ದೇವರು ಸರ್ವಾಂತರ್ಯಾಮಿ ಎಂಬುದು ಭಾರತೀಯರಾದ ನಮ್ಮ ನಂಬಿಕೆ. ಆದರೂ ಗುಡಿಗಳನ್ನು ಕಟ್ಟಿ ಅಲ್ಲಿ ವಿಗ್ರಹಗಳನ್ನಿಟ್ಟು ಪೂಜಿಸುತ್ತೇವೆ. ಇದಕ್ಕೆ ಕಾರಣ ಅಲ್ಲಿ ಗರ್ಭಗುಡಿಯ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆಯಾಗಿದೆ ಎಂಬ ನಂಬಿಕೆ. ಇದರಿಂದ ಅಲ್ಲಿ ವಿಶೇಷ ಶಕ್ತಿಯಿದೆ. ಬೇಡಿದ್ದು, ಕೇಳಿದ್ದು ಈಡೇರುತ್ತದೆ ಎಂದು ಅಲ್ಲಿಗೆ ಹೋಗುತ್ತೇವೆ. ಇಂಥಲ್ಲಿಗೆ ಹೋದಾಗ ಭಕ್ತಿಭಾವ ಇರುವುದು ಸಹಜ. ನಿಜಕ್ಕೂ ಬೇಕಿದ್ದು ಇದೇ ಅಲ್ಲವೇ…. ಈ ಜಿಜ್ಞಾಸೆ ಏಕೆ ಎಂಬ ಪ್ರಶ್ನೆ ನಿಮಗೆ ಮೂಡಿರಬಹುದು… ಇದಕ್ಕೆ ಕಾರಣವೂ ಇದೆ.
ಇತ್ತೀಚೆಗೆ ಬೆಂಗಳೂರು ಮಹಾ ನಗರ ದಲ್ಲಿರುವ ರಾಜರಾಜೇಶ್ವರಿ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿಗೆ ತರಲಾಗಿದೆ. ಹೀಗೆ ತಂದವರು ಸರ್ಕಾರದವರೇನೂ ಅಲ್ಲ. ಅಲ್ಲಿಯ ಆಡಳಿತ ಮಂಡಳಿ. ಈ ದೇಗುಲ ದೊಳಗೆ ಬರಬೇಕಾದರೆ ಪುರುಷರು, ಸ್ತ್ರೀಯರು ಇಂಥಿಂಥ ಉಡುಪನ್ನೇ ಧರಿಸಿ ಬರಬೇಕೆಂದು ಫರ್ಮಾನು ಹೊರಡಿ ಸಿದ್ದಾರೆ. ಇದರ ವಿವರಗಳಿರುವ ಫಲಕ ವನ್ನು ದೇವಸ್ಥಾನದ ಹೊರ ಆವರಣ ದೊಳಗೆ ಹಾಕಿದ್ದಾರೆ.
ಅದೇನು ಆ ವಸ್ತ್ರಸಂಹಿತೆ ನೋಡೋಣ. ಪುರುಷರು ಜೀನ್ಸ್, ಶಾರ್ಟ್ಸ್, ಬರ್ಮುಡಾ ಮತ್ತು ಟೀ ಶರ್ಟ್ ಧರಿಸಿ ಬರುವಂತಿಲ್ಲ. ಬದಲಿಗೆ ಪಂಚೆ, ಪ್ಯಾಂಟ್, ಶಲ್ಯ ಮತ್ತು ಶರ್ಟ್ ಧರಿಸಿ ಬರಬೇಕು. ಮಹಿಳೆಯರು ಜೀನ್ಸ್, ಮಿಡಿ, ಮಿನಿ, ಶಾರ್ಟ್ಸ್ ಮತ್ತು ಬರ್ಮುಡಾ ಧರಿಸಿ ಬರುವಂತಿಲ್ಲ. ಸೀರೆ ಹಾಗೂ ಸಲ್ವಾರ್ ಕಮೀಜ್ ಧರಿಸಿ ಹೋಗಬೇಕು.
