ನಮ್ಮ ರಾಜ್ಯದ ಅತ್ಯಪೂರ್ವ ಕರಕುಶಲ ಕಲೆಗಳಲ್ಲಿ ಬಿದ್ರಿ ಕಲೆಯೂ ಒಂದಾಗಿದೆ. ಬೀದರ್ ಜಿಲ್ಲೆಯಲ್ಲಿ ಈ ಕಲೆ ಅರಳಿದೆ. ಕಲಾವಿದರು ಬಹುದಿನಗಳ ಕಾಲ ಕೈಯಿಂದಲೇ ಬಹುಸೂಕ್ಷ್ಮ ಕೆತ್ತನೆಗಳನ್ನು ಮಾಡಿ ಕಲಾಕೃತಿ ರಚಿಸುವ ಬಗೆಯಿದು. ಸೂಕ್ಷ್ಮವಾದ ಸವಿವರವಾದ ಕೆತ್ತನೆಗಳನ್ನು ವರ್ಣಿಸುವಾಗ ಬಿದ್ರಿ ಕಲೆಯ ಹಾಗೆ ಎಂದು ಹೇಳುವುದುಂಟು ಆದ್ದರಿಂದ ನಾನು ಹಿಂದಿಯ ರಾಝೀ ಸಿನೆಮಾದ ಒಟ್ಟಾರೆ ತಯಾರಿಕೆಯನ್ನು ಈ ಕಲೆಗೆ ಹೋಲಿಸುತ್ತಿದ್ದೇನೆ.

 

ಸಿನೆಮಾದ ಕಥೆ, ಪಾತ್ರಗಳ ಬಗ್ಗೆ ಚರ್ಚಿಸಲು ಹೋಗುವುದಿಲ್ಲ. ಬಿದ್ರಿ ಕಲೆಯಿಂದ ಅರಳಿದ ಕಲಾಕೃತಿಯನ್ನು ಕೈಗೆತ್ತಿಕೊಂಡು ಬಹು ಆಸ್ಥೆಯಿಂದ ನೋಡಿದಾಗ ಎಂಥಾ ತನ್ಮಯತೆ, ಮೆಚ್ಚುಗೆ ಉಂಟಾಗುವುದೋ ಅದೇ ಬಗೆ, ರಾಝೀ ಸಿನೆಮಾ ನೋಡಿದಾಗಲೂ ಆಗುತ್ತದೆ. ಆದ್ದರಿಂದ ಈ ಲೇಖನವನ್ನು ಓದುವವರು ಆ ಸಿನೆಮಾ ನೋಡಲಿ ಎಂಬುದು ನನ್ನ ಆಶಯ. ಪ್ರೇಕ್ಷಕರ ಮೆಚ್ಚುಗೆ ವ್ಯಕ್ತವಾಗುವ ರೀತಿಯೇ ಹೀಗಲ್ಲವೆ….?

ಸಾಹಿತಿ ಹರೀಂದರ್ ಸಿಖ್ಖ ಅವರ ಕೃತಿ ಕಾಲಿಂಗ್ ಸೆಹಮತ್. ಇದನ್ನು ನಿರ್ದೇಶಕಿ ಮೇಘಾನಾ ಗುಲ್ಜರ್ ಓದಿದಾಗ ಇದನ್ನೇಕೆ ಸಿನೆಮಾ ಮಾಡಬಾರದು ಎನಿಸಿತು.ಹೀಗೆ ಅನ್ನಿಸಲು ಕಾರಣವಿತ್ತು. ಇದು ನಿಜಜೀವನದ ಘಟನೆಗಳನ್ನು ಆಧರಿಸಿ ಬರೆದ ಕೃತಿ. ಇಲ್ಲಿನ ಪಾತ್ರಗಳು ನಮ್ಮ ಸುತ್ತಲೇ ಓಡಾಡಿಕೊಂಡಿವೆ. ದೇಶದ ಆಂತರಿಕ ಅಪರಾಧಗಳ ಬಗ್ಗೆ ತನಿಖೆ ಮಾಡಲು ಸಿಬಿಐ ಇರುವಂತೆ ಇತರ ರಾಷ್ಟ್ರಗಳು ದೇಶದ ಶಾಂತಿ, ಸುವ್ಯವಸ್ಥೆ-ಸಮಗ್ರತೆಗೆ ಭಂಗ ತಾರದಂತೆ ನೋಡಿಕೊಳ್ಳಲು ರಾ (RAW- research and analysis wing) ಗೂಢಾಚಾರಿ ಸಂಸ್ಥೆಯಿದೆ. ಇದು ನಮ್ಮ ದೇಶದ ಮೇಲೆ ಆಕ್ರಮಣ ಮಾಡಬಹುದು ಎಂದು ಸಂದೇಹ ಇರುವ ದೇಶಗಳಲ್ಲಿ ಪ್ರತಿ ಗೂಢಚರ್ಯೆ ಮಾಡುತ್ತದೆ.

