ಕನ್ನಡ ಸಾಹಿತ್ಯದಲ್ಲಿ ಲಲಿತ ಪ್ರಬಂಧ ಪ್ರಕಾರದಲ್ಲಿ ಸಾಕಷ್ಟು ಕೃಷಿ ಆಗಿದೆ. ಆದರೆ ಹಳ್ಳಿಗಾಡಿನ ಬಗ್ಗೆ ಬಂದಿರುವ ಬರೆಹಗಳು ಕಡಿಮೆ. ಅಲ್ಲಿ ಕಥೆ, ಕಾದಂಬರಿ, ಪತ್ರಿಕಾ ವರದಿಗೂ ವಸ್ತುವಾಗಬಲ್ಲ ವಿಷಯಗಳಿವೆ. ಲಲಿತ ಪ್ರಬಂಧ ಇವೆಲ್ಲವುಗಳಿಗೂ ಭಿನ್ನ. ಓದುವಾಗ ಸುಲಭವೆನ್ನಿಸಿದರೂ ಬರೆಯುವುದು ಕಷ್ಟ. ನಂದಿನಿ ಹೆದ್ದುರ್ಗ ಅವರು ಬರೆದಿರುವ “ಬ್ರೂನೊ ದಿ ಡಾರ್ಲಿಂಗ್” ಈ ಪ್ರಕಾರಕ್ಕೆ ಸೇರುತ್ತದೆ. ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ.
ಈ ಕೃತಿಯಲ್ಲಿ ಒಟ್ಟು ಹದಿನಾರು ಶೀರ್ಷಿಕೆಗಳಿವೆ. ಉಗುಳು ವೀರರ ಜಗದಲಿ, ಸಣ್ಣ ನಿರ್ವಾಣಯ್ಯನೆಂಬ ನಾನು ನಿರಂಜನನೆಂದು ಹೆಸರು ಬದಲಾ, ಶಾಲು ಮತ್ತು ಸಬಲೆ, ಕುಮಾತಾ ನ ಭವತಿ, ಬ್ರೂನೊ ದಿ ಡಾರ್ಲಿಂಗ್, ಲೆಕ್ಕ ಚುಕ್ತವಾಗದ ಹೊರತು, ಕಾಲಾಯ ತಸ್ಮೈ ನಮಃ, ಕುಂಭಕರ್ಣಾಗಮನ, ಗೌರಿ ಎನ್ನುವ ಚಲುವೆಯೂ ಮತ್ತು ನಾನೂ, ಅಪ್ಪನೆಂಬೊ ಆಕಾಶ, ಎದೆಯ ಹಣತೆ, ದಂತಕಥೆ, ಕೊರೊನಾ ಹೇರ್ಕಟ್, ಸೈನ್ ತೀಟಾ ಪ್ಲಸ್ ಕಾಸ್ ತೀಟಾ, ಏನು ಬಂದಿರಿ ಹದುಳವಿರುವಿರೋ, ಡೊಂಟ್ ಕಮ್ ಬಳಿ ಹುಳುವೇ
ಒಂದು ವಸ್ತು, ವಿಷಯ ತೆಗೆದುಕೊಂಡು ಲಾಲಿತ್ಯಪೂರ್ಣವಾಗಿ ಮಂಡಿಸುತ್ತಾ ಹೋಗುವುದು ಲಲಿತ ಪ್ರಬಂಧದ ಮಾದರಿ. ಕೆಲವೊಮ್ಮೆ ಹೇಳುವಾಗ ಉತ್ಪ್ರೇಕ್ಷನೀಯ ಅಂಶಗಳೂ ಸೇರಿಕೊಳ್ಳುತ್ತವೆ. “ಬ್ರೂನೊ ದಿ ಡಾರ್ಲಿಂಗ್” ಕೃತಿಯ ಬರೆಹಗಳು ಇದಕ್ಕೆ ಭಿನ್ನವಾಗಿವೆ. ಇರುವ ವಿಷಯವನ್ನು ಇದ್ದ ಹಾಗೆಯೇ ಹೇಳುವ ಇಲ್ಲಿನ ಪ್ರಾಮಾಣಿಕ ಧ್ವನಿ ಗಮನಾರ್ಹವಾಗಿ ಕಾಣುತ್ತದೆ.
