ಸಿನಿಮಾ

ಫಿಲ್ಮ್‌ ಫೆಸ್ಟಿವಲ್‌ ; ಸಿಹಿಕಹಿ ಅನುಭವ ನೀಡಿ ನೆನಪುಗಳ ಪುಟ ಸೇರ್ಪಡೆ

ಬೆಂಗಳೂರು ಫಿಲ್ಮ್‌ ಫೆಸ್ಟಿವಲ್‌ (Bengaluru film Festival) ಪ್ರತಿಬಾರಿಯೂ ವಿಭಿನ್ನ ಅನುಭವ ನೀಡುತ್ತದೆ. ಅದರಂತೆ ೧೭ನೇ ವರ್ಷದ ಚಿತ್ರೋತ್ಸವ ಸಿಹಿಕಹಿ ಅನುಭವ ನೀಡಿ ನೆನಪುಗಳ ಪುಟ ಸೇರಿದೆ. ಹಾಗೆ ನೋಡಿದರೆ ಕಹಿ ಅನುಭವ ಒಂದೆರಡೇ ಎನ್ನಬಹುದು. ಸಿಹಿ ಅನುಭವಗಳೇ ಅಧಿಕ.

ಪ್ರತಿವರ್ಷವೂ ಚಿತ್ರೋತ್ಸವ ಆರಂಭಕ್ಕೆ ಮುನ್ನ ಬೆಂಗಳೂರಿನ ನಂದಿನಿ ಲೇಔಟಿನಲ್ಲಿರುವ “ಕರ್ನಾಟಕ ಚಲನಚಿತ್ರ ಅಕಾಡೆಮಿ” (Karnataka film Academy) ಕಚೇರಿಗೆ ಹೋಗಿ ಕಲಾ ನಿರ್ದೇಶಕ (Art director of film festival) ರನ್ನು ಮಾತನಾಡಿಸಿ ವಿವರಗಳನ್ನು ಪಡೆಯುತ್ತೇನೆ. ಈ ವರ್ಷವೂ ಹೋಗಿ ಮುರುಳಿ ಅವರನ್ನು ಮಾತನಾಡಿಸಿದೆ. ಫೆಸ್ಟಿವಲ್‌ ಉದ್ಗಾಟನೆಗೆ ಇನ್ನು ಎರಡು ದಿನವಷ್ಟೇ ಬಾಕಿಯಿತು. ಕೆಲಸದ ಒತ್ತಡ ಅಪಾರವಿತ್ತು. ಅದನ್ನು ತೋರಿಸಿಕೊಳ್ಳದೇ ಶಾಂತವಾಗಿ ತೊಡಗಿಸಿಕೊಂಡಿದ್ದರು. ಇನ್ನೂ ಅಚ್ಚರಿ ಎಂದರೆ ಇಡೀ ತಂಡ ಯಾವುದೇ ಅನಗತ್ಯ ಓಡಾಟ-ಕೂಗಾಟ ಇಲ್ಲದೇ ಕೆಲಸದಲ್ಲಿ ತೊಡಗಿಸಿಕೊಂಡಿತ್ತು. ಪ್ರತಿವರ್ಷ ಫೆಸ್ಟಿವಲ್‌ ಗೆ ಮುನ್ನ ಇರುತ್ತಿದ್ದ ಕೂಗಾಟ – ಅವಸರ ಅಲ್ಲಿರಲಿಲ್ಲ.

ಈ ಬಾರಿ ಮೀಡಿಯಾ ಟೀಂ (Media team) ಜವಾಬ್ದಾರಿಯನ್ನು ಚಲನಚಿತ್ರ ಅಕಾಡೆಮಿ ಸದಸ್ಯರೂ ಆಗಿರುವ ಸುಧೀಂದ್ರ ವೆಂಕಟೇಶ್ ವಹಿಸಿಕೊಂಡಿದ್ದರು. ಮೀಡಿಯಾ ಪಾಸ್‌ (Media Pass)ಗೆ ಅಪ್ಲೈ ಮಾಡಿದ ಮರುದಿನವೇ ಇವರ ಟೀಮ್‌ ನಿಂದ “ನಿಮ್ಮ ಪಾಸ್‌ ಅರ್ಜಿ ಸ್ವೀಕೃತವಾಗಿದೆ. ಕಚೇರಿಗೆ ಬಂದು ಪಡೆದುಕೊಳ್ಳಿ ಎಂಬ ಪೋನ್.‌ ಇದು ಕೂಡ ಅಚ್ಚರಿ ಉಂಟು ಮಾಡಿತು. ಪ್ರತಿವರ್ಷ ಮೂರ್ನಾಲ್ಕು ಬಾರಿಯಾದರೂ ನಾವೇ ಕಾಲ್‌ ಮಾಡಬೇಕಿತ್ತು.