ರಾಝೀ ಸಿನೆಮಾ ನೋಡಿದಾಗ ಗೂಢಚರ್ಯೆ ಮಾಡವುದು ಅದೆಷ್ಟು ಕಠಿಣ-ಸಂಕೀರ್ಣ ಕೆಲಸ ಎಂಬುದು ಅನುಭವಕ್ಕೆ ಬರುತ್ತದೆ. ಕಾಲಿಂಗ್ ಸೆಹಮತ್ ಅನ್ನು ಓದಿದ ನಂತರ ಮೇಘನಾ ಗುಲ್ಜರ್ಗೆ ಸಿನೆಮಾ ಮಾಡಿದರೆ ಇಂಥ ಕಥೆಯನ್ನು ಆಧರಿಸಿ ಮಾಡಬೇಕೆನ್ನಿಸಿತು. ಹೀಗಾಗಿ ತಡಮಾಡದೇ ಸಿನೆಮಾ ಮಾಡಲು ಹಕ್ಕುಗಳನ್ನು ಪಡೆದುಕೊಂಡರು. ಒಂದಲ್ಲ, ಎರಡಲ್ಲ ಅನೇಕ ಬಾರಿ ಈ ಕೃತಿಯನ್ನು ಓದಿದರು.
ಪತ್ರಕರ್ತೆ ಭವಾನಿ ಅಯ್ಯರ್ ಅವರೊಂದಿಗೂ ಚರ್ಚಿಸಿದರು. ಚಿತ್ರಕಥೆಯನ್ನು ಮಾಡಲು ಸಹಕರಿಸಬೇಕೆಂದು ಕೇಳಿಕೊಂಡರು. ಅಯ್ಯರ್ ಕೂಡ ಹಲವಾರು ಬಾರಿ ಕೃತಿ ಓದಿದರು. ಸಣ್ಣಸಣ್ಣ ವಿವರಗಳನ್ನು ಕೂಡ ಚರ್ಚಿಸಿದರು. ಟಿಪ್ಪಣಿ ಮಾಡಿಕೊಂಡರು. ಜಂಗ್ಲಿ ಪಿಕ್ಚರ್ ಮತ್ತು ಧರ್ಮ ಪ್ರೊಡಕ್ಷನ್ ಕಂಪನಿಗಳು ಸಿನೆಮಾ ನಿರ್ಮಾಣ ಮಾಡಲು ಮುಂದೆ ಬಂದವು. ಈ ನಂತರ ಅನುದಿನವೂ ಮೇಘಾನಾ ಗುಲ್ಜರ್ ಅವರಿಗೆ ಪರಿಶ್ರಮದ ದಿನಗಳು

