ಇಂದು (ಸೆಪ್ಟೆಂಬರ್ 15) ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನ. ಇದರ ಅಂಗವಾಗಿ ಪ್ರತಿವರ್ಷ ಈ ದಿನದಂದು ಇಂಜಿನಿಯರ್ಸ್ ಡೇ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಅವರನ್ನು ಸ್ಮರಿಸುವ ಅನೇಕರು ಕನ್ನಂಬಾಡಿ ಕಟ್ಟೆ, ನಿರ್ಮಾಣ ಮಾಡಿದವರು, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸ್ಥಾಪಿಸಿದವರು ಇವರೇ ಎಂದು ಹೇಳುತ್ತಿರುತ್ತಾರೆ. ಇತ್ತೀಚೆಗಂತೂ ಫೇಸ್ಬುಕ್‌, ವಾಟ್ಸಪ್‌, ಇನ್‌ ಸ್ಟಾಗ್ರಾಮ್‌  ಗಳಲ್ಲಿ “ಸರ್‌ ಎಂ.ವಿ. ಕೆ.ಆರ್.ಎಸ್.‌ ಡ್ಯಾಮ್‌ ನಿರ್ಮಾತೃ” ಸ್ಟೇಟಸ್‌ ಗಳೇ ಇರುತ್ತವೆ.  ಇದೆಷ್ಟರ ಮಟ್ಟಿಗೆ ಸರಿ, ಇತಿಹಾಸದ ಪುಟಗಳಲ್ಲಿ ಹುದುಗಿದ ಘಟನೆಗಳ ಬಗ್ಗೆ ಅರಿವಿಲ್ಲದೇ ಹೇಳಿದ್ದಾರೆ ಎಂದಿಟ್ಟುಕೊಂಡರೂ ಸುಳ್ಳು ಸುಳ್ಳೇ ಅಲ್ಲವೇ ? ಇದರಿಂದ ಇತಿಹಾಸಕ್ಕೆ ಅಪಚಾರ ಮಾಡಿದಂತಾಗುವುದಿಲ್ಲವೇ ?

ಎಷ್ಟರ ಮಟ್ಟಿಗೆ ಸರಿ

ಸರ್. ಎಂ. ವಿಶ್ವೇಶರಯ್ಯ ಅವರು ಓರ್ವ ಮೇಧಾವಿ ಇಂಜಿನಿಯರ್ ಎಂಬುದು ಸತ್ಯವಾದ ಸಂಗತಿ. ಆದರೆ ಇವರು ಮಾಡಿರದೇ ಇದ್ದ ಸಂಗತಿಗಳನ್ನು ಇವರೇ ಮಾಡಿದ್ದಾರೆ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ ? ಕಳೆದ ಹಲವಾರು ದಶಕಗಳಿಂದ ಇದು ಪುನರಾವರ್ತನೆ ಆಗುತ್ತಲೇ ಇದೆ. ಇದರಿಂದ ನಿಜವಾಗಿಯೂ ಈ ಸಂಗತಿಗಳಿಗೆ ಕಾರಣೀಭೂತರಾದವರಿಗೆ ಅನ್ಯಾಯ ಮಾಡಿದಂತಾಗುವುದಿಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕನಸು

ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಾಣ ಮಾಡಿ, ನಾಡಿನಲ್ಲಿ ಹಸಿರು ಹೊನ್ನು ಉಕ್ಕಿಸಬೇಕು, ಅರಳಿಸಬೇಕು, ರೈತರ ಬಾಳು ಬೆಳಗಬೇಕು ಎಂಬುದು ಅಂದಿನ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕನಸು. ಇದು ಅವರ ಕನಸಿನ ಯೋಜನೆ. ಇದನ್ನು ನನಸು ಮಾಡುವ ದಿಶೆಯಲ್ಲಿ ಅವರು ಮುಂದಾಗುತ್ತಾರೆ. ಮೈಸೂರು ಸಂಸ್ಥಾನ ಸರ್ಕಾರದ ಡೆಪ್ಯುಟಿ ಚೀಫ್ ಇಂಜಿನಿಯರ್ ಕ್ಯಾಪ್ಟನ್ ಡಾಸ್ ಅವರಿಗೆ ಇದರ ಹೊಣೆಗಾರಿಕೆ ವಹಿಸುತ್ತಾರೆ. ಡಾಸ್ ಅವರು ಇದಕ್ಕಾಗಿ ವರ್ಷಗಳ ಕಾಲ ಪರಿಶ್ರಮ ಪಡುತ್ತಾರೆ. ಸೂಕ್ತ ಜಾಗದ ಆಯ್ಕೆಗಾಗಿ ಅಲೆದಾಡುತ್ತಾರೆ. ಇವೆಲ್ಲದರ ಪರಿಣಾಮ ಈಗ ಕನ್ನಂಬಾಡಿ ಕಟ್ಟೆ ಇರುವ ಸ್ಥಳವನ್ನು ಆಯ್ಕೆ ಮಾಡುತ್ತಾರೆ.

