ಮಂಡ್ಯದಲ್ಲಿ ಸದ್ಯದಲ್ಲಿಯೇ ನಡೆಯುವ ಸಾಹಿತ್ಯ ಮೇಳದಲ್ಲಿ ಆಹಾರ ತಾರತಮ್ಯದ ಪ್ರಶ್ನೆ ಬೃಹದಾಕಾರವಾಗಿ ಬೆಳೆದಿದೆ. ಇದು ಇದಕ್ಕಿದ್ದ ಹಾಗೆಯೇ ಬೆಳೆಯಿತೇ ? ಖಂಡಿತ ಇಲ್ಲ. ಇದರ ಹಿಂದೆ ಕಾರಣಗಳಿವೆ. ಅವುಗಳಲ್ಲಿ ಆಹಾರದ ಹಕ್ಕು ಕೂಡ ಬಹುಮುಖ್ಯವಾಗಿದೆ. ವಾಕ್ ಸ್ವಾತಂತ್ರ್ಯದ ಹಕ್ಕು ಇದ್ದ ಹಾಗೆ ಆಹಾರದ ಹಕ್ಕು ಕೂಡ ಇದೆ. ಇದು ಉಪಖಂಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಹುಮುಖ್ಯ ಚರ್ಚೆಯ ವಿಷಯವಾಗಿದೆ. ಇದರ ಸುತ್ತಾ ಮನಸ್ಥಿತಿಗಳನ್ನು ಪ್ರಶ್ನಿಸುವ, ಶ್ರೇಷ್ಠತೆಯ ವ್ಯಸನವನ್ನು ಪ್ರಶ್ನಿಸುವ ಮನೋಭಾವವಿದೆ.

ಮೈಸೂರು ಸಂಸ್ಥಾನದ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯಿಂದ ಕನ್ನಡ ಸಾಹಿತ್ಯ ಪರಿಷತ್ ರಚನೆಯಾಗಿದೆ. 107 ವರ್ಷಗಳ ಸುದೀರ್ಘ ಇತಿಹಾಸವಿದೆ. “ಸಾಹಿತ್ಯ ಎಂದರೆ ಬದುಕು” ಎಂಬುದರ ಪರಿಚಯ ಪರಿಷತ್ತಿನ ಚುಕ್ಕಾಣಿ ಹಿಡಿದವರಿಗಿದೆ. ಹೀಗಾಗಿಯೇ ನಾಡಿನ ನೆಲ-ಜಲ ವಿಷಯಗಳನ್ನು ಸಾಹಿತ್ಯ ಮೇಳದಲ್ಲಿ ಚರ್ಚಿಸಲಾಗುತ್ತದೆ.

ಉನ್ನತ ಅಧಿಕಾರಿಯಾಗಿದ್ದವರಿಗೂ ಮೂಲತಃ ಸಾಹಿತಿಯೇ ಆಗಿದ್ದವರಿಗೂ ಮನೋಭಾವಗಳಲ್ಲಿ ವ್ಯತ್ಯಾಸವಿರುತ್ತದೆ. ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಷಿ ಅವರು ಪ್ರಸಾರ ಭಾರತೀಯಲ್ಲಿ ಅಧಿಕಾರಿಯಾಗಿದ್ದವರು. ಬಹುಶಃ ಈ ಕಾರಣವೂ ನಾಡಿನಲ್ಲಿ, ದೇಶದ ಇತರೆಡೆಗಳಲ್ಲಿ ಆಗುತ್ತಿರುವ ವಿದ್ಯಮಾನಗಳ ಸುತ್ತಲೂ ನಡೆಯುತ್ತಿರುವ ಕಾವೇರಿದ ಚರ್ಚೆ- ಪ್ರತಿಭಟನೆಗಳು ಅವರ ಗಮನಕ್ಕೆ ಬಂದಿಲ್ಲ.