ತಂದೆಯಂತೆಯೇ ಮಗಳು:
ತಂದೆಯ ಕವಿತ್ವ ಮಗಳಲ್ಲಿಯೂ ಇದೆ. ಸಂಪೂರ್ಣನ್ ಸಿಂಗ್ ಕಲ್ರ ಎಂದರೆ ಯಾರಿವರು ಎಂದು ಕೇಳುವವರು ಇರಬಹುದು. ಆದರೆ ಗೀತಕಾರ ಗುಲ್ಜಾರ್ ಎಂದರೆ ಗೊತ್ತಿಲ್ಲದವರು ಬೆರಳೆಣಿಕೆಯಷ್ಟು ಇರಬಹುದು. ಕವಿ, ಸಾಹಿತಿ, ಚಿತ್ರಕಥೆಗಾರ, ಸಿನೆಮಾ ನಿರ್ದೇಶಕ ಹೀಗೆ ಬಹುಗುಣ ಹೊಂದಿರುವ ಗುಲ್ಜಾರ್ ಸಾಬ್ ಮತ್ತು ಪ್ರತಿಭಾವಂತ ಚಿತ್ರನಟಿ ರಾಖಿ ಅವರ ಮಗಳು ಮೇಘನಾ ಗುಲ್ಜಾರ್. ತಂದೆ-ತಾಯಿಯ ಕಲಾಸಕ್ತಿ ಮಗಳಿಗೂ ದತ್ತವಾಗಿದೆ. ಮೇಘನಾ ಕೂಡ ಕವಯತ್ರಿ. ತಂದೆಯ ಗರುಡಿಯಲ್ಲಿ ಸಿನೆಮಾ ನಿರ್ದೇಶನದ ಪಟ್ಟುಗಳನ್ನು ಕಲಿತವರು.
ನಿರ್ದೇಶಕಿ ಮೇಘಾನಾ ಅವರ ಮುಂದಿದ್ದ ಬಹುದೊಡ್ಡ ಸವಾಲು ತಾರಾಗಣದ ಆಯ್ಕೆ. ಕೃತಿಯ ಪಾತ್ರಗಳು ಬೇಡುವಂತಹ ಗುಣಗಳಿರುವ ಕಲಾವಿದರ ಅವಶ್ಯಕತೆಯಿತ್ತು. ಅವರಿಗೆ ಸೆಹಮತ್ ಪಾತ್ರಕ್ಕೆ ಬಾಲಿವುಡ್ ಚಿತ್ರನಟಿ ಅಲಿಯಾ ಭಟ್ ಅತ್ಯಂತ ಸೂಕ್ತ ಎನಿಸಿತು. ಅಲಿಯಾ ಭಟ್ ದೈಹಿಕವಾಗಿ ಎತ್ತರದ, ದಷ್ಟಪುಷ್ಟವಾಗಿ ಕಾಣುವ ಮಹಿಳೆಯಲ್ಲ. ಗೂಢಚಾರಿ ಮಹಿಳೆ ಎಂದೊಡನೆ ನಮಗೆ ಈ ರೀತಿಯ ಚಿತ್ರಣವೇ ಕಣ್ಮುಂದೆ ಬರುತ್ತದೆ. ಆದರೆ ರಾ ಗೂಢಚಾರರು, ಗೂಢಚಾರಿಣಿಯರು ಸಾಮಾನ್ಯವಾಗಿ ಹೀಗೆ ಇರುವುದಿಲ್ಲ. ಇವೆಲ್ಲವನ್ನೂ ಮೇಘನಾ ಅರ್ಥ ಮಾಡಿಕೊಂಡಿದ್ದರಿಂದಲೇ ಅಲಿಯಾ ಭಟ್ ಅವರ ಆಯ್ಕೆಯಾಯಿತು. ಸೆಹಮತ್ ಪತಿ ಮಿಲಿಟರಿ ಅಧಿಕಾರಿ ಇಕ್ಬಾಲ್ ಸೈಯದ್ ಪಾತ್ರಧಾರಿ ವಿಕ್ಕಿ ಕೌಶಲ್, ಹಿದಾಯತ್ ಖಾನ್ ಪಾತ್ರಧಾರಿ ರಜಿತ್ ಕಪೂರ್, ಬ್ರಿಗೇಡಿಯರ್ ಸೈಯದ್ ಪಾತ್ರಧಾರಿ ಶಿಶಿರ್ ಶರ್ಮ, ಖಾಲೀದ್ ಮೀರ್ ಪಾತ್ರಧಾರಿ ಜೈದೀಪ್ ಅಹ್ಲವತ್ ಸೇರಿದಂತೆ ಚಿತ್ರದ ಇತರ ನಟ-ನಟಿಯರೆಲ್ಲ ಬಹುಸೂಕ್ತವಾದ ಆಯ್ಕೆಗಳು.