 

ನಾಲ್ವಡಿ ಕೃಷ್ಣರಾಜ ಒಡೆಯರ್

ಕ್ಯಾಪ್ಟನ್ ಡಾಸ್ ಸಾವು

ನೀಲನಕ್ಷೆ ತಯಾರಿಸಿ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮುಂದಿಡುತ್ತಾರೆ. ಈ ನಂತರವೂ ಆಯ್ಕೆ ಮಾಡಿದ್ದ ಸ್ಥಳ ಪರಿಶೀಲನೆಯನ್ನು ಕ್ಯಾಪ್ಟನ್ ಡಾಸ್ ನಡೆಸುತ್ತಿರುತ್ತಾರೆ. ಒಮ್ಮೆ ಅವರು ಕಾವೇರಿ ನದಿಯಲ್ಲಿ ಗುಡ್ಡಗಳ ನಡುವೆ ಪರಿಶೀಲನೆ ಸಂದರ್ಭ ಈಜುವಾಗ ಕಾರ್ಮಿಕರಿದ್ದ ತೆಪ್ಪ ನದಿಯಲ್ಲಿ ಮಗುಚಿಕೊಳ್ಳುತ್ತದೆ. ಇದನ್ನು ಡಾಸ್ ಗಮನಿಸುತ್ತಾರೆ. ತೆಪ್ಪದಲ್ಲಿ ಏಳುಜನ ಇದ್ದಿದ್ದು ಅವರ ಗಮನದಲ್ಲಿರುತ್ತದೆ. ಆರು ಮಂದಿ ದಡದತ್ತ ಈಜುತ್ತಿರುವುದನ್ನು ನೋಡಿದ ಅವರು ಏಳನೇ ವ್ಯಕ್ತಿಯ ರಕ್ಷಣೆಗೆ ಧಾವಿಸುತ್ತಾರೆ. ಈ ಪ್ರಯತ್ನದಲ್ಲಿ ಅವರೇ ಸಾವಿಗೀಡಾಗುತ್ತಾರೆ. ಈ ದುರ್ಘಟನೆ 1909ರಲ್ಲಿ ನಡೆಯುತ್ತದೆ.

ಚೀಫ್ ಇಂಜಿನಿಯರ್

ಈ ನಂತರ ಸಂಸ್ಥಾನದ ಚೀಫ್ ಇಂಜಿನಿಯರ್ ಹುದ್ದೆ ತುಂಬಲು ಯಾರು ಸಮರ್ಥರು ಎಂದು ಮಹಾರಾಜರು ಯೋಚಿಸುವಾಗ ಅವರಿಗೆ ಕನ್ನಡಿಗರೇ ಆದ ವಿಶ್ವೇಶ್ವರಯ್ಯ ನೆನಪಾಗುತ್ತಾರೆ. ಆಗ ವಿಶ್ವೇಶ್ವರಯ್ಯ ಅವರು ಅಂದಿನ ಬಾಂಬೆ ಪ್ರಾಂತ್ಯದಲ್ಲಿ ಇದ್ದರು. ಆಗಲೇ ಮೇಧಾವಿ ಎಂಬ ಖ್ಯಾತಿ ಗಳಿಸಿರುತ್ತಾರೆ. ಮಹಾರಾಜರ ಕರೆಗೆ ಒಪ್ಪಿ ಮೈಸೂರಿಗೆ ಬಂದು ಚೀಫ್ ಇಂಜಿನಿಯರ್ ಆಗಿ ಅಧಿಕಾರ ವಹಿಸಿಕೊಳ್ಳುತ್ತಾರೆ.

