ಇಂದು ಬೆಳಗ್ಗಿನ ಪತ್ರಿಕೆ (ಜೂನ್ 29, 2023)  ಓದುತ್ತಿದ್ದೆ. ಬೆಂಗಳೂರಿನ ಕೆ.ಆರ್. ಪುರದಲ್ಲಿ ಬೀದಿಯಲ್ಲಿ ನಡೆದು ಹೋಗುತ್ತಿದ್ದ ಪುಟ್ಟ ಬಾಲಕಿಯ ನಾಯಿ ಕಚ್ಚಿದೆ  ಮಗುವಿನ ಕೈಗಳು, ಭುಜಕ್ಕೆ ತೀವ್ರ ಗಾಯಗಳಾಗಿವೆ.

ಈ ಹಿಂದೆಯೂ 2007ರಲ್ಲಿ ಬೆಂಗಳೂರಿನ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಇಬ್ಬರು ಪುಟ್ಟ ಬಾಲಕಿಯರ ಮೇಲೆ ನಾಯಿಗಳು ದಾಳಿ ಮಾಡಿ ಕೊಂದಿದ್ದವು. ಇಂಥ ದುರ್ಘಟನೆಗಳು ಲೆಕ್ಕವಿಲ್ಲದಷ್ಟು ನಡೆದಿವೆ ; ನಡೆಯುತ್ತಿವೆ.

ನಾಯಿಗಳ ಕಡಿತ

ಭಾರತದಲ್ಲಿಯೇ ಅತೀ ಹೆಚ್ಚು ಮಂದಿ ನಾಯಿಗಳ ಕಡಿತಕ್ಕೆ ಒಳಗಾಗಿದ್ದಾರೆ ; ಒಳಗಾಗುತ್ತಿದ್ದಾರೆ. (ಪ್ರತಿ ವರ್ಷ 1.75 ಮಿಲಿಯನ್ ನಾಯಿ ಕಡಿತಗಳು) ಪ್ರಪಂಚದ ಒಟ್ಟಾರೆ ನಾಯಿ ಕಡಿತಗಳಿಗೆ ಹೋಲಿಸಿದರೆ ಶೇಕಡ 36 ರಷ್ಟು ಪ್ರಕರಣಗಳು ಇಲ್ಲಿಯೇ ದಾಖಲಾಗಿವೆ. ದಾಖಲಾಗದೇ ಉಳಿದ ಪ್ರಕರಣಗಳು ಇದಕ್ಕೂ ಎರಡರಷ್ಟು ಇರಬಹುದು.

ಅತೀ ಹೆಚ್ಚು ಬೀದಿ ನಾಯಿ

ಇಡೀ ಪ್ರಪಂಚದಲ್ಲಿಯೇ ಅತೀ ಹೆಚ್ಚು ಬೀದಿ ನಾಯಿಗಳಿರುವುದು ಸಹ ಇಲ್ಲಿಯೇ  ಶೇಕಡ 80ರಷ್ಟು ಬೀದಿ ನಾಯಿಗಳು ಭಾರತದಲ್ಲಿಯೇ ಇವೆ. ಅತೀ ಹೆಚ್ಚು ರೇಬೀಸ್ ಪ್ರಕರಣಗಳು ಇಲ್ಲಿ ನಡೆದಿವೆ. ನಗರ ಪ್ರದೇಶಗಳಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ನಾಯಿ ಕಡಿತಗಳಲ್ಲಿ ಬಹುತೇಕ ಪ್ರಕರಣಗಳು ದಾಖಲಾಗುವುದೇ ಇಲ್ಲ.

ರೇಬೀಸ್ ಚುಚ್ಚುಮದ್ದಿನ ಕೊರತೆ

ನಾಯಿ ಕಡಿತದಿಂದ ತೀವ್ರ ಗಾಯಗಳಾಗುತ್ತಿವೆ. ಇವು ವಾಸಿಯಾಗುವುದು ಅನುಮಾನ. ಕಚ್ಚಿದ ನಾಯಿಗೆ ರೇಬೀಸ್ ಇದೆಯೋ ಇಲ್ಲವೋ ಎಂದು ಪತ್ತೆ ಹಚ್ಚಲೂ ಆಗುವುದಿಲ್ಲ. ಅದಕ್ಕೆ ರೇಬೀಸ್ ಇರಲಿ, ಇಲ್ಲದಿರಲಿ ಭಯಾನಕ ರೇಬೀಸ್ ರೋಗದ ವಿರುದ್ಧ ಲಸಿಕೆ ತೆಗೆದುಕೊಳ್ಳಬೇಕು. ದುರಂತ ಎಂದರೆ ಇಂಥ ರೋಗದ ವಿರುದ್ಧ ರಕ್ಷಣೆ ನೀಡುವ ಚುಚ್ಚುಮದ್ದುಗಳಿಗೂ ತೀವ್ರ ಕೊರತೆಯಿದೆ. ಎಷ್ಟೋ ಸರ್ಕಾರಿ ಆಸ್ಪತ್ರೆಗಳಲ್ಲಿ ಇದರ ದಾಸ್ತಾನು ಇರುವುದಿಲ್ಲ.

