ಭಾರತ, ಅಂದಿನ ಪ್ರಧಾನಮಂತ್ರಿ ನೆಹ್ರು ಕಾಲದಿಂದಲೂ ಅಲಿಪ್ತ ನೀತಿ ಅನುಸರಿಸಿಕೊಂಡು ಬಂದಿದೆ. ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿ ಅವರು ಅತ್ಯುತ್ತಮ ವಿದೇಶಾಂತ ನೀತಿ ನಿರೂಪಣೆಯಲ್ಲಿ ಪ್ರಸಿದ್ದರಾಗಿದ್ದರು. ಇವರ ಕಾಲಘಟ್ಟದಲ್ಲಿಯೂ ಅಲಿಪ್ತ ನೀತಿ ಬದಲಾಗಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಯುಗದಲ್ಲಿಯೂ ಇದು ಅಷ್ಟೇನು ಮಾರ್ಪಾಡಾಗಿಲ್ಲ. ಆದರೆ ಅಮೆರಿಕಾದೊಂದಿಗಿನ ಅತೀ ಬಾಂಧವ್ಯ ಭಾರತಕ್ಕೆ ಅನುಕೂಲಕರವೇ ಎಂಬ ಪ್ರಶ್ನೆ ಮೂಡುತ್ತದೆ.

ಬಾಂಧವ್ಯ

ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಅಮೆರಿಕಾ ಭೇಟಿ ಇವೆರಡೂ ದೇಶಗಳ ನಡುವಿನ ಬಾಂಧವ್ಯದ ಹೊಸ ಮೈಲಿಗಲ್ಲು ಎಂದೇ ವಿಶ್ಲೇಷಿಸಲಾಗುತ್ತದೆ. ಇದನ್ನು ನೋಡುವ ಮುನ್ನ ಬ್ರಿಟಿಷ್ ಆಡಳಿತದ ಮುಷ್ಟಿಯಿಂದ ಕಳಚಿಕೊಂಡ ನಂತರ ಇವೆರಡೂ ದೇಶಗಳ ನಡುವಿನ ಸಂಪರ್ಕ ಹೇಗಿದೆ ಎಂದು ಒಮ್ಮೆ ಹಿಂದಿರುಗಿ ನೋಡೋಣ.

ಭಾರತಕ್ಕೆ ಸ್ವಾತಂತ್ಯ ಲಭಿಸುವ ಮುನ್ನವೇ ಅಮೆರಿಕಾ ವಿಶ್ವದ ಬಲಿಷ್ಠ ಒಕ್ಕೂಟವಾಗಿ ಹೊರ ಹೊಮ್ಮಿತ್ತು. ಇದಕ್ಕೂ ಮುಂಚೆಯೇ ರಷ್ಯಾ ಜಗತ್ತಿನ ಬೃಹತ್ ಬಲಿಷ್ಠ ಒಕ್ಕೂಟವಾಗಿತ್ತು. ಇಂಥ ಹೊತ್ತಿನಲ್ಲೇ ಜವಾಹರ್ ಲಾಲ್ ನೆಹ್ರು ಅವರ ಸಾರಥ್ಯದಲ್ಲಿ ಭಾರತ ನೂತನವಾಗಿ ಪುಟಿದೆದ್ದು ನಿಲ್ಲಲ್ಲು ಸಜ್ಜಾಗುತ್ತಿತ್ತು. ಅಂಥ ಹೊತ್ತಿನಲ್ಲೇ ಇಲ್ಲಿಂದ ಕಳಚಿಕೊಂಡಿದ್ದ ಪಾಕಿಸ್ತಾನ ತನ್ನ ಮೂಲ ನೆಲೆಯ ಮೇಲೆ ಯುದ್ದ ಸಾರಿತ್ತು. ಅಮೆರಿಕಾವಾಗಲಿ ಇನ್ನಿತರ ರಾಷ್ಟ್ರವಾಗಲಿ ಭಾರತದ ಸಹಾಯಕ್ಕೆ ಬರಲಿಲ್ಲ.

