ಸಾಹಿತ್ಯ ಸಮ್ಮೇಳನ ಯಶಸ್ಸು ಮಾನದಂಡ ಏನು ?
ಒಂದು ಸಾಹಿತ್ಯ ಸಮ್ಮೇಳನ ಅಥವಾ ಸಾಹಿತ್ಯ ಮೇಳ ಯಶಸ್ವಿಯಾಯಿತೇ ಎಂಬುದನ್ನು ಕೇವಲ ಅಲ್ಲಿ ಸೇರಿದ ಜನಸಂದಣಿಯನ್ನು ನೋಡಿ ನಿರ್ಧರಿಸಲು ಸಾಧ್ಯವಿಲ್ಲ ಅಲ್ಲವೇ ? ಹಾಗಿದ್ದರೆ ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಸಾಂಸ್ಥಿಕವಾಗಿ ಅದನ್ನು ಅಳೆಯಲು ಇರುವ ಪ್ರಮುಖ ಮಾನದಂಡಗಳೇನು ?
ವೈಚಾರಿಕ ಮತ್ತು ಸಾಹಿತ್ಯಿಕ ಚರ್ಚೆಗಳ ಗುಣಮಟ್ಟ: ಪ್ರಸ್ತುತ ಸಮಾಜ, ಸಾಹಿತ್ಯ ಮತ್ತು ಭಾಷೆಗೆ ಅಗತ್ಯವಿರುವ ಪ್ರಮುಖ ವಿಷಯಗಳ ಕುರಿತು ಗೋಷ್ಠಿಗಳು ನಡೆದವೇ? ಗೋಷ್ಠಿಗಳಲ್ಲಿ ಕೇವಲ ಭಾಷಣಗಳಾಗದೆ, ಹೊಸ ಆಲೋಚನೆಗಳು ಮತ್ತು ಆರೋಗ್ಯಕರ ಚರ್ಚೆಗಳು ಹುಟ್ಟಿಕೊಂಡವೇ? ಹಿರಿಯರೊಂದಿಗೆ ಇಂದಿನ ತಲೆಮಾರಿನ ಯುವ ಬರಹಗಾರರಿಗೂ ವೇದಿಕೆಯಲ್ಲಿ ಸೂಕ್ತ ಪ್ರಾತಿನಿಧ್ಯ ಸಿಕ್ಕಿತೇ? ಎಂಬುದು ಕೂಡ ಪ್ರಧಾನವಾದ ಸಂಗತಿಗಳು
ಪುಸ್ತಕ ಮಾರಾಟ: ಸಾಹಿತ್ಯ ಮೇಳಗಳ ದೊಡ್ಡ ಯಶಸ್ಸು ಅಡಗಿರುವುದು ಪುಸ್ತಕ ಮಾರಾಟದಲ್ಲಿ. ಮೇಳಕ್ಕೆ ಬಂದವರು ಕೇವಲ ಪ್ರದರ್ಶನ ವೀಕ್ಷಿಸದೆ, ಉತ್ಸಾಹದಿಂದ ಪುಸ್ತಕಗಳನ್ನು ಖರೀದಿಸಿದರೆ ಅದು ಮೇಳದ ನಿಜವಾದ ಗೆಲುವು. ಆದರೆ ಯಾವ ಬಗೆಯ ಪುಸ್ತಕಗಳು ಎಂಬುವುದು ಮುಖ್ಯ ! ಮೇಳದಲ್ಲಿ ಚರ್ಚೆಯೇ ಆಗದ ಧಾರ್ಮಿಕ ವಿಷಯಗಳು, ಜೋತಿಷ ಪುಸ್ತಕಗಳು, ವಾಸ್ತು ಸಂಬಂಧಿತ ಪುಸ್ತಕಗಳು ರಿಯಾಯತಿ ಕಾರಣದಿಂದ ಹೆಚ್ಚು ಮಾರಾಟವಾದರೆ ಅದನ್ನು ಮೇಳದ ಗೆಲುವು ಎನ್ನಲು ಸಾಧ್ಯವೇ ?
ಹೊಸ ಕೃತಿಗಳ ಲೋಕಾರ್ಪಣೆ: ವಿವಿಧ ರಂಗಗಳ ಕೃತಿಗಳು ಸಮ್ಮೇಳನದಲ್ಲಿ ಬಿಡುಗಡೆಯಾಗಿ, ಅವುಗಳ ಬಗ್ಗೆ ಚರ್ಚೆಗಳು ಶುರುವಾಗಬೇಕು. ಈ ಚರ್ಚೆಗಳು ಮೇಳಕ್ಕಷ್ಟೆ ಸೀಮಿತವಾಗದೇ ಭಾಗವಹಿಸಿದವರು ಅವುಗಳನ್ನು ರಾಜ್ಯದ ಬೇರೆಬೇರೆ ಕಡೆಯೂ ಶುರು ಮಾಡಬೇಕು. ಇದು ಹೇಗೆ ಎಂದರೆ ಮೇಳದಲ್ಲಿ ಹೊತ್ತಿಸಿದ ಅರಿವಿನ ದೊಂದಿಗಳನ್ನು ಹಿಡಿದು ಎಲ್ಲೆಡೆ ಪ್ರಚಾರ ಮಾಡಬೇಕು.
