ಮೂರು ದಶಕದ ಹಿಂದೆ ಸ್ವಾತಂತ್ರ್ಯ ಜನ ಸಾಮಾನ್ಯರ ಪಾಲಿಗೆ ಬಂದಿಲ್ಲ ಎಂದು ಸೂಚಿಸುವ ರಚನೆಯನ್ನು ಬಹುತೇಕ ಚಳವಳಿಗಳ ಸಂದರ್ಭದಲ್ಲಿ ಹಾಡಲಾಗುತ್ತಿತ್ತು. “ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ ? ಎನ್ನುವುದು ಅದರ ಮೊದಲ ಸಾಲು ! ಇದನ್ನೇ ತುಸು ಬದಲಿಸಿ “ಯಾರಿಗೆ ಬಂತು ಎಲ್ಲಿಗೆ ಬಂತು ಪಂಚಾಯತ್ ಅಧಿಕಾರ” ಎಂದು ಹೇಳುವ ದುಸ್ಥಿತಿ ಇಂದಿಗೂ ಇದೆ ! ಅದನ್ನು 2024ರ ಸೆಪ್ಟೆಂಬರ್ ನಲ್ಲಿ ತೆರೆಕಂಡಿರುವ ತಮಿಳು ಸಿನೆಮಾ “ ನಂದನ್” ಬಹು ಸಂಯಮದಿಂದ ಹೇಳುತ್ತದೆ.

ಸಿನೆಮಾದಲ್ಲಿ ಸಂಯಮವೇ ಎಂಬ ಪ್ರಶ್ನೆ ನಿಮ್ಮಲ್ಲಿ ಹೇಳಬಹುದು. “ನಂದನ್” ಸಿನೆಮಾದಲ್ಲಿ ಹೊಡಿ-ಬಡಿ-ಕೊಚ್ಚು-ಕೊಲ್ಲು – ವಿಜೃಂಭಿಸು ಇವ್ಯಾವುದೂ ಇಲ್ಲ ! ಕಥೆ – ಚಿತ್ರಕಥೆ ಬರೆದು ನಿರ್ಮಾಣದ ಜೊತೆಗೆ ನಿರ್ದೇಶನವನ್ನೂ ಮಾಡಿರುವ ಎರಾ ಸರವಣನ್ ವ್ಯವಸ್ಥೆಯ ಅವ್ಯವಸ್ಥೆಯನ್ನೂ ಪರಿಣಾಮಕಾರಿಯಾಗಿ ನಿರೂಪಿಸಿದ್ದಾರೆ. ಈ ಕಾರಣಕ್ಕಾಗಿ “ನಂದನ್” ಸಿನೆಮಾ ಮುಖ್ಯವಾಗುತ್ತದೆ.

ಗ್ರಾಮ ಪಂಚಾಯತ್ ಆಶಯವೇ ಗ್ರಾಮ ಸ್ವರಾಜ್ಯ ! ಪ್ರತಿಯೊಂದು ಸಮುದಾಯಗಳಿಗೂ ಅಧಿಕಾರ ಹಂಚಿಕೆಯಾಗಬೇಕು ಎನ್ನುವ ಕಾರಣದಿಂದ ಮೀಸಲಾತಿಯೂ ಇದೆ. ಇದು ವಾರ್ಡ್ ಹಂತದಿಂದ ಅಧ್ಯಕ್ಷ ಸ್ಥಾನದವರೆಗೂ ಇದೆ. ಪಂಚಾಯತ್ ಅಧ್ಯಕ್ಷ ಸ್ಥಾನವೂ ಜನರಲ್, ಒಬಿಸಿ, ಎಸ್.ಸಿ., ಎಸ್.ಟಿ., ಹೀಗೆ ನಿಗದಿಯಾಗಿರುತ್ತದೆ.