ಸಾರು, ಇದಕ್ಕೆ ಬಯಲುಸೀಮೆಯ ಹಳ್ಳಿಗಳಲ್ಲಿ “ಹೆಸರು” ಎಂಬ ಇನ್ನೊಂದು ಹಸರಿದೆ !! ಅದು ಚೆನ್ನಾಗಿಲ್ಲದಿದ್ದರೆ ಹೆಸರು ಚೆನ್ನಾಗಿಲ್ಲ ಅಂತಾರೆ. ಹಾಗೆ ಅಲ್ಲಿನ ಹಲವರಿಗೆ ತಮ್ಮನ್ನು ಗುರುತಿಸಲು ಇಟ್ಟ ಹೆಸರು ಚೆನ್ನಾಗಿಲ್ಲ ಎಂದು ಬದುಕಿನ ಒಂದು ಹಂತದಲ್ಲಿ ಅನಿಸಿರುತ್ತದೆ. ವಯೋವೃದ್ದ ಸಣ್ಣ ನಿರ್ವಾಣಯ್ಯ ಅವರಿಗೆ ತಮ್ಮ ಹೆಸರು ಚೆನ್ನಾಗಿಲ್ಲ ಎಂದು ಅನಿಸುತ್ತದೆ. ನಿರಂಜನ ಎಂದು ಬದಲಿಸಿಕೊಳ್ಳಲು ನಿರ್ಧರಿಸುತ್ತಾರೆ. ಲೇಖಕಿಯ ಸಹಾಯ ಕೇಳುತ್ತಾರೆ. ಬದಲಾವಣೆಯೂ ಆಗುತ್ತದೆ. ಆದರೆ ಊರವರು ಕೂಗುವುದು ಮಾತ್ರ ಮೂಲ ಹೆಸರಿನಿಂದಲೇ. ಅವರು ಮೃತರಾದಾಗ ತಿಥಿ ಕಾರ್ಡಿನಲ್ಲಿ ಬ್ರಾಕೆಟಿನಲ್ಲಿ ಹೊಸ ಹೆಸರು ಸೇರಿಸಲು ಸಂಬಂಧಿಕರನ್ನು ಒಪ್ಪಿಸುವುದಕ್ಕೂ ಕಷ್ಟವಾಯಿತು ಎನ್ನುವಾಗ ವಿಷಾದ ಮೂಡುತ್ತದೆ.
ಈ ವಿಷಯ ಹೇಳುತ್ತಲೇ ಲೇಖಕಿ ತಮ್ಮ ಪುಟ್ಟ ಮಗ ತನ್ನ ಹೆಸರು ಬದಲಿಸಬೇಕೆಂದು ಹಠ ಹಿಡಿದಿದ್ದು, ತಮ್ಮ ತಾಯಿಗೆ ಬಾಲಾ ಮಣಿ ಎಂಬ ಹೆಸರು ಬಂದಿದ್ದು ಹೇಗೆ, ಅದರಿಂದಾದ ಮುಜುಗರ, ತಮ್ಮ ಹೆಸರು ವೇದವತಿಯಿಂದ ನಂದಿನಿ ಆಗಿದ್ದು, ಕಾಲೇಜು ಓದುವಾಗ ನಂದಿನಿ ಎಂಬುದು ತುಂಟ ಹುಡುಗರಿಂದ ಛೇಡಿಕೆಗೆ ಒಳಗಾಗಿದ್ದು, “ಗೆಳತಿಯರು ನಂದು, ನಂದು” ಅಂದರೆ ಏನ್ ಪರ್ವಾಗಿಲ್ಲ ಬಿಡಿ, ಆದರೆ ಲಿಂಗಬೇಧವಿಲ್ಲದೇ ನಂದು… ನಂದೂ… ಅಂತ ಅಂದು, ನಿಧಾನವಾಗಿ ನಂದು ಮೀನ್ಸ್ ನನ್ನದು.. ಎನ್ನಿಸಿಕೊಳ್ಳುವುದು ಹೇಗಿರಬೇಡ, ಯೋಚಿಸಿ” ಎಂದು ಓದುಗರನ್ನು ಕೇಳಿದಾಗ ತುಟಿಯಂಚಿನಲ್ಲಿ ನಗು ಮೂಡದಿರಲು ಸಾಧ್ಯವೇ ?
“ಶಾಲು ಮತ್ತು ಸಬಲೆ” ಶೀರ್ಷಿಕೆಯ ಬರೆಹ ತೀವ್ರ ವಿಷಾದ ಮೂಡಿಸುತ್ತದೆ. ಲೇಖಕಿ ತಮ್ಮ ಗೆಳತಿಯ ಅನುಭವ ಹೇಳುವಾಗ “ಅರೇ ಈ ಸಮಾಜ ಬದಲಾಗುವುದು ಯಾವಾಗʼ ಅನ್ನಿಸದೇ ಇರದು ! “ ಕುಮಾತಾ ನ ಭವತಿ” ಶೀರ್ಷಿಕೆಯದು ತುಂಬ ಅಪರೂಪದ ಬರೆಹ. ತಾಯಿ – ಮಗಳ – ಮಕ್ಕಳ ಮುನಿಸು, ಕಣ್ಣೀರು, ಪ್ರೀತಿ, ವಾತ್ಸಲ್ಯ ಮತ್ತು ಸಮಾಧಾನಗಳನ್ನು ಚಿತ್ರಿಸುತ್ತದೆ. ಇಲ್ಲಿ ಲೇಖಕಿ ತನಗೆ ತನ್ನ ತಾಯಿಯ ಬಗ್ಗೆ ಬೆಳೆಯುವ ಕಾಲಘಟ್ಟದಲ್ಲಿ ಇದ್ದ ಧೋರಣೆಯನ್ನು ಬಚ್ಚಿಡುವುದಿಲ್ಲ !!
