ಪ್ರತಿವರ್ಷವೂ ಮಾವು ಬೆಳೆ ಇಳುವರಿ ಏಕಪ್ರಕಾರವಾಗಿರುವುದಿಲ್ಲ. ಒಂದು ವರ್ಷ ಏರುಹಂಗಾಮು ಅಂದರೆ ಅಧಿಕ ಇಳುವರಿ ಬಂದರೆ ಮರುವರ್ಷ ಇಳಿಹಂಗಾಮು ಉಂಟಾಗುತ್ತದೆ. ಏರುಹಂಗಾಮು ಇಳುವರಿಯ ಶೇಕಡ 50ರಷ್ಟು ಇಳುವರಿ ಮಾತ್ರ ಬರಬಹುದು. ಅದೂ ಸೂಕ್ತರೀತಿಯಲ್ಲಿ ಸಸ್ಯಸಂರಕ್ಷಣ ಕ್ರಮಗಳನ್ನು ತೆಗೆದುಕೊಂಡಾಗ ಮಾತ್ರ. ಸೂಕ್ತಹಂತದಲ್ಲಿ ಇಂಥ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕ. ಈ ಹಂತಗಳು ಎಲ್ಲ ಜಿಲ್ಲೆಯಲ್ಲಿಯೂ ಒಂದೇರೀತಿ ಆಗಿರುವುದಿಲ್ಲ ಎಂಬುದು ಗಮನಾರ್ಹ. ಈ ವರ್ಷ ಮಾವಿಗೆ ಇಳಿಹಂಗಾಮು ಆಗಿರುತ್ತದೆ.

ಮಾವು ಹೂ ಬಿಡುವ ಹಂಗಾಮಿನಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಗಳು

ಮಾವು ಹೂ ಬಿಡುವ ಹಂತದಲ್ಲಿ ಹೂ ಮೊಗ್ಗು, ಅರಳಿದ ಹೂತೆನೆ ಮತ್ತು ಕಚ್ಚಿದ ಎಳೆಯ ಕಾಯಿಗಳನ್ನು ಹಾನಿಕಾರಕ ಕೀಟ ಮತ್ತು ರೋಗಗಳಿಂದ ಸಂರಕ್ಷಿಸುವುದು ಮುಖ್ಯ ಎಂದು ತೋಟಗಾರಿಕೆ ಇಲಾಖೆಯ ಹೆಚ್ಚುವರಿ ನಿರ್ದೇಶಕ (ನಿವೃತ್ತ) ಡಾ.ಎಸ್.ವಿ. ಹಿತ್ತಲಮನಿ ಮತ್ತು ಭಾರತೀಯ ತೋಟಗಾರಿಕಾ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ. ರೆಡ್ಡಿ ಅವರು ತಿಳಿಸುತ್ತಾರೆ. ಬೆಳೆಗಾರರು ಯಾವಯಾವ ಹಂತದಲ್ಲಿ ಯಾವಯಾವ ಕ್ರಮಗಳನ್ನು ಅನುಸರಿಸಬೇಕೆಂದು ಅವರು ತಿಳಿಸಿದ್ದಾರೆ.

ತೋಟಗಾರಿಕಾ ಇಲಾಖೆಯ ರಾಮನಗರ ಜಿಲ್ಲಾ ಕಚೇರಿ ಆಯೋಜಿಸಿದ್ದ ನವೆಂಬರ್ 20, 2018ರಂದು “ಪ್ರಸಕ್ತ ಹಂಗಾಮಿನಲ್ಲಿ ಮಾವಿನಬೆಳೆಯಲ್ಲಿ ಕೈಗೊಳ್ಳಬೇಕಾದ ಪೂರಕ ಚಟುವಟಿಕೆಗಳು” ತರಬೇತಿ ಕಾರ್ಯಕ್ರಮದಲ್ಲಿ ಈ ಇಬ್ಬರು ಕೃಷಿವಿಜ್ಞಾನಿಗಳು ಮಾತನಾಡಿ ಬೆಳೆಗಾರರಿಗೆ ಅತ್ಯವಶ್ಯಕ ಸಲಹೆಗಳನ್ನು ನೀಡಿದರು.

