ಸಿನಿಮಾ

ದುಬಾರಿ ಆಹಾರ ದರ; ನಲುಗುತ್ತಿರುವ ಫಿಲ್ಮ್‌ ಫೆಸ್ಟಿವಲ್‌ ಪ್ರೇಕ್ಷಕ

ಮಲ್ಟಿಫ್ಲೆಕ್ಸ್ ಗಳಿರುವ ಮಹಾನಗರದ ಮಾಲ್‌ ಗಳಿಗೆ ಕುಟುಂಬ ಸಮೇತ, ಸ್ನೇಹಿತರೊಂದಿಗೆ ಅಪರೂಪಕ್ಕೆ ಹೋದಾಗ ಖರ್ಚು ಮಾಡಲು ಯಾರೂ ಹಿಂಜರಿಯುವುದಿಲ್ಲ. ಆದರೆ ಇದೇ ಮಾತನ್ನು ಒಂದು ವಾರ ನಡೆಯುವ ಫಿಲ್ಮ್‌ ಫೆಸ್ಟಿವಲ್‌ ಗಳಿಗೂ ಅನ್ವಯಿಸಲು ಆಗುವುದಿಲ್ಲ. ಪ್ರತಿದಿನ ಆಹಾರಕ್ಕೆ ದುಬಾರಿ ಬೆಲೆ ತೆರುವುದು ಸಾಮಾನ್ಯ ವರ್ಗಗಳ ಪ್ರೇಕ್ಷಕರಿಗೆ ಅಸಾಧ್ಯದ ಸಂಗತಿ.

ಈ ವಿಷಯಕ್ಕೆ ಸ್ಪಂದಿಸಿದ್ದ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ “ ಫೆಸ್ಟಿವಲ್‌ ಸಂದರ್ಭದಲ್ಲಿ “ಲುಲು ಮಾಲ್‌ ನಲ್ಲಿ ಸಾಮಾನ್ಯ ಪ್ರೇಕ್ಷಕರ ಕೈಗೆಟುಕುವ ಬೆಲೆಯಲ್ಲಿ ಆಹಾರ ದೊರೆಯುವ ವ್ಯವಸ್ಥೆ ಮಾಡಲಾಗುತ್ತದೆ” ಎಂದಿದ್ದರು. ಆದರೆ ಅವರ ಆಶ್ವಾಸನೆ ಬರೀ ವಾಸನೆಯಾಗಿಯೇ ಉಳಿದಿದೆ.

ಈಗಾಗಲೇ ಲುಲು ಮಾಲ್‌ ನಲ್ಲಿ ೧೭ನೇ ಬೆಂಗಳೂರು ಚಲನಚಿತ್ರೋತ್ಸವ ಶುರುವಾಗಿ ಐದು ದಿನಗಳು ಸಂದಿವೆ. ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಿಗೆ ಬರುವ ಆಸಕ್ತರಲ್ಲಿ ಶೇಕಡ ೮೦ಕ್ಕೂ ಹೆಚ್ಚು ಮಂದಿ ಸಿನಿ ಉತ್ಸವ ನಡೆಯುವಷ್ಟು ದಿನವೂ ಬರುತ್ತಾರೆ. ಬೆಳಗ್ಗೆ ೯.೩೦ಕ್ಕೆ ಸಿನಿಮಾ ಪ್ರದರ್ಶನ ಶುರುವಾಗುವುದರಿಂದ ಮನೆಯಿಂದಲೇ ಉಪಹಾರ ಸೇವಿಸಿ ಬರುವುದು ಆಗದ ಮಾತು. ಹೊರ ಊರುಗಳಿಂದ ಬಂದವರು ಬೆಳಗ್ಗಿನ ಉಪಹಾರವನ್ನು ಹೋಟೆಲ್‌ ಗಳಲ್ಲಿ ಸೇವಿಸಿ ಬರಬಹುದು. ಆದರೆ ಮಧ್ಯಾಹ್ನದ ಊಟ, ಬೆಳಗ್ಗೆ, ಸಂಜೆ ಕಾಫಿಗೆ ಹೊರಗೆ ಹೋಗಲಾಗುವುದಿಲ್ಲ. ಕಾಲ್ನಡಿಗೆಯಲ್ಲಿ ಹೋಗಿ ಬರುವಷ್ಟು ಹತ್ತಿರದಲ್ಲಿ ಹೋಟೆಲ್‌ ಗಳಿಲ್ಲ.

ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಸಿನಿಮಾ ವಿಮರ್ಶಕ ಕೆ. ಫಣಿರಾಜ್‌ ಅವರು “ಲುಲು ಮಾಲ್ ನಲ್ಲಿ ಪ್ರದರ್ಶನಗಳನ್ನು ನಡೆಸುವ ಅನಾನೂಕುಲಗಳ ಬಗ್ಗೆ ಸಮಜಾಯಿಷಿ ನೀಡಿದ ಆಯೋಜಕರು, ಎರಡು ಆಶ್ವಾಸನೆ ಕೊಟ್ಟಿದ್ದರು. ಅದೇನೆಂದರೆ ಹತ್ತಿರದ ಮೆಟ್ರೋ ಸ್ಟೇಷನ್ ಗಳಿಂದ ಮುಫ್ತಾದ ಸಂಚಾರ ವ್ಯವಸ್ಥೆ ಮಾಡುತ್ತೇವೆ, ಪ್ರತಿನಿಧಿಗಳ ಜೇಬಿಗೆ ಹಗುರವಾಗುವ ರೀತಿಯಲ್ಲಿ ತಿಂಡಿ ಊಟ ವ್ಯವಸ್ಥೆಯನ್ನು ಮಾಲ್ ನ ಒಳಗೆ ಮಾಡುತ್ತೇವೆ.ಚಿತ್ರೋತ್ಸವ ಶುರುವಾಗಿ ದಿನಗಳೇ ಕಳೆದಿವೆ. ಈ ಎರಡು ಆಶ್ವಾಸನೆಗಳು ಕಾರ್ಯಗತವಾದ ಯಾವ ಸೂಚನೆಗಳೂ ಇಲ್ಲ! ಎರಡು ದಿನ ಕಷ್ಟ ಅನುಭವಿಸುವ ಸಾಮಾನ್ಯ ವೀಕ್ಷಕರು ಮುಂದೆ ಅಡ್ಜೆಷ್ಟ್ ಆಗ್ತಾರೆ..ಆಗ್ದಿರಾ ಬರಲ್ಲ ಬಿಡಿ! ನಾವ್ಯಾಕ್ಕ್ ಕೇರ್ ಮಾಡ್ಬೇಕು ಅನ್ನೋ ಧೋರಣೆ ಇರುವಂತಿದೆ” ಎಂದು ತೀವ್ರವಾಗಿ ಬೇಸರ ವ್ಯಕ್ತಪಡಿಸಿದರು. ಇದೇ ಅಭಿಪ್ರಾಯವನ್ನು ಇನ್ನು ಕೆಲವರು ವ್ಯಕ್ತಪಡಿಸಿದರು.

ಇದನ್ನೂ ಓದಿ: ಬೆಂಗಳೂರು ಸಿನಿಮೋತ್ಸವ; ಮುಜುಗರ ತಂದೊಡ್ಡುತ್ತಿರುವ ಸಮಸ್ಯೆಗಳು

ಸಿನಿಮಾ ಸಂಸ್ಕೃತಿ ಎನ್ನುವುದೇ ವಿಶಿಷ್ಟ. ಅದು ನಮ್ಮ ಜ್ಞಾನದ ಎಲ್ಲೆಗಳನ್ನು ವಿಸ್ತರಿಸುತ್ತದೆ. ಈ ನಿಟ್ಟಿನಲ್ಲಿಯೇ ಕೆಲಸ ಮಾಡುವ ಸಲುವಾಗಿ ಚಲನಚಿತ್ರ ಅಕಾಡೆಮಿ ಸ್ಥಾಪಿತವಾಗಿದೆ. ಆಯೋಜರು “ ನಮ್ಮದು ಫಿಲ್ಮ್‌ ಫೆಸ್ಟಿವಲ್‌ ಮಾಡುವುದಷ್ಟೇ ಜವಾಬ್ದಾರಿ ಎಂದು ಕೈ ತೊಳೆದುಕೊಳ್ಳಲು ಸಾಧ್ಯವಿಲ್ಲ. ಖಾಯಂ ಆಗಿ ಬರುವ ಆಸಕ್ತರ ಆದ್ಯತೆಗಳತ್ತಲೂ ಗಮನ ನೀಡಬೇಕು. ಆಶ್ವಾಸನೆ ನೀಡಿಯೂ ಈಡೇರಿಸದಿದ್ದರೆ ಏನು ಅರ್ಥ ?

Leave a Reply

Your email address will not be published. Required fields are marked *

error: Content is protected !!