ಗಟ್ಟಿಯಾದ ಚಿತ್ರಕಥೆ:
ಕಾದಂಬರಿಯೊಂದನ್ನು ಸಿನೆಮಾ ಮಾಡುವುದು ಅತ್ಯಂತ ಸವಾಲಿನ ಕೆಲಸ. ಇದನ್ನು ಚಿತ್ರಕಥೆಗೆ ಸಮರ್ಥವಾಗಿ ಒಗ್ಗಿಸುವುದು ಸರಳವಾದ ಮಾತಲ್ಲ. ಈ ಕೆಲಸದಲ್ಲಿ ಮೇಘನಾ ಗುಲ್ಜಾರ್ ಮತ್ತು ಭವಾನಿ ಅಯ್ಯರ್ ಯಶಸ್ವಿಯಾಗಿದ್ದಾರೆ. ಉತ್ತಮ ಚಿತ್ರಕಥೆ ಇದ್ದರೆ ಚಿತ್ರನಿರ್ಮಾಣದಲ್ಲಿ ಶೇಕಡ 50ರಷ್ಟು ಯಶಸ್ಸು ದಕ್ಕಿತ್ತು ಎನ್ನಬಹುದು. ಬಹಳ ಸಣ್ಣಸಣ್ಣ ವಿವರಗಳನ್ನೂ ಈ ಚಿತ್ರಕಥೆ ಒಳಗೊಂಡಿದೆ. ಕ್ಯಾಮೆರಾ ಎಲ್ಲಿಡಬೇಕು, ಯಾವ ಕೋನದಲ್ಲಿ ಇಟ್ಟರೆ ಸೂಕ್ತ ಎಂಬ ವಿವರಗಳನ್ನೆಲ್ಲ ಈ ಚಿತ್ರಕಥೆ ಒಳಗೊಂಡಿದೆ.

ಚಿತ್ರೀಕರಣದ ಸ್ಥಳಗಳು:
ಮುಂಬೈ, ಪಂಜಾಬ್ ಮತ್ತು ಕಾಶ್ಮೀರದಲ್ಲಿ ರಾಝೀ ಚಿತ್ರಿತಗೊಂಡಿದೆ. ಚಿತ್ರಕಥೆ ಕೇಳುವಂತಹ ಸ್ಥಳಗಳನ್ನೇ ಆಯ್ಕೆ ಮಾಡಿಕೊಂಡಿರುವುದು ಗಮನ ಸೆಳೆಯುತ್ತದೆ. ಮುಂಬೈ ಹೊರತುಪಡಿಸಿದರೆ ಪಂಜಾಬ್, ಕಾಶ್ಮೀರದಲ್ಲಿ ಆಯ್ಕೆ ಮಾಡಿಕೊಂಡ ಸ್ಥಳಗಳಲ್ಲಿ ಚಿತ್ರೀಕರಣ ನಡೆಸುವುದು ತೀರಾ ಅಪಾಯಕಾರಿಯಾದ ಕಾರ್ಯವಾಗಿತ್ತು. ಅಡೆ-ತಡೆಗಳ ಮಧ್ಯೆಯೂ ಸಿನಿ ನಿರ್ದೇಶಕಿ ಅಂದುಕೊಂಡ ರೀತಿಯೇ ಚಿತ್ರೀಕರಣ ನಡೆದಿರುವುದು ವಿಶೇಷ.

