ಸಿದ್ದಲಿಂಗಯ್ಯ. ಹೀಗೆಂದೊಡನೆ ಯಾವ ಸಿದ್ದಲಿಂಗಯ್ಯ ಎಂಬ ಪ್ರಶ್ನೆ ಎದುರಾಗಬಹುದು. ದಲಿತ ಕವಿ. ಹೀಗೆಂದೊಡನೆ ಮುಗುಳ್ನಗೆ ಹೊದ್ದ ಚಿತ್ರ ಚಿತ್ತಭಿತ್ತಿಯಲ್ಲಿ ಮೂಡುತ್ತದೆ. “ಖಡ್ಗಕ್ಕಿಂತ ಲೇಖನಿ” ಹರಿತ ಇಂಥದ್ದೊಂದು ನಾಣ್ಣುಡಿ ಪತ್ರಿಕಾರಂಗದಲ್ಲಿ ಇದೆ. ಕಾವ್ಯವೂ ದಲಿತ ವಿರೋಧಿ ವ್ಯವಸ್ಥೆ ಎದೆ ನಡುಗಿಸಬಲ್ಲದು ಎಂದು ಇವರೇ ತೋರಿಸಿದರು. ಕಾವ್ಯಕ್ಕೆ ಖಡ್ಗದ ಸ್ವರೂಪ ನೀಡಿದರು.
ಮಂಚನಬೆಲೆ. ಅವಿಭಜಿತ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿ ತಾಲ್ಲೂಕಿನ ಪುಟ್ಟಹಳ್ಳಿ. ಇಲ್ಲಿ ೧೯೫೪ರಲ್ಲಿ ಸಿದ್ದಲಿಂಗಯ್ಯ ಜನನ. ತಂದೆ ದೇವಯ್ಯ-ತಾಯಿ ವೆಂಕಮ್ಮ. ಚುರುಕಿನ ಬಾಲಕ. ಆಗಲೂ ಮೊಗದಲ್ಲಿ ಸದಾ ತುಂಟ ನಗು. ಬೆಳೆದದ್ದು ಬೆಂಗಳೂರಿನಲ್ಲಿ. ಶ್ರೀರಾಮಪುರದಲ್ಲಿ ವಾಸ. ಮಲ್ಲೇಶ್ವರದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ.
ಮುಂದೆ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ. ಕಲಿತ ವಿವಿಯಲ್ಲಿಯೇ ಸಂಶೋಧಕ- ಅಧ್ಯಾಪಕ. ಇಷ್ಟರಲ್ಲಾಗಲೇ ಅವರ ಕಾವ್ಯದ ಶಕ್ತಿ ಬೆಳಕು ಕಾಣಲಾರಂಭಿಸಿತ್ತು. ೧೯೭೦ರ ದಶಕ. ಕರ್ನಾಟಕದಲ್ಲಿ ದಲಿತ ಚಳವಳಿ ಉಗಮ. ಅದು ಹಳ್ಳಿಹಳ್ಳಿಗೂ ತಲುಪಿತು. ಇದರಲ್ಲಿ ಸಿದ್ದಲಿಂಗಯ್ಯ ಅವರ ಕಾವ್ಯದ ಶಕ್ತಿಯೂ ಅಡಕವಾಗಿತ್ತು. ಅದೊಂದು ಸಿಡಿಗುಂಡು. ಸಮುದಾಯ ಹಾಡುತ್ತಿದ್ದರೆ ದಲಿತ ವಿರೋಧಿ ಶಕ್ತಿಗೆ ಎದೆನಡುಕ.
ಇಕ್ರಲಾ ವದೀರ್ಲಾ
ನಿನ್ನೆ ದಿನ ನನ್ನ ಜನ.
ಅಲ್ಲೇ ಕುಂತವ್ರೇ
ನಾಡ ನೋವಿನಿಂದ ಅರಳಿದ ಆಲದ ಮರವೇ
ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ
ಇವೆಲ್ಲವೂ ೧೯೭೦ರ ದಶಕದಿಂದ ೯೦ರ ದಶಕದವರೆಗೂ ಚಳವಳಿಗಳ ಬಂಡಾಯ ಗೀತೆಗಳು. ಸರಕಾರಗಳ ವಿರೋಧದ ಎಲ್ಲ ಬಗೆಯ ಹೋರಾಟಗಳಲ್ಲಿಯೂ ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಹಾಡು ಇದ್ದೇ ಇರುತ್ತಿತ್ತು. ಇದು ಏಕಗೀತೆಯಾಗಿರಲಿಲ್ಲ. ಸಮುದಾಯದ ಎದೆಯಾಳದ ನೋವಿನ ಹಾಡಾಗಿತ್ತು.