ಶ್ವಾನಕ್ಕೂ ಒಂದು ವ್ಯಕ್ತಿತ್ವವಿದೆ ಎಂಬುದನ್ನು “ಬ್ರೂನೊ ದಿ ಡಾರ್ಲಿಂಗ್” ಬಹು ಸೊಗಸಾಗಿ, ಚೇತೋಹಾರಿಯಾಗಿ ಚಿತ್ರಿಸುತ್ತದೆ. ವ್ಯಕ್ತಿತ್ವದಲ್ಲಿ ಮತ್ತು ದೈಹಿಕ ಎತ್ತರದಲ್ಲಿ ಪರಿಸರದ ನಾಯಿಗಳಿಗಿಂತ ಬ್ರೂನೊ ಭಿನ್ನ. ಸಲಿಂಗ ಶ್ವಾನದ ಜೊತೆ ಸಂಬಂಧವಿದ್ದ ಇವನು ಹೆಣ್ಣು ಶ್ವಾನವನ್ನು ಸಂಗಾತಿಯಾಗಿ ಪಡೆದ ವಿವರವನ್ನು ಮನೋಜ್ಞವಾಗಿ ವಿವರಿಸುತ್ತಾರೆ. ಅರೇ ನಾಯಿಯೊಂದರ ಸ್ವಭಾವ ಹೀಗೂ ಇರಲು ಸಾಧ್ಯವೇ ಎನಿಸಿಬಿಡುತ್ತದೆ. ಬಹಳವಾಗಿ ಹಚ್ಚಿಕೊಂಡಿದ್ದ ಗೌರಿ ಹಸುವಿನ ಸ್ವಭಾವ, ಅದು ಅಗಲುವಾಗ ಉಂಟಾದ ಬೇಸರ, ದುಃಖ ಓದುಗರಿಗೂ ಮುಟ್ಟುವಷ್ಟು ಬರೆಹ ಸಶಕ್ತವಾಗಿದೆ.
“ದಂತಕಥೆ” ಅಂದರೆ ಲೇಖಕಿ ತಮ್ಮ ಹಲ್ಲುಗಳ ವಿಷಯ ಹೇಳುವಾಗ ವಿಷಾದ ನಗು ಎರಡೂ ಒಟ್ಟೊಟ್ಟಿಗೆ ಮೂಡುತ್ತದೆ. “ಸೈನ್ ತೀಟಾ ಪ್ಲಸ್ ಕಾಸ್ ತೀಟಾ”ದಲ್ಲಿ ಲೇಖಕಿ ತಮ್ಮ ಬಾಲ್ಯ ವಿವಾಹ ಪ್ರಸಂಗದ ಬಗ್ಗೆ ವಿವರಿಸುತ್ತಾರೆ. ಬಾಲ್ಯ ವಿವಾಹ ವಿಷಾದನೀಯ ಸಂಗತಿ. ಆದರೆ ಇದನ್ನೂ ಲೇಖಕಿ ನಿರೂಪಿಸುವ ಧಾಟಿ ನಗು ಮೂಡಿಸುತ್ತದೆ.
ಚೇತೋಹಾರಿಯಾದ ಬರೆಹಗಳು ಇರುವ ಈ ಕೃತಿಯ ಮುಖಪುಟ ಆಕರ್ಷಕವಾಗಿದೆ. ಮುದ್ರಣಕ್ಕೆ ಗುಣಮಟ್ಟದ ಕಾಗದ ಬಳಸಲಾಗಿದೆ. ನನ್ನ ವೈಯಕ್ತಿಕ ಅನಿಸಿಕೆ ಪ್ರಕಾರ ಇದಕ್ಕೆ ಇಟ್ಟಿರುವ ಬೆಲೆ ದುಬಾರಿಯಲ್ಲ.
ಪುಸ್ತಕದ ಹೆಸರು: ಬ್ರುನೋ ದಿ ಡಾರ್ಲಿಂಗ್
ಪುಟ ಸಂಖ್ಯೆ: 120+ 4
ಬೆಲೆ: ರೂ. 100
ಪ್ರಕಾಶಕರು: ತೇಜು ಪಬ್ಲಿಕೇಷನ್ಸ್
ನಂ.1014, 24ನೇ ಮುಖ್ಯರಸ್ತೆ, 16ನೇ ಕ್ರಾಸ್,
ಬಿ.ಎಸ್.ಕೆ. 2ನೇ ಹಂತ, ಬೆಂಗಳೂರು- 560 070
ದೂ: 9900195626
Bruno The Darling the very Title is Catchy and Interesting. The Writer is known for her Good writing already. Essay Collection is a new addition to her credit. The Village Charm and Rational outlook combination is quite different. After reading the comments the Reader automatically buy this book. When Good books are few in the booming book market it’s a sure shot. Congratulations Nandini Heddurga.