ಮಾರ್ಚ್ 1 ರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದರು. ಆರಂಭಿಕ ಸಿನೆಮಾ ಆಗಿ “ಪಯರ್ “ಪ್ರದರ್ಶನಗೊಂಡಿದೆ. ಮಾರ್ಚ್ 2 ಭಾನುವಾರ. ಸಹಜವಾಗಿಯೇ ಸಿನೆಮೋತ್ಸವದ ಪ್ರಮುಖ ತಾಣ (ರಾಜ್ ಕುಮಾರ್ ಕಲಾಭವನ, ಸುಚಿತ್ರಾ ಫಿಲ್ಮ್ ಸೊಸೈಟಿಗಳಲ್ಲಿಯೂ ಸಿನೆಮಾ ಪ್ರದರ್ಶನ ಇರುತ್ತದೆ) ಒರಾಯನ್ ಮಾಲ್ನಲ್ಲಿ ಅಧಿಕ ಸಂಖ್ಯೆಯಲ್ಲಿ ಆಸಕ್ತರು ಸೇರುತ್ತಾರೆ.
ಎಲ್ಲರಿಗೂ ಒಂದೇ ಪ್ರಶ್ನೆ; ಯಾವಯಾವ ಸಿನೆಮಾ ನೋಡಬೇಕು ? ಬರುವವರಲ್ಲಿ ಕೆಲವರು ಇಂಥ ದಿನ ಇಂಥದ್ದೇ ಸಿನೆಮಾ ನೋಡಬೇಕು ಎಂದು ನಿಶ್ಚಯ ಮಾಡಿಕೊಂಡು ಬಂದಿರುತ್ತಾರೆ. ಆದರೆ ಹೆಚ್ಚಿನ ಆಸಕ್ತರು ನಿರ್ಧಾರ ಮಾಡಿರುವುದಿಲ್ಲ. ಇವರು ಬೇರೆಯವರ ಶಿಫಾರಸುಗಳ ಮೇಲೆ ತಮ್ಮ ಆಯ್ಕೆ ನಿರ್ಧಾರ ಮಾಡುತ್ತಾರೆ. ಹೀಗೆ ಮಾಡುವ ಅವಶ್ಯಕತೆ ಇಲ್ಲ. ಸಿನೆಮಾದ ಚಿತ್ರಕಥೆ ವೈಯಕ್ತಿಕ ಆಯ್ಕೆ ಆಗಿರಬೇಕು. ಆ ಚಿತ್ರಕಥೆಯನ್ನು ನಿರ್ದೇಶಕ ಹೇಗೆ ಉತ್ತಮ ಸಿನೆಮಾ ಆಗಿ ಕಟ್ಟಿದ್ದಾನೆ ಎಂಬುದಷ್ಟೆ ಮುಖ್ಯ.
ಈಗಾಗಲೇ 16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಕೈಪಿಡಿ, ವೇಳಾಪಟ್ಟಿ ಪ್ರಕಟವಾಗಿದೆ. ಇದರ ಲಿಂಕ್ ಗಳು ಕೆಳಗಿವೆ. ಅದರಿಂದ ಡೌನ್ ಲೋಡ್ ಮಾಡಿಕೊಳ್ಳಿ. ಫೆಸ್ಟಿವಲ್ ಸಿನೆಮಾ ನಡೆಯುವ ಸ್ಥಳಗಳಲ್ಲಿ ಇರುವ ಬ್ಯಾನರ್, ಡಿಸ್ ಪ್ಲೇ ಪೋಸ್ಟರ್ ಗಳಲ್ಲಿ ಕ್ಯೂಆರ್ ಕೋಡ್ ಇರುತ್ತದೆ. ಇದನ್ನು ಸ್ಕ್ಯಾನ್ ಮಾಡಿದರೂ ಕೈ ಪಿಡಿ, ವೇಳಾಪಟ್ಟಿ ಡೌನ್ ಲೋಡ್ ಮಾಡಬಹುದು. ಹಾಗಾಗಿ ಒಂದು ವೇಳೆ ಕೈಪಿಡಿ ಸಿಗದಿದ್ದರೆ ಪರದಾಡುವ ಅಗತ್ಯವಿಲ್ಲ. ಪ್ರತಿದಿನವೂ ಪ್ರಿಂಟೆಡ್ ಮಾರ್ಗದರ್ಶಿಗಳೂ ಸಿಗುತ್ತವೆ.
