ಬೆಂಗಳೂರು ಅಂತರರಾಷ್ಟ್ರೀಯ ೧೬ನೇ ಚಲನಚಿತ್ರೋತ್ಸವಕ್ಕೆ ಕ್ಷಣ ಗಣನೆ ಆರಂಭವಾಗಿದೆ. ಪ್ರತಿವರ್ಷವೂ ನಿರ್ದಿಷ್ಟ ವಿಷಯ ಆಧರಿಸಿ ಸಿನೆಮೋತ್ಸವ ನಡೆಯುತ್ತಿದೆ. ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಯದಂತೆ “ಸರ್ವ ಜನಾಂಗದ ಶಾಂತಿಯ ತೋಟ” ಥೀಮ್ ಅನ್ನು ಆಶಯವಾಗಿ ಇರಿಸಿಕೊಳ್ಳಲಾಗಿದೆ. ಇದರ ವಿರುದ್ಧವಾಗಿ ಚಿತ್ರ ಆಯ್ಕೆ ನಡೆದಿದೆ ಎಂದು ಸಿನೆಮಾಸಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂತರಾಷ್ಟ್ರೀಯ ಸಿನೆಮಾಗಳ ಆಯ್ಕೆಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಚುಕ್ಕಾಣಿ ಹಿಡಿದವರು ಮತ್ತು ಕಲಾತ್ಮಕ ನಿರ್ದೇಶಕರು ಎಚ್ಚರ ವಹಿಸಿಲ್ಲ. ಇದರಿಂದಲೇ “ಸರ್ವ ಜನಾಂಗದ ಶಾಂತಿಯ ತೋಟ” ಆಶಯಕ್ಕೆ ಸಂಪೂರ್ಣ ವಿರುದ್ಧವಾದ ಸಿನೆಮಾ ಆಯ್ಕೆಯಾಗಲು ಕಾರಣವಾಗಿದೆ ಎನ್ನುವುದು ಸಿನೆಮಾಸಕ್ತರ ಮಾತಾಗಿದೆ !
“ಏಶಿಯಾ ಸ್ಪರ್ಧ ವಿಭಾಗಕ್ಕೆ ಆಯ್ಕೆಯಾದ ಸಿನೆಮಾಗಳ ಪಟ್ಟಿಯಲ್ಲಿ “ರೀಡಿಂಗ್ ಲೋಲಿತ ಇನ್ ಟೆಹ್ರಾನ್” (Reading Lolita in Tehran) ಎಂಬ ಸಿನೆಮಾ ಆಯ್ಕೆ ಆಗಿರುವುದನ್ನು ಕಂಡು ಬಹು ಆತಂಕಿತರಾಗಿದ್ದೇವೆ. ಪ್ರಸ್ತುತ ಚಿತ್ರೋತ್ಸವಕ್ಕೆ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಸೂಕ್ತ ಶೀರ್ಷಿಕೆಯನ್ನು ಇಟ್ಟುಕೊಂಡಿರುವಾಗ ಇಂಥ ಪ್ರಮಾದವು ಏಕಾಗಿದೆ” ಎಂಬುದು ಅವರ ಪ್ರಶ್ನೆಯಾಗಿದೆ.
“ಇಸ್ರೇಲ್ ಪ್ರಭುತ್ವವು ಫಿಲಿಸ್ತೀನಿನ ಗಾಝ ಪಟ್ಟಿಯಲ್ಲಿ ನೀಚ ನರಮೇಧ ನಡೆಸುತ್ತಿರುವ ಘಾತುಕ ಅಪರಾಧಿ ಪ್ರಭುತ್ವವಾಗಿದೆ. ಅದರಿಂದ ಪ್ರಾಯೋಜಿತವಾಗಿ, ಅದರ ಘಾತುಕ ಯೋಜನೆಗಳ ಭಾಗವಾಗಿ ಕಟ್ಟಲಾಗಿರುವ ‘Reading Lolita in Tehran’ ಒಂದು ಇಸ್ಲಾಮೋಫೋಬಿ(islamophobia)ಯ ಬಿತ್ತುವ ಇರಾದೆಯ ಪ್ರಚಾರ ಸಿನೆಮಾವಾಗಿದೆ” ಎಂದು ವಿಚಾರವಾದಿ ಕೆ. ಫಣಿರಾಜ್ ತೀವ್ರ ಆತಂಕ ವ್ಯಕ್ತಪಡಿಸಿದರು.
