ಬದುಕು ನಾವು ಅಂದುಕೊಂಡ ಹಾಗೆ ಇರುವುದಿಲ್ಲ. ಬಯಸಿದ್ದೆಲ್ಲ ಸಿಗುವುದಿಲ್ಲ. ವಿರೋಧಿಸಿದ್ದೆಲ್ಲ ವಿರೋಧವೂ ಆಗಿರುವುದಿಲ್ಲ. ಇದು ವೈರುಧ್ಯವೂ ಹೌದು; ಕೆಲವೊಮ್ಮೆ ದುರಂತವೂ ಹೌದು. ಇವೆರಡ ಬಗ್ಗೆ ಕಥೆಗಾರ್ತಿ ಜೊತೆಗೆ ನಿರ್ದೇಶಕಿಯೂ ಆಗಿರುವ ಕೆರೋಲಿನಾ ಮಾರ್ಕ್ವೇಜ್ ಹೇಳುತ್ತಾ ಹೋಗುತ್ತಾಳೆ.
ಅಂದ ಹಾಗೆ ಇದು ಬ್ರೆಜಿಲ್ ಸಿನೆಮಾ. ಮೊದಲ ಕಪ್ಪು ಸಂಗಾತಿಯಿಂದ ಮಗನನ್ನು ಪಡೆದಿದ್ದಾಳೆ. ಬಳಿಕ ಸಂಗಾತಿಗಳಿಬ್ಬರೂ ದೂರವಾಗಿದ್ದಾರೆ. ಮಗನಿಗೆ ತಾಯಿ ಒಂಟಿ ಪೋಷಕಿ. ಮಗನಿಗೆ ೧೭ ವರ್ಷ. ಈ ನಡುವೆ ಓರ್ವ ಬಾಯ್ ಫ್ರೆಂಡ್ ಇದ್ದಾನೆ.
ಸುಲಭವಾಗಿ ಬರುವ ಹಣ ಬೇಡ. ದುಡಿದು ಬಂದ ಹಣದಲ್ಲಿ ಬದುಕುಬೇಕು. ಹಾಸಿಗೆ ಇದ್ದಷ್ಟೂ ಕಾಲು ಚಾಚಬೇಕು ಎನ್ನುವುದು ಸುಲ್ಲೇನ್ ಅಪ್ಪಿದ ತತ್ವ. ಮಗ ಬುದ್ದಿವಂತ. ಆದರೆ ಸಲಿಂಗಕಾಮಿ. ಮಹಿಳಾ ಪಾಪ್ ಗಾಯಕಿಯ ಅನುಕರಿಸಿ ಹಾಡುವುದರಲ್ಲಿ ನಿಸ್ಸಿಮ. ಈತನ ವರ್ತನೆ ತಿದ್ದಬೇಕು ಎಂಬುದು ತಾಯಿಯ ಹಠ.
ವರ್ತನೆ ತಿದ್ದುವ ಸ್ಕೂಲಿನ ಫೀಸು ಅತೀ ದುಬಾರಿ. ಟೋಲ್ ಬೂತ್ ನಲ್ಲಿ ಈಕೆ ಟೋಲ್ ಸಂಗ್ರಾಹಕಿ. ಬರುವ ಸಂಬಳ ಜೀವನ ಸಾಕಾಗುವಷ್ಟೇ ! ಇದೇ ಗಳಿಗೆಯಲ್ಲಿ ಬಾಯ್ ಫ್ರೆಂಡ್ ಓರ್ವ ದರೋಡೆಕೋರ ಎನ್ನುವುದು ಗೊತ್ತಾಗುತ್ತದೆ. ಆತನನ್ನು ಆಚೆ ದಬ್ಬುತ್ತಾಳೆ.
ಮಗನ ವರ್ತನೆ ತಿದ್ದಲು ಹಣ ಬೇಕು ? ಏನು ಮಾಡುವುದು ? ಮತ್ತೆ ದರೋಡೆಕೋರ ಬಾಯ್ ಫ್ರೆಂಡ್ ಸಾಂಗತ್ಯ. ಆತನಿಗೆ ಮಾಹಿತಿದಾರಳಾಗುತ್ತಾಳೆ. ಮಗ ವರ್ತನಾ ಚಿಕಿತ್ಸೆ ಶಾಲೆಗ ಸೇರುತ್ತಾನೆ. ಇವಳು ಜೈಲು ಪಾಲಾಗುತ್ತಾಳೆ.
ಅತ್ತ ಇವಳಿಂದ ಮಾಹಿತಿ ಪಡೆದಿದ್ದ ಬಾಯ್ ಫ್ರೆಂಡ್ ನುಣಚಿಕೊಂಡಿದ್ದಾನೆ. ಮಗನ ವರ್ತನೆ, ಹವ್ಯಾಸ ತಿದ್ದಬೇಕೆಂದು ಹೊರಟವಳಿಗೆ ಏನಾಯಿತು ? ಕೊಂಚ ಎಡವಿದರೂ ಬದುಕಿನ ಹಾದಿಯಲ್ಲಿ ಸುಂಕ ಕಟ್ಟುತ್ತಲೇ ಇರಬೇಕು ಎಂಬ ಕಥೆಯನ್ನು ನಿರ್ದೇಶಕಿ ಅಚ್ಚುಕಟ್ಟಾಗಿ ಹೇಳುತ್ತಾಳೆ. ಸುಲ್ಲೇನ್ ಮಹಿಳಾ ಸಂಗಾತಿಯ ವ್ಯಕ್ತಿತ್ವದ ಪರಿಚಯವನ್ನೂ ಮಾಡಿಸುತ್ತಾಳೆ. “ಟೋಲ್” ೧೦೧ ನಿಮಿಷದ ಸಿನೆಮಾ. ಕಥನ ಕಟ್ಟುವ ರೀತಿ ಮನ ಸೆಳೆಯುತ್ತದೆ. ಆದರೆ ಸಂಕಲನ ಮಾತ್ರ ದುರ್ಬಲ. ಅನೇಕ ಅನಗತ್ಯ ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು. ಹಿನ್ನೆಲೆ ಸಂಗೀತ ಕೂಡ ಚಿತ್ರಕಥೆಗೆ ಹೊಂದಿಕೊಂಡೆ ಸಾಗುತ್ತದೆ.
ಸುಲೇನ್ ಮತ್ತು ಟೆಕ್ವಿನೋ ಪಾತ್ರಧಾರಿಗಳಿಬ್ಬರ ಅಭಿನಯ ಸೊಗಸು. ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ ಎನ್ನುವಷ್ಟು ಮಟ್ಟಿಗೆ ಭಾವಪೂರ್ಣವಾಗಿ ನಟಿಸಿದ್ದಾರೆ. ಮಾರ್ಚ್ ೦೪ ರಂದು ಬೆಂಗಳೂರು ಅಂತರಾಷ್ಟ್ರೀಯ ಸಿನೆಮೋತ್ಸವದಲ್ಲಿ “ಟೋಲ್” ನೋಡಿದೆ.