ರಾಜರಾಜೇಶ್ವರಿ ಹೆಸರಿನ ದೇಗುಲ ಇರುವ ಕಾರಣಕ್ಕೆ ಆ ಬಡಾವಣೆಗೆ ಅದೇ ಹೆಸರು ಬಂದಿದೆ. ಬೆಂಗಳೂರಿನಲ್ಲಿರುವ ಪ್ರಸಿದ್ಧ ದೇವಸ್ಥಾನಗಳಲ್ಲಿ ಇದು ಸಹ ಒಂದಾಗಿದೆ. ಮೊದಲು ಇಂಥ ವಸ್ತ್ರಸಂಹಿತೆ ಅಲ್ಲಿ ಇರಲಿಲ್ಲ. ಈಗ ಜಾರಿಗೆ ತರಲಾಗಿದೆ. ಇದಕ್ಕೆ ಭಕ್ತರಿಂದ ಪರ-ವಿರೋಧ ವ್ಯಕ್ತವಾಗಿದೆ. ಕೆಲವಾರು ಮಾಧ್ಯಮಗಳಲ್ಲಿಯೂ ಚರ್ಚೆಯಾಗಿದೆ.
ಬೆಂಗಳೂರಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚು. ಇತ್ತೀಚಿನ ವರ್ಷಗಳಲ್ಲಿ ಪ್ರವಾಸ ಹೋಗುವವರ , ಬರುವವರ ಸಂಖ್ಯೆ ಹೆಚ್ಚಾಗಿದೆ. ಇಂಥವರಲ್ಲಿ ಅನೇಕರು ಪ್ರವಾಸಕ್ಕೆ ಕಂಪರ್ಟ್ ಆದ ಉಡುಪುಗಳನ್ನು ಧರಿಸಲು ಬಯಸುತ್ತಾರೆ. ಅನೇಕರಿಗೆ ಜೀನ್ಸ್ ಪ್ಯಾಂಟ್, ಟೀ ಶರ್ಟ್, ಬರ್ಮುಡಾ ಸರಳ, ಆರಾಮದಾಯಕ ಉಡುಪು ಎನಿಸುತ್ತದೆ. ಅದರಲ್ಲಿಯೂ ಬೇಸಿಗೆಗಾಲದಲ್ಲಿ ಹತ್ತಿಯಿಂದ ಮಾಡಿದ ಇಂಥ ಉಡುಪು ಬಹು ಆರಾಮದಾಯಕ. ವೇಗವಾಗಿ ಓಡಾಡಲು ಸಹಾಯಕ.
ಪ್ರವಾಸದ ಪಟ್ಟಿಯಲ್ಲಿ ದೇಗುಲಗಳೂ ಇದ್ದಾಗ ಇದೇ ಉಡುಪಿನಲ್ಲಿಯೇ ಹೋಗುತ್ತಾರೆ. ಭಕ್ತಿಭಾವ ಇರುವ ಕಾರಣಕ್ಕಾಗಿಯೇ ಇವರು ದೇಗುಲಗಳಿಗೆ ಭೇಟಿ ನೀಡಿರುತ್ತಾರೆ. ಮುಖ್ಯವಾಗಿ ಬೇಕಿದ್ದು ಭಕ್ತಿ-ಭಾವವೇ ಹೊರತು ಅವರು ಯಾವ ಉಡುಗೆ-ತೊಡುಗೆ ಧರಿಸಿದ್ದಾರೆ ಎಂಬುದಲ್ಲ. ಅಷ್ಟಕ್ಕೂ ತನ್ನನ್ನು ನೋಡಲು ಬರುವ ಭಕ್ತರು ಇಂಥ ಉಡುಪನ್ನೇ ಧರಿಸಿ ಬರಬೇಕು ಎಂದು ದೇವರು ಹೇಳಿಲ್ಲವಲ್ಲ. ದೇವರು ಹೀಗೆ ಹೇಳಲು ಸಾಧ್ಯವಿಲ್ಲ. ಅದರಲ್ಲಿಯೂ ಹೆಣ್ಣು ದೇವರಾದ ರಾಜರಾಜೇಶ್ವರಿ ಹೀಗೆ ಭಾವಿಸುವುದಿಲ್ಲ. ಆಕೆ ಮಾತೃಸ್ವರೂಪಿ.
