ಎತ್ತು ಎಮ್ಮೆ ಹಿಂಬದಿ ಕಾಲು ಎಳೆದು ಹಾಕುತ್ತಾ ಸಾಗುವುದನ್ನು ಗಮನಿಸಿರುತ್ತೀರಿ. ಇಂಥ ಎತ್ತುಗಳು ಹೊರೆ ಎಳೆಯಲು ಅಸಮರ್ಥವಾಗಿರುತ್ತವೆ. ಜಾನುವಾರುಗಳ ಇಂಥ ತೊಂದರೆಯನ್ನು ‘ಸಿಡಿಗಾಲು’ ಎನ್ನುತ್ತಾರೆ. ಇದು ಒಂದು ಕಾಯಿಲೆಯಲ್ಲ. ತೊಂದರೆ. ಸಿಡಿಗಾಲು ಉಂಟಾದ ಜಾನುವಾರು ತನ್ನ ಕಾಲನ್ನು ಸರಾಗವಾಗಿ ಮುಂದಿಡಲು ಆಗುವುದಿಲ್ಲ. ಕಾಲು ಮಡಚಲು ಆಗುವುದಿಲ್ಲ. ಹಿಂಬದಿ ಕಾಲನ್ನು ಎಳೆದೆಳೆದು ಹಾಕುತ್ತಿರುತ್ತದೆ. ಸರಾಗವಾಗಿ ಕೂರಲು-ಎದ್ದೇಳಲೂ ಇವುಗಳಿಗೆ ಆಗುವುದಿಲ್ಲ. ಹಿಂಬದಿಯ ಎರಡೂ ಕಾಲುಗಳಿಗೂ ಸಿಡಿಗಾಲು ಉಂಟಾದರೆ ಆ ಜಾನುವಾರು ಪಡುವ ಯಾತನೆ ಅಪಾರ
ಜಾನುವಾರು ತನ್ನ ಹಿಂದಿನ ಕಾಲನ್ನು ಅಗತ್ಯಕ್ಕಿಂತ ಹೆಚ್ಚಾಗಿ ಹಿಂದಕ್ಕೆ ನೀವಿದಾಗ ಅದರ ಸ್ಟೈಫಲ್ ಮಂಡಿಯಲ್ಲಿರುವ ಪಟೆಲ್ಲಾ ಎಂಬ ಮೂಳೆ , ತೊಡೆ ಮೂಳೆಯಾದ ಫೀಮರ್ ಸಂದಿಯಲ್ಲಿ ಸಿಲುಕುತ್ತದೆ. ಇದು ಸಲೀಸಾಗಿ ಕೆಳಗೆ ಜಾರುವುದಿಲ್ಲ. ಆಗ ಸಿಡಿಗಾಲು ತೊಂದರೆ ಉಂಟಾಗುತ್ತದೆ. ವಯಸ್ಸಾದ ಜಾನುವಾರುವಿಗೆ ಇಂಥ ತೊಂದರೆ ಹೆಚ್ಚು. ಮೆತ್ತಗಿರುವ ತೊಡೆಯ ಸ್ನಾಯುಗಳು ಸಹ ಇಂಥ ತೊಂದರೆ ಉಂಟಾಗಲು ಕಾರಣವಾಗುತ್ತವೆ. ಸ್ಟೈಫಲ್ ಕೀಲು ಮೂಳೆ ಜೋಡಣೆಯಲ್ಲಿ ಕೊಂಚ ವ್ಯತ್ಯಾಸವಾದರೂ ಸಿಡಿಗಾಲು ಉಂಟಾಗಬಹುದು.
ಇತರೇ ತೊಂದರೆಗಳಿಂದ ಬಳಲಿದ ಜಾನುವಾರುವನ್ನು ಬಹಳ ದಿನಗಳ ಬಳಿಕ ಕೆಲಸಕ್ಕೆ ತೊಡಗಿಸಿದಾಗಲೂ ಇಂಥ ತೊಂದರೆ ಉಂಟಾಗಬಹುದು. ಚಳಿಗಾಲದಲ್ಲಿ ಸಿಡಿಗಾಲು ತೊಂದರೆ ಹೆಚ್ಚು. ಸಿಡಿಗಾಲು ಸಮಸ್ಯೆ ಇರುವ ಜಾನುವಾರು ನಿಂತಿರುವಾಗ ತೊಂದರೆ ಕಾಣಿಸುವುದಿಲ್ಲ. ಅದು ನಡೆಯಲು ಶುರುಮಾಡಿದ ಸಂದರ್ಭದಲ್ಲಿ ಸಿಡಿಗಾಲಿನಿಂದ ಬಳಲುತ್ತಿರುವುದು ತಿಳಿಯುತ್ತದೆ. ಇಂಥ ಜಾನುವಾರು ಹಿಂದಿದಕ್ಕೆ ಹೆಜ್ಜೆ ಹಾಕಲು ಆಗುವುದಿಲ್ಲ.
ದುಡಿಯುವ ಜಾನುವಾರುವಿಗೆ ಇಂಥ ತೊಂದರೆ ಉಂಟಾದಾಗ ಕೃಷಿಕರು ನಷ್ಟಕ್ಕಿಡಾಗುತ್ತಾರೆ. ಇದನ್ನು ಮಾರಾಟ ಮಾಡಿದರೂ ಅತಿಕಡಿಮೆ ಬೆಲೆ ದೊರೆಯಬಹುದು. ಸಿಡಿಗಾಲು ತೊಂದರೆ ನಿವಾರಿಸಬಹುದು. ಆದರೆ ಇದಕ್ಕೆ ಪರಿಣಿತ ಪಶು ಶಸ್ತ್ರಚಿಕಿತ್ಸಕರ ಅಗತ್ಯವಿದೆ. ಶಸ್ತ್ರಚಿಕಿತ್ಸೆ ಎಲ್ಲ ಸಂದರ್ಭಗಳಲ್ಲಿಯೂ ಯಶಸ್ವಿಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ಶಸ್ತ್ರಚಿಕಿತ್ಸೆ ಮಾಡುವಾಗ ಉಂಟಾದ ಗಾಯ ಸಹ ಸೋಂಕು ತಗುಲಿ ಜಾನುವಾರುವಿಗೆ ಮಾರಣಾಂತಿಕವಾಗಬಹುದು. ಆದರೂ ಜಾನುವಾರು ಸಿಡಿಗಾಲು ನಿವಾರಿಸಲು ಯತ್ನಿಸುವುದು ಅಗತ್ಯ. ಇಂಥ ತೊಂದರೆ ಕಾಣಿಸಿದ ಕೂಡಲೇ ಸಮೀಪದ ಪಶುವೈದ್ಯರನ್ನು ಭೇಟಿ ಮಾಡಿದರೆ ಅವರು ಸೂಕ್ತ ಮಾರ್ಗದರ್ಶನ ನೀಡುತ್ತಾರೆ.