ಒಳ್ಳೆಯ ವ್ಯಕ್ತಿಗಳನ್ನು ನೋಡಿದಾಗ “ದೇವರಂಥಾ ಮನುಷ್ಯರು” ಎನ್ನುತ್ತೇವೆ. ಅಂಥಾ ಇಬ್ಬರು ವ್ಯಕ್ತಿಗಳ ಮುಖಾಮುಖಿಯೇ ಕೇಂದ್ರವಾಗಿರುವ ಕಥೆಯುಳ್ಳ ಸಿನೆಮಾ ಮೆಯ್ಯಳಗನ್ ಅರ್ಥಾತ್ ಸತ್ಯವನ್ನು ಸೌಂದರ್ಯವಾಗಿ ಹೊಂದಿರುವ ಮನುಷ್ಯ ಅರ್ಥಾತ್ ಶಿವ. ಸತ್ಯಂ ಶಿವಂ ಸುಂದರಂ ಸಂಕ್ಷಿಪ್ತತತೆಯೇ “ಮೆಯ್ಯಳಗನ್” ! (Meiyazhagan)

ಕಥೆ – ಚಿತ್ರಕಥೆ ರಚಿಸುವುದರೊಂದಿಗೆ ನಿರ್ದೇಶನವನ್ನೂ ಮಾಡಿರುವ ಸಿ. ಪ್ರೇಮ್ ಕುಮಾರ್ (C. Prem Kumar) ಇಲ್ಲಿನ ಪಾತ್ರಗಳ ವ್ಯಕ್ತಿತ್ವಗಳನ್ನು ಚಿತ್ರಿಸಿರುವ ರೀತಿ ಅನನ್ಯ ! ಇಲ್ಲಿ ದೇವಸ್ಥಾನಸದ ಮುಂದೆ ಹೂವು ಕಟ್ಟಿ ಮಾರುವ ಪಾತ್ರವೂ ಸಹ ಪ್ರಾಮುಖ್ಯತೆ ಪಡೆದಿದೆ. ಮನುಷ್ಯ ರೂಪದ ದೇವರುಗಳಿದ್ದಾರೆ ಅಥವಾ ದೇವರಂಥಾ ಮನುಷ್ಯರಿದ್ದಾರೆ ಎಂಬುದನ್ನು ಎರಡು ಪಾತ್ರಗಳ ಮೂಲಕ ನಮ್ಮ ಮುಂದಿಡುತ್ತಾ ಹೋಗುವ ಪರಿ ಗಮನಾರ್ಹ.

ಅವಿಭಕ್ತ ಕುಟುಂಬವೊಂದು ವಿಭಕ್ತ ಕುಟುಂಬಗಳಾದ ನಂತರ ಹುಟ್ಟಿದ ಮನೆ, ಬೆಳೆದ ಊರು ತಂಜಾವೂರು (Thanjavur) ಬಿಟ್ಟು ಮಹಾನಗರದತ್ತ ತೆರಳುವ ಕುಟುಂಬ. ಇದರ ಸದಸ್ಯ ಸುಮಾರು 22 ವರ್ಷಗಳ ನಂತರ ತನ್ನ ಸೋದರ ಸಂಬಂಧಿಯ ಮದುವೆ ಸಮಾರಂಭದಲ್ಲಿ ಭಾಗವಹಿಸಲು ವಾಪಸು ಬರುತ್ತಾನೆ. ಇಲ್ಲಿಂದ ಕಥೆ ಅರಳಿ ಹೂವಾಗುತ್ತದೆ !

ಮದುವೆ ಮನೆಗೆ ಅಡಿಯಿಟ್ಟ ಕ್ಷಣದಿಂದ ಜೊತೆಯಾಗುವ ಆತ ಮುಂದೆ ಅಡಿಗಡಿಗೂ ಜೊತೆಯಾಗುತ್ತಾನೆ. ಆತ ಸಂಬಂಧಿಕರಿಗೆ, ಊರಿನವರಿಗೆಲ್ಲ ಆಪ್ತ. ಅರುಳ್ ಜೊತೆಯೂ ತುಂಬ ಆತ್ಮೀಯ ನಡವಳಿಕೆ. ಆತನಿಗೆ ಅರುಳ್ ಬಗ್ಗೆ ಎಲ್ಲವೂ ಗೊತ್ತು. ಆದರೆ ಆತನ್ಯಾರೆಂದೂ ಈತನಿಗೆ ಗೊತ್ತಿಲ್ಲ.