ದೇವರೇ ಕೇಳದ ವಸ್ತ್ರಸಂಹಿತೆ ವಿಚಾರ ದೇಗುಲದ ಆಡಳಿತ ಮಂಡಳಿಗೆ ಏಕೆ ಬೇಕಾಯಿತು… ಏಕೆ ವಸ್ತ್ರಸಂಹಿತೆ ಜಾರಿಗೆ ತಂದೆವು ಎಂಬುದನ್ನು ಅವರು ಹೇಳಿ್ಲ್ಲ. ಅವರು ಇಂಥ ಕಾರಣಕ್ಕಾಗಿ ಇದನ್ನು ಜಾರಿಗೆ ತಂದಿದ್ದೇವೆ ಎಂಬುದನ್ನು ಸ್ಪಷ್ಟಪಡಿಸುವ ಅಗತ್ಯವಿದೆ. ಬಹುಶಃ ಜೀನ್ಸ್, ಟೀ ಶರ್ಟ್, ಸ್ಕರ್ಟ್, ಮಿಡಿ ಇವೆಲ್ಲ ಅಸಭ್ಯ ಎನಿಸಿರಬಹುದು. ಭಾರತದಲ್ಲಿ ಸೀರೆ ಹೇಗೋ ಹಾಗೆ ಇಂಗ್ಲೆಡಿನಲ್ಲಿ ಸ್ಕರ್ಟ್. ಇದು ಹೇಗೆ ಅಸಭ್ಯ ? ಜೀನ್ಸ್, ಟೀ ಶರ್ಟ್ ಕೂಡ ಮೈ ಮುಚ್ಚುವಂಥ ಉಡುಗೆ. ಇದು ಹೇಗೆ ಅಸಭ್ಯವಾಗುತ್ತದೆ ? ಬಹುಶಃ ಇದು ಪಾಶ್ಚಿಮಾತ್ಯದ್ದು ಎಂಬ ಭಾವನೆ ಇರಬೇಕು. ಹಾಗೆ ನೋಡಿದರೆ ಪ್ಯಾಂಟ್, ಶರ್ಟ್ ಕೂಡ ಪಾಶ್ಚಿಮಾತ್ಯ ಅಲ್ಲವೇ ?
ಮೇಲಂಗಿ ಕಳಚಿಸುವ ಕಾರ್ಯ:
ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರದ ಕೆಲವು ದೇಗುಲಗಳಲ್ಲಿ ವಸ್ತ್ರಸಂಹಿತೆ ಬಹಳ ಕಾಲದಿಂದಲೂ ಇದೆ. ಇಂಥಲ್ಲಿ ಪುರುಷರು ಕಡ್ಡಾಯವಾಗಿ ಪಂಚೆ ಧರಿಸಿರಬೇಕು, ಮೇಲಂಗಿ ತೆಗೆದಿರಬೇಕು. ಮಹಿಳೆಯರು ಸೀರೆ ಅಥವಾ ಲಂಗ, ದಾವಣಿ ಧರಿಸಿರಬೇಕು. ಇಂಥ ಉಡುಪು ಇಲ್ಲದಿದ್ದರೆ ಆ ದೇಗುಲಗಳ ಒಳಗೆ ಪ್ರವೇಶವೇ ಇಲ್ಲ. ಇಂಥ ವಸ್ತ್ರಸಂಹಿತೆ ಇರುವ ದೇಗುಲಗಳಿಗೆ ಹಿಂದೆ ನನ್ನ ತಂದೆ-ತಾಯಿ ಜೊತೆ ಹೋಗಿದ್ದೇನೆ. ಆದ್ದರಿಂದ ಅಲ್ಲಿಯ ರೀತಿ-ರಿವಾಜುಗಳ ಪರಿಚಯ ಚೆನ್ನಾಗಿಯೇ ಆಗಿದೆ.