ಇಂಥ ವಿಷಯಗಳು ಅವರಿಗೆ ಗೊತ್ತಿದ್ದರೆ “ಸಾಹಿತ್ಯ ಮೇಳದಲ್ಲಿ ಮಾಂಸಹಾರ ನಿಷೇಧ” ಎಂಭ ಫರ್ಮಾನು ಹೊರಡಿಸುತ್ತಿರಲಿಲ್ಲ. ಕೆಳಗೆ ಗುರುತು ಮಾಡಿರುವ ಸೂಚನೆ ಗಮನಿಸಿ ! “ಮಾಂಸಹಾರ, ಮದ್ಯ ಮತ್ತು ತಂಬಾಕು ಮಾರಾಟವನ್ನು ನಿಷೇಧಿಸಲಾಗಿದೆ” ಎಂದಿದೆ. ಯಾರೂ ಸಹ ಮೇಳಗಳಲ್ಲಿ ಮದ್ಯ ಮಾರಾಟ ಮಾಡುವುದಿಲ್ಲ. ಅದಕ್ಕೆ ಅವಕಾಶ ಇರುವುದಿಲ್ಲ ಎಂಬುದು ಸಹಜ ತಿಳಿವಳಿಕೆ. ಮೇಳದ ಒಳಗೂ ಸಿಗರೇಟು, ಬೀಡಿ ಮಾರಾಟಕ್ಕೆ ಅವಕಾಶ ಇರುವುದಿಲ್ಲ,. ಆದರೆ ತಂಬಾಕು ಮೇಳದ ಆವರಣದ ಹೊರಗೆ ಮುಕ್ತವಾಗಿ ದೊರೆಯುತ್ತಿರುತ್ತದೆ. ಆದರೆ ಇಲ್ಲಿ “ಮಾಂಸಹಾರಕ್ಕೆ ನಿಷೇಧವಿದೆ” ಎಂಬುದು ಧಾರ್ಷ್ಟಿಕತನದ, ತನ್ನ ಆಹಾರವೇ ಶ್ರೇಷ್ಠ ಎಂಬುದರ ಸಂಕೇತ.

ಇದನ್ನು ಪ್ರಶ್ನಿಸಿ ಮಂಡ್ಯದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಟನೆಗಳು ನಡೆದವು. ಈ ನಂತರವೇ ಸಾಹಿತ್ಯ ಪರಿಷತ್ತು ತನ್ನ ಮೊದಲಿನ ಫರ್ಮಾನಿನಲ್ಲಿ ಸಣ್ಣ ತಿದ್ದುಪಡಿ ಮಾಡಲಾಗಿದೆ. ಅದನ್ನು ಮುಂದಿನ ಚಿತ್ರದಲ್ಲಿ ಗಮನಿಸಿ !

ಕೃಷಿಮೇಳಗಳಲ್ಲಿ ಸಸ್ಯಹಾರವೂ ಇರುತ್ತದೆ, ಮಾಂಸಹಾರವೂ ಇರುತ್ತದೆ. ಆದರೆ ಯಾವುದೂ ಇಲ್ಲಿ ಉಚಿತವಲ್ಲ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಗ್ರಾಮೀಣ ಸಸ್ಯಹಾರವನ್ನು ಆಹಾರವನ್ನು ರಿಯಾಯತಿ ದರದಲ್ಲಿ ನೀಡಲು ಸಹಕರಿಸುತ್ತದೆ. ಇಲ್ಲಿ ಮಾಂಸಹಾರ ದೊರೆಯುವುದಿಲ್ಲ. ಮೇಳದ ಆವರಣದಲ್ಲಿಯೇ ಕೋಳಿ, ಕುರಿ, ಮೀನುಗಳ ಆಹಾರವನ್ನು ಮಾರಾಟ ಮಾಡುವ ಮಳಿಗೆಗಳಿರುತ್ತವೆ. ಇಲ್ಲಿಯೂ ಜನ ಕಿಕ್ಕಿರಿದಿರುತ್ತಾರೆ. ಇವುಗಳ ಅಕ್ಕಪಕ್ಕದಲ್ಲಿಯೇ ಸಸ್ಯಹಾರವನ್ನು ಸಿದ್ದಪಡಿಸಿ ನೀಡುವ ಮಳಿಗೆಗಳೂ ಇರುತ್ತವೆ. ಇಲ್ಲಿಯೂ ಜನ ಇರುತ್ತಾರೆ. ಯಾರೂ ಇಲ್ಲಿ ಗೊಣಗಿಕೊಳ್ಳುವುದಿಲ್ಲ. ತಮ್ಮ ಪಾಡಿಗೆ ತಮ್ಮ ಇಷ್ಟದ ಆಹಾರ ತಿಂದು ಹೋಗುತ್ತಾರೆ !

