ಲಿಖಿತ ಜ್ಞಾನವೇ ನಿಜವಾದ ಜ್ಞಾನ, ಅಕ್ಷರ ಕಲಿತರವರಷ್ಟೆ ವಿದ್ಯಾವಂತರು ಅಂದರೆ ವಿದ್ಯೆ ಅಥವಾ ಜ್ಞಾನವನ್ನು ಹೊಂದಿದವರು ಎಂಬ ಅಹಂಕಾರ ಜೊತೆಗೆ ಭ್ರಮೆಯೂ ಇದೆ. ಇಂಥ ಅಕ್ಷರ ಅಹಂಕಾರದಿಂದಲೇ ಸಾವಿರಾರು ವರ್ಷಗಳಿಂದ ನೆಲಮೂಲದ ಜ್ಞಾನವನ್ನು ಅವುಗಳನ್ನು ಹೊಂದಿದವರನ್ನು ಅಸಡ್ಡೆ ಅಷ್ಟೇ ಅಲ್ಲ; ಅಸಹ್ಯದಿಂದ ನೋಡಲಾಗಿದೆ. ಇದಕ್ಕಿಂತ ಕ್ರೌರ್ಯ ಮತ್ತೊಂದು ಇದೆಯೇ ?
ಶೂದ್ರರಲ್ಲಿ ಹಲವು ವೃತ್ತಿ ಮಾಡುವವರು ಇದ್ದಾರೆ. ಕೃಷಿಕರು, ಕುಂಬಾರರು, ನೇಕಾರರು, ಕಮ್ಮಾರರು, ಅಕ್ಕಸಾಲಿಗರು, ಮಡಿವಾಳರು, ಕ್ಷೌರಿಕರು, ದರ್ಜಿಗಳು, ದಲಿತರಲ್ಲಿ ಚಮ್ಮಾರರು, ಹೀಗೆ ಹಲವು ಜ್ಞಾನಮೂಲದ ಕುಸುಬುಗಳಿವೆ, ವಿಗ್ರಹಗಳನ್ನು ರೂಪಿಸುವ ವಿಶ್ವಕರ್ಮರು, ಬೇಕಾದ ಅಳತೆ ಆಕಾರಕ್ಕೆ ಕಲ್ಲುಗಳನ್ನು ಹದವಾಗಿ ವಿನ್ಯಾಸ ಮಾಡಿಕೊಡುವ ಬೋವಿಗಳು, ತೋಟಗಾರಿಕೆಯಲ್ಲಿ ನಿಪುಣರಾದ ತಿಗಳರು ಹೀಗೆ ಇವುಗಳನ್ನು ಮಾಡುತ್ತಿದ್ದವರಿಗೆ ಅಗಾಧವಾದ ವಿಶಿಷ್ಟ ಜ್ಞಾನ
ಯಾವ ಮಣ್ಣಿನಲ್ಲಿ ಯಾವ ಮಾದರಿಯ ಗಡಿಗೆ ಮಾಡಬೇಕು, ಯಾವ ಬಗೆಯ ಮಿಶ್ರ ಮಣ್ಣಿನಲ್ಲಿ ಸುದೀರ್ಘ ಕಾಲ ಬಾಳುವ ಮಣ್ಣಿನ ವಿಗ್ರಹಗಳನ್ನು ಮಾಡಬಹುದು, ಯಾವ ಮರದ ಸೌದೆಯನ್ನು ಬಳಸಿದರೆ ಮಡಿಕೆ, ಕುಡಿಕೆ ಮತ್ತಿತರ ಮಣ್ಣಿನ ಪಾತ್ರೆಗಳು ಹದವಾಗಿ ಬೇಯುತ್ತವೆ, ವರ್ಷದ ಯಾವ ಋತುವಿನಲ್ಲಿ ಮಣ್ಣನ್ನು ಸಂಗ್ರಹಿಸಬೇಕು ಎಂಬ ಜ್ಞಾನ ಇಂದಿನ ಕುಂಬಾರರಿಗಿಂತಲೂ ಹಿಂದಿನ ಕುಂಬಾರರಲ್ಲಿ ಅಗಾಧ.