ಇನ್ನೂ ಅಚ್ಚರಿ ಎಂದರೆ ಪಾಸ್‌ ಪಡೆದ ಮಾಧ್ಯಮ ಪ್ರತಿನಿಧಿಗಳ ವಾಟ್ಸಪ್‌ ಗ್ರೂಪ್‌ (WhatsApp group) ಅನ್ನು ತ್ವರಿತವಾಗಿ ರಚಿಸಿದ್ದು, ಫೆಸ್ಟಿವಲ್‌ ಯಾವ ಹಂತದಲ್ಲಿದೆ, ಗಣ್ಯರ ಭೇಟಿ, ಕಾರ್ಯಾಗಾರಗಳ ವಿವರಗಳು, ಸಂವಾದಗಳ ವಿವರಗಳೆಲ್ಲವೂ ಅವುಗಳು ಜರುಗಿದ ಕೆಲವೇ ಹೊತ್ತಿನಲ್ಲಿ ವಾಟ್ಸಪ್‌ ಗ್ರೂಪಿಗೆ ರವಾನೆಯಾಗುತ್ತಲೇ ಇತ್ತು. ಇಷ್ಟು ತ್ವರಿತವಾದ ಸುದ್ದಿ ಪ್ರಕಟಣೆಗಳಿಂದ ಅಚ್ಚರಿಯಾಗಿ ಮೀಡಿಯಾ ಟೀಂನಲ್ಲಿ ಯಾರಿದ್ದಾರೆ ಎಂದು ವಿಚಾರಿಸಿದಾಗ ಚೇತನ್‌ ನಾಡಿಗೇರ್‌ ಇರುವುದು ತಿಳಿಯಿತು.

ಫೆಸ್ಟಿವಲ್‌ ಉದ್ಘಾಟನೆಯಾದ ಮರುದಿನ ನಿಗದಿತ ಸ್ಥಳಗಳಲ್ಲಿ ಸಿನಿಮಾಗಳ ಪ್ರದರ್ಶನಗಳು ಆರಂಭವಾಗುತ್ತವೆ. ಈ ಬಾರಿ ಲುಲು ಮಾಲ್‌ (Luli Mall) ನಲ್ಲಿ ಚಿತ್ರೋತ್ಸವ ಕೇಂದ್ರೀಕೃತಗೊಂಡಿತ್ತು. ಹಿಂದಿನ ವರ್ಷಗಳಲ್ಲಿ ಸ್ವಯಂ ಸೇವಕರು ಉದ್ವೇಗದಿಂದ ಇರುತ್ತಿದ್ದರು. ಇದರಿಂದ ಜನ ಸಂದಣಿಯನ್ನು ಸಮರ್ಪಕವಾಗಿ ನಿಯಂತ್ರಿಸಲು ಸಾಧ್ಯವಾಗುತ್ತಿರಲಿಲ್ಲ. ಇವರಿಗೂ, ಸಿನಿಮಾ ನೋಡಲು ಬಂದ ಪ್ರತಿನಿಧಿಗಳಿಗೂ ನಡುವೆ ಮಾತಿನ ಚಕಮಕಿ ಸಾಮಾನ್ಯವಾಗಿತ್ತು. ಈ ಬಾರಿ ಅದು ಕಾಣಲಿಲ್ಲ. ವಿವಿಧ ಕಾಲೇಜುಗಳಿಂದ, ವಿಶ್ವವಿದ್ಯಾಲಯಗಳಿಂದ ಬಂದ ವಿದ್ಯಾರ್ಥಿಗಳು ವೃತ್ತಿಪರ ಸ್ವಯಂ ಸೇವಕರಂತೆ ನಗುಮೊಗದಿಂದಲೇ ವರ್ತಿಸಿದರು. ಇದರ ಜವಾಬ್ದಾರಿ ಹೊತ್ತವರು ಯಾರೆಂದು ವಿಚಾರಿಸಿದಾಗ ಮಹೇಶ್‌ ಎಂದು ತಿಳಿಯಿತು.

ಸ್ವಯಂ ಸೇವಕರು, ಮಾಧ್ಯಮ ಪ್ರತಿನಿಧಿಗಳ ಮೇಲೆ ಅಪಾರ ಜವಾಬ್ದಾರಿ ಜೊತೆಗೆ ಸಮಯ ಪರಿಪಾಲನೆಒತ್ತಡ ಇರುತ್ತದೆ. ಇವರು ಉಪಹಾರ – ಊಟದ ಸಲುವಾಗಿ ಹೊರಗಡೆ ಹೋಗಿ ಬರುವುದು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಇವರಿಗೆ ಆಹಾರ ಮಳಿಗೆ ವ್ಯವಸ್ಥೆಯನ್ನು ಅಕಾಡೆಮಿ ಮಾಡಿರುತ್ತದೆ. ಈ ಟೀಮ್‌ ಕೂಡ ಎಂಟು ದಿನಗಳ ಕಾಲ ಚುರುಕಾಗಿ ಕಾರ್ಯ ನಿರ್ವಹಿಸಿತು. ಕ್ಯಾಟರಿಂಗ್‌ ಹೊಣೆ ಹೊತ್ತವರು ನಗುಮೊಗದಿಂದ ಶುಚಿರುಚಿ ಆಹಾರ ನೀಡಿದರು.

