ಬೆಂಗಳೂರು ೧೫ನೇ ಅಂತರಾಷ್ಟ್ರೀಯ ಫಿಲ್ಮ್‌ ಫೆಸ್ಟಿವಲ್‌ (Bengaluru international Film Festival) ಮಾರ್ಚ್‌ ೨೯ರಂದೇ ಉದ್ಘಾಟನೆಯಾಗಿದೆ. ಆದರೂ ಸಿನೆಮಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನೆರೆಯುವುದು ಮರುದಿನದಿಂದಲೇ ! ಇಂದು ಮಾರ್ಚ್‌ ೧ ರಂದು ಗಮನಾರ್ಹ ಸಂಖ್ಯೆಯಲ್ಲಿ ಆಸಕ್ತರು ನೆರೆದಿದ್ದರು. ಈ ಸಂದರ್ಭದಲ್ಲಿ ಕಂಡು ಬಂದ ಸಂಗತಿಗಳೆಂದರೆ …

೧. ಪಾಸುಗಳ ಸಮಪರ್ಕ ವಿತರಣೆ

೨. ಸಿನೆಮಾ ಕೈಪಿಡಿ‌ (cinema catalogue ) ಮತ್ತು ವೇಳಾಪಟ್ಟಿ, ಬ್ಯಾಗ್ ಗಳ ಸಮರ್ಪಕ ವಿತರಣೆ

೩. ಸಿನೆಮಾ ಹಾಲ್‌ ಗೆ ಪ್ರೇಕ್ಷಕರನ್ನು ಒಳಬಿಡುವ ಮುನ್ನ ಪಾಸ್‌ ಗಳ ವಿಳಂಬವಿಲ್ಲದ ಸ್ಕ್ಯಾನಿಂಗ್‌ ವ್ಯವಸ್ಥೆ

೪. ಪ್ರದರ್ಶನದ ವೇಳೆಯಲ್ಲಿ ವ್ಯತ್ಯಯಗಳಾಗದೇ ಇದ್ದಿದ್ದು

೫. ಪ್ರೇಕ್ಷಕರಿಗಿಂತ ಸ್ವಯಂಸೇವಕರೇ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದೇ ಇದ್ದಿದ್ದು

೬. ಸಂಘಟಕರ ಸಕಾಲಿಕ ಸ್ಪಂದನೆ

ಅತೀ ಹೆಚ್ಚು ಪ್ರೇಕ್ಷಕರಿದ್ದ ಸಿನೆಮಾ

ಸಾಮಾನ್ಯವಾಗಿ ಇರಾನ್‌ ಸಿನೆಮಾಗಳಿಗೆ ಅತೀ ಹೆಚ್ಚು ಪ್ರೇಕ್ಷಕರು ಇರುತ್ತಾರೆ. ಈ ಬಾರಿಯೂ ಒರಿಯನ್‌ ಮಾಲ್‌  ೮ನೇ ಸ್ಕ್ರೀನ್‌ ನಲ್ಲಿ ಪ್ರದರ್ಶನ ಕಂಡ “ಟೆರೆಸ್ಟ್ರೀಯಲ್‌ ವರ್ಸಸ್”‌ (Terrestrial Verses) ಸಿನೆಮಾಕ್ಕೆ ಅತೀ ಹೆಚ್ಚು ಪ್ರೇಕ್ಷಕರಿದ್ದರು.  ಒಂದು ತಾಸಿಗೂ ಮುಂಚೆ ಆಸಕ್ತರು ಸರದಿ ಸಾಲಿನಲ್ಲಿ ನಿಂತು ಪ್ರದರ್ಶನ ಸಮಯ ಆರಂಭ ತನಕ ತಾಳ್ಮೆಯಿಂದ ಇದ್ದರು.