ಜೂನ್ 11, 2023ರಂದು ಕೇರಳದ ಕಣ್ಣೂರಿನಲ್ಲಿ 11 ವರ್ಷದ ಪುಟ್ಟ ಬಾಲಕನ ಮೇಲೆ ಬೀದಿನಾಯಿಗಳು ಹಠಾತನೇ ಎರಗಿ ಕಚ್ಚಿ ಗಾಯಗೊಳಿಸಿವೆ. ಇದರಿಂದ ಬಾಲಕ ಮೃತನಾಗಿದ್ದಾನೆ. ನಿರಂತರವಾಗಿ ನಡೆದ ಇಂಥ ಘಟನೆಗಳಿಂದ ರೋಸಿ ಹೋದ ಜನತೆ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ.

ಕೇರಳ ರಾಜ್ಯ ಮಕ್ಕಳ ಆಯೋಗವು ಬೀದಿ ನಾಯಿಗಳಿಂದ ಪುಟ್ಟಪುಟ್ಟ ಮಕ್ಕಳನ್ನು ರಕ್ಷಿಸಿಲು ಅವುಗಳನ್ನು ಕೊಲ್ಲಲ್ಲು ರಾಜ್ಯದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಕೋರ್ಟ್ ಮೆಟ್ಟಿಲೇರಿದೆ.  ಬೀದಿ ನಾಯಿಗಳಿಗೆ ದಯಾ ಮರಣ ನೀಡಲು ಸುಪ್ರೀಕೋರ್ಟಿನ ಅನುಮತಿ ಕಡ್ಡಾಯವೆಂದು 2015ರಲ್ಲಿ ಹೇಳಿರುವ ಕೇರಳ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ  ಕಣ್ಣೂರು ಜಿಲ್ಲಾ ಪಂಚಾಯತ್ ಸಹ ಸುಪ್ರೀ ಕೋರ್ಟ್ ಕದ ತಟ್ಟಿದೆ.

ಕಾನೂನು ಪ್ರಕ್ರಿಯೆ

ಬೀದಿ ನಾಯಿಗಳ ಕಡಿತ ಪ್ರಕರಣಗಳು, ಅವುಗಳಿಂದಾಗುತ್ತಿರುವ ಸಾವು, ತೀವ್ರ ನೋವು ಅರಿತಿರುವ ಕೇರಳ ಸರ್ಕಾರ ಅವುಗಳ ನಿಯಂತ್ರಣಕ್ಕಾಗಿ ಸೂಕ್ತ ಕ್ರಮ ತೆಗೆದುಕೊಳ್ಳುವ ಪ್ರಕ್ರಿಯೆ ನಡೆಸುತ್ತಿದೆ. ಅಪಾಯಕಾರಿ ಪ್ರಾಣಿಗಳನ್ನು ನಿರ್ಬಂಧಿಸಲು, ನಾಶಪಡಿಸಲು ಅಥವಾ ವಿಲೇವಾರಿ ಮಾಡಲು ಜಿಲ್ಲಾ ದಂಡಾಧಿಕಾರಿ (ಜಿಲ್ಲಾಧಿಕಾರಿ)ಗಳಿಗೆ ಅಧಿಕಾರ ನೀಡುವುದಕ್ಕಾಗಿ ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿ.ಆರ್.ಪಿ.ಸಿ.) ಸೆಕ್ಷನ್ 133 (ಎಫ್) ಬಳಸುವ ನಿಟ್ಟಿನಲ್ಲಿಯೂ ಆಲೋಚಿಸುತ್ತಿದೆ. ಇದರ ಸಾಧಕ ಬಾಧಕಗಳ ಬಗ್ಗೆ ಸರ್ಕಾರ ಕಾನೂನು ಪಂಡಿತರು ತೀವ್ರ ಚರ್ಚೆ ನಡೆಸುತ್ತಿದ್ದಾರೆ.

ವಿಫಲವಾದ ಕ್ರಮಗಳು

ಬೀದಿನಾಯಿಗಳನ್ನು ಕೊಲ್ಲುವ ಬದಲು ಅವುಗಳಿಗೆ ರೇಬೀಸ್ ರೋಗ ನಿರೋಧಕ ಚುಚ್ಚುಮದ್ದು ನೀಡುವುದು, ಸಂತಾನ ಹರಣ ಶಸ್ತ್ರ ಚಿಕಿತ್ಸೆ ನಡೆಸಿ ಅವುಗಳ ಸಂಖ್ಯೆ ನಿಯಂತ್ರಿಸುವ ಕ್ರಮವೂ ರೂಢಿಯಲ್ಲಿದೆ. ಆಯಾ ಮಹಾ ನಗರ ಪಾಲಿಕೆ, ಪಟ್ಟಣ, ನಗರ ಸಭೆಗಳಿಗೆ ಈ ಹೊಣೆಗಾರಿಕೆ ನೀಡಲಾಗಿದೆ. ಆದರೆ ಇದು ಸಂಪೂರ್ಣ ವಿಫಲ, ಇಲ್ಲಿಯೂ ಬಹುತೇಕ ಕಡೆ ತಪ್ಪು ಲೆಕ್ಕಾಚಾರ ನೀಡಿ ಭ್ರಷ್ಟಾಚಾರ ಎಸಗಲಾಗುತ್ತಿದೆ ಎಂಬ ಆರೋಪಗಳಿವೆ.