ಹೂ ಬಿಡುವ ಹಂತದಲ್ಲಿ ಮಾವಿಗೆ ಬಾಧೆ ಜಿಗಿಹುಳು ಬಾಧೆ ನೀಡುತ್ತದೆ. ಇದಲ್ಲದೇ  ಹೂ ತೆನೆ ಒಣಗುವಿಕೆ/ ಕಪ್ಪಾಗುವಿಕೆ, ಚಿಬ್ಬುರೋಗ, ಬೂದಿರೋಗಗಳು ಉಂಟಾಗಬಹುದು. ಇದಲ್ಲದೇ ಅಲ್ಪಪ್ರಮಾಣದಲ್ಲಿ ಥ್ರಿಪ್ಸ್ ಮತ್ತಿತರ ಕೀಟಗಳು ಹಾನಿ ಉಂಟುಮಾಡಬಹುದು.

ಮೊದಲ ಸಿಂಪಡಣೆ: ಅಕ್ಟೋಬರ್-ನವೆಂಬರ್ ಮತ್ತು ಡಿಸೆಂಬರಿನಲ್ಲಿ ಮಾವು ಹೂ ಬಿಡುವ ಮುನ್ನ ಅಥವಾ ಹೂವಿನ ಬಡ್ ಹಂತದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳೇನು ಎಂಬುದನ್ನು ಈ ಇಬ್ಬರು ಕೃಷಿವಿಜ್ಞಾನಿಗಳು ವಿವರಿಸಿದ್ದಾರೆ. ಈ ಹಂತದಲ್ಲಿ ಮೊದಲೇ ಹೇಳಿದಂತೆ ಜಿಗಿಹುಳು, ಥ್ರಿಪ್ಸ್ ಹುಳು, ಹೂತೆನೆ ಒಣಗುವ ರೋಗ ಹಾಗೂ ಹೂ ತೆನೆಕೊರಕಗಳು ಅಧಿಕ ಹಾನಿಯುಂಟು ಮಾಡಬಹುದು. ಆದ್ದರಿಂದ ಇವುಗಳ ನಿಯಂತ್ರಣಕ್ಕೆ ಶಿಫಾರಸು ಮಾಡಿದ ಪ್ರಮಾಣದ ಕೀಟನಾಶಕ ಮತ್ತು ಶಿಲೀಂಧ್ರನಾಶಕಗಳನ್ನು ಮಿಶ್ರಣ ಮಾಡಿದ ದ್ರಾವಣ ಸಿಂಪಡಿಸುವುದು ಅಗತ್ಯ. ಇಮಿಡಾಕ್ಲೋಪ್ರಿಡ್ 17.8 %, ಎಸ್.ಎಲ್. 0.3 – 0.4 ಮಿಲಿ ಲೀಟರ್  (ಇದರಲ್ಲಿ ಗರಿಷ್ಠ ಶೇಷಾಂಶ 0.20 ಮಿಲಿಗ್ರಾಮ್/ಕೆಜಿ, ಕನಿಷ್ಟ ನಿರೀಕ್ಷಣಾ ಅವಧಿ 60 ದಿನಗಳು) + ವೆಟಬಲ್ ಸಲ್ಫರ್ – 3 ಗ್ರಾಮ್ . ಇದರ ಜೊತೆಗೆ ಥೈಯೋಮೆಥೋಕ್ಸಾಮ್ 25% ಡಬ್ಲ್ಯು.ಜಿ. 25 ಗ್ರಾಮ್ (ಗರಿಷ್ಠ ಶೇಷಾಂಶ 0.01 ಮಿಲಿಗ್ರಾಮ್/ಕೆಜಿ. ಕನಿಷ್ಟ ನಿರೀಕ್ಷಣಾ ಅವಧಿ 60 ದಿನಗಳು)

ಎರಡನೇ ಸಿಂಪಡಣೆ: ಇದನ್ನು ಡಿಸೆಂಬರ್-ಜನವರಿ ಮತ್ತು ಫೆಬ್ರುವರಿ ತಿಂಗಳುಗಳ ಅವಧಿಯಲ್ಲಿ ಮಾಡಬೇಕು. ಈ ಹಂತದಲ್ಲಿ ಹೂ ಕಚ್ಚಿರುತ್ತವೆ, ಪೂರ್ಣ ಪ್ರಮಾಣದಲ್ಲಿ ಹೂ ಆಗಿರುತ್ತವೆ, ಪ್ರೂಟ್ ಸೆಟ್ಟಾಗುವ ಹಂತದಲ್ಲಿಯೂ ಇರಬಹುದು. ಈ ಸಂದರ್ಭದಲ್ಲಿ ಹೂ ತೆನೆ ಸಂಪೂರ್ಣವಾಗಿ ಅರಳಿರುತ್ತದೆ. ಜೊತೆಗೆ ಕಾಯಿ ಕಚ್ಚುವ ಪ್ರಕ್ರಿಯೆ ನಡೆಯುತ್ತಿರುತ್ತದೆ. ಈಗ ಅಳಿದುಳಿದ ಜಿಗಿಹುಳು, ಥ್ರಿಪ್ಸ್ ಹುಳು, ಹೂತೆನೆ, ಎಳೆಕಾಯಿ ಕೊರಕ, ಬೂದಿರೋಗ, ಚಿಬ್ಬುರೋಗ ಇತ್ಯಾದಿಗಳನ್ನು ಫಲಪ್ರದವಾಗಿ ನಿಯಂತ್ರಿಸಲು ಈ ಮುಂದೆ ಸೂಚಿಸಿದ ಕೀಟನಾಶಕ ಮತ್ತು ಶಿಲೀಂಧ್ರನಾಶಕಗಳನ್ನು ಸೇರಿಸಿದ ದ್ರಾವಣವನ್ನು ಶಿಫಾರಸು ಮಾಡಿರುವ ಪ್ರಮಾಣದಲ್ಲಿ ಸಿಂಪಡಿಸುವುದು ಅಗತ್ಯ ಎಂದು ತಿಳಿಸಿದರು.