ನೊಂದವರ ಧ್ವನಿ. ಇದು ಸಿದ್ದಲಿಂಗಯ್ಯ ಕಾವ್ಯದ ವಿಶೇಷ. ಜನಸಮುದಾಯದಲ್ಲಿ ವಿಶೇಷವಾಗಿ ದಲಿತ ಸಮುದಾಯದಲ್ಲಿ ಅವರು ಬರೆದ ಎಲ್ಲ ಬಗೆಯ ಬರೆಹಗಳು ವಿಚಾರಶಕ್ತಿಯನ್ನು ಮತ್ತಷ್ಟೂ ಉದ್ದೀಪಿಸಿದವು. ಅವರು ನಾಟಕಗಳನ್ನೂ ಬರೆದಿದ್ದಾರೆ. ಮ್ಯಾಕ್ಸಿಂ ಗಾರ್ಕಿಯ ತಾಯಿ ಕೃತಿ ನಾಟಕರೂದಲ್ಲಿಯೂ ಪ್ರದರ್ಶನಗೊಂಡಿದೆ. ರಂಗಪ್ರದರ್ಶನಕ್ಕೆ ಅವರು ಬರೆದ “ಓ ಗೆಳತಿ ವ್ಲಾಸೋವ” ಎಂದಿಗೂ ಉಳಿಯುವ ಗೀತೆಗಳಲ್ಲೊಂದು.
ಸಿದ್ದಲಿಂಗಯ್ಯ ಎಂದಿಗೂ ಅನ್ಯಾಯಗಳ ವಿರೋಧಿಯಾಗಿದ್ದರು. ಅದು ದಲಿತರಿಗೆ ಆದ ಅನ್ಯಾಯವೇ ಆಗಿರಲಿ ಅಥವಾ ನಾಡುನುಡಿಗೆ ಸಂಬಂಧಿಸಿದ ಅನ್ಯಾಯವೇ ಆಗಿರಲಿ ವಿರೋಧಿಸುವುದರಲ್ಲಿ ಮೊದಲಿಗರಾಗಿದ್ದರು. ತಮ್ಮ ಅಧಿಕಾರಗಳನ್ನು ನಾಡುನುಡಿಯ ಏಳಿಗೆಗೆ ಕಟಿಬದ್ಧವಾಗಿ ಬಳಸಿದರು.
ಎರಡು ಬಾರಿ ವಿಧಾನಪರಿಷತ್ ಸದಸ್ಯ. ಮಾತಿಗೆ ನಿಂತರೆ ವಿಚಾರಗಳ ಎಲ್ಲ ಮಗ್ಗುಲುಗಳ ಬಗ್ಗೆಯೂ ವಿಮರ್ಶೆ. ಸರ್ಕಾರದ ಕಣ್ಣು ತೆರೆಯುತ್ತಿತ್ತು. “ಸದನದಲ್ಲಿ ಸಿದ್ದಲಿಂಗಯ್ಯ” ಕೃತಿ ಈ ಬಗ್ಗೆ ಮಾಹಿತಿ ನೀಡುತ್ತದೆ. ಕನ್ನಡ ಅಭಿವೃಧ್ಧಿ ಪ್ರಾಧಿಕಾರದ ಅಧ್ಯಕ್ಷ. ಅಲ್ಲಿಯೂ ಮೌಲಿಕ ಕೆಲಸಗಳು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ. ಈ ಅವಧಿಯಲ್ಲಿ ಅವರು ಮಾಡಿದ ಕೆಲಸಗಳು ಗಡಿನಾಡ ಕನ್ನಡ ಯುವಕರ ಬದುಕಿಗೆ ಬೆಳಕು ನೀಡುವಲ್ಲಿ ಕಾಣಿಕೆ ನೀಡಿವೆ.
ಜ್ವಾಲೆಯಂಥ ಕಾವ್ಯ ನೀಡಿದ ಸಿದ್ದಲಿಂಗಯ್ಯ ಬೆಳದಿಂಗಳಿನಂಥಾ ಕಾವ್ಯವನ್ನೂ ನೀಡಿದ್ದಾರೆ. ಈ ಮೂಲಕ ತಮ್ಮಲ್ಲಿ ಜ್ವಲಿಸುವ ಬೆಂಕಿಯೂ, ಹೃದಯಕ್ಕೆ ತಂಪನ್ನೀಯುವ ಬೆಂದಿಂಗಳಂಥಾ ಶಕ್ತಿಯೂ ಇದೆ ಎನ್ನುವುದನ್ನು ತೋರಿಸಿದ್ದಾರೆ. “ ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ” ಈ ಕವನವಂತೂ ಯುವಕರ ಹೃದಯದ ಹಾಡು. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಬರೆದಿದ್ದಾರೆ. ಎಲ್ಲವೂ ಗಟ್ಟಿಕಾಳು “ ಊರುಕೇರಿ” ಅವರ ಆತ್ಮಕಥನ.