ಬಡವರ ಬವಣೆ

ಬೀದಿ ನಾಯಿಗಳಿಂದ ದಾಳಿಗೆ ಒಳಗಾದವರಲ್ಲಿ ಹೆಚ್ಚಿನವರು ಬಡವರು, ದೈನಂದಿನ ದುಡಿಮೆಗಾಗಿ ಬೆಳಗ್ಗೆ ಬೇಗನೆ ಎದ್ದು ; ರಾತ್ರಿ ತಡವಾಗಿ ಮನೆ ತಲುಪುವ ಇಂಥ ಅನೇಕರು ಬೀದಿ ನಾಯಿಗಳ ಬರ್ಬರ ಕಡಿತಕ್ಕೆ ಒಳಗಾಗಿ ಸಾವುನೋವು ಅನುಭವಿಸುತ್ತಿದ್ದಾರೆ. ಅಂದಂದಿನ ದುಡಿಮೆಯಿಂದಲೇ ಅವತ್ತವತ್ತಿನ ಅನ್ನ ಪಡೆದು ಉಣ್ಣುವ ಇಂಥವರು ಅನುಭವಿಸುವ ಯಾತನೆಗಳು ಇನ್ನೂ ಆಳುವವರಿಗೆ ಅರ್ಥವಾದಂತೆ ಕಾಣುವುದಿಲ್ಲ.

ನಿಸರ್ಗದ ಸಹಜ ನಿಯಂತ್ರಣ

ಸಾಮಾನ್ಯವಾಗಿ ಬೀದಿನಾಯಿಗಳನ್ನು ಕುರ್ಕಗಳು (ಚಿರತೆಗಳು) ನಿಯಂತ್ರಿಸುತ್ತವೆ. ಆದರೆ ನಾನಾ ಕಾರಣಗಳಿಗಾಗಿ ಅವುಗಳೇ ಸಾವನ್ನಪ್ಪುತ್ತಿವೆ. ಉದಾಹರಣೆಗೆ ಹೇಳುವುದಾದರೆ ಬೆಂಗಳೂರಿನ ಹೊರ ವಲಯಗಳಲ್ಲಿ ಇದ್ದ ಬಹುತೇಕ ಚಿರತೆಗಳು,  ಗುಡ್ಡಗಳು, ಕುರುಚಲು ಕಾಡುಗಳನ್ನು ಅತಿಕ್ರಮಿಸಿ ನಗರ ಬೆಳೆದಿದ್ದರಿಂದ ಸಾವನ್ನಪ್ಪಿವೆ. ಅಳಿದುಳಿದ ಚಿರತೆಗಳು ಅತೀ ವೇಗದ ವಾಹನಗಳಿಗೆ ಸಿಲುಕಿ ಮರಣ ಹೊಂದುತ್ತಿವೆ. ಹೀಗಿರುವಾಗ ಬೀದಿನಾಯಿಗಳ ಸಹಜ ನಿಯಂತ್ರಣವಾದರೂ ಹೇಗೆ ?

ಸ್ಥಳೀಯ ಆಡಳಿತಗಳ ವಿಫಲತೆ

ನಿಸರ್ಗದ ಸಹಜ ನಿಯಂತ್ರಣವಿಲ್ಲದೇ ಇದ್ದಾಗ ಸ್ಥಳೀಯ ಆಡಳಿತಗಳು ಅಂದರೆ ಮಹಾನಗರ ಪಾಲಿಕೆ, ಪಟ್ಟಣ, ನಗರ ಸಭೆ, ಪಂಚಾಯತ್ ಗಳು ಸೂಕ್ತ ಕ್ರಮ ಅನುಸರಿಸಿ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಿಸಬೇಕು. ಇದು ಕೂಡ ಸಮರ್ಪಕವಾಗಿ ನಡೆಯುತ್ತಿಲ್ಲ.

ಈ ಎಲ್ಲ ವಿಫಲತೆಗಳಿಂದ ಕಷ್ಟನಷ್ಟ ಅನುಭವಿಸುತ್ತಿರುವವರ ಕಣ್ಣೀರನ್ನು ಒರೆಸುವವರು ಯಾರು ? ಸಕಲ ಪ್ರಾಣಿಗಳಲ್ಲೂ ದಯೆ ಇರಲಿ ಎಂದು ಹಿರಿಯರು ಹೇಳಿದರು. ಅದರಲ್ಲಿ ಮನುಷ್ಯ ಪ್ರಾಣಿಯೂ ಸೇರಿದ್ದಾನೆ ಎಂದು ಸಂಬಂಧಿಸಿದವರಿಗೆ ಮನದಟ್ಟು ಮಾಡಿಸುವವರು ಯಾರು ?

Similar Posts

Leave a Reply

Your email address will not be published. Required fields are marked *