ಎಲ್ಲವೂ ಪೂರ್ವನಿರ್ಧಾರಿತ
ಸಾಮಾನ್ಯವಾಗಿ ಕೆಲವಾರು ನಿರ್ದೇಶಕರು ಚಿತ್ರೀಕರಣದ ವೇಳೆಯೇ ಚಿತ್ರಕಥೆ, ಸಂಭಾಷಣೆಗಳನ್ನು ಆಯಾ ಸಂದರ್ಭದ ಒತ್ತಡಕ್ಕೆ ಅನುಗುಣವಾಗಿ ಬದಲಾಯಿಸುತ್ತಾರೆ. ಆದರೆ ರಾಝೀ ಸಿನೆಮಾದಲ್ಲಿ ಈ ರೀತಿಯ ಮಾರ್ಪಡುಗಳೇ ಆಗಿಲ್ಲ ಎನ್ನಬಹುದು. ಎಲ್ಲವೂ ಪೂರ್ವನಿರ್ಧಾರದಂತೆ ಪಕ್ಕಾ ಯೋಜನೆ ಅನ್ವಯ ನಡೆದಿರುವುದು ಎದ್ದು ಕಾಣುತ್ತದೆ. ಬದಲಾವಣೆಗಳು ಆದಾಗ ಇಡೀ ಚಿತ್ರವನ್ನು ಬೆಸೆದಿರುವ ಬಂಧ ಸಡಿಲವಾಗುವ ಸಾಧ್ಯತೆ ಅಪಾರ. ಚಿತ್ರ ನಿರ್ದೇಶಕಿ ಇದ್ಯಾವುದಕ್ಕೂ ಅವಕಾಶ ನೀಡಿಲ್ಲ.

ಛಾಯಾಗ್ರಹಣ:
ರಾಝೀ ಸಿನೆಮಾದ ಪ್ರಧಾನ ಛಾಯಾಗ್ರಾಹಕ ಜೈ ಐ ಪಟೇಲ್. ಛಾಯಾಗ್ರಾಹಕ ಚಿತ್ರಕಥೆಯನ್ನು ಓದಿ, ನಿರ್ದೇಶಕರೊಂದಿಗೆ ಚರ್ಚಿಸಿದಾಗಲೇ ಕಥೆ ಕೇಳುವ ರೀತಿಯ ಆಯಾಮಗಳಲ್ಲಿ ಕ್ಯಾಮೆರಾವನ್ನು ದುಡಿಸಿಕೊಳ್ಳುವುದು ಸಾಧ್ಯ. ಪಾತ್ರಗಳು ವಿವರಿಸಲಾಗದ ಸೂಕ್ಷ್ಮ ವಿವರಗಳನ್ನು ಕ್ಯಾಮೆರಾ ಸಮರ್ಥವಾಗಿ ಹೇಳಬಲ್ಲದು. ಈ ರೀತಿ ಕ್ಯಾಮೆರಾವನ್ನು ದುಡಿಸಿಕೊಳ್ಳುವ ರೀತಿ ಸಿನಿ ನಿರ್ದೇಶಕರಿಗೆ, ಛಾಯಾಗ್ರಾಹಕರಿಗೆ ಗೊತ್ತಿರಬೇಕು.

