್ಕರಣೆಯಾಗುತ್ತಿರುವುದು ಗಮನಾರ್ಹ.”ಆಲಿಸಿರಿ ಆಪ್ ಆಫ್ ಲೈನ್ ಮೋಡ್ ನಲ್ಲಿ ಲಭ್ಯವಿದೆ. ಇನ್ನು ಮುಂದೆ ಇಂಟರ್ ನೆಟ್ ಇದ್ದಾಗ ಪುಸ್ತಕಗಳನ್ನು ಡೌನ್ ಲೋಡ್ ಮಾಡಿಕೊಂಡು ಇಂಟರ್ ನೆಟ್ ಇಲ್ಲದೇ ಇರುವಾಗಲೂ ಕೇಳಬಹುದು. ನೀವು ಇಲ್ಲಿಯವರೆಗೆ ಕೇಳಿಸಿಕೊಂಡಿರುವುದನ್ನು ನೆನಪಿಟ್ಟುಕೊಂಡು ಮುಂದಿನ ಭಾಗವನ್ನು ಪ್ಲೇ ಮಾಡುತ್ತದೆ. ಪುಸ್ತಕದ ಕ್ವಾಲಿಟಿಯನ್ನು ನೀವು ಸ್ಯಾಂಪಲ್ ಮೂಲಕ ಕೇಳಬಹುದು. ವೇಗವಾಗಿ ಪುಸ್ತಕಗಳು ಲೋಡ್ ಆಗುತ್ತವೆ ಮತ್ತು ಮೊಬೈಲ್ ಬ್ಯಾಟರಿ ಬಳಕೆಯೂ ಗಣನೀಯವಾಗಿ ಕಡಿಮೆ ಆಗುತ್ತದೆ” ಎಂದು ಶ್ರೀಹರ್ಷ ಸಾಲಿಮಠ್ ವಿವರಿಸುತ್ತಾರೆ.
ಕಥೆ – ಕಾದಂಬರಿ ಇನ್ನಿತರ ಸಾಹಿತ್ಯಗಳನ್ನು ವಾಚಿಸಿರುವವರು ವೃತ್ತಿ ನಿರತ ಕಂಠದಾನ ಕಲಾವಿದರು ಎನ್ನುವುದು ವಿಶೇಷ. ಆಯಾ ಕೃತಿಯ ಸಂದರ್ಭಗಳಿಗನುಸಾರವಾಗಿ ಇವರ ಧ್ವನಿಯ ಏರಿಳಿತ ಕೇಳುವುದೇ ಸೊಗಸು. ಇದರ ಗುಣಮಟ್ಟ ಮೊಬೈಲ್ ಸ್ಪೀಕರ್, ಹೆಡ್ ಪೋನ್, ಇಯರ್ ಪೋನ್ ಗಳಲ್ಲಿ ಕೇಳಿದರೂ ವ್ಯತ್ಯಾಸವಾಗುವುದಿಲ್ಲ. ಇದರಿಂದಾಗಿ ಮನೆಯಲ್ಲಿ ಇತರ ಕೆಲಸಕಾರ್ಯಗಳಲ್ಲಿ ತೊಡಗಿದ್ದಾಗ ಮೊಬೈಲ್ ಸ್ಪೀಕರ್ ಆನ್ ಮಾಡಿಕೊಂಡು ನೆಚ್ಚಿನ ಕೃತಿಗಳ ವಾಚನ ಆಲಿಸಬಹುದು. ಪ್ರಯಾಣ ಮಾಡುವಾಗ ಹೆಡ್ ಪೋನ್ ಅಥವಾ ಇಯರ್ ಪೋನ್ ಬಳಸಬಹುದು. ಕಾರುಗಳಲ್ಲಿ ಪಯಣಿಸುವಾಗ ಅದರ ಸ್ಲೀಕರುಗಳಿಗೆ ಬ್ಲೂ ಟೂಥ್ ಮೂಲಕ ಕನೆಕ್ಟ್ ಮಾಡಿ ಕೇಳಬಹುದು. ಒಂದು ಮುದ್ರಿತ ಸಾಹಿತ್ಯ ಕೃತಿಯನ್ನು ಏಕಕಾಲದಲ್ಲಿ ಒಬ್ಬರು ಓದಬಹುದು. ಆದರೆ “ಆಲಿಸಿರಿ” ಕಥೆಗಳನ್ನು ಏಕಕಾಲದಲ್ಲಿ ಅನೇಕರು ಕೇಳಿಸಿಕೊಳ್ಳಬಹುದು. ಸಮಯವಾದಾಗಲೆಲ್ಲ ಆಲಿಸಿರಿ ಆಲಿಸುವುದು ಮುದ ನೀಡುವ ಸಂಗತಿ.

ಇಂಥ ಚೇತೋಹಾರಿ ಅನುಭವವನ್ನು ನಿಮ್ಮದಾಗಿಸಿಕೊಳ್ಳಬಹುದು. ಇದಕ್ಕಾಗಿ ಮುಂದೆ ನೀಡಿರುವ ಲಿಂಕ್ ಮೂಲಕ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ. ಉಚಿತವಾಗಿ ಲಭ್ಯವಿರುವ ಕೃತಿಗಳನ್ನು ಕೇಳಿ. ಇದರಿಂದ ನಿರಂತರವಾಗಿ ಆಲಿಸುತ್ತಲೇ ಇರಬೇಕು ಎಂಬ ಭಾವ ಸಂವೇದನೆ ಮೂಡುತ್ತದೆ. ನಂತರ ನಿಮ್ಮ ಇಷ್ಟದ ಪ್ರೀಮಿಯಂ ಕೃತಿಗಳನ್ನು ನಿಮ್ಮದಾಗಿಸಿಕೊಳ್ಳಬಹುದು.

https://play.google.com/store/apps/details?id=com.alisiria.audiobook

Similar Posts

Leave a Reply

Your email address will not be published. Required fields are marked *