ಕೇರಳದ ತಿರುವಂತನಪುರ ದೇಗುಲದಲ್ಲಿ ವಸ್ತ್ರಸಂಹಿತೆ ಎನ್ನುವುದು ಬಹು ಕಟ್ಟುನಿಟ್ಟು. ಇಲ್ಲಿಯ ಕಟ್ಟುಪಡುಗಳನ್ನು ಭಕ್ತರು ಪಾಲಿಸುತ್ತಿದ್ದಾರೆಯೇ ಇಲ್ಲವೇ ಎಂಬುದನ್ನೂ ಗಮನಿಸುವ ಸಲುವಾಗಿಯೇ ಅಲ್ಲಿ ಖಾಸಗಿ ಪಡೆಯೇ ಇದೆ. ದೇಗುಲ ವಿಧಿಸಿರುವ ನಿಯಮ ಪಾಲಿಸದಿದ್ದರೆ ಇವರು ದೇಗುಲದ ಹೊಸ್ತಿಲ್ಲನ್ನೂ ದಾಟಿ ಒಳಹೋಗಲು ಬಿಡುವುದಿಲ್ಲ. ಇವರು ಸಹ ಮುಂಡು ಧರಿಸಿ, ಮೇಲಂಗಿ ಕಳಚಿ ನಿಂತಿರುತ್ತಾರೆ. ನೌಕರರಾದ ಕಾರಣಕ್ಕೆ ಇದನ್ನೆಲ್ಲ ಅವರು ಪಾಲಿಸಬೇಕಾದ ಅನಿವಾರ್ಯತೆ ಇದೆ. ಆದರೆ ದೇವರ ಕೆಲವು ಕ್ಷಣಗಳ ದರ್ಶನಕ್ಕೆ ಬಂದ ಭಕ್ತರನ್ನು ಇಂಥ ಅನಿವಾರ್ಯತೆಗೆ ದೂಡುವುದೇಕೆ. ಸಾರ್ವಜನಿಕವಾಗಿ ಅರೆಬೆತ್ತಲೆಯಾಗುವುದು ಮುಜುಗರದ ಸಂಗತಿ ಅಲ್ಲವೆ ?
ಮುಂಡು ಕಟ್ಟಿಕೊಳ್ಳಬೇಕು:
ದೇವಸ್ಥಾನದ ಒಳಗೆ ಹೋಗಬೇಕಾದರೆ ಪುರುಷರು ಮುಂಡು ಧರಿಸಿರಬೇಕು. ಮೇಲಂಗಿ ಕಳಚಿರಬೇಕು. ಸ್ತ್ರೀಯರು ಸೀರೆ ಧರಿಸಿರಬೇಕು. ಸೀರೆ ಹೊರತಾಗಿ ಬೇರೆ ಉಡುಪು ಧರಿಸಿದ್ದರೆ ಅದರ ಮೇಲೆ ಮುಂಡು ಕಟ್ಟಿಕೊಳ್ಳಬೇಕು. ಮುಂಡು ಎಂದರೆ ಪಂಚೆ. ಮೊದಲ ಬಾರಿಗೆ ಹೋಗುವ ಭಕ್ತರಿಗೆ ಈ ರೀತಿ-ರಿವಾಜು ಪರಿಚಯ ಇರುವುದಿಲ್ಲ. ಇಂಥವರಿಗೆ ಅಲ್ಲಿ ಮುಂಡನ್ನು ಬಾಡಿಗೆಗೆ ನೀಡುತ್ತಾರೆ. ದೇವರ ದರ್ಶನದ ನಂತರ ಅದನ್ನು ವಾಪಸ್ಸು ಮಾಡಬೇಕು. ಸ್ವತಃಕ್ಕೆ ಪಂಚೆ ಬೇಕಾದರೂ ಖರೀದಿಸಲು ದೇವಸ್ಥಾನದ ಮುಂಭಾಗ ಸಾಲು ಅಂಗಡಿಗಳಿವೆ.
ಮಹಿಳೆಯರು ಸೀರೆ, ಮುಂಡು ಧರಿಸಿರದಿದ್ದರೆ ಒಳಗೆ ಪ್ರವೇಶವೇ ಇರಲಿಲ್ಲ. ಈ ಅಲಿಖಿತ ನಿಯಮ ಸಡಿಲವಾಗಿದ್ದು ಸತೀಶ್ ಎಂಬ ಐಎಎಸ್ ಅಧಿಕಾರಿ, ದೇಗುಲದ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಬಂದ ನಂತರ. ಇವರು ದೇಗುಲದ ತಂತ್ರಿ ಅಂದರೆ ಮುಖ್ಯಅರ್ಚಕರ ವಿರೋಧದ ನಡುವೆಯೂ ಚೂಡಿದಾರ್, ಸಲ್ವಾರ್ ಕಮೀಜ್ ಧರಿಸಿದ ಮಹಿಳೆಯರಿಗೆ ದೇಗುಲದ ಒಳಗೆ ಪ್ರವೇಶ ಕಲ್ಪಿಸಿದರು. ಇಂಥ ಉಡುಪು ಧರಿಸಿದ ಮಹಿಳೆಯರು ಅದರ ಮೇಲೆ ಮುಂಡು ಧರಿಸದೇ ಒಳಗೆ ಹೋಗಬಹುದಾಗಿತ್ತು. ಆದರೆ ಇದು ಬಹಳ ದಿನ ಮುಂದುವರಿಯಲಿಲ್ಲ. ಮತ್ತೆ ಮೊದಲಿನ ರೀತಿ-ರಿವಾಜೇ ಜಾರಿಗೆ ಬಂತು.
