ಸಾಮಾನ್ಯವಾಗಿ ಭಾರತೀಯ ರಾಜಕೀಯ ಸಿನೆಮಾ (Indian political cinema) ಗಳೆಂದರೆ ಹೊಡಿಬಡಿ, ಕೊಲ್ಲು, ಪಾರ್ಕಿನಲ್ಲೋ, ಬೆಟ್ಟಗುಡ್ಡದಲ್ಲೋ ಅಡ್ಡಾಡುತ್ತಾ ಹಾಡು ಹೇಳು ಇಂಥವೇ ಇರುತ್ತವೆ. ಈ ಸೂತ್ರಕ್ಕೆ ವಿರುದ್ಧವಾದ ನೈಜತೆಗೆ ಹತ್ತಿರವಾದ ಚಿತ್ರಗಳು ಬಂದಿವೆ. ಇಂಥವುಗಳ ಸಾಲಿನಲ್ಲಿ ಮಲೆಯಾಳಂನ “ಆಗಸ್ಟ್ 1” (August 1) ಸಹ ಸೇರಿದೆ.
ಫೇಸ್ಬುಕ್ಕಿ (Facebook)ನಲ್ಲಿಯೂ ಜನಪ್ರಿಯ ಸಿನೆಮಾಗಳನ್ನು ಅಫ್ ಲೋಡ್ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಅಲ್ಲಿಯೂ ನಡುನಡುವೆ ಹಾಕುವ ಜಾಹಿರಾತುಗಳಿಂದ ಆದಾಯ ಬರುತ್ತದೆ, ಇಲ್ಲಿನ ತುಣುಕುಗಳಿಂದ ಪ್ರೇರಿತರಾಗಿ ಯೂ ಟ್ಯೂಬ್ (Youtube)ಗೆ ಹೋಗಿ ಪೂರ್ಣ ಸಿನೆಮಾ ನೋಡುತ್ತಾರೆ. ಇದರಿಂದಲೂ ಗಣನೀಯ ಆದಾಯ ಬರುತ್ತದೆ. ನಾನು ಹೀಗೆ “ಆಗಸ್ಟ್ 1” ಸಿನೆಮಾ ನೋಡಿದೆ. ಇದು 1988ರಲ್ಲಿ ತೆರೆ ಕಂಡಿದೆ.
ದಕ್ಷ ಆಡಳಿತ ನೀಡಬೇಕು, ಜನರ ಜೀವನ ಮಟ್ಟ ಸುಧಾರಿಸುವ ಯೋಜನೆಗಳನ್ನು ತರಬೇಕು ಎಂದು ಆಶಿಸುವ ರಾಜಕೀಯ ವ್ಯಕ್ತಿ (Political Persons) ಗಳು ಅಧಿಕಾರಕ್ಕೆ ಬಂದರೆ ಏನೆಲ್ಲ ತೊಂದರೆ ಅನುಭವಿಸಬೇಕಾಗುತ್ತದೆ ಎಂಬುದನ್ನು “ಆಗಸ್ಟ್ 1” ಹೇಳುತ್ತದೆ.
ಚುನಾವಣೆ (Election) ಯಲ್ಲಿ ಬಹುಮತ ಪಡೆದ ರಾಜಕೀಯ ಪಕ್ಷವೊಂದು ಹಗರಣಗಳ ಕಳಂಕವಿಲ್ಲದ, ದಕ್ಷ ಆಡಳಿತ ನಡೆಸಬೇಕೆನ್ನುವ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡುವುದರ ಹಿಂದೆಯೂ ಬೇರೆಬೇರೆ ರಾಜಕೀಯ ಕಾರಣಗಳಿರಬಹುದು. ಇದನ್ನು ಹೇಳುವ ಸಿನೆಮಾ, ಕೇರಳದ ಮುಖ್ಯಮಂತ್ರಿಯಾಗುವ ಕೆ.ಜಿ. ರಾಮಚಂದ್ರನ್ ಅವರ ಬೆನ್ನು ಹಿಂದೆ ನಡೆಯುವ ಸಂಚುಗಳನ್ನು ಅನಾವರಣಗೊಳಿಸುತ್ತಾ ಸಾಗುತ್ತದೆ.