ಸಾಹಿತ್ಯ ಮೇಳದಲ್ಲಿ ಆಹಾರವನ್ನು ಉಚಿತವಾಗಿ ನೀಡಲಾಗುತ್ತದೆ. ಇದು ಸರಳ ಊಟವೇನಲ್ಲ ! ಭರ್ಜರಿ ಔತಣ ! ಇವುಗಳ ಬಗ್ಗೆಯೇ ಮಾಧ್ಯಮಗಳಲ್ಲಿ ವಿಶೇಷ ಸುದ್ದಿಗಳಿರುತ್ತವೆ ! ಇಂಥ ಊಟ ನೀಡಲು ರಾಜ್ಯ ಸರ್ಕಾರದ ಅನುದಾನ ಜೊತೆಗೆ ಸರ್ಕಾರಿ ನೌಕರರು, ಅನುದಾನಿತ ಸಂಸ್ಥೆಗಳ ನೌಕರರು ನೀಡಿರುವ ಒಂದು ದಿನದ ವೇತನದ ಕೊಡುಗೆಯೂ ಕಾರಣವಾಗಿರುತ್ತದೆ. ಇಂಥಲ್ಲಿ “ನಾನು ಸಸ್ಯಹಾರ ಮಾತ್ರ ನೀಡುತ್ತೇನೆ, ಮೇಳದಲ್ಲಿ ಬಾಡೂಟ ನಿಷೇಧಿಸುತ್ತೇನೆ” ಎಂಬ ಧಿಮಾಕನ್ನು ಯಾರೂ ತೋರಿಸಬಾರದು. ಇದನ್ನು ಮಹೇಶ್ ಜೋಷಿ ತೋರಿಸಿದ್ದಾರೆ.

ಇವೆಲ್ಲ ಕಾರಣಗಳಿಂದ ಮಂಡ್ಯದ ಯುವಜನತೆ ರೊಚ್ಚಿಗೆದ್ದಿದ್ದಾರೆ. ಸಾಹಿತ್ಯ ಮೇಳದಲ್ಲಿ “ಬಾಡೂಟ ಮಾಡಿಯೇ ಮಾಡುತ್ತೇವೆ” ಎಂದಿದ್ದಾರೆ. ಸ್ಥಳೀಯರ ಭಾವನೆಗಳನ್ನು ಸಾಹಿತ್ಯ ಪರಿಷತ್ತು ಗೌರವಿಸಬೇಕು. ಮಾಂಸಹಾರವನ್ನೂ ನೀಡುವ ವ್ಯವಸ್ಥೆ ಮಾಡಬೇಕು ! ಜೊತೆಗೆ ಮಾಂಸಹಾರ ಸಿದ್ದಪಡಿಸಿ ಮಾರಾಟ ಮಾಡುವ ಆಹಾರ ಮಳಿಗೆಗಳನ್ನೂ ತೆರೆಯುವ ಅವಕಾಶ ನೀಡಬೇಕು !

ಚಿತ್ರಕೃಪೆ: ಅಂತರ್ಜಾಲ

Similar Posts

1 Comment

  1. This is nothing but
    MANUVAADHI RAKSHASA SANSKRUTI SAMAJ…….N. R. GODSE…. philosophy of MANUVAADHIS Vulture -culture…. mentality

Leave a Reply

Your email address will not be published. Required fields are marked *