“ಇಂಥ ಸಿನೆಮಾವನ್ನು ಸ್ಪರ್ಧೆ ಹಾಗು ಪ್ರದರ್ಶನಕ್ಕೆ ಆಯ್ದು, ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವವು ಈ ಆಕೃತ್ಯವನ್ನು ಬೆಂಬಲಿಸುವುದನ್ನು ನಾವು ಖಂಡಿಸುತ್ತೇವೆ. ಸಿನೆಮಾ ಪ್ರೇಮಿಗಳು, ಸಿನಿಮೋತ್ಸವದಲ್ಲಿ ಭಾಗವಹಿಸುವ ಪ್ರತಿನಿಧಿಗಳು ಆಗಿರುವಂತೆಯೇ ನಾವು ಶಾಂತಿಯುತ ಜಗತ್ತಿಗೆ ಆಶಿಸುವ, ಪ್ರಭುತ್ವ ಪಾತಕಿಗಳನ್ನು ನೇರವಾಗಿ ಪ್ರಶ್ನಿಸಿ ಪ್ರತಿಭಟಿಸುವ ನಾಗರಿಕರು ಆಗಿದ್ದೇವೆ. ನಾವು ಇದನ್ನು ಸಹಿಸುವುದಿಲ್ಲ. ಕೂಡಲೇ, ಪಟ್ಟಿಯಿಂದ ಪ್ರಸ್ತುತ ಸಿನೆಮಾವನ್ನು ತೆಗೆದು ಹಾಕಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು “ಮನುಜಮತ ಸಿನೆಯಾನ” ಬಳಗದವರು ಹೇಳಿದ್ದಾರೆ.
ಬಳಗದ ಕೆ. ಫಣಿರಾಜ್, ಬಾಲು ವಿ.ಎಲ್., ಚಂದ್ರಪ್ರಭಾ ಕಠಾರಿ, ಸಿದ್ದಾರ್ಥ ಸಾಸ್ನೂರು,ಮಹದೇವ್ ಹಡಪದ್, ಜೋಗಿನ ರಾಧಾಕೃಷ್ಣ, ಶಶಿಕಾಂತ್ ಕೌಡೂರು ಸೇರಿದಂತೆ ಅನೇಕರು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸಾಧು ಕೋಕಿಲ, ಫಿಲಂ ಫೆಸ್ಟಿವಲ್ ಕಲಾತ್ಮಕ ನಿರ್ದೇಶಕ ಎನ್. ವಿದ್ಯಾಶಂಕರ್ ಅವರಿಗೆ ಇಮೈಲ್ ಕಳಿಸಿದ್ದಾರೆ.
ಈ ಸಂಬಂಧ ಫಿಲಂ ಫೆಸ್ಟಿವಲ್ ಆಶಯ ವಿಷಯದ ಪರವಾಗಿರುವವರ ಸಹಿ ಸಂಗ್ರಹಿಸಿ ಲಿಖಿತ ಪತ್ರವನ್ನೂ ಕಳಿಸಲು ತಯಾರಿ ನಡೆಸಿದ್ದಾರೆ. ಮಾರ್ಚ್ ೧ ರಿಂದ ಬೆಂಗಳೂರು ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ಆರಂಭವಾಗಲಿದೆ. ಸಿನೆಮಾಸಕ್ತರು ಮಾಡಿರುವ ಒತ್ತಾಯಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಸ್ಪಂದಿಸುವುದೇ ? ಕಾದು ನೋಡಬೇಕಾಗಿದೆ !