ಗಾಡಿಯ ನೊಗಕ್ಕೆ, ಮರದ ಗಾಡಿಗೆ, ನೇಗಿಲಿಗೆ, ಗಾಲಿಯ ಚಕ್ರಕ್ಕೆ, ಕೊಡಲಿ, ಕುಡುಗೋಲಿನ ಹಿಡಿಗೆ ಯಾವ ಬಗೆಯ ಮರಗಳು ಬೇಕು, ಕುಡುಗೋಲಿಗೆ, ಕತ್ತಿಗೆ, ಕೊಡಲಿಗೆ ಕಬ್ಬಿಣದಲ್ಲೇ ಯಾವ ಗುಣಮಟ್ಟದ ಕಬ್ಬಿಣ ಬೇಕು, ಸಮರ ಕತ್ತಿಗಳಿಗೆ ಯಾವ ಗುಣಮಟ್ಟದ ಕಬ್ಬಿಣ ಬೇಕು, ಮಿಶ್ರಲೋಹ ಯಾವುದಕ್ಕೆ ಬಳಸಬೇಕು ಎಂಬ ಜ್ಞಾನ ಕಮ್ಮಾರರದು.
ವರ್ಷದ ಯಾವಯಾವ ಹಂತಗಳಲ್ಲಿ ಬೆಳೆಗಳಿಗೆ ಯಾವಯಾವ ಕೀಟಗಳು ಬಾಧಿಸುತ್ತವೆ; ಅವುಗಳಲ್ಲಿ ತೀವ್ರ ಅಪಾಯಕಾರಿ ಯಾವುದು; ಅವುಗಳನ್ನು ತಿಂದು ರೈತರಿಗೆ ಉಪಕಾರ ಮಾಡುವ ಪರಭಕ್ಷಕ ಕೀಟಗಳು ಯಾವುವು; ಯಾವ ವಾತಾವರಣದಲ್ಲಿ ಕೀಟಗಳ ಸಂಖ್ಯೆ ವೃದ್ದಿಯಾಗುತ್ತದೆ, ಯಾವಾಗ ಉತ್ತಬೇಕು; ಯಾವಾಗ ಬಿತ್ತಬೇಕು, ಯಾವ ಮಳೆ ಅಗಾಧ, ಯಾವ ಮಳೆ ಕ್ಷೀಣ ಇಂಥ ಅನೇಕ ಸಂಗತಿಗಳ ಬಗ್ಗೆ ಇಂದಿನವರಿಗಿಂತಲೂ ಸುಮಾರು ನೂರು ವರ್ಷ ಹಿಂದಿನ ಬೇಸಾಯಗಾರರಿಗಿದ್ದ ಜ್ಞಾನ ಅಪಾರ.
ಡಿಟರ್ಜೆಂಟು, ಸೋಪು ಇಲ್ಲದಿದ್ದ ಕಾಲದಲ್ಲಿ ಯಾವ ಬಟ್ಟೆಗಳನ್ನು ಯಾವುದರಿಂದ ತೊಳೆದರೆ ಕೊಳೆ ಚೆನ್ನಾಗಿ ಹೋಗುತ್ತದೆ, ರೇಷ್ಮೆಯ ಬಟ್ಟೆಗೆ ಅಂಟುವಾಳ ಬಳಸಬೇಕೆ ಬೇಡವೇ, ಹತ್ತಿ ಬಟ್ಟೆಗಳನ್ನು ಯಾವ ಮಿಶ್ರಣದಿಂದ ಸ್ವಚ್ಚ ಮಾಡಬೇಕು, ನೀರು ಇಂತಿಷ್ಟೆ ಗಡುಸಾಗಿದ್ದರೆ ಅದರಲ್ಲಿ ಬಟ್ಟೆ ಸ್ವಚ್ಚವಾಗುವುದುದೇ ಇಲ್ಲವೇ ಇತ್ಯಾದಿ ಜ್ಞಾನ ಮಡಿವಾಳರಿಗಿದೆ
