ಲುಲು ಮಾಲಿಗೆ ಬೆಂಗಳೂರು ಫಿಲ್ಮ್ ಫೆಸ್ಟಿವಲ್; ಸಿನಿಮಾಸಕ್ತರಿಗೆ ದೊಡ್ಡ ನಷ್ಟ
ಸಿನಿಮಾಸಕ್ತರು ಪ್ರತಿವರ್ಷ ಕಾತರದಿಂದ ಎದುರುನೋಡುವ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ಗೆ ದಿನಾಂಕ ನಿಗದಿಯಾಗಿದೆ. ಈ ಬಾರಿಯ 17ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ (Bengaluru international film festival) 2026ರ ಜನವರಿ 29ರಿಂದ ಫೆಬ್ರವರಿ 6ನೇ ತಾರೀಖಿನವರೆಗೆ ನಡೆಯಲಿದೆ. ಪ್ರಮುಖ ಬದಲಾವಣೆ ಎಂದರೆ ಒರಾಯನ್ ಮಾಲಿನಿಂದ (Orion Mall) ಲುಲು ಮಾಲಿಗೆ (Lulu Mall) ಸ್ಥಳಾಂತರಗೊಂಡಿರುವುದು.
ಎರಡೂ ಥಿಯೇಟರ್ ಗಳು ರಾಜಾಜಿನಗರದಲ್ಲಿಯೇ 5 ಕಿಲೋ ಅಂತರದಲ್ಲಿಯೇ ಇವೆ. ಒರಾಯನ್ ಮಗ್ಗಲಿನಲ್ಲಿಯೇ ಮೈಸೂರು ಸಾಬೂನು ಕಾರ್ಖಾನೆ ಸ್ಟಾಪಿನ ಮೆಟ್ರೋ ರೈಲ್ವೆ ಸ್ಟೇಷನ್ ಇದೆ. ಲುಲು ಮಾಲಿಗೆ ಒಳದಾರಿಯಲ್ಲಿ ಎರಡು ಫರ್ಲಾಂಗ್ ದೂರದಲ್ಲಿ ಮಾಗಡಿ ರೈಲ್ವೆ ಸ್ಟೇಷನ್ ಇದೆ. ಅಡಿಗಡಿಗೆ ಸಿಟಿ ಬಸ್ಸುಗಳಿವೆ. ಆದ್ದರಿಂದ ಸಂಪರ್ಕಕ್ಕೇನೂ ತೊಂದರೆಯಿಲ್ಲ
ಎರಡೂ ಕಡೆಯೂ 11 ಸ್ಕ್ರೀನ್ ಗಳಿವೆ. ಒರಾಯನ್ ಮಾಲಿನಲ್ಲಿ ಪಿವಿಆರ್ ಸಿನಿಮಾಸ್, ಲುಲು ಮಾಲಿನಲ್ಲಿ ಸಿನಿಪೊಲಿಸ್ ಇವೆ. ಎರಡೂ ಕಡೆಯೂ ಮಲ್ಟಿಫ್ಲೆಕ್ಸ್, ಐಮ್ಯಾಕ್ಸ್, ೪ಡಿಎಕ್ಸ್ ಫಾರ್ಮಾಟ್ ಸೇರಿದಂತೆ ಅತ್ಯುತ್ತಮ ಸಿನಿಮಾ ತಂತ್ರಜ್ಞಾನವಿದೆ. ಮುಖ್ಯವಾದ ಅನಾನುಕೂಲ ಇರುವುದು ಪ್ರೇಕ್ಷಕ ಸೀಟುಗಳ ಸಂಖ್ಯೆಯಲ್ಲಿ ಎಂಬುದು ಗಮನಾರ್ಹ.