ಮುಖ್ಯವಾಗಿ ಈ ಬಾರಿ ಸರ್ವ ಜನಾಂಗದ ಶಾಂತಿಯ ತೋಟ” ಎಂಬುದು ಫಿಲಂ ಫೆಸ್ಟಿವಲ್ ಆಶಯವಾಗಿರುವಾಗ ಸಿನೆಮಾಗಳ ಆಯ್ಕೆಯಲ್ಲಿ ಆಯೋಜಕರು ಎಚ್ಚರ ವಹಿಸಬೇಕಿತ್ತು. ಎಲ್ಲಿ ಅವರು ಎಡವಿದ್ದಾರೆ ಅಥವಾ ಈ ಸಿನೆಮಾ ಬಗ್ಗೆ ಅವರು ಯಾವ ಅಭಿಪ್ರಾಯ ಹೊಂದಿದ್ದಾರೆ ಎಂಬುದು ಕುತೂಹಲದ ವಿಷಯವಾಗಿದೆ.
“ರೀಡಿಂಗ್ ಲೋಲಿತ ಇನ್ ಟೆಹ್ರಾನ್” ಕೃತಿಯನ್ನು ಇರಾನ್ ಸಂಜಾತೆ ಅಜರ್ ನಫಿಸಿ ರಚಿಸಿದ್ದಾರೆ. ಇದು ಅವರ ಸ್ವಂತ ಅನುಭವದ ಮೇಲೆ ರಚಿಸಿದ ಕೃತಿಯೆನ್ನಲಾಗಿದೆ. ಕೃತಿಕಾರರು ೧೯೯೭ ರಿಂದ ಅಮೆರಿಕಾದ ವಾಸಿಯಾಗಿದ್ದರು. ೨೦೦೮ರಲ್ಲಿ ಅವರಿಗೆ ಅಮೆರಿಕಾದ ನಾಗರಿಕತ್ವ ಲಭಿಸಿದೆ.
ಇಸ್ಲಾಮೋಫೋಬಿಯಾ ಎಂದರೆ ಇಸ್ಲಾಂ ಧರ್ಮ ಅಥವಾ ಸಾಮಾನ್ಯವಾಗಿ ಮುಸ್ಲಿಮರ ವಿರುದ್ಧ ಅನಗತ್ಯ ಆತಂಕ- ಭಯ, ದ್ವೇಷ ಹರಡುವುದು ಎಂಬ ಅರ್ಥವಿದೆ. “ರೀಡಿಂಗ್ ಲೋಲಿತ ಇನ್ ಟೆಹ್ರಾನ್” ಸಿನೆಮಾ ಇದನ್ನು ಹೊಂದಿದೆ. ಇದು “ಸರ್ವ ಜನಾಂಗದ ಶಾಂತಿಯ ತೋಟ” ಆಶಯಕ್ಕೆ ಸಂಪೂರ್ಣ ವಿರುದ್ಧವಾಗಿದೆ ಎಂಬುದು “ಮನುಜಮತ ಸಿನೆಯಾನ” ಬಳಗದ ಆತಂಕವಾಗಿದೆ.
ಅಂತರರಾಷ್ಟ್ರೀಯ ಚಿತ್ರೋತ್ಸವ ನಡೆಸುವ ಹೊಣೆ ಹೊತ್ತವರು ಎಲ್ಲಾ ರೀತಿಯ ಯೋಚನೆ ಮಾಡಿ ಜವಾಬ್ದಾರಿ ಯುತರಾಗಿ ಚಿತ್ರಗಳ ಆಯ್ಕೆ ಮಾಡಬೇಕು.
ಸ್ಥಳೀಯ ಚಿತ್ರಗಳು ಪ್ರೇಕ್ಷಕರಿಗೆ ತಲುಪುವ ವ್ಯವಸ್ಥೆ ಆಗಬೇಕು