ಸಾಕು ಆನೆ, ನಾಯಿ ಮತ್ತು ಕುದುರೆ ಮನುಷ್ಯರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಸ್ಪಂದಿಸುತ್ತವೆ. ಪ್ರೀತಿಯಿಂದ ಸಾಕಿದವರು ಅಪ್ಪತ್ತಿನಲ್ಲಿದ್ದಾಗ ಅವರ ಜೀವ ರಕ್ಷಿಸಿದ, ಕಣ್ಮರೆಯಾದರೆ ಆತನ ನೆನಪಿನಲ್ಲಿಯೇ ಪ್ರಾಣ ನೀಗಿರುವ ನಿದರ್ಶನಗಳು ಇವೆ. ಇಂಥ ಭಾವನಾತ್ಮಕ ನಂಟು ಚಿತ್ರಿಸುವ ಸಿನೆಮಾಗಳೂ ಬಂದಿವೆ. ಇಂಥವುಗಳ ಸಾಲಿನಲ್ಲಿ The Steed ನಿಲ್ಲುತ್ತದೆಯಾದರೂ ಒಂದು ಅಪೂರ್ವ ಸಿನೆಮಾ ಆಗಿ ಮೂಡಿ ಬಂದಿರುವ ಕಾರಣಕ್ಕೆ ಅಪಾರ ಮೆಚ್ಚುಗೆಗೆ ಪಾತ್ರವಾಗುತ್ತದೆ.
20ನೇ ಶತಮಾನದ ಪೂರ್ವಾರ್ಧದಲ್ಲಿ ಮಂಗೋಲಿಯಾ ದೇಶದಲ್ಲಿ ನಡೆಯುವ ಕಥೆ ಆಧರಿಸಿದ, 2019ರಲ್ಲಿ ತೆರೆಕಂಡಿರುವ ಸಿನೆಮಾ. ಸ್ಥಳೀಯ ಕವಿ ಬರೆದ ಕಾವ್ಯ ಆಧರಿಸಿ ಎರ್ಡೇನ್ಬಿಲೆಗ್ ಗ್ಯಾನ್ಬೊಲ್ಡ್ ಚಿತ್ರಕಥೆ ರಚಿಸಿ ನಿರ್ದೇಶನವನ್ನೂ ಮಾಡಿದ್ದಾರೆ. ಕಥೆ ರಚಿಸುವ ಕಾರ್ಯದಲ್ಲಿ ಕುಬಾತರ್ ಯು. ಸಹಾಯ ಮಾಡಿದ್ದಾರೆ.


ಮಂಗೋಲಿಯಾ ದೇಶದ ಅಲೆಮಾರಿ ದನಗಾಯಿ, ಕುದುರೆ ಸಾಕಣೆದಾರರ ಬುಡಕಟ್ಟು ಬಾಲಕ ಚೂಲೂನ್ ಮಗುವಾಗಿದ್ದಾಗ ಈತನ ತಾಯಿ ಎನ್ಕತೂಲ್ ಕುದುರೆ ಮರಿಯನ್ನು ಸಾಕಲು ಆರಂಭಿಸಿರುತ್ತಾಳೆ. ಈ ಕುದುರೆ ಮತ್ತು ಚೂಲೂನ್ ಒಟ್ಟಿಗೆ ಬೆಳೆಯುತ್ತಾ ಅನೋನ್ಯ ಗೆಳೆಯರೇ ಆಗಿರುತ್ತಾರೆ. ಪರಸ್ಪರ ಭಾವನೆಗಳಿಗೆ ಸ್ಪಂದಿಸುತ್ತಿರುತ್ತಾರೆ. ಬಾಲಕ ಚೂಲೂನ್ ಅನಾರೋಗ್ಯ ಪೀಡಿತ ತಾಯಿ ಕಳೆದುಕೊಳ್ಳುತ್ತಾನೆ. ಈಕೆಯ ಅಂತ್ಯಕ್ರಿಯೆ ನೆರವೇರಿಸುತ್ತೇನೆಂದು ಬಂದ ಬುಡಕಟ್ಟು ಮಾಂತ್ರಿಕ ಕುದುರೆ ಅಪಹರಿಸುತ್ತಾನೆ.
ಇಲ್ಲಿಂದ ಕಥೆ ತೀವ್ರ ಬೆಳವಣಿಗೆ ಕಾಣುತ್ತದೆ. ತನ್ನ ಕುದುರೆ ಹುಡುಕುವ ಹಾದಿಯಲ್ಲಿ ಚೂಲೂನ್ ಪಡುವ, ತನ್ನ ಸಾಕಿದಾತನನ್ನು ಮರಳಿ ಸೇರಲು ಕುದುರೆ ಪಡುವ ಪ್ರಯತ್ನಗಳು ಅನನ್ಯವಾಗಿ ಚಿತ್ರಿತವಾಗಿವೆ. ಮಂಗೋಲಿಯನ್ ಬುಡಕಟ್ಟುಗಳ ಆಚಾರ – ವಿಚಾರಗಳು, ಪ್ರಾಣಿಗಳ ಕುರಿತ ನಂಬಿಕೆಗಳು, ಜಾನಪದೀಯ ಆಚರಣೆಗಳು, 20ನೇ ಶತಮಾನದ ಪೂರ್ವಾರ್ಧದಲ್ಲಿ ಆದ ರಶಿಯನ್ ಕ್ರಾಂತಿಯ ಕಿರು ವಿವರಗಳಿವೆ.