ಕ್ಯಾಪ್ಟನ್ ಡಾಸ್ ಕೆಲಸಕ್ಕೆ ಮೆಚ್ಚುಗೆ

ಮಹಾರಾಜರು ತಮ್ಮ ಕನಸಿನ ಪ್ರಾಜೆಕ್ಟ್ ಬಗ್ಗೆ ವಿವರಿಸುತ್ತಾರೆ. ಈ ಬಳಿಕ ಕ್ಯಾಪ್ಟನ್ ಡಾಸ್ ಮಾಡಿದ ಯೋಜನೆಯನ್ನು, ನೀಲನಕ್ಷೆಯನ್ನು ಪರಿಶೀಲಿಸುವ ವಿಶ್ವೇಶ್ವರಯ್ಯ ಅದರ ಬಗ್ಗೆ ತಮ್ಮ ವರದಿಯಲ್ಲಿ ವಿವರಿಸುತ್ತಾರೆ. ಡಾಸ್ ಮಾಡಿದ ಪ್ರಾಜೆಕ್ಟಿನ ಬಗ್ಗೆ ಪ್ರಶಂಸೆಯನ್ನೂ ವ್ಯಕ್ತಪಡಿಸುತ್ತಾರೆ. ಅಣೆಕಟ್ಟಿನ ಎತ್ತರವನ್ನು 80 ರಿಂದ 124 ಅಡಿಗೆ ಏರಿಸುವ ಬಗ್ಗೆ ಯೋಜನೆ ರೂಪಿಸುತ್ತಾರೆ ಎಂದು ಇತಿಹಾಸ ತಜ್ಞ, ಹಿರಿಯ ಪ್ರಾಧ್ಯಾಪಕ ಡಾ. ನಂಜರಾಜೇ ಅರಸ್ ಹೇಳುತ್ತಾರೆ.

ಸರ್‌ ಎಂ. ವಿಶ್ವೇಶ್ವರಯ್ಯ

ದಿವಾನರಾಗಿ ನೇಮಕ

1911ರಲ್ಲಿ ಕನ್ನಂಬಾಡಿ ಕಟ್ಟೆ ನಿರ್ಮಾಣ ಆರಂಭವಾಗುತ್ತದೆ. 1912ರಲ್ಲಿ ವಿಶ್ವೇಶ್ವರಯ್ಯ ಅವರು ಮೈಸೂರು ಸಂಸ್ಥಾನದ ದಿವಾನರಾಗಿ ನೇಮಕಗೊಳ್ಳುತ್ತಾರೆ. ಈ ನಂತರ ಕನ್ನಂಬಾಡಿ ಅಣೆಕಟ್ಟೆ ನಿರ್ಮಾಣದ ಇಂಜಿನಿಯರಿಂಗ್ ಟೀಮಿನ ನೇತೃತ್ವವನ್ನು ಬೇರೆಯವರು ವಹಿಸಿಕೊಳ್ಳುತ್ತಾರೆ ಎಂದು ಡಾ. ನಂಜರಾಜೇ ಅರಸ್ ಹೇಳುತ್ತಾರೆ.