ಲ್ಯಾಮ್ಡಾ ಸೈಹ್ಯಾಲೋತ್ರಿಸ್ 2.5 % ಇ.ಸಿ. -1 ಮಿಲಿ ಲೀಟರ್ (ಗರಿಷ್ಠ ತೇವಾಂಶ 0.20 ಮಿಲಿಗ್ರಾಮ್, ಕನಿಷ್ಠ ನಿರೀಕ್ಷಣಾ ಅವಧಿ 15 ದಿನಗಳು) ಇದರ ಜೊತೆಗೆ ಡೈನೋಕ್ಯಾಪ್ – 48 % ಮಿಲಿ ಲೀಟರ್ ಇ.ಸಿ. 1.0 ಮಿಲಿ ಲೀಟರ್ (ಗರಿಷ್ಠ ಶೇಷಾಂಶ 0.02 ಮಿಲಿಗ್ರಾಮ್ / ಕೆಜಿ ಕನಿಷ್ಟ ನಿರೀಕ್ಷಣಾ ಅವಧಿ 30 ದಿನಗಳು) ಅಥವಾ ಹೆಕ್ಸಾಕೋನಜೋಲ್ 5 ಇ.ಸಿ. -1.0 ಮಿಲಿ ಲೀಟರ್ (ಗರಿಷ್ಠ ಶೇಷಾಂಶ  0.02 ಮಿಲಿ ಗ್ರಾಮ್ /ಕೆಜಿ. ಕನಿಷ್ಟ ನಿರೀಕ್ಷಣಾ ಅವಧಿ 45 ದಿನಗಳು)

ಬೂದಿರೋಗ ಮತ್ತು ಚಿಬ್ಬುರೋಗದ ಹಾವಳಿ ಹೆಚ್ಚಾಗಿ ಕಂಡಾಗ ಸಂಯುಕ್ತ ಶಿಲೀಂಧ್ರನಾಶಕ ಟೆಬುಕೊನೋಜಾಲ್ 50 % + ಟ್ರೈಪ್ಸಾಕ್ಸಿಸ್ಟ್ರೋಬಿಸ್ 25 % ಡಬ್ಲ್ಯು ಜಿ. 0.75 ಗ್ರಾಮ್/ ಲೀಟರಿಗೆ (ಗರಿಷ್ಠ ಶೇಷಾಂಶ 0.01 + 0.10 ಮಿಲಿಗ್ರಾಮ್ ಒಂದು ಕೆಜಿಗೆ. ಕನಿಷ್ಟ ನಿರೀಕ್ಷಣಾ ಅವಧಿ 45 ದಿನಗಳು)

