ಕರ್ನಾಟಕ ಸರ್ಕಾರದ ವಿಶೇಷ ಯೋಜನೆಯಾದ ಗೃಹಜ್ಯೋತಿ ಯೋಜನೆ ಆರಂಭವಾಗಿ ಒಂದು ವರ್ಷ ಸಂದಿದೆ. ಇದರಿಂದ ವಿಶೇಷವಾಗಿ ಕಡಿಮೆ ಆದಾಯವುಳ್ಳ ವರ್ಗಗಳವರಿಗೆ ಅನುಕೂಲವಾಗಿದೆ. ಪ್ರತಿ ತಿಂಗಳು 200 ಯೂನಿಟ್ ತನಕದ ವಿದ್ಯುತ್ ಬಳಕೆಯನ್ನು ಉಚಿತವಾಗಿ ಪಡೆಯಬಹುದು.
ಇದುವರೆಗೂ ಬಾಡಿಗೆ ಮನೆ ಬದಲಿಸಿದಾಗ ‘ಗೃಹಜ್ಯೋತಿ” ಯೋಜನೆಯ ಸೌಲಭ್ಯ ಪಡೆಯಲು ಸಾಧ್ಯವಿರಲಿಲ್ಲ. ಇದನ್ನು ಮನಗಂಡ ರಾಜ್ಯ ಸರ್ಕಾರವು, ಮನೆ ಬದಲಾಯಿಸಿದ ನಂತರ ಗೃಹ ಜ್ಯೋತಿ ಯೋಜನೆಯ ಸೌಲಭ್ಯ ಪಡೆಯುವ ಅವಕಾಶ ಕಲ್ಪಿಸಿದೆ. ಹಳೆ ಮನೆಯ ಆರ್.ಆರ್. ಸಂಖ್ಯೆಯನ್ನು ಡಿ-ಲಿಂಕ್ ಮಾಡುವ ಅವಕಾಶವನ್ನು ರಾಜ್ಯದ ಜನರಿಗೆ ನೀಡಿದೆ. ಗೃಹ ಜ್ಯೋತಿಗೆ ಒಂದು ವರ್ಷ ಸಂದ ಸಂದರ್ಭದಲ್ಲಿ ಇಂಧನ ಇಲಾಖೆ ಈ ಪ್ರಕಟಣೆ ಹೊರಡಿಸಿದೆ.
ಈ ಸಂದರ್ಭದಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್ ಮಾತನಾಡಿದ್ದಾರೆ. “ರಾಜ್ಯದ 1.56 ಕೋಟಿ ಜನರು ಗೃಹ ಜ್ಯೋತಿ ಯೋಜನೆಯ ಲಾಭ ಪಡೆದಿದ್ದಾರೆ. ವಿಶೇಷವಾಗಿ ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಅನುಕೂಲವಾಗಿದೆ. ಅವರೆಲ್ಲರೂ ಹರ್ಷ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಬಿಲ್ನ ಹಣವನ್ನು ಮಕ್ಕಳ ಟ್ಯೂಷನ್ ಫೀ, ಹಿರಿಯರ ಔಷಧೋಪಚಾರಕ್ಕೆ ಬಳಸಿರುವುದಾಗಿ ಹೇಳಿಕೊಂಡಿದ್ದಾರೆ. ನುಡಿದಂತೆ ನಡೆದಿದ್ದೇವೆ ಎಂಬ ಸಾರ್ಥಕ ಭಾವ ನಮ್ಮಲ್ಲಿದೆ. ಜತೆಗೆ, ಡಿಲಿಂಕ್ ಸೌಲಭ್ಯ ಬೇಕೆಂದು ಜನ ಕೋರಿದ್ದರು. ಈಗ ಈ ಸೌಲಭ್ಯವನ್ನು ಒದಗಿಸಲಾಗಿದೆ. ಸಾಫ್ಟ್ವೇರ್ನಲ್ಲಿ ಬದಲಾವಣೆ ಮಾಡಿ, ಜನತೆ ಈ ಸೌಲಭ್ಯ ಒದಗಿಸಲಾಗಿದೆ,” ಎಂದು ಹೇಳಿದ್ದಾರೆ.
