ನಮ್ಮ ರಾಜ್ಯ ಕರ್ನಾಟಕದಲ್ಲಿ ಇತರ ಸಾಕಷ್ಟು ರಾಜ್ಯಗಳಲ್ಲಿ ಸಾಕ್ಷರತೆ ಮಟ್ಟ ಹೆಚ್ಚಿದೆ. ಇದು ಸಂತೋಷದ ಸಂಗತಿ. ದೇಶಕ್ಕೆ ವಿದ್ಯಾವಂತರ ಅಗತ್ಯವಿದೆ. ಇದರಿಂದ ಆಧುನಿಕ ದಿನಗಳಲ್ಲಿ ಪ್ರಯೋಜನಗಳಿವೆ. ಸಾಕ್ಷರತೆಗೆ ಹೋಲಿಸಿದರೆ ಜಲಸಾಕ್ಷರತೆಯ ಮಟ್ಟ ಹೆಚ್ಚಿದೆಯೇ ?

ಈ ಪ್ರಶ್ನೆಗೆ ಖಂಡಿತವಾಗಿಯೂ “ ಜಲ ಸಾಕ್ಷರತೆ ” ಶೋಚನೀಯ ಪರಿಸ್ಥಿಯಲ್ಲಿದೆ ಎಂಬ ಉತ್ತರವೇ ಲಭಿಸುತ್ತದೆ. ಕರ್ನಾಟಕ ಸೇರಿದಂತೆ ಇತರ ಹಲವು ರಾಜ್ಯಗಳಲ್ಲಿ ಕೆಲವು ಪ್ರದೇಶಗಳಲ್ಲಿ ಉತ್ತಮ ಪ್ರಮಾಣದಲ್ಲಿ ನೀರಿದ್ದರೆ ಇನ್ನೂ ಕೆಲವು ಪ್ರದೇಶಗಳಲ್ಲಿ ಹಾಹಾಕಾರವಿದೆ. ಸಾಕಷ್ಟು ದೂರ ನಡೆದು ಅಥವಾ ವಾಹನಗಳನ್ನು ತೆಗೆದುಕೊಂಡು  ನೀರನ್ನು ತರಬೇಕಾದ ದುಸ್ಥಿತಿ ಇದೆ. ಬೇಸಿಗೆಯ ದಿನಗಳಲ್ಲಿ ಎಲ್ಲೆಡೆಯೂ ನೀರಿನ ಸಮಸ್ಯೆ ಎದುರಾಗುತ್ತದೆ. ಇದರಿಂದ ಜನ – ಜಾನುವಾರು, ಮರಗಿಡಗಳು ಎದುರಿಸಬೇಕಾದ ದುಸ್ಥಿತಿ ಅಪಾರ. ಮನುಷ್ಯರು ತಮ್ಮ ಕಷ್ಟ ಹೇಳಿಕೊಳ್ಳಬಹುದು ; ಆದರೆ ಜಾನುವಾರುಗಳು, ಮರಗಿಡಗಳ ಸ್ಥಿತಿ ಏನಾಗಬಹುದು ?

ಇವೆಲ್ಲವನ್ನು ಎಷ್ಟು ಜನ ಯೋಚಿಸಬಹುದು ? ಪಟ್ಟಣಗಳು, ನಗರಗಳಲ್ಲಿ ಮನೆ ಮುಂದಿನ ಅಂಗಳ, ವಾಹನಗಳನ್ನು ಸ್ವಚ್ಚ ಮಾಡಲು ಅಮೂಲ್ಯ ಕುಡಿಯುವ ನೀರನ್ನು ಬಳಸುವ ದೃಶ್ಯಗಳು ಸಾಮಾನ್ಯ. ಒಂದೇ ಒಂದು ಸಣ್ಣ ಬಕೇಟಿನಲ್ಲಿ ಆಗುವ ಕೆಲಸಕ್ಕೆ ನಿತ್ಯ ನೂರಾರು ಲೀಟರ್ ನೀರು ಬಳಸುತ್ತಾರೆ ಎಂಬುದು ಆಘಾತಕಾರಿ

ನೀವು ಗಮನಿಸಿರಬಹುದು; ಮನೆಗಳಲ್ಲಿ, ಹೋಟೆಲ್ ಗಳಲ್ಲಿ ಸಿಂಕುಗಳ ಮುಂದೆ ತಮ್ಮ ಕೈಗಳನ್ನು ಸ್ವಚ್ಚ ಮಾಡಲು ನಿಂತವರು ಸಿಂಕಿನ ನಳ ಬಂದ್ ಮಾಡಿರುವುದಿಲ್ಲ. ಸೋಪು ಹಾಕಿದ ಹಸ್ತಗಳನ್ನು ಉಜ್ಜುತ್ತಿರುತ್ತಾರೆ. ನಲ್ಲಿಯಿಂದ ನೀರು ಹರಿದು ಹೋಗುತ್ತಲೇ ಇರುತ್ತದೆ. ಸಾಕಷ್ಟು ಮಂದಿ ತಾಸುಗಟ್ಟಲೇ ಸ್ನಾನ ಮಾಡುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ಹೀಗೆ ಸಾಕಷ್ಟು ನೀರು ವ್ಯರ್ಥವಾಗಿ ಚರಂಡಿ ಸೇರುತ್ತದೆ.