ಆರತಕ್ಷತೆ ಸಮಾರಂಭದ ನಂತರ ಮಹಾನಗರಕ್ಕೆ ತೆರಳುವ ಧಾವಂತದಲ್ಲಿರುವ ಅರುಳ್ ಗೆ ಬಸ್ ತಪ್ಪುತ್ತದೆ. ಆದರೆ ನಿಜವಾಗಿ ಆತ ಬಸ್ ತಪ್ಪಿಸಿರುತ್ತಾನೆ, ಇಲ್ಲಿ ಊರಿನಿಂದ ಖಾಯಂ ಆಗಿ ತೆರಳುವಾಗ ತಾನು ಬಿಟ್ಟು ಹೋಗಿದ್ದ ಸೈಕಲ್ ಮತ್ತೆ ಅರುಳ್ ಗೆ ಸಿಗುತ್ತದೆ. ಇದನ್ನು ಆತ ಜೋಪಾನ ಮಾಡಿರುತ್ತಾನೆ. ಮಾತನಾಡುತ್ತಾ ಆಡುತ್ತಾ ಇಬ್ಬರಲ್ಲಿಯೂ ಆತ್ಮೀಯತೆ ಬೆಳೆಯುತ್ತದೆ. ಆತನಿಗೆ ಅರುಳ್ ತನ್ನನ್ನು ಹೆಸರಿಟ್ಟು ಕರೆಯುತ್ತಿಲ್ಲ ಎಂದು ಹಳಹಳಿಕೆ. ಆತ ಯಾರೆಂದು ನೆನಪಾಗುತ್ತಿಲ್ಲ ಎಂದು ಅರುಳ್ ಹಳಹಳಿಕೆ

ಇದೇ ಬೇಸರದಲ್ಲಿ ಮಹಾನಗರಕ್ಕೆ ವಾಪಸಾದರೂ ಆತನ ನೆನಪು ಮರೆಯಾಗುತ್ತಿಲ್ಲ. ಇದೇ ಗುಂಗಿನಲ್ಲಿರುವಾಗಲೇ ಆತ ಯಾರೆಂದು ಅರುಳ್ ಗೆ ತಿಳಿಯುತ್ತದೆ. ಆಗ ಆತನ ಮುಂದಿನ ನಡೆ ಏನು ?ಇದನ್ನು ಸಿನೆಮಾದಲ್ಲಿ ನೋಡಿದರೆ ಚೆನ್ನ !

ಸಂಪ್ರದಾಯ – ಸಂಸ್ಕೃತಿಯ ತೊಟ್ಟಿಲು ತಂಜಾವೂರು ಮತ್ತು ಅದರ ಸುತ್ತ ಕಥೆ ನಡೆಯುತ್ತಾ ಹೋಗುತ್ತದೆ. ಇಲ್ಲಿ ಊರು- ದೇವಸ್ಥಾನಗಳು – ಪಾತ್ರಗಳು ಒಂದಕ್ಕೊಂದು ಪೂರಕ ಸಂಬಂಧ ಹೊಂದಿವೆ. ಬಹುಶಃ ಅನಗತ್ಯ ಎನಿಸುವ ಒಂದು ಫ್ರೇಮು ಇಲ್ಲಿಲ್ಲ. ಅಷ್ಟು ಮಟ್ಟಿಗೆ ಆರ್. ಗೋವಿಂದರಾಜ್ ತಮ್ಮ ಕೆಲಸ ಮಾಡಿದ್ದಾರೆ. ಮಹೇಂದಿರನ್ ಜಯರಾಜು ಮಾಡಿರುವ ಛಾಯಾಗ್ರಹಣವೂ ಸೊಗಸು. ಗೋವಿಂದ ವಸಂತ್ ನೀಡಿರುವ ಸಂಗೀತವು ಚಿತ್ರಕಥೆಗೆ ಪೂರಕವಾಗಿದೆ.

ಮುಖ್ಯವಾಗಿ ಪಾತ್ರಗಳಿಗೆ ಹೊಂದುವಂಥ ಕಲಾವಿರುಗಳ ಆಯ್ಕೆಯಲ್ಲಿ ನಿರ್ದೇಶಕ ಪ್ರೇಮ್ ಕುಮಾರ್ ಎಚ್ಚರ ವಹಿಸಿದ್ದಾರೆ. ಅರುಳ್ – ಅರವಿಂದ ಸ್ವಾಮಿ, ಆತ (ಆತನ ಹೆಸರು ನಂತರ ಗೊತ್ತಾಗುತ್ತದೆ) – ಕಾರ್ತಿ ತಮ್ಮ ಪಾತ್ರಗಳಿಗೆ ಪರಕಾಯ ಪ್ರವೇಶ ಮಾಡಿದ್ದಾರೆ ಎಂದರೆ ಉತ್ಪ್ರೇಕ್ಷೆಯಲ್ಲ !

ಸಾಮಾನ್ಯವಾಗಿ ತಮಿಳು ಸಿನೆಮಾಗಳ ಕಥೆ ಚಲಿಸುವ ವೇಗದಲ್ಲಿ ಮೆಯ್ಯಳಗನ್ ಕಥೆ ಚಲಿಸುವುದಿಲ್ಲ. ಆದರೆ ಇದೇ ಈ ಸಿನೆಮಾದ ಸೊಬಗು! ಒಟಿಟಿ ಫ್ಲಾಟ್ ಫಾರಂ “ನೆಟ್ ಫ್ಲಿಕ್ಸ್” ನಲ್ಲಿ ಸಿನೆಮಾ ಇದೆ. ಆಸಕ್ತರು ಖಂಡಿತ ನೋಡಿ. ಒಂದು ಉತ್ತಮ ಸಿನೆಮಾ ನೋಡಿದ ಖುಷಿ ಉಂಟಾಗುತ್ತದೆ

Similar Posts

Leave a Reply

Your email address will not be published. Required fields are marked *