ಸದಸ್ಯ ರಾಷ್ಟ್ರ

ಪಾಕಿಸ್ತಾನ 1955 ರಲ್ಲಿ ಸೌತ್ ಈಸ್ಟ್ ಏಷ್ಯನ್ ಟ್ರೀಟಿ ಆರ್ಗನೈಸೇಶನ್ (ಎಸ್ಇಎಟಿಒ) ಮತ್ತು ಸೆಂಟ್ರಲ್ ಟ್ರೀಟಿ ಆರ್ಗನೈಸೇಶನ್ (ಸೆಂಟೊ) ಸದಸ್ಯ ರಾಷ್ಟ್ರವಾಯಿತು. ಇದಕ್ಕೆ ಅಮೆರಿಕಾದ ಒತ್ತಾಸೆಯೇ ಆಧಾರವಾಗಿತ್ತು. ಪಾಕಿಗೆ ಅಮೆರಿಕಾ ಬೆಂಬಲ ನೀಡಲು ಕಾರಣ ಎಂದರೆ ಸೋವಿಯತ್ ರಷ್ಯಾ. ಇವೆರಡು ಬೃಹತ್ ಶಕ್ತಿಶಾಲಿ ರಾಷ್ಟ್ರಗಳ ನಡುವೆ ಶೀತಲ ಸಮರ ಜಾರಿಯಲ್ಲಿತ್ತು.

ಅಲಿಪ್ತ ನೀತಿ

1966 ರ ಹೊತ್ತಿಗಾಗಲೇ ಇಡೀ ವಿಶ್ವದಲ್ಲಿ ಅಲಿಪ್ತ ನೀತಿಯ ದೊಡ್ಡ ಪ್ರತಿಪಾದಕ ರಾಷ್ಟ್ರವಾಗಿ ಹೊಮ್ಮಿದ್ದ ಭಾರತವು ವಿಯೆಟ್ನಾಂ ಕುರಿತಂತೆ ಅಮೆರಿಕಾದ ನಡೆಯನ್ನು ಖಂಡಿಸಿತು. ಇದರಿಂದ ರೊಚ್ಚಿಗೆದ್ದಿದ್ದ ಅಮೆರಿಕಾ ಆಡಳಿತ ಭಾರತಕ್ಕೆ ಧಾನ್ಯಗಳ ರಫ್ತನ್ನು ನಿಷೇಧಿಸಿತು.

ಬಾಂಗ್ಲಾ ಉದಯ

ಪಾಕಿಸ್ತಾನದ ಆಡಳಿತ ಪಶ್ಚಿಮ ಭಾಗದಲ್ಲಿ ಕೇಂದ್ರೀಕೃತವಾಗಿತ್ತು. ಇಲ್ಲಿನ ಆಡಳಿತದ ಪೂರ್ವಾಗ್ರಹ ನೀತಿಗಳಿಂದ ರೊಚ್ಚಿಗೆದ್ದಿದ್ದ ಪೂರ್ವ ಪಾಕಿಸ್ತಾನ ಅಂದರೆ ಈಗಿನ ಬಾಂಗ್ಲಾ ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಲು ಪ್ರಯತ್ನಿಸುತ್ತಿತ್ತು. ಈ ಸಂಘರ್ಷದ ಸಮಯದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಪಾಕಿಸ್ತಾನದಿಂದ ಮುಂದೆ ಎದುರಾಗಬಹುದಾಗ ಅಪಾಯಗಳ ಮುನ್ಸೂಚನೆ ಅರಿತು ಬಾಂಗ್ಲಾ ಉದಯಕ್ಕೆ ಕಾರಣರಾದರು. ಬಾಂಗ್ಲಾ ವಿಮೋಚಕಿ ಎಂಬ ಖ್ಯಾತಿಗೂ ಕಾರಣರಾದರು. ಇಂಥ ಸನ್ನಿವೇಶದಲ್ಲಿಯೂ ಬಾಂಗ್ಲಾ ರಚನೆಗೆ ಅಮೆರಿಕಾದಿಂದ ಸಹಾಯ ಒದಗಲಿಲ್ಲ