“ಗೃಹ ಜ್ಯೋತಿ ಯೋಜನೆಯ ವೆಬ್ಸೈಟ್ ಸಾಫ್ಟ್ವೇರ್ ಅಪ್ಡೇಟ್ ಮಾಡುವ ಡಿ-ಲಿಂಕ್ಗೆ ಇದ್ದ ತಾಂತ್ರಿಕ ತೊಂದರೆಯನ್ನು ನಿವಾರಿಸಲಾಗಿದೆ. ಡಿ-ಲಿಂಕ್ಗೆ ಅವಕಾಶ ಕಲ್ಪಿಸಿಕೊಡವಂತೆ ಗ್ರಾಹಕರು ಕೋರಿದ್ದರು, ಅದಕ್ಕೆ ಸ್ಪಂದಿಸಿ ಈ ಡಿ-ಲಿಂಕ್ಗೆ ಅವಕಾಶ ಮಾಡಿಕೊಡಲಿದೆ. ಗ್ರಾಹಕರು ಇದರ ಸದುಪಯೋಗಪಡಿಸಿಕೊಳ್ಳಬೇಕು,” ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ಹೇಳಿದ್ದಾರೆ.
ಬಾಡಿಗೆ ಮನೆ ಬದಲಿಸಿದಾಗ ಹಳೆಯ ಖಾತೆ ಸಂಖ್ಯೆಯನ್ನು ಡಿ-ಲಿಂಕ್ ಮಾಡಿ, ಮತ್ತೊಂದು ಮನೆಯ ಆರ್.ಆರ್. ಸಂಖ್ಯೆಯೊಂದಿಗೆ ನೋಂದಣಿಯಾಗುವುದು ಅವಶ್ಯಕ. ಈ ಸಂದರ್ಭದಲ್ಲಿ ಯಾವುದೇ ತಾಂತ್ರಿಕ ತೊಂದರೆಯೂ ಆಗದ ವ್ಯವಸ್ಥೆಯನ್ನು ಇಂಧನ ಇಲಾಖೆ ಮಾಡಿದೆ.
ಡಿ-ಲಿಂಕ್ ಮಾಡುವುದು ಹೇಗೆ?
https://sevasindhu.karnataka.gov.in/GruhaJyothi_Delink/GetAadhaarData.aspx
ಲಿಂಕ್ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ. ಗೃಹ ಜ್ಯೋತಿ ಪೋರ್ಟಲ್ ಓಪನ್ ಆಗದೇ ಇದ್ದಲ್ಲಿ, Cache Memory Clear ಮಾಡಿ ನಂತರ ಪೋರ್ಟಲ್ ಲಿಂಕ್ ಕ್ಲಿಕ್ ಮಾಡಿ ಸೇವೆಯನ್ನು ಪಡೆಯಬಹುದಾಗಿದೆ.
ಮನೆ ಬದಲಿಸುವ ಸಂದರ್ಭಲ್ಲಿ ಆಧಾರ್ ನಂಬರ್ ಜತೆ ಲಿಂಕ್ ಆಗಿರುವ ಆರ್.ಆರ್. ನಂಬರ್ ವಿವರ ಪರಿಶೀಲಿಸಿ ಡಿ-ಲಿಂಕ್ ಮಾಡಬಹುದು. ಹೊಸ ಮನೆಗೆ ಗೃಹಜ್ಯೋತಿ ಲಾಭ ಪಡೆಯಲು ಸದ್ಯ ಯಾವುದೇ ಆಧಾರ್ ಜತೆ ಲಿಂಕ್ ಆಗಿರದ ಆರ್ .ಆರ್. ನಂಬರ್ಗೆ ಲಿಂಕ್ ಮಾಡಬಹುದು. ಅಂದರೆ, ಈ ಹಿಂದೆ ಮನೆಯಲ್ಲಿ ವಾಸವಿದ್ದರೂ ಡಿ-ಲಿಂಕ್ ಮಾಡಿರುವುದನ್ನು ಖಾತ್ರಿ ಪಡಿಸಿಕೊಳ್ಳಿ.
2024ರ ಜೂನ್ವರೆಗೆ 1.67 ಕೋಟಿ ನೋಂದಣಿಯಾಗಿದೆ. ಯೋಜನೆಯ ಸೌಲಭ್ಯವನ್ನು 1.56 ಕೋಟಿ ಫಲಾನುಭವಿಗಳು ಪಡೆಯುತ್ತಿದ್ದಾರೆ. ಇದಕ್ಕಾಗಿ ಕರ್ನಾಟಕ ಸರ್ಕಾರ 2023 ಆಗಸ್ಟ್ ರಿಂದ 2024 ಜೂನ್ವರೆಗೆ 8239 ಕೋಟಿ ರೂ ಸಬ್ಸಿಡಿ ಬಿಡುಗಡೆ ಮಾಡಿದೆ.