ಮೀಸಲಾತಿಗೆ ವಿಶ್ವೇಶ್ವರಯ್ಯ ವಿರೋಧ

1912 ಡಿಸೆಂಬರ್ ನಲ್ಲಿ ದಿವಾನರಾಗಿ ವಿಶ್ವೇಶ್ವರಯ್ಯ ಅವರು ಅಧಿಕಾರ ವಹಿಸಿಕೊಳ್ಳುತ್ತಾರೆ. ಹಿಂದುಳಿದ ಜಾತಿಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡಬೇಕು. ಅವರನ್ನು ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಮುಂದೆ ತರಬೇಕು ಎಂಬುದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮಹತ್ವಾಂಕ್ಷೆ ಆಗಿರುತ್ತದೆ. ಇದನ್ನು ಜಾರಿಗೆ ತರುವ ಸಲುವಾಗಿ ಮಿಲ್ಲರ್ ಆಯೋಗ ರಚನೆ ಮಾಡುತ್ತಾರೆ. ಮಿಲ್ಲರ್ ಆಯೋಗ ರಚನೆ ಮತ್ತು ಮೀಸಲಾತಿಗೆ ತೀವ್ರ ವಿರೋಧ ವ್ಯಕ್ತಪಡಿಸುವ ವಿಶ್ವೇಶ್ವರಯ್ಯ ಅವರು ದಿವಾನ್ ಹುದ್ದೆಗೆ 1918ರಲ್ಲಿ ತಮ್ಮ ರಾಜಿನಾಮೆ ಸಲ್ಲಿಸುತ್ತಾರೆ ಎಂದು ಇತಿಹಾಸದ ಪುಟಗಳನ್ನು ಆಳವಾಗಿ ಅಧ್ಯಯನ ಮಾಡಿರುವ ಡಾ. ನಂಜರಾಜ್ ಅರಸ್ ತಿಳಿಸುತ್ತಾರೆ.

ಮೊದಲ ಹಂತ

ಕನ್ನಂಬಾಡಿ ಕಟ್ಟೆಯ ಮೊದಲ ಹಂತದ ನಿರ್ಮಾಣ ಕಾಮಗಾರಿ ಮುಕ್ತಾಯ ಆಗಿದ್ದು 1924ರಲ್ಲಿ. ಅದೂ ವಿಶ್ವೇಶ್ವರಯ್ಯ ಅವರು ದಿವಾನ್ ಹುದ್ದೆಗೆ ರಾಜಿನಾಮೆ ಸಲ್ಲಿಸಿದ ಆರು ವರ್ಷಗಳ ನಂತರ. ಪೂರ್ಣ ಅಣೆಕಟ್ಟು ನಿರ್ಮಾಣಗೊಂಡಿದ್ದು 1934ರಲ್ಲಿ ಅದೂ ವಿಶ್ವೇಶ್ವರಯ್ಯ ಅವರು ರಾಜಿನಾಮೆ ನೀಡಿದ 16 ವರ್ಷದ ನಂತರ. ಇಷ್ಟೆಲ್ಲ ಸಂಗತಿ ಇರುವಾಗ ವಿಶ್ವೇಶ್ವರಯ್ಯ ಅವರೇ ಕನ್ನಂಬಾಡಿ ನಿರ್ಮಾಣ ಮಾಡಿದ್ದು ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ ? ಎಂದು ಡಾ. ನಂಜರಾಜೇ ಅರಸ್ ಅವರು ಪ್ರಶ್ನಿಸುತ್ತಾರೆ.

ಏಳು ಮಂದಿ ಚೀಫ್ ಇಂಜಿನಿಯರ್

ವಿಶ್ವೇಶ್ವರಯ್ಯ ಅವರು ದಿವಾನರಾಗಿ 1912ರಲ್ಲಿ ನೇಮಕಗೊಂಡ ನಂತರ ಚೀಫ್ ಇಂಜಿನಿಯರ್ ಹುದ್ದೆ ಕರ್ತವ್ಯದಿಂದ ಸಹಜವಾಗಿ ಹೊರಬರುತ್ತಾರೆ. ಈ ನಂತರ ಕನ್ನಂಬಾಡಿ ಅಣೆಕಟ್ಟು ನಿರ್ಮಾಣ ಕಾಮಗಾರಿ ಮುಕ್ತಾಯವಾಗುವ ತನಕ ಏಳು ಮಂದಿ ಚೀಫ್ ಇಂಜಿನಿಯರ್ ಗಳು ಕಾರ್ಯ ನಿರ್ವಹಿಸಿದ್ದಾರೆ. ಅವರ ಹೆಸರುಗಳನ್ನೇಕೆ ಹೇಳುವುದಿಲ್ಲ ಎಂದು ಅವರು ಪ್ರಶ್ನಿಸುತ್ತಾರೆ.