ರಾಜಕೀಯ ಪಕ್ಷ (Political party) ಎಂದರೆ ದೇಣಿಗೆ ನೀಡುವವರಲ್ಲಿ ಅಭಿಮಾನಿಗಳು, ತಮ್ಮ ಕೆಲಸ ಸಾಧಿಸಿಕೊಳ್ಳುವ ದುರುದ್ದೇಶದಿಂದ ನೀಡುವ ಬೃಹತ್ ಉದ್ಯಮಿಗಳೂ ಇರುತ್ತಾರೆ. ಇಂಥವರು ಅಧಿಕಾರಕ್ಕೆ ಬರುವ ಅಧಿಕ ಸಾಧ್ಯತೆ ಇರುವ ಪಕ್ಷಕ್ಕೆ ಅತ್ಯಧಿಕ, ಇನ್ನುಳಿದ ಪಕ್ಷಗಳಿಗೆ ಸಾಧಾರಣ ಎನ್ನುವ ದೇಣಿಗೆ ನೀಡಿರುತ್ತಾರೆ. ಇವರು ನೀಡಿದ ಹಣದ ವಿಷಯ ಆಯಾ ಪಕ್ಷದ ನಿರ್ಣಾಯಕ ಹಂತದಲ್ಲಿರುವ ಇಬ್ಬರೋ ಮೂವರೋ ನಾಯಕರಿಗೆ ತಿಳಿದಿರುತ್ತದೆ ಅಷ್ಟೆ.
ಕೆ.ಜಿ. ರಾಮಚಂದ್ರನ್ ಮುಖ್ಯಮಂತ್ರಿ (Chief Minister) ಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೇ ಭ್ರಷ್ಟ ಅಧಿಕಾರಿಗಳನ್ನು ತೊಲಗಿಸುವ ಕಾರ್ಯಾಚರಣೆ ಶುರುವಾಗುತ್ತದೆ. ಹೊಸ ಅಬಕಾರಿ ನೀತಿ ತರುವ ಉದ್ದೇಶ ಹೊಂದಲಾಗಿರುತ್ತದೆ. ಭ್ರಷ್ಟ ಉದ್ಯಮಿಗಳನ್ನು ದೂರ ಇಡಲಾಗುತ್ತದೆ. ಇದರಿಂದ ದುಷ್ಟರ ಕೂಟದ ನಾಯಕ, ಉದ್ಯಮಿ ವಿಶ್ವಂ ಆಟಗಳು ಸಾಗದಂತೆ ಆಗುತ್ತದೆ.
ಈತ ಮತ್ತು ಪಾರ್ಟಿ ಅಧ್ಯಕ್ಷ ದಿವಾಕರ ಕೈಮಾಲ್, ಕೆ. ವಾಸುದೇವನ್ ಪಿಳ್ಳೈ ಮತ್ತಿತರು ಸೇರಿಕೊಂಡು ಮುಖ್ಯಮಂತ್ರಿಯನ್ನೇ ಕೊಲೆ ಮಾಡುವ ಸಂಚು ರೂಪಿಸುತ್ತಾರೆ. ಇವರಲ್ಲೇ ಅಸಮಾಧಾನಿತನೊಬ್ಬ ಅನಾಮಧೇಯನಾಗಿ ಪತ್ರಿಕಾ ವರದಿಗಾರನೊಬ್ಬನಿಗೆ ನೀಡುವ ಸುದ್ದಿ ಆಧರಿಸಿ ತನಿಖೆ ಆರಂಭವಾಗುತ್ತದೆ.
ಮುಖ್ಯಮಂತ್ರಿಯನ್ನು ಯಾರು ಏಕಾಗಿ ಹತ್ಯೆ (Murder) ಮಾಡಲು ಮುಂದಾಗಿದ್ದಾರೆ ಎಂಬ ಯಾವೊಂದು ಸುಳಿವೂ ಇಲ್ಲದೇ ಆರಂಭವಾಗುವ ತನಿಖೆ ರೋಚಕವಾಗಿ ಸಾಗುತ್ತದೆ. ತಾರ್ಕಿಕ ಅಂತ್ಯವನ್ನೂ ಕಾಣುತ್ತದೆ. ಇದನ್ನು ನಿರೂಪಿಸುವಲ್ಲಿ ನಿರ್ದೇಶಕ ಸಿಬಿ ಮಲಯಿಲ್ (Sibi Malayil) ತೋರುವ ಸಂಯಮ ಗಮನಾರ್ಹ. ಇದಕ್ಕೆ ಎಸ್.ಎನ್. ಸ್ವಾಮಿ (S. N. Swamy )ರಚಿಸಿದ ಬಿಗಿಯಾದ ಚಿತ್ರಕಥೆಯೂ ಪೂರಕವಾಗಿದೆ. ಇವೆರಡಕ್ಕೂ ವಿ.ಪಿ. ಕೃಷ್ಣನ್ (V. P. Krishnan) ಮಾಡಿರುವ ಸಂಕಲನ ಸಹಾಯಕವಾಗಿದೆ. ಚಿತ್ರಕಥೆಯನ್ನು ಗಮನಿಸಿ ಎಸ್. ಕುಮಾರ್ ಮಾಡಿರುವ ಛಾಯಾಗ್ರಹಣ ಕಾರ್ಯವೂ ಅನನ್ಯ. ಉತ್ತಮ ತಂತ್ರಜ್ಞರು ಸೇರಿ ಚರ್ಚಿಸಿ ಮುಂದಡಿ ಇಟ್ಟರೆ ಸಿನೆಮಾ ಯಶಸ್ವಿಯಾಗಲು ಸಾಧ್ಯ ಎಂಬುದಕ್ಕೂ ಇದು ನಿದರ್ಶನವಾಗಿದೆ.