ಇವುಗಳನ್ನು ನೋಡಿ. ಡೌನ್ ಲೋಡ್ ಮಾಡಿದ ಕೈಪಿಡಿಯಲ್ಲಿ ಸಾರಾಂಶ ಇರುತ್ತದೆ. ಅವುಗಳನ್ನೂ ಗಮನಿಸಿ. ನಿಮಗೆ ದೊರಕಿದ ಸಾರಾಂಶ ತೃಪ್ತಿ ಎನಿಸದಿದ್ದರೆ ಅಂತರ್ಜಾಲದಲ್ಲಿ ಸರ್ಚ್ ಮಾಡಿ, ಇನ್ನೂ ಹೆಚ್ಚಿನ ಮಾಹಿತಿ ದೊರೆಯುತ್ತದೆ. ಆದರೆ ಹೆಚ್ಚಿನ ವಿವರ ಇಲ್ಲದೇ ದೊರೆಯುವ ಕಿರು ಸಾರಾಂಶದ ಮೇಲೆಯೇ ಸಿನೆಮಾ ಆಯ್ಕೆ ಮಾಡಿ. ಒಂದು ವೇಳೆ ಬೇರೆಯವರ ಅಭಿಪ್ರಾಯ ಕೇಳಿದರೆ ಅವರು ತಮ್ಮ ಅಭಿರುಚಿ, ಆಸಕ್ತಿಗೆ ಅನುಗುಣವಾದ ಸಿನೆಮಾ ಶಿಫಾರಸು ಮಾಡುತ್ತಾರೆ. ಅದು ನಿಮಗೆ ಇಷ್ಟವಾಗದೇ ಇರಬಹುದು. ಆದ್ದರಿಂದ ನೀವು ನೋಡಬೇಕಾದ ಸಿನೆಮಾ ನೀವೇ ಆಯ್ಕೆ ಮಾಡಿ !
ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ಊರೆಲ್ಲ ಅಲೆದಾಡಿದರು ಎನ್ನುವ ಹಾಗೆ ನಿಮ್ಮ ಕೈಯಲ್ಲಿ ಜಂಗಮವಾಣಿ ಅರ್ಥಾತ್ ಮೊಬೈಲ್ ಪೋನ್ ಇಟ್ಟುಕೊಂಡು ಮಾಹಿತಿಗಾಗಿ ಬೇರೆಯವರನ್ನು ಅವಲಂಬಿಸಬೇಡಿ, ಮುಬಿ (MUBI) ಸೇರಿದಂತೆ ಈ ಥರದ ಜಾಲತಾಣ, ಆ್ಯಪ್ ಗಳಲ್ಲಿ ಅಂತರರಾಷ್ಟ್ರೀಯ ಸಿನೆಮಾಗಳ ಬಗ್ಗೆ ಸ್ಟಾರ್ ಕೊಟ್ಟಿರುತ್ತಾರೆ. ಆದರೆ ನನ್ನ ಅಭಿಪ್ರಾಯ ಏನೆಂದರೆ ಕೈಪಿಡಿಯಲ್ಲಿರುವ ಸಾರಾಂಶದ ಮೇಲೆ ಸಿನೆಮಾ ಆಯ್ಕೆ ಮಾಡಿ. ಒಂದುವೇಳೆ ಆ ಸಿನೆಮಾ ಇಷ್ಟವಾಗಲಿಲ್ಲ ಎಂದರೆ ಬಲವಂತವಾಗಿ ಕೂರಬೇಡಿ. ಎದ್ದು ಆಚೆ ಬನ್ನಿ,ಕಾಫಿ ಅಥವಾ ಚಹಾ ಕುಡಿಯಿರಿ. ಆದರೆ ಈಗಾಗಲೇ ಶುರುವಾಗಿರುವ ಸಿನೆಮಾ ನೋಡಲು ಹೋಗಬೇಡಿ
ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಬಂದಿರುವ ಬಹುತೇಕ ಸಿನೆಮಾಗಳಲ್ಲಿ ಬಹುತೇಕ ಸಿನೆಮಾಗಳು ಉತ್ತಮವಾಗಿರುತ್ತವೆ. ಆದ್ದರಿಂದ ನೀವು ಯಾವ ಸಿನೆಮಾ ನೋಡಲು ಆಯ್ಕೆ ಮಾಡಿಕೊಂಡರೂ ನಷ್ಟವೇನಿಲ್ಲ. ಕೆಲವೊಮ್ಮೆ ಪ್ರಶಸ್ತಿಗಳ ಮೇಲೆ ಸಿನೆಮಾ ಆಯ್ಕೆ ಮಾಡಿರುತ್ತೇವೆ. ಅದು ದೊಡ್ಡ ಹೈಪ್ ಕ್ರಿಯೇಟ್ ಮಾಡಿರುತ್ತದೆ. ನೋಡಲೇಬೇಕೆಂಬ ಒತ್ತಡಕ್ಕೆ ಸಿಲುಕುತ್ತೇವೆ. ನಾಲ್ಕು ವರ್ಷಗಳ ಹಿಂದೆ ಇದೇ ರೀತಿ ಕ್ರಿಯೆಟ್ ಆದ ಹೈಪ್ ಮೇಲೆ ನಾನು ಮತ್ತು ಗೆಳೆಯ, ವನ್ಯಜೀವಿ ಕ್ಷೇತ್ರದ ಖ್ಯಾತ ಛಾಯಾಗ್ರಹಕ ಗೌರೀಶ್ ಕಪನಿ ಅವರು “ಪ್ಯಾರಾಸೈಟ್” ( ಆಸ್ಕರ್ ವಿಜೇತ ಚಿತ್ರ) ನೋಡಲು ಗಂಟೆಗಟ್ಟಲೆ ಕ್ಯೂ ನಿಂತಿದ್ದೆವು. ಆ ಸಿನೆಮಾ ಇಬ್ಬರಿಗೂ ಇಷ್ಟವಾಗಲಿಲ್ಲ. ಥಿಯೇಟರ್ ನಿಂದ ಹೊರಬರುವಾಗ ಬಹುತೇಕರು ಸಿನೆಮಾ ಚೆನ್ನಾಗಿರಲಿಲ್ಲ ಎಂಬ ಭಾವನೆ ವ್ಯಕ್ತಪಡಿಸಿದರು.