ಸಿನೆಮಾ ಆರಂಭವಾವಾಗುವುದೇ ಯುದ್ದ ವಿಮಾನಗಳನ್ನು ಹೊತ್ತೊಯ್ಯುವ ಹಡಗಿನ ಮೇಲೆ. ಅದರ ಭವ್ಯತೆಯನ್ನು ಕ್ಯಾಮೆರಾ ಕಟ್ಟಿಕೊಡುತ್ತದೆ. ಈ ನಂತರದ ಎಲ್ಲ ಸನ್ನಿವೇಶಗಳಲ್ಲಿಯೂ ಎಲ್ಲಿ ಕ್ಲೋಸ್ ಅಫ್ ಗೆ ಹೋಗಬೇಕು, ಎಲ್ಲಿ ಲಾಂಗ್ ಶಾಟ್, ಮಿಡ್ ಶಾಟ್, ಮೂವಿಂಗ್ ಶಾಟ್ಸ್ ಇವೆಲ್ಲವೂ ಚಿತ್ರಕಥೆಯಲ್ಲಿಯೇ ಉಲ್ಲೇಖಿತಗೊಂಡಿದೆ. ಇದು ಛಾಯಾಗ್ರಾಹಕನ ಕಾರ್ಯಕ್ಕೆ ನೆರವಾಗಿದೆ ಎಂಬುದು ಸಿನೆಮಾ ನೋಡುತ್ತಿದ್ದಂತೆ ಗೊತ್ತಾಗುತ್ತದೆ. ಚಿತ್ರದಲ್ಲಿ ಹಡಗು ಕೂಡ ಪ್ರಮುಖ ಪಾತ್ರಧಾರಿ. ಆದರೆ ಇದು ಚಿತ್ರದುದ್ದಕ್ಕೂ ಕಾಣಿಸಿಕೊಳ್ಳುವುದಿಲ್ಲ.

ತೀರಾ ರಮ್ಯವಾದ ಛಾಯಾಗ್ರಹಣವಾದರೂ ಸಿನೆಮಾದ ಉದ್ದೇಶ ಮರೆಯಾಗುತ್ತದೆ. ನೆರಳು-ಬೆಳಕಿನ ಸಂಯೋಜನೆಯೂ ಉತ್ತಮವಾಗಿರಬೇಕು. ಈ ಸಿನೆಮಾದ ಒಳಾಂಗಣ, ಹೊರಾಂಗಣದಲ್ಲಿ ಸಂಯೋಜಿತವಾಗಿರುವ ನೆರಳು-ಬೆಳಕು ಕಾರ್ಯ ಛಾಯಾಗ್ರಾಹಕರ ಪರಿಶ್ರಮವನ್ನು ಪರಿಚಯಿಸುತ್ತದೆ. ಮನೆಯೊಳಗಿರುವ ಸೊಸೆ ಗೂಢಚಾರಣಿ ಎಂದು ಮನೆಯ ಸಹಾಯಕನಿಗೆ ಗೊತ್ತಾಗುತ್ತದೆ. ಆತ ಮನೆಯೊಡೆಯ ಬ್ರಿಗೇಡಿಯರ್ ಗೆ ವಿಷಯ ಹೇಳಲು ಓಡುತ್ತಾನೆ. ಅದನ್ನು ಸೆಹಮತ್ ತಡೆಯಬೇಕಾಗುತ್ತದೆ. ರಾತ್ರಿಯ ವೇಳೆ ಹೊರಗಿನ ವಿದ್ಯುತ್ ದೀಪದ ಬೆಳಕು, ಅಲ್ಲಲ್ಲಿ ಅರೆ ಕತ್ತಲೆ, ಜೀಪಿನ ಬಳಕೆ, ಬೀದಿ ದೀಪದ ಬೆಳಕು ಇವೆಲ್ಲವನ್ನು ಗಮನಿಸಿದಾಗ ತಂತಾನೇ ವ್ಹಾ ಎಂಬ ಉದ್ಗಾರ ಹೊರಡುತ್ತದೆ.

