ಮೀತಿ ಮೀರಿದ ವಿಸ್ತೀರ್ಣದ ಭೂಮಿಯ ಹಕ್ಕು ಮತ್ತು ಜಾತಿ ಶ್ರೇಷ್ಠತೆ ವ್ಯಸನ ಎರಡೂ ಭಾರಿ ಅಪಾಯಕಾರಿ. ಇವೆರಡೂ ಒಂದೇ ಸಮುದಾಯದಲ್ಲಿ ಸೇರಿ ಹೋದರೆ ? ಎಂಥಾ ಅಪಾಯ ಘಟಿಸಬಹುದು. ! ಇದನ್ನು ಕಾಂತಾರ ಜನಪ್ರಿಯ ಸಿನೆಮಾದ ಪರಿಭಾಷೆಯಲ್ಲಿ ಹೇಳ ಹೊರಟಿದೆ.
ದೈವದ ಬದಲಿಗೆ ರಾಜ ಭೂಮಿಯನ್ನು ಕೊಡುತ್ತಾನೆ. ಯಾರ ಭೂಮಿಯನ್ನು ಯಾರಿಗೆ ಆತ ಕೊಡುವುದು? ಆದಿವಾಸಿಗಳೇ ಮೂಲ ಮಾಲೀಕರಾಗಿರುವ ಭೂಮಿಯನ್ನು ಅವರಿಗೇ ಕೊಡುತ್ತಾನೆ. ಹೀಗಿರುವಾಗ ಆತನ ವಂಶಸ್ಥರು ಮತ್ತೆ ಅದರ ಮೇಲೆ ಹಕ್ಕು ಪ್ರತಿಪಾದಿಸಲು ಹೊರಡುವುದು ದಬ್ಬಾಳಿಕೆ, ಕ್ರೂರತನ ಮತ್ತು ಮೂರ್ಖತನ.
ಇದಿಷ್ಟೆ ಅಲ್ಲ. ಆ ಭೂ ಮಾಲೀಕ ಜಾತಿಯಲ್ಲಿ ಶ್ರೇಷ್ಠತೆ ವ್ಯಸನವೂ ಇದೆ. ಕೆಳಜಾತಿಯ ಶಿವ ಮನೆ ಒಳಗೆ ಬಂದು ಹೋದ ನಂತರ ಭೂ ಮಾಲೀಕ ಮನೆ ಪವಿತ್ರ ಮಾಡಲು ಪಂಚಗವ್ಯ ಸಿಂಪಡಿಸುತ್ತಾನೆ. ಇವನಷ್ಟೆ ಅಲ್ಲ; ಅವನ ಜಾತಿಯವನೇ ಆದ ಮನೆ ಆಳು ಕುತೂಹಲದಿಂದ ಭೂಮಾಲಿಕನ ಹೊಸ್ತಿಲು ದಾಟಿದೊಡನೆ ಭಾರಿ ಕ್ರೌರ್ಯದಿಂದ ಹಲ್ಲೆ ನಡೆಸುತ್ತಾನೆ.
ಹೀಗೆ ಸೊಕ್ಕಿನಿಂದ ವರ್ತಿಸಲು ಕಾರಣ ಜಾತಿಶಕ್ತಿಯ ಬೆಂಬಲ. ತಕ್ಷಣವೇ ಇದಕ್ಕೆ ಪ್ರತಿಕ್ರಿಯಿಸುವುದು ಅದೇ ಕೆಳಜಾತಿಯ ಶಿವ. ಇಲ್ಲಿ ಇವ್ಯಾವುದನ್ನೂ ವಾಚ್ಯವಾಗಿ ಹೇಳದೇ ಹಾಗೆ ಘಟನೆಗಳನ್ನು ಬೆಸೆಯುತ್ತಾ ಬೆಳೆಸುತ್ತಾ ಬರಲಾಗಿದೆ. ಈ ಕಾರಣದಿಂದಲೂ ಕಾಂತಾರ ಮುಖ್ಯವಾಗುತ್ತದೆ.