ಮೇಲಂಗಿ ಏಕೆ ಕಳಚಬೇಕು
ಪುರುಷರು ಮೇಲಂಗಿ ಏಕೆ ಕಳಚಬೇಕು ಹೀಗೆ ಮಾಡದಿದ್ದರೆ ದೇವರು ಮುನಿಸಿಕೊಳ್ಳುತ್ತಾನೆಯೇ…. ಖಂಡಿತವಾಗಿಯೂ ಇಲ್ಲ. ಮೇಲಂಗಿ ಕಳಚಿದ್ದರೆ ಬಂದ ಭಕ್ತರಲ್ಲಿ ಬ್ರಾಹ್ಮಣರು ಯಾರು, ಅಬ್ರಾಹ್ಮಣರು ಯಾರು ಎಂದು ಗುರುತಿಸುವುದು ಸುಲಭ. ಸಾಮಾನ್ಯವಾಗಿ ಮಹಿಳೆಯರು ತಮ್ಮ ತಂದೆ/ ಸಹೋದರ/ ಪತಿ ಹೀಗೆ ಯಾರದರೊಬ್ಬರೊಡನೆ ದೇಗುಲಕ್ಕೆ ತೆರಳುವುದು ಸಾಮಾನ್ಯ. ಜನಿವಾರ ಧರಿಸಿದ ಬ್ರಾಹ್ಮಣ ಪುರುಷರೊಂದಿಗೆ ಬಂದಾಗ ಅವರನ್ನೂ ಬ್ರಾಹ್ಮಣರು ಎಂದು ಗುರುತಿಸುವುದು ಸಾಧ್ಯವಾಗುತ್ತಿತ್ತು.
ಹಿಂದೆ ಕಡ್ಡಾಯವಾಗಿ ಸೀರೆ ಅಥವಾ ಲಂಗದಾವಣಿ ಧರಿಸಿದ ಮಹಿಳೆಯರಿಗೆ ಮಾತ್ರ ಒಳಗೆ ಪ್ರವೇಶ ಇರುತ್ತಿತ್ತು. ಯಾವುದೇ ಉಡುಪು ಧರಿಸಿ ಬಂದರೂ ಮೇಲೆ ಮುಂಡು ಕಟ್ಟಿಕೊಂಡು ಹೋಗುವುದಕ್ಕೆ ಅವಕಾಶ ಇರುತ್ತಿರಲಿಲ್ಲ. ಇದಕ್ಕೆ ಕಾರಣವೆಂದರೆ ಚೂಡಿದಾರ್, ಸಲ್ವಾರ್ ಕಮೀಜ್ ಇವೆಲ್ಲ ಅನ್ಯ ಧರ್ಮದವರ ಉಡುಪು ಎಂಬ ಭಾವನೆ ಇದಿದ್ದು. ಬರುಬರುತ್ತಾ ಹಿಂದೂಗಳೂ ಇವುಗಳನ್ನು ಧರಿಸುತ್ತಾರೆ ಎಂದು ಮನವರಿಕೆಯಾದ ನಂತರ ಅದರ ಮೇಲೆ ಮುಂಡು ಕಟ್ಟಿಕೊಂಡು ಬರಲು ಅವಕಾಶ ನೀಡಿದರು.