ಆಧುನಿಕ ರೇಜರ್ ಗಳೇ ಇಲ್ಲದಿದ್ದ ಕಾಲದಲ್ಲಿ ಕ್ಷೌರದ ಕತ್ತಿಗಳು ಹೇಗಿರಬೇಕು, ಅದು ಎಷ್ಟು ಹರಿತವಾಗಿರಬೇಕು, ಬಗೆಬಗೆಯ ಚರ್ಮ, ವೈವಿಧ್ಯಮಯ ಗುಣಗಳ ಕೂದಲುಗಳು ಇರುವವರ ಚರ್ಮದ ಮೇಲೆ ಕ್ಷೌರದ ಕತ್ತಿಯನ್ನು ಎಷ್ಟು ಪ್ರಮಾಣದಲ್ಲಿ ನಯವಾಗಿ ಒತ್ತಿ ಕೂದಲು ತೆಗೆಯಬೇಕು, ಆಕಸ್ಮಿಕವಾಗಿ ಗಾಯಗಳಾದರೆ ಅದು ಸೋಂಕಾಗದಂತೆ ತಡೆಯಲು ಯಾವ ಸಸ್ಯಗಳನ್ನು ಬಳಸಬೇಕು ಎಬ ಅಗಾಧ ಜ್ಞಾನ ಕ್ಷೌರಿಕರಲ್ಲಿದೆ.
ಕಾಡುಗಳಲ್ಲಿ ವಾಸಿಸುವ ಆದಿವಾಸಿಗಳಿಗೆ ಯಾವಯಾವ ಸಸ್ಯ ವಿಷಕಾರಿ, ಯಾವುದು ಉಪಕಾರಿ, ಯಾವುದು ಯಾವ ಬಗೆಯ ಕಾಯಿಲೆಗೆ ಮದ್ದು, ಕಾಡುಪ್ರಾಣಿಗಳನ್ನು ಹಿಡಿಯುವುದು ಹೇಗೆ ? ಪಳಗಿಸುವುದು ಹೇಗೆ, ದೂರದಿಂದಲೇ ಇಂಥ ಕಾಡುಪ್ರಾಣಿಯೇ ಬರುತ್ತಿದೆ ಎಂದು ಗ್ರಹಿಸಿ ಅಪಾಯದಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬ ಜ್ಞಾನವಿದೆ.
ಅಲೆಮಾರಿ ಕುರಿಗಾಹಿಗಳಿಗೆ ದಿಢೀರ್ ಎಂದು ಯಾವಾಗ ಮಳೆ ಬರಬಹುದು, ಯಾವ ವರ್ಷ ಮಳೆ ಹೆಚ್ಚಾಗಬಹುದು, ಯಾವ ವರ್ಷ ಕಡಿಮೆಯಾಗಬಹುದು, ಮಳೆಯ ಜೊತೆಗೆ ಬೆಳೆ ಭವಿಷ್ಯ ಹೇಗಿರುತ್ತದೆ ಎಂದೆಲ್ಲ ಹೇಳುವ ಜ್ಞಾನವಿದೆಯೆಲ್ಲ ಅದು ಅನನ್ಯ !
ತೋಟಗಾರಿಕೆಯಲ್ಲಿ ಯಾವ ಯಾವ ಸಸ್ಯಗಳನ್ನು ಮಿಶ್ರ, ಬಹು ಮಹಡಿ ಪದ್ಧತಿಯಲ್ಲಿ ಬೆಳೆಸಬೇಕು, ಯಾವಯಾವ ಸಸ್ಯಗಳಿಗೆ ಹೊಂದಾಣಿಕೆಯಾಗುವುದಿಲ್ಲ, ತೋಟಗಾರಿಕೆಯಲ್ಲಿ ಯಾವ ಋತುವಿನಲ್ಲಿ ಪ್ರೂನಿಂಗ್ ಮಾಡಬೇಕು ? ಸಸ್ಯಗಳಿಗೆ ಗಾಯಗಳಾದ ಹಾಗೆ ಹೇಗೆ ಪ್ರೂನಿಂಗ್ ಮಾಡಬೇಕು ? ಯಾವ ಸಸ್ಯಕ್ಕೆ ಯಾವ ಬಗೆಯ ಗೊಬ್ಬರ ಕೊಟ್ಟರೆ ಅವು ಸಮೃದ್ಧವಾಗಿ ಬೆಳೆದು ಉತ್ತಮ ಇಳುವರಿ ಕೊಡಬಹುದು ಎಂಬ ಜ್ಞಾನ ತಿಗಳರಲ್ಲಿ ಅಪಾರ.