ಅಧಿಕಾರ ಹೀಗೆ ಹಂಚಿಕೆಯಾಗಿದ್ದರೂ ದುರ್ಬಲ ಜಾತಿಗಳವರು ಅಧ್ಯಕ್ಷರಾದರೆ ಬಹುತೇಕ ಸಂದರ್ಭಗಳಲ್ಲಿ ಪರೋಕ್ಷವಾಗಿ ಅಧಿಕಾರ ಚಲಾಯಿಸುವವರು ಆಯಾ ಪ್ರದೇಶದ ಫ್ಯೂಢಲ್ ಜಾತಿಗಳವರೇ ಆಗಿರುತ್ತಾರೆ. ಸದಾ ಅಧಿಕಾರವನ್ನು ತಮ್ಮ ಮುಷ್ಟಿಯಲ್ಲಿಟ್ಟುಕೊಳ್ಳಲು ಇವರು ಹೆಣೆಯುವ ತಂತ್ರಗಳನ್ನು “ನಂದನ್” ಹೇಳುತ್ತದೆ !

ದಲಿತರಿಗೆ ಪಂಚಾಯತ್ ಅಧ್ಯಕ್ಷಗಿರಿ ಬೇಕು ಎಂದು ಸೊಲ್ಲೆತ್ತುವ ಕುಪಿತ ಯುವಕನನ್ನು ಅಪಘಾತದ ನೆಪದಲ್ಲಿ ಕೊಲೆ ಮಾಡುವುದರೊಂದಿಗೆ ಕಥೆ ತೆರೆದುಕೊಳ್ಳುತ್ತದೆ. ಈ ಕೊಲೆಯ ವಿರುದ್ಧ ಧ್ವನಿಯೆತ್ತುವವರೂ ಅಲ್ಲಿಲ್ಲ. ಊರಿನ ಪಂಚಾಯತ್ ಅಧ್ಯಕ್ಷಗಿರಿ ದಲಿತರಿಗೆ ಮೀಸಲು ಎಂದೊಡನೆ ಅಲ್ಲಿಯ ತನಕ ಅಧಿಕಾರ ನಡೆಸಿದ್ದ ಕೊಪ್ಪುಲಿಂಗಮ್ ತಂತ್ರ ಬದಲಾಗುತ್ತದೆ ! ಈತನ ಮನೆಯಲ್ಲಿ ಎರಡೂ ಕಿಡ್ನಿಗಳು ವಿಫಲವಾಗಿ ಹಾಸಿಗೆ ಹಿಡಿದ ಈತನ ಅಪ್ಪನ ಹೇಲು, ಉಚ್ಚೆ ಬಳಿಯುವ ಕೂಳಪ್ಪನ್ ಅನ್ನು ಅಧ್ಯಕ್ಷಗಿರಿಗೆ ತರುತ್ತಾನೆ.

ಇಲ್ಲಿ ಗಮನಾರ್ಹ ಸಂಗತಿಯೆಂದರೆ ಮಾಜಿ ಅಧ್ಯಕ್ಷನ ತಂದೆ ರೋಗದಿಂದ ಹಾಸಿಗೆ ಹಿಡಿದಿದ್ದರೂ ದಲಿತರಿಗೆ ಪಂಚಾಯತಿ ಅಧ್ಯಕ್ಷಗಿರಿ ಮೀಸಲು ಎಂದು ಕೇಳಿದೊಡನೆ ಕೆರಳಿ ಕೆಂಡವಾಗುವುದು ‘ ನನ್ನಪ್ಪ, ನಾನು, ನನ್ನ ನಂತರ ನೀನು ಕುಳಿತ ಕುರ್ಚಿಗೆ ದಲಿತ ಬಂದು ಕೂರುವುದೆಂದರೆ ಏನರ್ಥ ? ನಾನು ಸತ್ತ ನಂತರ ನನ್ನಪ್ಪನ ಬಳಿ ಹೋಗಿ ಏನು ಹೇಳಲಿ” ಎನ್ನುವುದು ! ಈ ಪಾತ್ರವೂ ಕೂಡ ಸಿನೆಮಾದಲ್ಲಿ ಒಂದು ರೂಪಕವಾಗಿ ಬಂದಿದೆ. ಜಾತಿ ಎನ್ನುವುದು ಹೇಗೆ ವಿಜೃಂಭಿಸುತ್ತಿದೆ ಎನ್ನುವುದನ್ನು ಇದರ ಮೂಲಕ ಸಶಕ್ತವಾಗಿ ಹೇಳಲಾಗುತ್ತದೆ.