ಅನುಕೂಲ ಸಿಂಧು

ಅಮೆರಿಕಾದ ಅನುಕೂಲಕರ ಸಿಂಧು ನೀತಿಗಳನ್ನು ಅರಿತಿದ್ದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ರಷ್ಯಾದೊಂದಿಗೆ ರಾಷ್ಟ್ರದ ಬಾಂಧವ್ಯ ಹೆಚ್ಚಲು ಕಾರಣರಾದರು. ಇವರ ಆಡಳಿತದಲ್ಲಿ ಇವೆರಡೂ ರಾಷ್ಟ್ರಗಳ ರಾಜತಾಂತ್ರಿಕ ನಂಟು ಬಲವಾಯಿತು. ಇದರಿಂದ ಸಿಟ್ಟಿಗೆದ್ದ ಅಮೆರಿಕಾ ಆರ್ಥಿಕ ಸಹಾಯಕ್ಕೆ ತಡೆಯೊಡ್ಡಿತು.

ಪರಮಾಣು ಪರೀಕ್ಷೆ

ಭಾರತ, ಮೊಟ್ಟಮೊದಲ ಪರಮಾಣು ಪರೀಕ್ಷೆ ನಡೆಸಿದ ಸಂದರ್ಭದಲ್ಲಿಯೂ ಅಮೆರಿಕಾ ಸಿಟ್ಟಿಗೆದ್ದಿತು. ರಷ್ಯಾದ ಮಿತ್ರರಾಷ್ಟ್ರವೊಂದು ಪರಮಾಣು ಅಸ್ತ್ರ ಹೊಂದುವುದು ಅದಕ್ಕೆ ಬೇಕಿರಲಿಲ್ಲ. ಪೋಖ್ರಾನ್ – 2 ರ ಪರೀಕ್ಷಾರ್ಥ ಪ್ರಯೋಗದ ಸಂದರ್ಭದಲ್ಲಿಯೂ ಅಮೆರಿಕಾ ಸಿಟ್ಟಿಗೆದ್ದಿತ್ತು. ಇದರಿಂದ ಮತ್ತೆ ಆರ್ಥಿಕ ದಿಗ್ಬಂಧನ ಹೇರಿತು. ಇದರಿಂದೇನೂ ಭಾರತ ಹಿಂಜರಿಯಲಿಲ್ಲ. ಆ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿತು.

ಧಾರಳ ನೆರವು

ಸೋವಿಯತ್ ರಷ್ಯಾ ವಿರೋಧದ ಕಾರಣದಿಂದಲೇ ಇಲ್ಲಿಗೆ ಭೌಗೋಳಿಕವಾಗಿ ಹತ್ತಿರವಾಗಿದ್ದ ಪಾಕಿಸ್ತಾನಕ್ಕೆ ಅಮೆರಿಕಾ ಧಾರಳ ನೆರವು ನೀಡತೊಡಗಿತು. ಇದು ಪರೋಕ್ಷವಾಗಿ ಪಾಕ್ ಬೆಂಬಲಿತ ಭಯೋತ್ಪಾದಕರು ಕಾಶ್ಮೀರದಲ್ಲಿ ತಮ್ಮ ಚಟುವಟಿಕೆ ತೀವ್ರಗೊಳಿಸಲು ನೆರವಾಯಿತು. ಈ ವಿಚಾರವನ್ನು ಭಾರತ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಮತ್ತೆಮತ್ತೆ ಪ್ರಸ್ತಾಪಿಸಿದರೂ ಪಾಕಿಗೆ ನೆರವು ನೀಡುವುದನ್ನು ಅಮೆರಿಕಾ ಸ್ಥಗಿತಗೊಳಿಸಲಿಲ್ಲ.