ಇದೇ ರೀತಿ ಯಾವುದಾದರೂ ಸ್ಕ್ರೀನ್ ಮುಂದೆ ದೊಡ್ಡ ಕ್ಯೂ ಇದ್ದರೆ “ಓ ಸಿನೆಮಾ ಚೆನ್ನಾಗಿರಬಹುದು” ಎಂಬ ಭಾವನೆಯಿಂದ ಹೋಗಿ ನಿಲ್ಲಬೇಡಿ. ಯಾವುದೇ ಸಿನೆಮಾ ನೋಡಿದರೂ ನಷ್ಟವಿಲ್ಲ. ವಿದೇಶಿ ಸಿನೆಮಾಗಳನ್ನೇ ನೋಡಬೇಕೆಂಬ ಧಾವಂತ ಬೇಡ, ಭಾರತೀಯ ಭಾಷೆಗಳ ಸಿನೆಮಾಗಳನ್ನೂ ನೋಡಿ, ಉತ್ತಮವಾಗಿರುತ್ತವೆ.
ಒಂದು ವೇಳೆ ತುಂಬ ಪ್ರಶಂಸೆಗೆ ಒಳಪಟ್ಟ ಸಿನೆಮಾಗಳನ್ನು ನೋಡಲು ಆಗದಿದ್ದರೆ ನಿರಾಶೆ ಬೇಡ ! ಏಕೆಂದರೆ ಅವು ಮುಬಿಯಂಥ ಒಟಿಟಿ ಫ್ಲಾಟ್ ಫಾರಂಗೆ ಬಂದೇ ಬರುತ್ತವೆ. ಇಂಥ ಆನ್ ಲೈನ್ ವೇದಿಕೆಗಳ ಮಾಸಿಕ ದರವೂ ಕೈಗೆಟುಕುವ ಬೆಲೆಯಲ್ಲಿಯೇ ಇವೆ !
ಇನ್ನೊಂದು ಮುಖ್ಯವಾದ ವಿಷಯ. ಒಂದು ದಿನದಲ್ಲಿ ಮೂರಕ್ಕಿಂತ ಹೆಚ್ಚು ಸಿನೆಮಾ ನೋಡಬೇಡಿ, ಸಾಧ್ಯವಾದರೆ ಒಂದು ಸಿನೆಮಾ ನೋಡಿದ ನಂತರ ಮತ್ತೊಂದು ಸಿನೆಮಾ ನೋಡುವುದಕ್ಕೆ ವಿರಾಮ ನೀಡಿ. ಈ ವೇಳೆ ಅಲ್ಲೇ ತಿರುಗಾಡಿ, ರಿಲ್ಯಾಕ್ಸ್ ಆಗಿ ! ಹಲವರು ಒಂದು ಸಿನೆಮಾ ಮುಗಿದ ನಂತರ ಗುರುತು ಹಾಕಿಕೊಂಡ ಮತ್ತೊಂದು ಸಿನೆಮಾ ನೋಡಲು ದುಡುದುಡು ಓಡಿ ಹೋಗುತ್ತಾರೆ. ನೀವೂ ಹಾಗೆ ಮಾಡದೇ ಬಿಡುವು ಕೊಡಿ. ನೋಡಿದ ಸಿನೆಮಾ ಮನಸಿನಲ್ಲಿ ಉತ್ತಮವಾಗಿ ನೋಂದಣಿ ಆಗುತ್ತದೆ.
ಮುಂದಿನ ಲಿಂಕ್ ಮೂಲಕ ಫಿಲ್ಮ್ ಫೆಸ್ಟಿವಲ್ ಕ್ಯಾಟಲಾಗ್, ಟೈಮ್ ಟೇಬಲ್ ಡೌನ್ ಲೋಡ್ ಮಾಡಿ