ಒರಾಯನ್ ಮಾಲಿನ 11 ಥಿಯೇಟರ್ ಗಳಲ್ಲಿ ಒಟ್ಟು 2, 800 ಸೀಟುಗಳಿವೆ. ಲುಲು ಮಾಲಿನಲ್ಲಿ 2,053 ಸೀಟುಗಳಿವೆ. ಸೀಟುಗಳ ಸಾಮರ್ಥ್ಯದಲ್ಲಿರುವ ವ್ಯತ್ಯಾಸ ಅಗಾಧ. ಫಿಲ್ಮ್ ಫೆಸ್ಟಿವಲ್ ಸಂದರ್ಭದಲ್ಲಿ ಪ್ರತಿನಿತ್ಯ ಸಾಮಾನ್ಯವಾಗಿ ೫ ಪ್ರದರ್ಶನಗಳು ನಡೆಯುತ್ತವೆ. ಒರಾಯನ್ ಮಾಲ್ ನಲ್ಲಾದರೆ ಪ್ರತಿದಿನ 14,000 ಮಂದಿ ಸಿನಿಮಾ ವೀಕ್ಷಣೆ ಮಾಡುತ್ತಿದ್ದರು. ಲುಲು ಮಾಲಿನಲ್ಲಿ 10,265 ಮಂದಿ ವೀಕ್ಷಣೆ ಮಾಡಬಹುದು.
ಲುಲು ಮಾಲಿನಲ್ಲಿ ಒಂದೇ ಒಂದು ಪ್ರದರ್ಶನವಾದರೆ 747 ಮಂದಿ ಪ್ರೇಕ್ಷಕರು ಕಡಿಮೆಯಾಗುತ್ತಾರೆ. ಅಂದರೆ ಒಂದು ದಿನದಲ್ಲಿ ಒಟ್ಟು 3, 735 ಪ್ರೇಕ್ಷಕರು ಕಡಿಮೆಯಾಗುತ್ತಾರೆ. ವರ್ಷದಿಂದ ವರ್ಷಕ್ಕೆ ಫಿಲ್ಮ್ ಫೆಸ್ಟಿವಲ್ ಗೆ ಬರುವ ಆಸಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಇದೆಲ್ಲವನ್ನೂ ಥಿಯೇಟರ್ ನಿಗದಿಪಡಿಸುವಾಗ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಹೆಚ್ಚು ಸೀಟುಗಳ ಸಾಮರ್ಥ್ಯವಿರುವ ಮಲ್ಟಿಫ್ಲೆಕ್ಸ್ ಗೆ ಬದಲಿಸಬೇಕೇ ವಿನಃ ಕಡಿಮೆ ಸೀಟು ಸಾಮರ್ಥ್ಯದ ಮಲ್ಟಿಫ್ಲೆಕ್ಸ್ ಗೆ ಅಲ್ಲ !
ಯಾವ ಆಡಳಿತಾತ್ಮಕ ಕಾರಣಗಳಿಂದ ಫಿಲ್ಮ್ ಫೆಸ್ಟಿವಲ್ ಥಿಯೇಟರ್ಸ್ ಬದಲಾಗಿದೆ ? ಒರಾಯನ್ ಮಾಲ್ ನಲ್ಲಿ ಬಾಡಿಗೆ ವೆಚ್ಚ ಜಾಸ್ತಿಯಾಗಿದೆಯೇ ? ಅದಕ್ಕೆ ಹೋಲಿಸಿದರೆ ಲುಲು ಮಾಲಿನ ಬಾಡಿಗೆ ವೆಚ್ಚ ಕಡಿಮೆಯಾಗಿದೆಯೇ ? ಇದ್ಯಾವ ಕಾರಣಗಳನ್ನು ಫಿಲ್ಮ್ ಫೆಸ್ಟಿವಲ್ ಆಯೋಜನೆ ಹೊಣೆಗಾರಿಕೆ ಹೊತ್ತ ಸಾರ್ವಜನಿಕ ಸಂಪರ್ಕ ಮತ್ತು ವಾರ್ತಾ ಇಲಾಖೆಯಾಗಲಿ, ಕರ್ನಾಟಕ ಚಲನಚಿತ್ರ ಅಕಾಡೆಮಿಯಾಗಲಿ ಹೇಳಿಲ್ಲ. ಏನೇ ಕಾರಣಗಳಿದ್ದರೂ ಅವುಗಳ ಮಾಹಿತಿ ಸಾರ್ವಜನಿಕರಿಗೆ ದಕ್ಕಬೇಕಲ್ಲವೇ ?