ಅನುಮತಿ

ಕೊಲ್ಲಿ ಯುದ್ದದ ಸಮಯ (1990) ಭಾರತವು ಅಮೆರಿಕಾ ಮಿಲಿಟರಿ ಪಡೆಗಳಿಗೆ ಇಲ್ಲಿ ಇಳಿದು ಇಂಧನ ತುಂಬಿಸಿಕೊಳ್ಳುವುದಕ್ಕಷ್ಟೆ ಅನುಮತಿ ನೀಡಿತು. ಇಲ್ಲಿಂದಾಚೆಗೆ ಇವೆರಡೂ ರಾಷ್ಟ್ರಗಳ ಒಡನಾಟದಲ್ಲಿ ಸುಧಾರಣೆ ಕಂಡಿತು. 2008ರಲ್ಲಿ ನಾಗರಿಕ ಪರಮಾಣು ಒಪ್ಪಂದ ನಂತರ ಇವೆರಡೂ ರಾಷ್ಟ್ರಗಳ ಸಂಬಂಧ ಮತ್ತಷ್ಟೂ ಸುಧಾರಿಸಿತು.

ಬಂಡವಾಳಶಾಹಿ ರಾಷ್ಟ್ರವಾದ ಅಮೆರಿಕಾಕ್ಕೆ ಯಾವಾಗಲೂ ಕಮ್ಯುನಿಷ್ಟ ರಾಷ್ಟ್ರಗಳ ಬಗ್ಗೆ ಒಂದಿಲ್ಲೊಂದು ರೀತಿ ಭಯ, ಆತಂಕ. ಬೃಹತ್ ಶಕ್ತಿಶಾಲಿ ರಾಷ್ಟ್ರವಾಗಿದ್ದ ರಷ್ಯಾದ ಒಕ್ಕೂಟ ಛಿದ್ರವಾದ ನಂತರ ಆ ಭಾಗದತ್ತ ಇದ್ದ ಅಮೆರಿಕಾದ ಆತಂಕ ಗಣನೀಯವಾಗಿ ಕಡಿಮೆಯಾಗಿದೆ.

ಅಬ್ ಕಿ ಬಾರ್ ಟ್ರಂಪ್ ಕಿ ಸರ್ಕಾರ್

ಟ್ರಂಪ್ ಅಧಿಕಾರಕ್ಕೆ ಬರುವವರೆಗೂ ಭಾರತ, ಅಮೆರಿಕಾದ ಬಾಂಧವ್ಯ ಅಷ್ಟೇನೂ ಸುಮಧುರವಾಗಿರಲಿಲ್ಲ. ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಅಮೆರಿಕಾ ಬಾಂಧವ್ಯ ಮತ್ತಷ್ಟೂ ಸುಧಾರಣೆ ಕಾಣ ತೊಡಗಿತು. ಇದು ಎಷ್ಟರ ಮಟ್ಟಿಗೆ ಎಂದರೆ ಅಮೆರಿಕಾ ನೆಲದಲ್ಲಿ ಮೋದಿ ಅವರು “ಅಬ್ ಕಿ ಬಾರ್ ಟ್ರಂಪ್ ಕಿ ಸರ್ಕಾರ್” ಎನ್ನುವಷ್ಟರ ಮಟ್ಟಿಗೆ.