ಉಡುಪುಗಳ ಆಯ್ಕೆ:
ಇಂಡಿಯಾ-ಪಾಕಿಸ್ತಾನದ ಬೇರೆಬೇರೆ ಪಾತಳಿಗಳಲ್ಲಿ ಸಾಗುವ ಕಥೆಯಿದು. ಇಲ್ಲಿನ ಪಾತ್ರಗಳು ಬೇಡುವ ಉಡುಪುಗಳ ಆಯ್ಕೆ ವಿಷಯದಲ್ಲಿ ಸಿನಿ ನಿರ್ದೇಶಕಿ ಮೇಘನಾ ರಾಜಿಯಾಗಿಲ್ಲ. ಪ್ರತಿಯೊಂದು ಪಾತ್ರದ, ಅದು ಸಣ್ಣ ಪಾತ್ರವೇ ಆಗಿರಲಿ, ದೊಡ್ಡ ಪಾತ್ರವಾಗಿರಲಿ ಮಕ್ಕಳಿರಲಿ, ವಯಸ್ಕರಿರಲಿ ಆಯಾ ಸ್ಥಳೀಯ ಸಂಸ್ಕೃತಿಗೆ ಅನುಗುಣವಾದ ಉಡುಪುಗಳನ್ನೇ ಬಳಸಲಾಗಿದೆ. ಇದರಲ್ಲಿಯೂ ಅಪಾರ ಪರಿಶ್ರಮ ತೊಡಗಿಸಿರುವುದು ಪ್ರತಿ ಬೆಳವಣಿಗೆಯಲ್ಲಿಯೂ ತಿಳಿಯುತ್ತದೆ.

ಮೇಕಪ್:
ಮೇಕಪ್ ಔಚಿತ್ಯವನ್ನು ಅರ್ಥಮಾಡಿಕೊಳ್ಳುವ ಸಿನಿ ನಿರ್ದೇಶಕರ ಸಂಖ್ಯೆ ಅತ್ಯಲ್ಪ. ಪಾತ್ರಗಳು ಕೇಳಲಿ, ಬಿಡಲಿ ಅವಶ್ಯಕತೆಗಿಂತ ಹೆಚ್ಚಾಗಿ ಅಂದರೆ ಢಾಳಾಗಿ ಮೇಕಪ್ ಬಳಕೆಯಾಗುತ್ತದೆ. ಇದರಿಂದ ಅಭಿನಯ ಮುನ್ನೆಲೆಗೆ ಬರುವುದಕ್ಕಿಂತ ಮೇಕಪ್ಪೆ ರಾಚುತ್ತಿರುತ್ತದೆ. ಸಿನೆ ನಿರ್ದೇಶಕಿ ಮೇಘನಾ ಇದ್ಯಾವುದಕ್ಕೂ ಅವಕಾಶ ನೀಡಿಲ್ಲ. ಪ್ರತಿಹಂತದಲ್ಲಿಯೂ ಎಚ್ಚರ ವಹಿಸಿದ್ದಾರೆ ಎನ್ನುವುದು ಮೇಕಪ್ ಬಗೆಯನ್ನೂ ನೋಡಿದಾಗಲೂ ಅರಿವಿಗೆ ಬರುತ್ತದೆ.

ಹರಿತವಾದ ಸಂಕಲನ:
ಅನೇಕ ಬಾರಿ ಸಿನೆಮಾ ಅವಶ್ಯಕತೆಗಿಂತಲೂ ಲೆಂಥ್ ಆಗಿ ಚಿತ್ರೀಕರಣಗೊಂಡಿರುತ್ತದೆ. ಯಾವ ದೃಶ್ಯವನ್ನು ಕತ್ತರಿಸಲು ಆಗುವುದಿಲ್ಲ. ಇಂಥ ಸಂದರ್ಭದಲ್ಲಿ ಸಿನೆಮಾ ಜಾಳುಜಾಳಾಗಿ ಹೊರಹೊಮ್ಮುತ್ತದೆ. ಸಂಕಲನಕಾರ ನಿತೀನ್ ಬೈದ್, ಯಾವುದೇ ಮಮಕಾರವಿಲ್ಲದೇ ಸಿನೆಮಾದ ಎಡಿಟಿಂಗ್ ಕಾರ್ಯ ಮಾಡಿದ್ದಾರೆ. ನಿರ್ದೇಶಕಿ ಮೇಘನಾ ಇದಕ್ಕೆ ಸಂಪೂರ್ಣ ಸಹಕಾರ, ಸಮ್ಮತಿಯನ್ನು ನೀಡಿದ್ದಾರೆ ಎಂಬುದು ತಂತಾನೇ ತಿಳಿಯುತ್ತದೆ. ಇದರಿಂದ ಸಿನೆಮಾದ ಟೆಂಪೋ ಏರುತ್ತಲೇ ಸಾಗುತ್ತದೆ.