ಏನು ಲಾಭ:
ಜನಿವಾರ ಧರಿಸಿ ಬಂದರು ಅನುಮಾನ ಬಂದರೆ ಯಾವ ಕುಲ, ಗೋತ್ರ ಎಂದೆಲ್ಲ ವಿಚಾರಿಸುವ ಪರಿಪಾಠ ಕೆಲವೆಡೆ ಇದೆ. ಇದಕ್ಕೆ ಉದಾಹರಣೆ ಮಂತ್ರಾಲಯ.ಅಲ್ಲಿ ಬ್ರಾಹ್ಮಣರಿಗೆ ಮಾತ್ರ ನೀಡುವ ವಸತಿಗೃಹಗಳಿವೆ. ಇಲ್ಲೆಲ್ಲ ಬ್ರಾಹ್ಮಣರಲ್ಲದವರಿಗೆ ಇಲ್ಲಿ ವಸತಿ ಕೊಡುವುದಿಲ್ಲ ಎಂದು ನೇರವಾಗಿಯೇ ಹೇಳುತ್ತಾರೆ.ಅಲ್ಲಿ ಹೋದರೆ ನಿಮ್ಮ ಕುಲ, ಗೋತ್ರಗಳನ್ನು ವಿವರವಾಗಿ ಕೇಳಿಯೇ ವಸತಿ ನೀಡುತ್ತಾರೆ. ಅಲ್ಲಿನ ಕೆಲವು ಛತ್ರಗಳಲ್ಲಿಯೂ ಈ ಪರಿಪಾಠ ಇದೆ.
ಇಂದಿಗೂ ಸಾಕಷ್ಟು ದೇವಸ್ಥಾನಗಳಲ್ಲಿ, ಬ್ರಾಹ್ಮಣ ಮಠಗಳಲ್ಲಿ ಊಟಕ್ಕೆ ಅಥವಾ ಪ್ರಸಾದಕ್ಕೆ ಬ್ರಾಹ್ಮಣರಿಗೆ ಪ್ರತ್ಯೇಕ ಪಂಕ್ತಿಯಿದೆ. ಅಲ್ಲಿ ಬೇರೆಯವರು ಊಟಕ್ಕೆ ಕುಳಿತರೆ ಕೆಲವೆಡೆ ಸುಮ್ಮನಾಗಬಹುದು. ಮತ್ತೆ ಕೆಲವೆಡೆ ಮುಲಾಜಿಲ್ಲದೇ ಎಬ್ಬಿಸುತ್ತಾರೆ. ಹೀಗೆ ಎಬ್ಬಿಸಿಕೊಂಡವರಲ್ಲಿ ಹಲವರು ಅದಕ್ಕೆ ಬೇಸರ ಮಾಡಿಕೊಳ್ಳುವುದಿಲ್ಲ. ಏನೋ ಅಲ್ಲಿಯ ಅಭ್ಯಾಸ ಎಂದು ಸುಮ್ಮನಾಗುತ್ತಾರೆ. ಮೈಮೇಲೆ ಜನಿವಾರವಿದ್ದರೆ ದೇಗುಲದ ಯಾವ ಮೂಲೆಗಾದರೂ ಸಲೀಸಾಗಿ ಹೋಗಿ ಬರಬಹುದು. ಆದರೆ ಎಲ್ಲರಿಗೂ ಈ ಅವಕಾಶವಿಲ್ಲ.