ಪಂಚಾಯತ್ ಅಧ್ಯಕ್ಷನ ಅಜ್ಜಿಯೇ ಸತ್ತರೂ ಗೌರವಯುತವಾಗಿ ಸಂಸ್ಕಾರ ಮಾಡಲು ಸ್ಮಶಾನವಿಲ್ಲ. ದಲಿತರು, ಹಿಂದುಳಿದವರ ಸ್ಮಶಾನಕ್ಕೆ ಮೀಸಲಾದ ಜಮೀನನ್ನು ಕೊಪ್ಪುಲಿಂಗಮ್ ಕಬಳಿಸಿರುತ್ತಾನೆ. ಮಸಣಕ್ಕೆ ಜಾಗ ಬೇಕೆಂದು ಕೂಳಪ್ಪನ್ ಅರ್ಜಿ ಹಾಕಿದೊಡನೆ ಆತನಿಂದ ಅಧ್ಯಕ್ಷಗಿರಿಗೆ ರಾಜಿನಾಮೆ ಕೊಡಿಸಲಾಗುತ್ತದೆ. ಆತನನ್ನು ನಗ್ನಗೊಳಿಸಿ ಹಲ್ಲೆ ಮಾಡಲಾಗುತ್ತದೆ.

ಇಂಥ ಪ‍್ಯೂಢಲಿಸ್ಟ್ ಗಳ ವಿರುದ್ಧ ರೊಚ್ಚಿಗೆದ್ದ ದಲಿತರು ಪ್ರತಿತಂತ್ರ ಹೆಣೆಯುತ್ತಾರೆ. ಅದನ್ನು ಸಿನೆಮಾದಲ್ಲಿ ನೋಡುವುದು ಸೂಕ್ತ.  ಅನ್ಯಾಯ, ದಬ್ಬಾಳಿಕೆಗಳ ವಿರುದ್ಧ ಫಿನಿಕ್ಸ್ ನಂತೆ ಮೇಲೆದ್ದು ಹೋರಾಡುವ ಶಕ್ತಿ ದಲಿತರಿಗಿದೆ ಎಂಬುದನ್ನು ಒಂದು ಕಾಡುಗಿಡದ ರೂಪಕದ ಮೂಲಕ ತೋರಿಸಲಾಗಿದೆ.

ಕೂಳಪ್ಪನ್ – ಖ್ಯಾತ ನಟ ಶಿವಕುಮಾರ್, ಈತನ ಪತ್ನಿ ಸೆಲ್ವಿ – ಶೃತಿ ಪೆರಿಯಸ್ವಾಮಿ, ಕೊಪ್ಪುಲಿಂಗಮ್ – ಬಾಲಾಜಿ ಶಕ್ತಿವೇಲು, ಪ್ರಾಮಾಣಿಕ ಬಿ.ಡಿ.ಒ.- ಸಮುಥಿರಕಣಿ ಸೇರಿದಂತೆ ಎಲ್ಲ ಪಾತ್ರಧಾರಿಗಳು ತಮ್ಮ ಪಾತ್ರದ ಮಹತ್ವ ಅರಿತು ಅಭಿನಯಿಸಿದ್ದಾರೆ. ಅಸಹಾಯಕ ದಲಿತ, ಪಂಚಾಯತ್ ಅಧ್ಯಕ್ಷನಾಗಿ ಶಿವಕುಮಾರ್ ನಟನೆ ಮನಮುಟ್ಟುತ್ತದೆ. ಈತನ ಅಸಹಾಯಕತೆಯೇ ನೋಡುಗರಲ್ಲಿ ಕೆಚ್ಚು ತುಂಬುವಂಥ ರೀತಿ ನಿರ್ದೇಶಕ ಪಾತ್ರ ನಿರೂಪಣೆ ಮಾಡಿದ್ದಾರೆ.

ಆರ್.ವಿ. ಸರನ್ ಮಾಡಿರುವ ಛಾಯಾಗ್ರಹಣ, ನೆಲ್ಸನ್ ಅಂಟೋಣಿ ಅವರ ಸಂಕಲನ, ಗಿಬ್ರಾನ್ ವೈಬೋಧ ಒದಗಿಸಿರುವ ಸಂಗೀತವು ಚಿತ್ರಕಥೆಗೆ ಪೂರಕವಾಗಿದೆ. ಈ ಸಿನೆಮಾ ಒಟಿಟಿ ಫ್ಲಾಟ್ ಫಾರಂ ನೆಟ್ ಫ್ಲಿಕ್ಸ್ ನಲ್ಲಿದೆ.