ಸಭೆ-ಸಮಾರಂಭಗಳಲ್ಲಿ ಅವರು ಮಾತನಾಡುತ್ತಿದ್ದರೆ ಕಿಂಚಿತ್ತೂ ಸದ್ದಿರುತ್ತಿರಲಿಲ್ಲ. ಇದಕ್ಕಿದ್ದ ಹಾಗೆ ಸೇರಿದವರಲ್ಲಿ ನಗೆಯ ಹೊನಲು. ಮತ್ತೆ ಸದ್ದಿಲ್ಲ. ಮತ್ತೆ ನಗೆಯ ಹೊನಲು. ಮತ್ತೆ ಸದ್ದಿಲ್ಲ. ಸಮುದ್ರದಲ್ಲಿ ಅಲೆಗಳ ಉಬ್ಬರವಿದ್ದಂತ ಮಾತು. ಹಾಸ್ಯದ ಕಡಲಿನಲ್ಲಿ ಕೇಳುಗರನ್ನು ತೊಯ್ಯಿಸುತ್ತಿದ್ದರು. ಈ ಮೂಲಕವೂ ಒಂದು ಎಚ್ಚರದ ದನಿಯನ್ನು ನೀಡುತ್ತಿದ್ದರು.
ಕಳೆದ ಮೂರು ತಿಂಗಳಿನಿಂದ ಅವರ ಆರೋಗ್ಯ ಏರುಪೇರಾಗಿತ್ತು. ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಬದುಕಿದ್ದಾಗ ಅನ್ಯಾಯದ ವಿರುದ್ಧ ಸೆಣಸಿದ ಅವರು ಸಾವಿನೊಂದಿಗೂ ಸೆಣಸಿದ್ದರು. ದನಿಯೊಂದರ ಸದ್ದಡಗಿತ್ತು. ಆಗ ವಯಸ್ಸು ೬೭.ಕವಿ – ಕಲಾವಿದರಿಗೆ ಸಾವಿಲ್ಲ. ಇದು ಖಂಡಿತ ಸತ್ಯ. ಸಿದ್ದಲಿಂಗಯ್ಯ ತಮ್ಮ ಕಾವ್ಯದ ಮೂಲಕ ಎಂದೆಂದಿಗೂ ಬದುಕಿರುತ್ತಾರೆ. ಅವರು ನಡೆದ ನುಡಿದ ಬರೆದ ಹೋರಾಟದ ಹಾದಿಯ ದೀವಿಟಿಗೆಯನ್ನು ಅವರು ದಾಟಿಸಿದ್ದಾರೆ. ಇವರ “ಊರುಕೇರಿ” ಆಲಿಸಿರಿ ಸಂಗ್ರಹದಲ್ಲಿದೆ. ಉಚಿತವಾಗಿ ಕೇಳಬಹುದು. ಯಾವುದೇ ಕಹಿಗಳನ್ನೂ ಮನಸಿನಲ್ಲಿ ಇಟ್ಟುಕೊಳ್ಳದೇ ತಮ್ಮ ಅನುಭವಗಳನ್ನು ಬರೆದ ಆತ್ಮಕಥನವಿದು.
ಗೂಗಲ್ ಪ್ಲೇ ಸ್ಟೋರ್ / ಐ ಪೋನ್ ಪ್ಲೇ ಸ್ಟೋರ್ ಇಲ್ಲಿಂದ ಆ್ಯಪ್ ಇಳಿಸಿಕೊಂಡು ಮೊಬೈಲಿನಲ್ಲಿ ಸ್ಥಾಪಿಸಿಕೊಳ್ಳಿ.
ಗೂಗಲ್ ಪ್ಲೇ ಸ್ಟೋರ್ ಆಲಿಸಿರಿ ಆ್ಯಪ್ ಲಿಂಕ್
https://play.google.com/store/apps/details…
ಐ ಪೋನ್ ಪ್ಲೇ ಸ್ಟೋರ್ ಆಲಿಸಿರಿ ಆ್ಯಪ್ ಲಿಂಕ್ :