ಗೆಳತನ ಅಮೆರಿಕಾಕ್ಕೆ ಬೇಕೋ ಅಥವಾ ಅಮೆರಿಕಾಕ್ಕೆ ಬೇಕೋ

ಇದೊಂದು ಬಹು ಮುಖ್ಯವಾದ ಪ್ರಶ್ನೆ. ಇತ್ತೀಚಿನ ದಶಕಗಳಲ್ಲಿ ಏಷ್ಯಾದ ಚೀನಾ ರಾಷ್ಟ್ರವು ಪ್ರಪಂಚದ ಬಲಿಷ್ಠ ರಾಷ್ಟ್ರಗಳಲ್ಲಿ ಒಂದಾಗಿ ಹೊರ ಹೊಮ್ಮಿದೆ. ಇದರ ಮತ್ತು ರಷ್ಯಾ ನಡುವಿನ ವಿದೇಶಾಂಗ ಆಪ್ತತೆಯೂ ಉತ್ತಮವಾಗಿದೆ. ಚೀನಾ ಕೂಡ ಪಾಕಿಸ್ತಾನಕ್ಕೆ ಸಾಕಷ್ಟು ನೆರವು ನೀಡತೊಡಗಿದೆ. ಇದರಿಂದ ಏಷ್ಯಾದಲ್ಲಿ ಮಿಲಿಟರಿ ದೃಷ್ಟಿಯಿಂದ ಆಪತ್ಕಾಲದಲ್ಲಿ ತನ್ನ ಮಿಲಿಟರಿ ಸಜ್ಜುಗೊಳಿಸಲು ಅಮೆರಿಕಾಕ್ಕೆ ನೆಲೆಯೊಂದು ಬೇಕು. ಈ ನಿಟ್ಟಿನಲ್ಲಿ ಅದರ ದೃಷ್ಟಿ ಭಾರತದತ್ತ ನೆಟ್ಟಿದೆ. ಇದರಿಂದಲೇ ಭಾರತದೊಂದಿಗಿನ ಬಾಂಧವ್ಯ ಮತ್ತಷ್ಟು ಮಗದಷ್ಟು ಗಟ್ಟಿಗೊಳಿಸಲು ಯತ್ನಿಸುತ್ತಿದೆ.

ತೈಲ ವ್ಯವಹಾರ

ಅಂತರಾಷ್ಟ್ರೀಯ ವ್ಯಾಪಾರ, ವ್ಯವಹಾರ, ಹಿಂದೂ ಮಹಾಸಾಗರದ ಮೂಲಕ ಸಾಗುವ ವ್ಯಾಪಾರಿ ಸರಕು ಸಾಗಣೆ ಹಡಗುಗಳ ಯಾನದ ದೃಷ್ಟಿಯಿಂದಲೂ ಅಮೆರಿಕಾಕ್ಕೆ ಭಾರತದ ಬಾಂಧವ್ಯ ಅಗತ್ಯವಾಗಿದೆ. ವಿಶ್ವದ ಶೇಕಡ 70ರಷ್ಟು ತೈಲ ವ್ಯವಹಾರ ಈ ಸಮುದ್ರ ಮಾರ್ಗವನ್ನೇ ಅವಲಂಬಿಸಿದೆ ಎಂಬುದು ಗಮನಾರ್ಹ

ವಿಶ್ವದ ಬೃಹತ್ ಶಸ್ತ್ರಾಸ್ತ್ರ ಪೂರೈಕೆದಾರ

ಅಮೆರಿಕಾವು ಇಡೀ ವಿಶ್ವದಲ್ಲಿಯೇ ಮಿಲಿಟರಿಗಳಿಗೆ ಅಗತ್ಯವಾದ ಬೃಹತ್ ಶಸ್ತ್ರಾಸ್ತ್ರಗಳ ಪೂರೈಕೆದಾರ. ಅಲ್ಲಿನ ಶಸ್ತ್ರಾಸ್ತ್ರ ಕಂಪನಿಗಳು ಅಮೆರಿಕಾದ ಆಡಳಿತದ ನೀತಿಗಳ ಮೇಲೆ ಅದರಲ್ಲಿಯೂ ವಿದೇಶಾಂಗ ನೀತಿಗಳ ಮೇಲೆ ಪ್ರಭಾವ ಬೀರುವಷ್ಟು ಪ್ರಬಲ. ಈ ನಿಟ್ಟಿನಲ್ಲಿಯೂ ಅವುಗಳಿಗೆ ಭಾರತ ದೊಡ್ಡ ಮಾರುಕಟ್ಟೆಯಾಗಿ ಕಾಣುತ್ತಿದೆ. ಇದು ಕೂಡ ಅಮೆರಿಕಾ ಆಡಳಿತ ಭಾರತದತ್ತಒಲವು ತೋರುತ್ತಿರುವ ಕಾರಣಗಳಲ್ಲಿ ಒಂದಾಗಿದೆ.