ಮೂರನೇ ಸಿಂಪಡಣೆ: ಇದನ್ನು ಅಗತ್ಯ ಬಿದ್ದರೆ ಮಾತ್ರ ತಜ್ಞರ ಸಲಹೆ ಪಡೆದು ಮಾಡಬೇಕು. ಇದು ಪೂರ್ಣ ಹೂ ಕಚ್ಚಿರುವ, ಪ್ರೂಟ್ ಸೆಟ್ಟಾಗುವ ಹಂತವಾಗಿರುತ್ತದೆ. ಈ ಸಂದರ್ಭದಲ್ಲಿ ಕಾಯಿ ಕಚ್ಚುವ ಕ್ರಿಯೆ ಮುಂದುವರಿದಿರುತ್ತದೆ. ಈ ಹಂತದಲ್ಲಿ ಜಿಗಿಹುಳುವಿನ ಬಾಧೆ ಉಂಟಾದರೆ ಅದನ್ನು ಶೀಘ್ರವಾಗಿ ನಿಯಂತ್ರಿಸುವುದು ಅವಶ್ಯಕ. ಇದಕ್ಕಾಗಿ ಬುಪ್ರೊಫೆಜಿನ್ 25 % ಎಸ್.ಸಿ.- 1.0 ಮಿಲಿ ಲೀಟರ್ ಒಂದು ಲೀಟರ್ ಗೆ (ಗರಿಷ್ಠ ಶೇಷಾಂಶ 0.10 ಮಿಲಿಗ್ರಾಮ್ ಒಂದು ಕೆಜಿಗೆ. ಕನಿಷ್ಟ ನಿರೀಕ್ಷಣಾ ಅವಧಿ 15 ದಿನಗಳು) ಬೂದಿರೋಗ, ಚಿಬ್ಬುರೋಗದ ಬಾಧೆ ಲಕ್ಷಣ ಕಂಡರೆ ಅದನ್ನು ನಿಯಂತ್ರಣ ಮಾಡಲು ಹೆಕ್ಸಾಕೊನಜೋಲ್ 5% – 1.0 ಮಿಲಿ ಲೀಟರ್/ಲೀ. ಸಿಂಪಡಿಸಬೇಕು ( ಗರಿಷ್ಠ ತೇವಾಂಶ 0.01 ಮಿಲಿ ಗ್ರಾಮ್ / ಕೆಜಿ. ಕನಿಷ್ಠ ನಿರೀಕ್ಷಣಾ ಅವಧಿ 20 ದಿನಗಳಾಗಿರುತ್ತವೆ)

ಶಿಫಾರಸು ಮಾಡಿದ ಕೀಟನಾಶಕ/ ಶಿಲೀಂಧ್ರನಾಶಕಗಳನ್ನು ಸೂಚಿಸಿದ ಪ್ರಮಾಣದಲ್ಲಿ ಮಾತ್ರ ಬಳಸಬೇಕು ಎಂದು ಕೃಷಿವಿಜ್ಞಾನಿಗಳಾದ ಡಾ. ಎಸ್.ವಿ. ಹಿತ್ತಲಮನಿ ಮತ್ತು ಡಾ. ವೈ.ಟಿ.ಎನ್. ರೆಡ್ಡಿ ಅವರು ಪದೇಪದೇ ಹೇಳುತ್ತಾರೆ. ಸಸ್ಯ ಸಂರಕ್ಷಣಾ ಕ್ರಮಗಳನ್ನು ಆಚರಣೆಗೆ ತರುವಾಗ ಏನೇ ಸಂದೇಹಗಳು ಬಂದರೂ ತಕ್ಷಣ ಸಮೀಪದ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬೇಕೆಂದು ಅವರು ಸಲಹೆ ನೀಡಿದರು.

ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಇದೇ ಸಂದರ್ಭದಲ್ಲಿ “ಮಾವು ಬೆಳೆಯ ಸುಧಾರಿತ ಬೇಸಾಯ ಕ್ರಮಗಳ ಕೈಪಿಡಿ” ಲೋಕಾರ್ಪಣೆ ಮಾಡಿದರು. ಇದನ್ನು ಬೆಳೆಗಾರರಿಗೆ ಉಚಿತವಾಗಿ ವಿತರಿಸಲಾಯಿತು. ರಾಮನಗರ ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕ ಡಾ. ಗುಣವಂತ್ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದು ಕೃಷಿಕರ ಪ್ರಶಂಸೆಗೆ ಪಾತ್ರವಾಯಿತು. ಇಲಾಖೆಯಿಂದ ಬೆಳೆಗಾರರಿಗೆ ದೊರೆಯುವ ಸೌಲಭ್ಯಗಳ ಬಗ್ಗೆಯೂ ಇವರು ಸಂಕ್ಷಿಪ್ತವಾಗಿ ವಿವರಿಸಿದರು.  ಇದೇ ಸಂದರ್ಭದಲ್ಲಿ ನೀರಾವರಿ ಮಿತಬಳಕೆಗಳ ಕುರಿತು ತಜ್ಞರಾದ ಡಿ. ಚಂದ್ರು ಅವರು ನೀರಾವರಿಯಲ್ಲಿ ಮಿತಬಳಕೆಯ ವಿಧಾನಗಳ ಕುರಿತು ಮಾಹಿತಿ ನೀಡಿದರು.

Similar Posts

1 Comment

  1. Sir
    I need mango cultivation information and how to sale for better price.

Leave a Reply

Your email address will not be published. Required fields are marked *