ಗ್ರಾಮೀಣ ಸಮುದಾಯಗಳಲ್ಲಿದ್ದ ಈಗಲೂ ವಿರಳವಾಗಿ ಇರುವ ದಲಿತ, ಶೂದ್ರ ಸಮುದಾಯಗಳ ನಾಟಿವೈದ್ಯರುಗಳಿಗೆ ಔಷಧ ಸಸ್ಯಗಳ ಬಗ್ಗೆ ಇರುವ ಜ್ಞಾನ ಅಪಾರ. ಈಗಂತೂ ಇಂಥ ಅಭ್ಯಾಸ ಮಾಡುತ್ತಿರುವವರನ್ನು ಹುಡುಕಬೇಕು. ಹಿಂದೆ ಇಂಥ ವೈದ್ಯಕೀಯ ಜ್ಞಾನ ಉಳ್ಳವರ ಸಂಖ್ಯೆ ಹೆಚ್ಚಿತ್ತು.
ಹೀಗೆ ಆಯಾ ಕಸುಬುಗಳನ್ನು ಮಾಡುತ್ತಾ ಬಂದವರಿಗೆ ಅವರವರದೇ ಜ್ಞಾನವಿದೆ. ಇವರುಗಳಿಗೆ ಇಂಥ ಅನನ್ಯ, ಬೆಲೆ ಕಟ್ಟಲಾಗದ ನೆಲಮೂಲದ ಜ್ಞಾನವಿದೆ ಅವುಗಳನ್ನು ದಾಖಲೀಕರಣ ಮಾಡಬೇಕು ಎಂದು ಬ್ರಿಟಿಷ್ ಪೂರ್ವ ಅಂದರೆ ಬ್ರಿಟಿಷರು ಬರುವುದಕ್ಕಿಂತಲೂ ಮುಂಚೆ ಯಾರಾದರೂ ಚಿಂತಿಸಿದ್ದಾರೆಯೇ ? ಖಂಡಿತ ಇಲ್ಲ !
ಆಗ ಅಕ್ಷರವಂತರು ಅಂದರೆ ವಿದ್ಯೆಯನ್ನು ಹೊಂದಿದವರು ಯಾರು ? ಬ್ರಾಹ್ಮಣರು, ಕ್ಷತ್ರೀಯರು, ವೈಶ್ಯರು, ಇವರಲ್ಲಿ ವಿದ್ಯೆಯನ್ನು ಕಲಿಸುವ ಕಾರ್ಯ ಮಾಡುತ್ತಿದ್ದ ಬ್ರಾಹ್ಮಣರು, ಆಡಳಿತ ಮಾಡುತ್ತಿದ್ದ ಕ್ಷತ್ರೀಯರು ದಲಿತ, ಶೂದ್ರರುಗಳಿಗೆ ಅಕ್ಷರ ಕಲಿಸಬೇಕು, ಅವರು ಕಲಿತರೆ ನೆಲಮೂಲ ಜ್ಞಾನದ ದಾಖಲೀಕರಣವಾಗುತ್ತದೆ, ಇದರಿಂದ ಮಾನವ ಕುಲಕ್ಕೆ ಒಳಿತಾಗುತ್ತದೆ ಎಂದೇಕೆ ಚಿಂತಿಸಲಿಲ್ಲ ? ಅಕ್ಷರ ಕಲಿಸಲು ಮುಂದಾಗಲಿಲ್ಲ ? ಅಥವಾ ಅವರುಗಳಾದರೂ ಏಕೆ ಇಂಥ ಅಮೂಲ್ಯ ಜ್ಞಾನದ ಲಿಖಿತ ದಾಖಲೀಕರಣ ಮಾಡಲಿಲ್ಲ ? ಇದೆಲ್ಲ ಆಗಿದ್ದು ದಲಿತ, ಶೂದ್ರರೆಡೆಗಿದ್ದ ಪರಮ ಅಸಹ್ಯ, ಅಸಡ್ಡೆಯಿಂದಲೇ ಅಲ್ಲವೇ ? ಇದಕ್ಕಿಂತ ಕ್ರೌರ್ಯ ಮತ್ತೊಂದಿರಲು ಸಾಧ್ಯವೇ ?