ಚಿತ್ರೋತ್ಸವದ ಕಲಾ ನಿರ್ದೇಶಕ ಮುರುಳಿ ಮತ್ತು ಅವರ ಟೀಮ್‌ ಅತ್ಯುತ್ತಮ ಸಿನಿಮಾ (The best movies)ಗಳನ್ನೇ ಆಯ್ಕೆ ಮಾಡಿದ್ದರು. ಇದರ ಹಿಂದೆ ಅಪಾರ ಪರಿಶ್ರಮ ಇರುವುದು ಎದ್ದು ಕಾಣುತ್ತಿತ್ತು. ಇವರು ಆಯೋಜಿಸಿದ್ದ ಮಾಸ್ಟರ್‌ ಕ್ಲಾಸ್‌ ಗಳು, ಸಂವಾದಗಳು, ಚಿತ್ರತಂಡಗಳೊಂದಿನ ಮಾಧ್ಯಮ ಗೋಷ್ಠಿ ಉತ್ತಮವಾಗಿ ನಡೆದವು.

ಬೇಸರದ ಸಂಗತಿ ಎಂದರೆ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲಾ ಅವರು ಫೆಸ್ಟಿವಲ್‌ ಪಾಸ್‌ ಪಡೆದುಕೊಂಡ ಪ್ರತಿನಿಧಿಗಳಿಗೆ ಲುಲು ಮಾಲ್‌ ನಲ್ಲಿ ಸಾಮಾನ್ಯ ವರ್ಗಗಳ ಕೈಗೆಟುಕುವಂತ ಬೆಲೆಯಲ್ಲಿ ಆಹಾರ ಪದಾರ್ಥಗಳು ದೊರೆಯುವಂತೆ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದ್ದರು. ಅದನ್ನು ಈಡೇರಿಸಲಿಲ್ಲ. ಪ್ರತಿನಿಧಿಗಳು ತಾವೇ ತಿನಿಸುಗಳನ್ನು ತರಲು ಸಹ ನಿರ್ಬಂಧವಿತ್ತು. ಇದನ್ನೂ ತೆರವುಗೊಳಿಸಲಿಲ್ಲ

ಇವೆಲ್ಲದರ ಜೊತೆಗೆ ಲುಲು ಮಾಲ್‌ ಥಿಯೇಟರ್‌ ಗಳಲ್ಲಿ ಸಿನಿಮಾ(Cinema)ಗಳನ್ನು ವೀಕ್ಷಿಸುವುದು ಹಿತ ಎನಿಸಲಿಲ್ಲ. ಚಿತ್ರ ಪ್ರದರ್ಶನದಲ್ಲಿ ಪದೇಪದೇ ಅಡಚಣೆ ಉಂಟಾಗುತ್ತಿತ್ತು.ಸೌಂಡ್‌ ಎಫೆಕ್ಟ್‌ (Sound Effect) ಉತ್ತಮವಾಗಿರಲಿಲ್ಲ. ಚಿತ್ರಮಂದಿರದ ಸೀಟುಗಳಿಗಿಂತ ಟೆಂಟ್‌ ಸಿನಿಮಾ (Tent Cinema)ದ ಸೀಟುಗಳೇ ಉತ್ತಮ ಎನಿಸುತ್ತಿತ್ತು.

ಮಾಲ್‌ ಹೊರಭಾಗದ ಆವರಣದಲ್ಲಿ ಪಾಸ್‌ ಗಳಿಲ್ಲದವರು ವೀಕ್ಷಿಸಲು ಅನುಕೂಲವಾಗುವಂತೆ, ಜೊತೆಗೆ ಹಳೆಯ ಪ್ರೊಜೆಕ್ಟರ್‌ ನಲ್ಲಿ ಸಿನಿಮಾ ನೋಡುವ ಅನುಭವ ದಕ್ಕುವಂತೆ ಸಿನಿಮಾ ಪ್ರದರ್ಶನ ಆಯೋಜಿಸಿದ್ದು ಗಮನಾರ್ಹ. ಭಾರತೀಯ ಚಿತ್ರರಂಗದ ಹೆಗ್ಗುರುತುಗಳಲ್ಲಿ ಒಂದಾದ ಶೋಲೆ ಸಿನಿಮಾ (Sholay Cinema)ದಲ್ಲಿ ಬಳಕೆಯಾದ ಮೋಟರ್‌ ಸೈಕಲ್‌ (Motor Bike) ಪ್ರದರ್ಶನವೂ ಮೆಚ್ಚುಗೆ ಗಳಿಸಿತು.

Leave a Reply

Your email address will not be published. Required fields are marked *

error: Content is protected !!