ಸಂಗೀತ
ಸಿನೆಮಾಕ್ಕೆ ಪೂರಕವಾದ ಹಿನ್ನೆಲೆ ಸಂಗೀತವಿದೆ.ಸಣ್ಣಸಣ್ಣ ಅಂಶಗಳತ್ತಲೂ ಗಮನ ನೀಡಲಾಗಿದೆ. ಎಲ್ಲಿಯೂ ಅಬ್ಬರ, ಕರ್ಕಶವಿಲ್ಲ. ಪ್ರತಿ ಸನ್ನಿವೇಶದ ಗಂಭೀರತೆಯನ್ನು ಮತ್ತಷ್ಟು ಮನದಟ್ಟು ಮಾಡಿಸುವ ರೀತಿಯ ಸಂಗೀತವನ್ನು ಶಂಕರ್ ಈಶಾನ್ ಲಾಯ್ ನೀಡಿದ್ದಾರೆ. ಗುಲ್ಜಾರ್ ರಚಿಸಿರುವ ಹಾಡುಗಳಂತೂ ಎಂದಿನಂತೆ ಹೃದಯವನ್ನು ಮಿಡಿಸುತ್ತವೆ. ಬಹು ಅರ್ಥಪೂರ್ಣ ರಚನೆಗಳು.

ಸುಮಾರು 40 ಕೋಟಿ ರೂಪಾಯಿ ವೆಚ್ಚವನ್ನು ಮಾಡಿ ರಾಝೀ ಸಿನೆಮಾ ನಿರ್ಮಿಸಲಾಗಿದೆ. ಇಷ್ಟು ಹಣ ಅವಶ್ಯಕವಾಗಿತ್ತೆ ಎಂದು ಎಲ್ಲಿಯೂ ಅನಿಸುವುದಿಲ್ಲ. ಅನಗತ್ಯ ದುಂದುವೆಚ್ಚವಾಗಿದೆ ಎನ್ನಿಸುವುದಿಲ್ಲ. ಕಥೆ ಕೇಳುವ ವಿವರಗಳಿಗೆ ರಾಜಿಯಾಗದೇ ಇರುವುದರಿಂದಲೇ ಹೀಗೆ ಅನ್ನಿಸುತ್ತದೆ.

ತನ್ನ ಪ್ರಾಣವನ್ನೂ ಲೆಕ್ಕಿಸದೇ ಅಳಿಲೊಂದನ್ನು ಬದುಕಿಸುವ ಯುವತಿಯೊಬ್ಬಳು ಅನಿವಾರ್ಯವಾಗಿ ಹತ್ಯೆಗಳನ್ನು ಮಾಡುತ್ತಲೇ ಸಾಗುತ್ತಾಳೆ. ಪರೋಕ್ಷವಾಗಿಯೂ ಅನೇಕರ ಸಾವಿಗೆ ಕಾರಣವಾಗಿ, ಅಜ್ಞಾತವಾಗಿ ಬದುಕಬೇಕಾದ ಬೆಳವಣಿಗೆ ದಟ್ಟ ವಿಷಾದವನ್ನು ಮೂಡಿಸುತ್ತದೆ. ಚಿತ್ರವನ್ನು ಬಹುಕಾಲ ನೆನಪಿನಲ್ಲಿ ಉಳಿಯುವಂತೆ ಮಾಡುತ್ತದೆ.

Similar Posts

Leave a Reply

Your email address will not be published. Required fields are marked *