ನೀವು ಗಮನಿಸಿರಬಹುದು. ಮೇಲಂಗಿಯನ್ನು ಕಡ್ಡಾಯವಾಗಿ ಕಳಚಿಬನ್ನಿ ಎಂಬ ಕಟ್ಟುಪಾಡು ಇಲ್ಲದ ದೇವಸ್ಥಾನಗಳಲ್ಲಿಯೂ ಪಂಚೆ ಉಟ್ಟು, ಮೇಲಂಗಿ ಧರಿಸದೇ ಜನಿವಾರವನ್ನು ಹೆಮ್ಮೆ ಎಂಬಂತೆ ಪ್ರದರ್ಶಿಸುತ್ತಾ ಓಡಾಡುವವರನ್ನೂ ಕಾಣಬಹುದು. ಬಹುಶಃ ಅವರಿಗೆಲ್ಲ ತಾವು ಬ್ರಾಹ್ಮಣರು ಎಂಬ ಹೆಮ್ಮೆ ಇರುವುದೇ ಇದಕ್ಕೆ ಕಾರಣ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಉಡುದಾರ ಧರಿಸಿದವರು ಈ ರೀತಿ ಅದನ್ನು ಪ್ರದರ್ಶಿಸಿಕೊಂಡು ಓಡಾಡುವುದನ್ನು ನಾನಂತೂ ಕಂಡಿಲ್ಲ. ಅಂದಹಾಗೆ ಉಡುದಾರ ಎಂದರೆ ಸೊಂಟಕ್ಕೆ ಕಟ್ಟಿಕೊಳ್ಳುವ ದಾರ. ಇದನ್ನು ಶೂದ್ರರು ಧರಿಸುತ್ತಾರೆ. ಬಾಲ್ಯದಲ್ಲಿ ಇದು ಬೆಲ್ಟಿನ ಹಾಗೆ ಉಪಯೋಗಕ್ಕೆ ಬರುತ್ತದೆ. ಸೊಂಟಕ್ಕಿಂತ ದೊಡ್ಡ ಅಳತೆ ಚಡ್ಡಿಯಾದರೆ ಅದು ಜಾರಿ ಬೀಳದಂತೆ ಕಟ್ಟಿಕೊಳ್ಳಲು ಉಡುದಾರ ಸಹಾಯಕ್ಕೆ ಬರುತ್ತಿತ್ತು.
ದಲಿತರಿಗೆ ಪ್ರವೇಶ ನಿರಾಕರಿಸುವ ದೇಗುಲಗಳು:
ಇಂದಿಗೂ ಗ್ರಾಮೀಣ ಪ್ರದೇಶಗಳ ಸಾಕಷ್ಟು ದೇಗುಲಗಳಲ್ಲಿ ದಲಿತರಿಗೆ ಪ್ರವೇಶವಿಲ್ಲ. ಹಿಂದುಳಿದವರಿಗೆ ಪ್ರವೇಶ ಇದ್ದರೂ ಒಂದು ಪ್ರಾಕಾರದವರೆಗೆ ಮಾತ್ರ. ದಲಿತರಿಗೆ ಪ್ರವೇಶವಿಲ್ಲ, ಹಿಂದುಳಿದವರಿಗೆ ಇಂಥ ಪ್ರಾಕಾರದವರೆಗೂ ಬರಲು ಅವಕಾಶವಿದೆ ಎಂಬ ಫಲಕವನ್ನೇನೂ ಅವರು ಹಾಕಿರುವುದಿಲ್ಲ. ಆದರೂ ದಲಿತರು, ಹಿಂದುಳಿದವರು ಗರ್ಭಗುಡಿ ತನಕ ಹೋಗುವುದಿಲ್ಲ. ಏಕೆಂದರೆ ಸ್ಥಳೀಯ ಮೇಲ್ಜಾತಿಗಳ ಕೆಂಗಣ್ಣಿಗೆ ಗುರಿಯಾಗಬೇಕೆನ್ನುವ ಆತಂಕ, ಭಯ. ಈ ಆತಂಕವೇನೂ ಸುಮ್ಮನೆ ಬಂದಿದ್ದಲ್ಲ. ಅಂಥ ಸ್ಥಿತಿಗೆ ಅವರನ್ನು ತರುವಂಥ ದುರ್ಘಟನೆಗಳೂ ಜರುಗಿರುತ್ತವೆ.