ಶಸ್ತ್ರಾಸ್ತ್ರ ಮಾರುಕಟ್ಟೆ

ಅಮೆರಿಕಾದ ಪಾಲಿಗೆ ಭಾರತ ಕೇವಲ ಶಸ್ತ್ರಾಸ್ತ್ರ ಮಾರುಕಟ್ಟೆ ಮಾತ್ರವಲ್ಲ. ಇನ್ನಿತರ ಉತ್ಪನ್ನಗಳಿಗೂ ಬೃಹತ್ ಮಾರುಕಟ್ಟೆಯಾಗಿದೆ. ಈ ದೃಷ್ಟಿಯಿಂದಲೂ ಭಾರತದ ಸಖ್ಯ ಅಲ್ಲಿನ ಆಡಳಿತಕ್ಕೆ ಅಗತ್ಯವಾಗಿದೆ. ಅಮೆರಿಕಾದ ಆರ್ಥಿಕ ಬಲವನ್ನು ಹೆಚ್ಚಿಸಿಕೊಳ್ಳಲು ಭಾರತದೊಂದಿಗಿನ ವ್ಯವಹಾರ ಸಹಕಾರಿಯಾಗಬಹುದು ಎಂಬುದು ಇದರ ಹಿಂದಿರುವ ನಿಲುವು

ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೊರಕಿದ ಅಪೂರ್ವ ಸ್ವಾಗತ

ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 2013ರಲ್ಲಿ ಮೂರು ದಿನ ಪ್ರವಾಸ ಕೈಗೊಂಡರು. ಈ ಸಂದರ್ಭದಲ್ಲಿ ಅಮೆರಿಕಾ ಆಡಳಿತ ಅಭೂತಪೂರ್ವ ಸ್ವಾಗತ ನೀಡಿತು. ಮೋದಿ ಅವರ ಗುಣಗಾನವೇ ನಡೆಯಿತು. ಅಲ್ಲಿನ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವ ಅವಕಾಶ ನೀಡಲಾಯಿತು. ಡಬ್ಲ್ಯುಟಿಒದಲ್ಲಿ ಇವೆರಡೂ ರಾಷ್ಟ್ರಗಳ ನಡುವೆ ಇರುವ ವಿವಾದಗಳಿಗೂ ಅಂತ್ಯ ಹಾಡಲು ತೀರ್ಮಾನಿಲಾಗಿದೆ. ಪ್ರಮುಖವಾದ ಆರು ವ್ಯಾಜ್ಯಗಳ ಅಂತ್ಯಕ್ಕೂ ಅನುಮೋದನೆ ದೊರೆತಿದೆ. ಇತ್ತ ಭಾರತ ಕೂಡ ಅಮೆರಿಕಾದಿಂದ ಆಮದಾಗುವ ಉತ್ಪನ್ನಗಳಿಗೆ ಆಮದು ಸುಂಕ ಕೈ ಬಿಡುವ ನಿರ್ಧಾರ ತೆಗೆದುಕೊಂಡಿದೆ.