ಮೈಸೂರು ಸಂಸ್ಥಾನದಲ್ಲಿ ಅಂದು ಜಾರಿಗೆ ಬಂದ ಅನೇಕ ಯೋಜನೆಗಳು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ, ನಾಡನ್ನು ಅಭಿವೃದ್ಧಿಗೊಳಿಸಬೇಕು ಎಂಬ ಚಿಂತನೆ ಫಲಗಳು. ಈ ದಿಶೆಯಲ್ಲಿಯೇ ಮೈಸೂರು ಬ್ಯಾಂಕ್ ಸ್ಥಾಪನೆಗೆ ಚಿಂತಿಸಿ ಅದನ್ನು ಕಾರ್ಯರೂಪಕ್ಕೆ ತರುತ್ತಾರೆ.

ಮೈಸೂರು ಬ್ಯಾಂಕ್

ಮಹಾರಾಜರು ಅರ್ಥಾತ್ ಸರ್ಕಾರದ ಯೋಜನೆಗಳನ್ನು ಜಾರಿಗೆ ತರುವುದು ಅಧಿಕಾರಿಗಳ ಕರ್ತವ್ಯ. ದಿವಾನ್ ಹುದ್ದೆ ಎಂದರೆ ಇಂದಿನ ಚೀಫ್ ಸೆಕ್ರೆಟರಿ ಹುದ್ದೆ ಇದ್ದ ಹಾಗೆ. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅನೇಕ ಜನಾನುರಾಗಿ ಯೋಜನೆಗಳನ್ನು ಜಾರಿಗೆ ತಂದರು. ಆದರೆ ಇದರ ಆದೇಶ ಹೊರಡಿಸಿದ್ದು ಸರ್ಕಾರದ ಅಂಡರ್ ಸೆಕ್ರೆಟರಿ. ಹೀಗೆಂದು ಯೋಜನೆ ಜಾರಿಗೊಳಿಸಿದ್ದು ಅಂಡರ್ ಸೆಕ್ರೆಟರಿ ಎಂದು ಹೇಳಲು ಆಗುತ್ತದೆಯೇ ? ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ತಂದರು. ಸರ್ಕಾರದ ಈ ಯೋಜನೆಯನ್ನು ಓರ್ವ ಸರ್ಕಾರಿ ಅಧಿಕಾರಿ ಪ್ರಕಟಿಸಿದರು. ಹಾಗೆಂದು ಈ ಯೋಜನೆಗೆ ಆ ಅಧಿಕಾರಿ ಕಾರಣ ಎಂದು ಹೇಳುವುದಕ್ಕೆ ಆಗುತ್ತದೆಯೇ ಎಂದು ನಂಜರಾಜೇ ಅರಸ್ ಪ್ರಶ್ನಿಸುತ್ತಾರೆ.

ಅಣೆಕಟ್ಟೆಗಾಗಿ ವಜ್ರವೈಢೂರ್ಯ ಮಾರಾಟ

ಕನ್ನಂಬಾಡಿ ಅಣೆಕಟ್ಟೆ ಅಥವಾ ಕೃಷ್ಣರಾಜ ಸಾಗರ ಡ್ಯಾಂ ನಿರ್ಆಣಕ್ಕಾಗಿ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾಲಸೋಲ ಮಾಡುತ್ತಾರೆ. ಅರಮನೆಯ ವಜ್ರ, ವೈಢೂರ್ಯ, ಮುತ್ತುರತ್ನಗಳನ್ನು ಮಾರಾಟ ಮಾಡುತ್ತಾರೆ. ಇದೆಲ್ಲವೂ ಪ್ರಜೆಗಳಿಂದಲೇ ಬಂದಿದ್ದು, ಇದು ಅವರ ಕಲ್ಯಾಣಕ್ಕಾಗಿ ವಿನಯೋಗವಾಗಬೇಕು ಎಂಬ ಅಪೂರ್ವ ಚಿಂತನೆ ಕಾಳಜಿ ಅವರಿಗಿರುತ್ತದೆ. ಹೀಗಿರುವಾಗ ಅವರ ಕನಸಿನ ಪ್ರಾಜೆಕ್ಟ್ ನಿರ್ಮಾಣ ಮಾಡಿದ್ದು ಸರ್. ಎಂ. ವಿಶ್ವೇಶ್ವರಯ್ಯ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ ?

Similar Posts

Leave a Reply

Your email address will not be published. Required fields are marked *