ದಲಿತ, ಶೂದ್ರರು ಅಕ್ಷರ ಕಲಿತರೆ ನಮ್ಮನ್ನು ಮೀರಿಸಬಿಡಬಹುದು, ನಮಗೆ ವಿಧೇಯರಾಗದೇ ಇರಬಹುದು, ಅವರೇ ಆಡಳಿತದ ಚುಕ್ಕಾಣಿ ಹಿಡಿಯಬಹುದು ಎಂಬ ಭಯ, ಆತಂಕವೇ ? ಹಿಂದೆ ನಡೆದಿರುವ ಕ್ರೌರ್ಯವನ್ನು ನೋಡಿದರೆ ಇದೇ ಸತ್ಯ, ಅಕ್ಷರವನ್ನೋ ಶ್ಲೋಕವನ್ನು ಕೇಳಿದ ದಲಿತ, ಶೂದ್ರ ಕಿವಿಗಳಿಗೆ ಕಾದ ಶೀಸ ಸುರಿಯಬೇಕೆಂದು ಹೇಳಿದ್ದು ಅಕ್ಷರ ನಿರಾಕರಣೆಯ ಮನಸ್ಥಿತಿಯಿಂದಲೇ ಅಲ್ಲವೇ ?
ಹಿಂದೆ ನಡೆದ ಇಂಥ ವಿದ್ಯಮಾನಗಳು ಅಕ್ಷರ ಕಲಿತ ದಲಿತ – ಶೂದ್ರರ ಅರಿವಿಗೆ ಬಂದಿಲ್ಲವೇ, ಬಂದಿದ್ದರೂ ಅದಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬ ಉಢಾಪೆಯೇ ? ಇದು ಉತ್ತಮ ಸ್ಥಿತಿಯಲ್ಲಿರುವ ದಲಿತ, ಶೂದ್ರರು ತಾವಿಂಥ ಉತ್ತಮ ಸ್ಥಿತಿಗೆ ಬರಲು ಸಂವಿಧಾನವೇ ಕಾರಣ ಎಂಬುದನ್ನು ಪ್ರತಿ ಕ್ಷಣವೂ ನೆನಪಿನಲ್ಲಿ ಇಟ್ಟುಕೊಳ್ಳಬೇಕಲ್ಲವೇ ?
1. ನಮ್ಮಲ್ಲಿ ಲಿಖಿತ ರೂಪದಲ್ಲಿ ದಾಖಲಿಸುವುದಕ್ಕಿಂತ ಮೌಖಿಕ ರೂಪದಲ್ಲೇ ಹೆಚ್ಚು ದಾಖಲೆಯಾಗುತ್ತಿತ್ತು,
2. ಇವೆಲ್ಲವೂ ವಂಶ ಪಾರಂಪರ್ಯ ಜ್ಞಾನವಾದ್ದರಿಂದ ಇದನ್ನು ಬೇರೆ ಯಾರಿಗೂ ಸಾಮಾನ್ಯವಾಗಿ ತಿಳಿಸುತ್ತಿರಲಿಲ್ಲ.
3. ಬಹಳಷ್ಟು ದಾಖಲಾಗಿದ್ದದ್ದನ್ನ ಮುಸ್ಲೀಮರು ಹಾಳು ಮಾಡಿದರು, ಯೂರೋಪಿಯನ್ನರು ಕದ್ದು ತಮ್ಮ ದೇಶಕ್ಕೆ ಓಯ್ದರು .