ರಶಿಯಾಕ್ಕೆ ಸಾಗಿಸಲ್ಪಟ್ಟಿದ್ದ ಕುದುರೆ ಪುನಃ ಮಂಗೋಲಿಯಾ ಸೇರುವ ಅವಧಿಯಲ್ಲಿ ಅನೇಕ ಬೆಳವಣಿಗೆಗಳು ನಡೆಯುತ್ತವೆ. ಇವೆಲ್ಲವನ್ನೂ ನಿರ್ದೇಶಕ ಸಿನೆಮ್ಯಾಟಿಕ್ ಭಾಷೆಯಲ್ಲಿ ಹೇಳಿರುವ ಪರಿ ಗಮನಾರ್ಹ. ಅರಿಹುನ್ ಬೋಲ್ಡ್ ( ಬಾಲಕ ಚೂಲೂನ್),ಎನ್ಕತೂಲ್ ( ಬಾಲಕನ ತಾಯಿ) ತ್ಸಿರೇನ್ದಗ್ವ ಪುರ್ವೇದೊರ್ಜ್ ( ಕುಶಲಕರ್ಮಿ) ಸೇರಿದಂತೆ ಪ್ರತಿಯೊಬ್ಬರೂ ತಮ್ಮತಮ್ಮ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ ಎಂದರೆ ಉತ್ಪ್ರೇಕ್ಷೆ ಮಾತಲ್ಲ.
ಇಡೀ ಸಿನೆಮಾದ ಕೇಂದ್ರಬಿಂದು ಕುದುರೆ ಮತ್ತು ಬಾಲಕ ಚೂಲೂನ್. ಸಿನೆಮಾದ ನಾಯಕ ಯಾರು ಎಂಬ ಪ್ರಶ್ನೆ ಬಂದರೆ ನಿಸ್ಸಂದೇಹವಾಗಿ ಆ ಸ್ಥಾನದಲ್ಲಿ ಕುದುರೆಯೇ ನಿಲ್ಲುತ್ತದೆ. ಇದನ್ನು ಅಪೂರ್ವ ರೀತಿ ತರಬೇತುಗೊಳಿಸಲಾಗಿದೆ. ಮಾಂತ್ರಿಕನಿಂದ ಪಾರಾಗುವ ಹಂತದಲ್ಲಿ ಆತನಿಂದ ಇದು ಕಾಲಿನ ಭಾಗದಲ್ಲಿ ಚೂರಿ ಇರಿತಕ್ಕೊಳಗಾಗುತ್ತದೆ.ಇದರಿಂದ ಅದು ಕುಂಟುತ್ತಾ ಬರುವ ದೃಶ್ಯಗಳು ಅತ್ಯಂತ ಪರಿಣಾಕಾರಿಯಾಗಿ ಮೂಡಿ ಬಂದಿದೆ. ತರಬೇತುಗೊಳಿಸಿದವನ ಸೂಚನೆಯಂತೆ ಅದು ಸ್ಪಂದಿಸಿರುವ ರೀತಿ ಅಚ್ಚರಿ ಮೂಡಿಸುತ್ತದೆ.
ಚಿತ್ರಕಥೆ ರಚನೆಯಲ್ಲಿ ಬಹಳ ಶ್ರಮ ವಹಿಸಲಾಗಿದೆ ಎಂಬುದು ಪ್ರತಿಯೊಂದು ಹಂತದಲ್ಲಿಯೂ ತಿಳಿಯುತ್ತದೆ. ಸ್ಥಳೀಯ ನುಡಿಕಟ್ಟುಗಳು, ರೂಪಕಗಳನ್ನು ಅರ್ಥಪೂರ್ಣವಾಗಿ ಬಳಸಲಾಗಿದೆ. ಬಾತರ್ ಬತ್ಸುಕ್ ಛಾಯಾಗ್ರಹಣದಲ್ಲಿ ಸಿನೆಮಾ ದೃಶ್ಯ ಕಾವ್ಯದಂತೆ ಮೂಡಿಬಂದಿದೆ. ಸಹಜ ನೆರಳು – ಬೆಳಕನ್ನು ಬಳಸಿಕೊಂಡಿರುವ ರೀತಿಗೆ ಅಪಾರ ಮೆಚ್ಚುಗೆ ಮೂಡುತ್ತದೆ. ಸಂಕಲನ – ಸಂಗೀತ ಎಲ್ಲವೂ ಅಚ್ಚುಕಟ್ಟು.


ಬೆಂಗಳೂರು ಅಂತರಾಷ್ಟ್ರೀಯ 12ನೇ ಚಲನಚಿತ್ರೋತ್ಸವದಲ್ಲಿ ನೋಡಿದ ಚಿತ್ರವಿದು. ಇದನ್ನು ನೋಡಲು ಸಿನೆಪ್ರೇಮಿಗಳು ಒಂದು ತಾಸಿಗೂ ಮೊದಲೇ ಸರದಿಯಲ್ಲಿ ನಿಂತಿದ್ದರು. ಚಿತ್ರಮಂದಿರ ಹೌಸ್ ಪುಲ್ ಆದ ಕಾರಣ ಅನೇಕರು ಪ್ರವೇಶ ಸಿಗದೇ ನಿರಾಶರಾಗಿ ಹಿಂದಿರುಗಬೇಕಾಯಿತು.

Similar Posts

Leave a Reply

Your email address will not be published. Required fields are marked *