ಆರತಿತಟ್ಟೆಗೆ ಬಿದ್ದ ಹಣ
ದೇವರಿಗೆ ಮಂಗಳಾರತಿ ಎತ್ತಿದ ನಂತರ ಭಕ್ತರ ಮುಂದೆ ಅದನ್ನು ಹಿಡಿಯುವುದು, ಅವರು ಆರತಿ ತಟ್ಟೆಗೆ ತಮ್ಮ ಸಾಮರ್ಥ್ಯನುಸಾರ ಹಣ ಹಾಕುವುದು ರೂಢಿ. ಹುಂಡಿಗೆ ಬಿದ್ದ ಹಣ ದೇಗುಲದ ಅಭಿವೃದ್ಧಿಗೆ, ತಟ್ಟೆಗೆ ಬಿದ್ದ ಹಣ ಅರ್ಚಕರಿಗೆ ಹೋಗುತ್ತದೆ. ಅರ್ಚಕರು, ಹಿಂದುಳಿದವರು, ದಲಿತರ ಮುಂದೆಯೂ ಆರತಿ ತಟ್ಟೆ ಹಿಡಿಯುತ್ತಾರೆ. ತಟ್ಟೆಗೆ ಅವರು ಹಾಕಿದ ಹಣ ಗರ್ಭಗುಡಿಗೂ ಹೋಗುತ್ತದೆ. ಅಲ್ಲಿ ಚಿಲ್ಲರೆ, ನೋಟು ಇವುಗಳನ್ನೆಲ್ಲ ವಿಂಗಡಿಸಿ ಜೇಬಿಗೆ ಹಾಕಿಕೊಳ್ಳುತ್ತಾರೆ. ಹಿಂದುಳಿದವರು, ದಲಿತರು ತಮ್ಮ ಮೈ ಬೆವರು ಹರಿಸಿ ದುಡಿದು ತಾವೇ ಕೈಯಾರೆ ನೀಡಿದ ಹಣ ಗರ್ಭಗುಡಿಯ ತನಕ ಹೋಗುವುದಾದರೆ ಇವರಿಗೇಕೆ ಅಲ್ಲಿಗೆ ಪ್ರವೇಶವಿಲ್ಲ ? ದುಡ್ಡಿಗಿಲ್ಲದ ಮೈಲಿಗೆ ಮನುಷ್ಯರಿಗೆದೆಯೇ ಅಥವಾ ಇವರ್ಯಾರು ಮನುಷ್ಯರಲ್ಲ ಎಂಬ ಭಾವನೆ ಹಳ್ಳಿಗಳನ್ನು ಹಿಡಿತದಲ್ಲಿರಿಸಿಕೊಂಡಿರುವ ಮೇಜ್ಜಾತಿಗಳಿಗಿದೆಯೇ?
ಈ ಪ್ರಶ್ನೆಗಳನ್ನು ಹಳ್ಳಿಯಲ್ಲಿರುವ ಬಹುತೇಕರು ಕೇಳುವುದಿಲ್ಲ. ಇದೆಲ್ಲ ಅವರಿಗೆ ಅಭ್ಯಾಸವಾಗಿ ಹೋಗಿದೆ. ಪಟ್ಟಣ-ನಗರ ಪ್ರದೇಶಗಳಿಂದ ಮರಳಿ ಹೋದ ಯುವಕರು ಇಂಥ ಪ್ರಶ್ನೆಗಳನ್ನೆತ್ತಿದರೆ ಮೇಲ್ಜಾತಿಗಳವರ ಕಣ್ಣಿನಲ್ಲಿ ಅವರು ದುಷ್ಟರಾಗುತ್ತಾರೆ. ಮತ್ತೆಮತ್ತೆ ಸಮಾನತೆಯ ಕೂಗು ಮೊಳಗಿಸಿದ ಇಂಥ ಯುವಕರು ಕಗ್ಗೊಲೆಯಾದ ಉದಾಹರಣೆಗಳೂ ಇವೆ.
ಅಭಿವೃದ್ಧಿಗೆ ಎಲ್ಲರ ಸಹಕಾರ ಬೇಕಲ್ಲವೇ ?
.ದೇವಸ್ಥಾನಗಳಾಗಲಿ, ಮಠಗಳಾಗಲಿ ಅಭಿವೃದ್ಧಿಯಾಗಬೇಕಾದರೆ ಎಲ್ಲ ಜಾತಿಸಮುದಾಯಗಳ ಸಹಕಾರ ಬೇಕಾಗುತ್ತದೆ. ಇದು ತಾರತಮ್ಯವಿಲ್ಲದೇ ಎಲ್ಲರನ್ನೂ ಸಮಾನವಾಗಿ ಕಾಣುವ ಮನೋಭಾವಕ್ಕೆ ನಾಂದಿಯಾಗಬೇಕು. ಆದರೆ ಆಗುತ್ತಿರುವುದು ಮಾತ್ರ ಇದಕ್ಕೆ ತದ್ವಿರುದ್ಧ….
ಉತ್ತಮ ವಿಶ್ಲೇಷಣೆ ಧನ್ಯವಾದಗಳು
ವಾಸ್ತವ ಸಂಗತಿಯ ಲೇಖನ. ಚಿಂತನಾತ್ಮಕ ಬರಹ.