ರಕ್ಷಣಾ ಕ್ಷೇತ್ರದಲ್ಲಿ ಸಹಕಾರ

ರಕ್ಷಣಾ ಕ್ಷೇತ್ರದ ಸಹಕಾರದ ಬಗ್ಗೆ ಅಮೆರಿಕಾ – ಭಾರತ ಬಹು ಮಹತ್ವದ ನಿರ್ಧಾರ ಕೈಗೊಂಡಿವೆ. ಅಮೆರಿಕಾದ ಈ ನಡೆಯ ಹಿಂದೆ ಭಾರತವನ್ನು ಇದರ ಪರಮಾಪ್ತ ರಾಷ್ಟ್ರ ರಷ್ಯಾದಿಂದ ಸಾಧ್ಯವಾದಷ್ಟು ದೂರ ಇರಿಸುವ ದೂರಗಾಮಿ ತಂತ್ರವೇ ಅಡಕವಾಗಿದೆ.
ಈ ದಿಶೆಯಲ್ಲಿ ಏನೇನೂ ಕ್ರಮ ತೆಗೆದುಕೊಳ್ಳಬಹುದು ಅದನ್ನೆಲ್ಲ ಅಮೆರಿಕಾ ಕೈಗೊಂಡಿದೆ. ಮುಖ್ಯವಾಗಿ ಅಲ್ಲಿನ ಜನರಲ್ ಆಟೋಮಿಕ್ಸ್, ಭಾರತದ ನೆಲದಲ್ಲಿ ತನ್ನ ತಯಾರಿಕಾ ಘಟಕ ಸ್ಥಾಪಿಸಲಿದೆ. ಬಹು ಶಕ್ತಿಶಾಲಿ ಮಿಲಿಟರಿ ಡ್ರೋನ್ ತಯಾರಿಕೆಯೂ ಇಲ್ಲಿಯೇ ನಡೆಯಲಿದೆ. ಭಾರತದ ವ್ಯಾಪ್ತಿಯ ಸಮುದ್ರದ ಮಾರ್ಗದಲ್ಲಿ ಬೃಹತ್ ಸಮರ ನೌಕಾದಳಗಳು, ಶಕ್ತಿಶಾಲಿ ಸಬ್ ಮೆರೀನ್ ಗಳ ಚಲನವಲನದ ಮೇಲೆ ಹದ್ದಿನ ಕಣ್ಣಿಡಲು ಅಮೆರಿಕಾ ನೆರವಾಗಲಿದೆ.

ಮಿಲಿಟರಿಗಳ ಜಂಟಿ  ಕಸರತ್ತು

ಈ ಎಲ್ಲವುಗಳ ಸಮಗ್ರ ಕ್ರೋಢೀಕರಣವಾಗಿ ಜೊ ಬೈಡೆನ್ ಅವರು ಹೇಳಿರುವ ಮಾತುಗಳು ಗಮನಾರ್ಹ. “ ಅಮರಿಕಾ ಸಂಯುಕ್ತ ಸಂಸ್ಥಾನವು ಭಾರತದೊಂದಿಗಿನ ರಕ್ಷಣಾ ಸಹಭಾಗಿತ್ವವನ್ನು ವಿಸ್ತರಣೆ ಮಾಡುತ್ತಿದೆ. ಈ ದಿಶೆಯಲ್ಲಿ ಇವೆರಡೂ ರಾಷ್ಟ್ರಗಳ ನಡುವಿನ ಮಿಲಿಟರಿಗಳ ಜಂಟಿ ಸಹಕಾರಿ ಕಸರತ್ತುಗಳು, ಸಂಶೋಧನೆಗಳು ನಡೆಯುತ್ತವೆ”

ಚೀನಾ, ರಷ್ಯಾದ ಹೆಚ್ಚಿದ ಆತಂಕ

ಅಮೆರಿಕಾ ನೇತೃತ್ವದ ನ್ಯಾಟೋ ಪಡೆಯ ಸದಸ್ಯ ರಾಷ್ಟ್ರವಾಗಲು ಉಕ್ರೇನ್ ಮುಂದಾಗಿದ್ದೇ ರಷ್ಯಾದ ಮುನಿಸಿಗೆ ಪ್ರಮುಖ ಕಾರಣ. ಈ ನಂತರ ಇವೆರೂ ರಾಷ್ಟ್ರಗಳ ನಡುವೆ ಶುರುವಾದ ಸಮರ ಇನ್ನೂ ಮುಂದುವರಿದಿದೆ. ಉಕ್ರೇನ್ ಯದ್ಧ ಮಾಡಲು ಬೇಕಾದ ಎಲ್ಲ ನೆರವನ್ನೂ ಅಮೆರಿಕಾ ಸೇರಿದಂತೆ ಅದರ ಮಿತ್ರರಾಷ್ಟ್ರಗಳು ನೀಡುತ್ತಿವೆ