ಹಲವರು ಮನೆಗಳಲ್ಲಿ ಪಾತ್ರೆಗಳನ್ನು ತೊಳೆಯುವಾಗಲೂ ನಳದಿಂದ ಸತತವಾಗಿ ನೀರು ಹರಿದು ಹೋಗುತ್ತಲೇ ಇರುತ್ತದೆ. ಪಾತ್ರೆಗಳೆಲ್ಲವನ್ನೂ ತೊಳೆದು ಮುಗಿಸುವ ತನಕವೂ ಬಂದ್ ಮಾಡುವುದಿಲ್ಲ. ಇದರ ಬದಲು ಬಕೇಟಿನಲ್ಲಿ ನೀರು ತುಂಬಿಕೊಂಡು ಎಷ್ಟು ಬೇಕೋ ಅಷ್ಟು ನೀರು ಮಾತ್ರ ಹಾಕಿ ಪಾತ್ರೆ ಸ್ವಚ್ಚಗೊಳಿಸುವುದರಿಂದ ಅಮೂಲ್ಯ ನೀರಿನ ಉಳಿತಾಯ ಮಾಡಬಹುದು. ಬಟ್ಟೆಗಳನ್ನು ಸ್ವಚ್ಚ ಮಾಡಲು ಸಹ ಸಾಧ್ಯವಾದಷ್ಟೂ ಕಡಿಮೆ ನೀರು ಬಳಸಿದರೂ ನೀರಿನ ಉಳಿತಾಯ ಮಾಡಬಹುದು

ನಗರ ಪ್ರದೇಶಗಳಲ್ಲಿ ಮಾತ್ರವಲ್ಲ. ಗ್ರಾಮೀಣ ಪ್ರದೇಶಗಳಲ್ಲಿಯೂ ನೀರಿನ ಪೋಲು ಆಗುತ್ತದೆ. ಅಧಿಕ ನೀರು, ಅಧಿಕ ಬೆಳೆ ಎಂಬ ಭ್ರಮೆ ಇನ್ನೂ ಹಲವರಿಗಿದೆ. ತೆರೆದ ಬಾವಿ, ಕೊಳವೆಬಾವಿಗಳಿಂದ ನೀರನ್ನು ಮೇಲೆತ್ತಲು ಅಳವಡಿಸಿರುವ ಪಂಪ್ ಸೆಟ್ ಗಳು ವಿದ್ಯುತ್ ಬಂದ ತಕ್ಷಣ ಸ್ವಯಂಚಾಲಿತವಾಗಿ ಆನ್ ಆಗುವಂಥ ವ್ಯವಸ್ಥೆ ಇತ್ತೀಚೆಗೆ ಸಾಮಾನ್ಯ. ಗ್ರಾಮೀಣ ಪ್ರದೇಶಗಳಲ್ಲಿ ರಾತ್ರಿವೇಳೆ ಇಂಥ ಕಾರ್ಯಗಳಿಗೆ ಅಧಿಕ ಸಾಮರ್ಥ್ಯದ ವಿದ್ಯುತ್ ನೀಡುತ್ತಾರೆ. ಈ ವೇಳೆ ಹಲವರ ಹೊಲಗದ್ದೆ – ತೋಟಗಳಲ್ಲಿ ಮೋಟರ್ ಚಾಲಿತವಾದರೆ ಬೆಳಗ್ಗೆ ರೈತ ಬಂದು ಬಂದ್ ಮಾಡುವ ತನಕವೂ ನೀರು ಹರಿದು ಹೋಗುತ್ತಲೇ ಇರುತ್ತದೆ.

ಏನು ಮಾಡಬಬಹುದು ?
ಜಲ ಸಾಕ್ಷರತೆ ಎಂದು ಹೇಳಿದರೆ ಕೇಳುವ ವಯಸ್ಕರು ಕಡಿಮೆ. ನಮಗೆ ಗೊತ್ತಿಲ್ಲದ್ದನ್ನು ಇವರು ಹೇಳುತ್ತಾರಾ ಎಂಬ ಉದಾಸೀನವೂ ಇರುತ್ತದೆ. ಆದ್ದರಿಂದ ಪ್ರಾಥಮಿಕ ಶಾಲೆಗಳಲ್ಲಿ ಇದರ ಬಗ್ಗೆ ಅರಿವು ಮೂಡಿಸಬೇಕು. ತಮ್ಮ ಮನೆಯ ಸಣ್ಣ ಪ್ರಾಯದ ಮಕ್ಕಳು ಹೇಳುವ ಪಾಠವನ್ನು ದೊಡ್ಡವರೂ ಕೇಳುತ್ತಾರೆ. ಆಗ ಪರಿಸ್ಥಿತಿ ಬದಲಾಗಬಹುದು. ಜಲ ಸಾಕ್ಷರತೆ ಪಸರಿಸಬಹುದು. ಹೀಗಾದಾಗ ಮಾತ್ರ ನೀರಿನ ಅಮೂಲ್ಯತೆ ಅರಿವು ಆಗುತ್ತದೆ.

Similar Posts

Leave a Reply

Your email address will not be published. Required fields are marked *