ಗಮನ ಸೆಳೆದ “ಲೈನ್‌ ಮೆನ್‌” (Linemen) ಸಿನೆಮಾ ತಂಡ

ಒರಿಯನ್‌ ಮಾಲ್‌ ಸಿನೆಮಾ ಥಿಯೇಟರ್‌ ಗಳ ಹಾಲ್‌ ನಲ್ಲಿ ಇದ್ದ ಪ್ರೇಕ್ಷಕರ ಗಮನವನ್ನು ಕನ್ನಡ ಸಿನೆಮಾ “ಲೈನ್‌ ಮೆನ್”‌ ತಂಡದವರು ಸೆಳೆದರು. ಇದಕ್ಕೆ ವಿಶೇಷ ಕಾರಣ ತಂಡದವರು  ಕೆಇಬಿ ಲೈನ್‌ ಮೆನ್‌ ಗಳ ಉಡುಪಿನಲ್ಲಿ ಸಿನೆಮಾ ಕುರಿತು ವಿವರಣೆಗಳಿರುವ ಕಿರು ಕರಪತ್ರಗಳನ್ನು ನೀಡಿ ಆಹ್ವಾನಿಸುತ್ತಿದ್ದು. ಇಲ್ಲಿಯೂ ಚಿತ್ರಮಂದಿರ ಭರ್ತಿಯಾಯಿತು.

ಅತೀ ಕಡಿಮೆ ಪ್ರೇಕ್ಷಕರಿದ್ದ ಸಿನೆಮಾ

ನಾನು ಗಮನಿಸಿದ ಮಟ್ಟಿಗೆ ಸ್ವಿಜರ್‌ ಲ್ಯಾಂಡ್‌ ದೇಶದ “ಲೆಟ್‌ ಮಿ ಗೋ” (Let me go ) ಸಿನೆಮಾಕ್ಕೆ ಕಡಿಮೆ ಪ್ರೇಕ್ಷಕರು ಇದ್ದರು. ಇಂಥದ್ದೇ ಸಿನೆಮಾ ನೋಡಿ ಉತ್ತಮವಾಗಿವೆ; ಇಂಥಿಂಥ ಸಿನೆಮಾಗಳನ್ನು ನೋಡಲು ತಪ್ಪಿಸಲೇಬೇಡಿ ಎಂಬ ಶಿಫಾರಸಿನ ವಾಟ್ಸಪ್‌ ಮೆಸೇಜ್‌ ಗಳು ಹರಿದಾಡುತ್ತಿದ್ದವು. ಆದರೂ ಕೆಲವರು ತಾವೇ ಸಿನೆಮಾ ಕೈಪಿಡಿಯಲ್ಲಿ ಓದಿದ ಸಾರಾಂಶದ ಮೇಲೆ ಸಿನೆಮಾ ಆಯ್ಕೆ ಮಾಡುತ್ತಿದ್ದರು.

ಈ ಸಂದರ್ಭದಲ್ಲಿ ನನ್ನೊಂದಿಗೆ ಹಿರಿಯ ಪತ್ರಕರ್ತ ರಾಜಾ ಶೈಲೇಶ್‌ ಚಂದ್ರ ಅವರು ಮಾತನಾಡಿದರು. “ಸಾಮಾನ್ಯವಾಗಿ ಸರದಿ ಸಾಲು ಎಲ್ಲಿ ತುಸು ಉದ್ದ ಇರುತ್ತೋ ಅಲ್ಲಿಗೆ ಇನ್ನಷ್ಟು ಮಂದಿ ಸೇರಿಕೊಳ್ಳುತ್ತಾರೆ. ಹೆಚ್ಚು ಸಂದಣಿ ಇದ್ದರೆ ಉತ್ತಮ ಸಿನೆಮಾ ಎಂಬ ಭಾವನೆ ಹೆಚ್ಚಿನವರಿಗೆ ಇದೆ. ಆದರೆ ನಾನು ಇದಾವುದನ್ನು ಗಮನಿಸುವುದಿಲ್ಲ” ಎಂದರು.

ಇಂದು ವಾರದ ದಿನ. ನಾಳೆ, ನಾಳಿದ್ದು ವಾರಾಂತ್ಯ ದಿನಗಳು. ಇವತ್ತು ಬಂದ ಪ್ರೇಕ್ಷಕರಿಗಿಂತಲೂ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಆಗಮಿಸುವ ನಿರೀಕ್ಷೆ ಇದೆ. ಸೋಮವಾರದಿಂದ ಡೈಲಿ ಪಾಸುಗಳು ವಿತರಣೆಯಾಗಲಿವೆ.

Similar Posts

Leave a Reply

Your email address will not be published. Required fields are marked *