ಮಸಾಲೆ ಸಿನೆಮಾದ ಅದೇಅದೇ ಫಾರ್ಮುಲಾಗಳಿಲ್ಲದಿದ್ದರೂ ಚಿತ್ರಕಥೆ, ತಂತ್ರಜ್ಞರ ನಿಪುಣತೆ, ಕಲಾವಿದರ ಪರಿಶ್ರಮದಿಂದಲೂ ಸಿನೆಮಾ ಗೆಲ್ಲಬಹುದು ಎನ್ನುವುದಕ್ಕೂ “ಆಗಸ್ಟ್ 1” ಉದಾಹರಣೆಯಾಗಿದೆ. ಪೊಲೀಸ್ ತನಿಖಾಧಿಕಾರಿ ಪೆರುಮಾಳ್ ಪಾತ್ರದ ಮಮ್ಮಟ್ಟಿ, (Mammootty) ಮುಖ್ಯಮಂತ್ರಿ ಕೆಜಿಆರ್ ಆಗಿರುವ ಸುಕುಮಾರನ್, ಕೊಲೆಗಾರ ಪಾತ್ರದ ಕ್ಯಾಪ್ಟನ್ ರಾಜು, ಮುಖ್ಯಮಂತ್ರಿ ಪತ್ನಿ ವತ್ಸಲಾ ಪಾತ್ರದ ಊರ್ವಶಿ, ಐಜಿಪಿ ಪಾತ್ರದ ಜಿ.ಕೆ. ಪಿಳ್ಳೈ, ಮತ್ತೋರ್ವ ಐಪಿಎಸ್ ಅಧಿಕಾರಿಯಾಗಿರುವ ಕೆ.ಪಿ.ಎ.ಸಿ. ಅಜೀಜ್, ಸಂಚುಗಾರ ಉದ್ಯಮಿಯಾಗಿರುವ ಕೆ.ಪಿ.ಎ.ಸಿ. ಸನ್ನಿ, ಆಡಳಿತ ಪಕ್ಷದ ಅಧ್ಯಕ್ಷ ದಿವಾಕರ ಕೈಮಾಲ್ ಆಗಿರುವ ಜನಾರ್ದನ, ಸಂಚುಗಾರ ರಾಜಕಾರಣಿ ಕೆ. ವಾಸುದೇವನ್ ಪಿಳ್ಳೈ ಪಾತ್ರದ ಪ್ರತಾಪ ಚಂದ್ರನ್ ಇವರೆಲ್ಲರ ಅಭಿನಯ ಗಮನ ಸೆಳೆಯುತ್ತದೆ.
ಮುಖ್ಯವಾಗಿ ಇಲ್ಲಿ ಪೊಲೀಸ್ ಇಲಾಖೆ (Police department)ಯ ರೀತಿ ರಿವಾಜು, ಬೇರೆಬೇರೆ ರ್ಯಾಂಕುಗಳ ಪೊಲೀಸ್ ಅಧಿಕಾರಿಗಳು ಪರಸ್ಪರ ವ್ಯವಹರಿಸುವ ರೀತಿ, ಅವರು ಸಮವಸ್ತ್ರದಲ್ಲಿ, ಸಿವಿಲ್ ಉಡುಪಿನಲ್ಲಿ ಇರುವಾಗ ನಡೆದುಕೊಳ್ಳುವ ವಿಧಾನ ಇವೆಲ್ಲವುಗಳನ್ನು ಗಮನಿಸಿ ಅಳವಡಿಸಿಕೊಳ್ಳಲಾಗಿದೆ. ಇಲ್ಲಿಯೂ ಒಂದು ತಪ್ಪಾಗಿದೆಯಾದರೂ ಅದೇನೂ ಗಣನೀಯವಲ್ಲ !