ಪ್ರಸ್ತುತ ಭಾರತದೊಂದಿಗಿನ ಅಮೆರಿಕಾದ ಹೊಸ ಮಜಲಿಗೇರಿದ ಮಿಲಿಟರಿ ಬಾಂಧವ್ಯ ಚೀನಾ ಜೊತೆಗೆ ರಷ್ಯಾದ ಆತಂಕವನ್ನು ದುಪ್ಪಟ್ಟುಗೊಳಿಸಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಮುಖ್ಯವಾಗಿ ಅಮೆರಿಕಾ, ಮಿಲಿಟರಿ ಕ್ಷೇತ್ರದಲ್ಲಿ ಭಾರತಕ್ಕೆ ಸಹಕಾರಿ ನೀಡುತ್ತಿರುವುದೇ ಚೀನಾವನ್ನು ಸಮಯ ಬಂದಾಗ ನಿಗ್ರಹಿಸಲು ಸಹಕಾರಿಯಾಗಲೆಂದೇ ಎಂಬುದು ಗುಟ್ಟಿನ ವಿಷಯವೇನೂ ಅಲ್ಲ.

ಇತ್ತೀಚೆಗೆ ಅಮೆರಿಕಾದ ಕಾರ್ಯದರ್ಶಿ (ಸಚಿವ) ತನ್ನ ದೇಶಕ್ಕೆ ಬಂದು ಹೋದ ನಂತರ ಜೊ ಬೈಡೆನ್ ಹೇಳಿದ ನುಡಿ ಚೀನಾ ಆಕ್ರೋಶಗೊಳ್ಳುವಂತೆ ಮಾಡಿದೆ. “ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಓರ್ವ ಸರ್ವಾಧಿಕಾರಿ” ಎಂದು ಹೇಳಿದ್ದೇ ಚೀನಾ ರೊಚ್ಚಿಗೇಳಲು ಕಾರಣ.

ಇವೆಲ್ಲವನ್ನೂ ಸಮಗ್ರವಾಗಿ ನೋಡಿದಾಗ ಅಮೆರಿಕಾ, ಅನುಕೂಲ ಸಿಂಧು ವಿದೇಶಾಂತ ನೀತಿ ಅನುಸರಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಇಂಥ ಸಂದರ್ಭದಲ್ಲಿ ಭಾರತವು ರಷ್ಯಾದೊಂದಿಗಿನ ತನ್ನ ಎಂದಿನ ಪರಮಾಪ್ತತೆಯನ್ನು ಹೇಗೆ ಉಳಿಸಿಕೊಳ್ಳುತ್ತದೆ. ಹುಳಿಸಿಕೊಂಡಿರುವ ಚೀನಾ ಜೊತೆಗಿನ ನಂಟನ್ನು ರಾಜತಾಂತ್ರಿಕವಾಗಿ ಹೇಗೆ ಸುಧಾರಿಸುವಂತೆ ಮಾಡುತ್ತದೆ ಎಂಬುದು ಕುತೂಹಲಕಾರಿ ಅಂಶ. ಆದರೆ ಅಮೆರಿಕಾದೊಂದಿಗಿನ ಸಖ್ಯ ದೂರಗಾಮಿ ದೃಷ್ಟಿಯಲ್ಲಿ ಅನುಕೂಲಕರವಲ್ಲ ಎನಿಸುತ್ತದೆ. ಕಾಲವೇ ಇದಕ್ಕೆ ಉತ್ತರ ನೀಡಲಿದೆ.
ಕುಮಾರ ರೈತ

Similar Posts

Leave a Reply

Your email address will not be published. Required fields are marked *