Similar Posts

1 Comment

  1. ಸರ್ ಕಥೆಯಲ್ಲಿ ಮಾತ್ರವಲ್ಲ ದಿನ ನಿತ್ಯದ ಕರ್ನಾಟಕದ ಪಂಚಾಯತ್ ರಾಜ್ ವ್ಯವಸ್ಥೆಯ ಭಾಗವಾಗಿ ನೋಡುವುದಾದರೆ ಹಾಸನ, ಮಂಡ್ಯ, ರಾಮನಗರ, ಬೆಳಗಾವಿ, ಬೀದರ್, ಮೈಸೂರು ಕೆಲವು ಭಾಗ, ಕೊಪ್ಪಳ, ಇನ್ನೂ ಅನೇಕ ಕಡೆ ಇಂತಹ ಘಟನೆಗಳನ್ನು ನಾನು‌ ಕಣ್ಣಾರೆ ಕಂಡಿದ್ದೇನೆ ಮತ್ತು ದಲಿತರ ಮೇಲೆ ಆಗುವ ಅನ್ಯಾಯವನ್ನು ಯಾವುದೇ ಧರ್ಮದ ದೇವರೂ ಕೂಡ ಬಂದು ತಡೆಯಲಾರ, ತಡೆಯುವ ಶಕ್ತಿ ಇರುವುದು ಮಾತ್ರ ಶಿಕ್ಷಣ ಪಡೆದ ಅದೇ ಸಮುದಾಯದ ಒಗ್ಗಟ್ಟಿನ ಯುವಕರಿಂದ ಮಾತ್ರ ಸಾಧ್ಯ.

    ಆದರೆ ದುರದೃಷ್ಟವಶಾತ್ ದಲಿತರು ಒಗ್ಗಟ್ಟಾಗಲಾರರು ಅವರೊಳಗೆ ನೂರೆಂಟು ನ್ಯೂನೆತಗಳು ತುಂಬಿ ತುಳುಕುತ್ತಿವೆ ಅವರೊಳಗೆ ಅಸೂಯೆ, ಹೊಟ್ಟೆಕಿಚ್ಚು ಅವರನ್ನೇ ಸುಟ್ಟು ಇಂದು ಭಾರತದ 31 ರಾಜ್ಯಗಳಲ್ಲೂ ಅಪಾಯದ ಹಂತ ತಲುಪಿದೆ.

    ಹೋರಾಡಿ ಗೆದ್ದರೆ ಮಾತ್ರ ಅವರ ಜೀವನ, ಅವರು ಶಿಕ್ಷಣ, ಸಂಘಟನೆ, ಹೋರಾಟ ಮಂತ್ರವನ್ನೂ ಇನ್ನೂ ತಲುಪಿಲ್ಲ. ಆದರೂ ಭಾರತದ ಸಂವಿಧಾನದ 73 ನೇ ತಿದ್ದುಪಡಿ ತಂದದ್ದು ಭಾರತದ ರಾಜಕೀಯದ ತಳಹದಿಯಲ್ಲಿ ದಲಿತರು ಅಧಿಕಾರವನ್ನು ಹೊಂದಲಿ ಅಚ್ಚುಕಟ್ಟಾಗಿ ನಡೆಸಿಕೊಡಲಿ ಎಂದು ಆದರೆ, ದುರದೃಷ್ಟವಶಾತ್ ಅವರಿಗೆ ಅಧಿಕಾರ ಬಿಟ್ಟುಕೊಡಲು ಮೇಲೆಂದು ಕೊಂಡಿರುವ ಜಾತಿಗಳ ದುರಹಂಕಾರದ ಫ್ಯೂಡಲ್ ಮನಸ್ಥಿತಿಯನ್ನು ಹೊಂದಿರುವ ಜನರು ಎಂದಿಗೂ ಬಿಡಲಾರರು ಅವರನ್ನು ಕಾನೂನಿನ ಕುಣಿಕೆಯಲ್ಲಿ ಕಟ್ಟಿಹಾಕಲು ಭಾರತದ ನ್ಯಾಯಾಂಗ ವ್ಯವಸ್ಥೆ ನಿಮೋನಿಯಾದಿಂದ ಬಳಲುತ್ತಿದೆ.

Leave a Reply

Your email address will not be published. Required fields are marked *