ಆಸಕ್ತ ಓದುಗರು: ಮೇಳಕ್ಕೆ ಬಂದ ಜನರಲ್ಲಿ ಕೇವಲ ಮನರಂಜನೆಗಾಗಿ ಬಂದವರಿಗಿಂತ ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು ಮತ್ತು ಸಂಶೋಧಕರು ಎಷ್ಟು ಸಂಖ್ಯೆಯಲ್ಲಿದ್ದರು? ವೇದಿಕೆಯ ಮೇಲಿರುವ ಲೇಖಕರು ಮತ್ತು ಓದುಗರ ನಡುವೆ ಮುಕ್ತ ಸಂವಾದಗಳಿಗೆ ಎಷ್ಟು ಅವಕಾಶವಿತ್ತು? ಎಂಬುದು ಮುಖ್ಯ ಅಲ್ಲವೇ?
ನಿರ್ಣಯಗಳು: ಸಮ್ಮೇಳನದ ಕೊನೆಯಲ್ಲಿ ಭಾಷೆ, ಶಿಕ್ಷಣ ಅಥವಾ ಪ್ರಾದೇಶಿಕ ಅಸ್ಮಿತೆಗೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ನಿರ್ಣಯಗಳು (Resolutions) ಯಾವುವು? ಆ ನಿರ್ಣಯಗಳ ಬಗ್ಗೆ ರಾಜ್ಯದ ಬೇರೆಬೇರೆ ಸ್ಥಳಗಳಲ್ಲಿ ಚರ್ಚೆಯಾಗಿ ಜಾರಿಗೆ ತರಬೇಕಾದ ಸಂಸ್ಥೆಗಳು, ಸರ್ಕಾರದ ಮೇಲೆ ಒತ್ತಡ ರೂಪುಗೊಳ್ಳುತ್ತಿದೆಯೇ ಎಂಬ ವಿಚಾರವೂ ಮುಖ್ಯ ಅಲ್ಲವೇ ?
ಸಮ್ಮೇಳನ ಮುಗಿದ ಮೇಲೂ ಅಲ್ಲಿ ಚರ್ಚಿಸಿದ ವಿಷಯಗಳು ಸಾಹಿತ್ಯ ಲೋಕದಲ್ಲಿ ಅಥವಾ ಮಾಧ್ಯಮಗಳಲ್ಲಿ ದೀರ್ಘಕಾಲದವರೆಗೆ ಚರ್ಚೆ ಹುಟ್ಟುಹಾಕಿದರೆ ಅದು ದೊಡ್ಡ ಯಶಸ್ಸು. ಇವೆಲ್ಲದರ ಜೊತೆಗೆ ಎಲ್ಲ ಗೋಷ್ಠಿಗಳು ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಆರಂಭವಾಗಿ ಮುಕ್ತಾಯಗೊಂಡವೇ ಎಂಬುದು ಸಹ ಮುಖ್ಯ ! ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಭೌತಿಕ ವ್ಯವಸ್ಥೆಗಳು ಮತ್ತು ತಂತ್ರಜ್ಞಾನದ ಬಳಕೆ ಉತ್ತಮವಾಗಿದ್ದು, ಅದರೊಂದಿಗೆ ಸಾಹಿತ್ಯದ ಘನತೆ ಹೆಚ್ಚಿಸುವಂತಹ ಗಂಭೀರ ಚರ್ಚೆಗಳು ನಡೆದು ಲೇಖಕರು, ಓದುಗರು ತೃಪ್ತಿಯಿಂದ ಮನೆಗೆ ಮರಳಿದರೆ ಆ ಸಾಹಿತ್ಯ ಸಮ್ಮೇಳನ ಯಶಸ್ವಿ ಎನಿಸಿಕೊಳ್ಳುತ್ತದೆ ಎನ್ನಬಹುದೇ
ಈ ಚರ್ಚೆಯಲ್ಲಿ ನೀವೂ ಭಾಗವಹಿಸಿ. ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸಿನಲ್ಲಿ ತಿಳಿಸಿ. ಈ ಸಂವಾದವನ್ನು ಬೆಳೆಸೋಣ
