ಇದು ಪ್ರೊ. ಪುರುಷೋತ್ತಮ ಬಿಳಿಮಲೆ ಅವರ ಸಂದರ್ಶನದ 3ನೇ ಕಂತು. ಹಿಂದಿನ ಎರಡು ಕಂತುಗಳಲ್ಲಿ ಅವರು ರಾಜ್ಯದ ಹೊರಗೆ ಕನ್ನಡದ ಪ್ರತಿನಿಧಿಗಳು ಮಂಕಾಗಿರುವುದನ್ನು ಮತ್ತು ವಿಶ್ವಕವಿ ಕುವೆಂಪು ಅವರಿಗೆ ಏಕೆ ನೊಬೆಲ್ ದೊರೆತಿಲ್ಲ ಎಂಬ ವಿಚಾರಗಳ ವಿಶ್ಲೇಷಣೆ ಮಾಡಿದ್ದರು
ಕುಮಾರ ರೈತ: ನೀವು ಭಾಷಾ ವಿದ್ವಾಂಸರು. ತುಳು ಭಾಷೆ ಬಗ್ಗೆಯೂ ಅಧ್ಯಯನ ಮಾಡಿದ್ದೀರಿ. ಅದಕ್ಕೆ ಸಾಂವಿಧಾನಿಕ ಸ್ಥಾನಮಾನ ದೊರಕಿಸಿಕೊಡಲು ಶ್ರಮಿಸಿದ್ದೀರಿ. ಆದರೂ ನಿಮ್ಮ ಮತ್ತು ಇತರ ವಿದ್ವಾಂಸರ ಶ್ರಮ ಫಲ ನೀಡಿಲ್ಲ ಏಕೆ
ಪುರುಷೋತ್ತಮ ಬಿಳಿಮಲೆ: ತಮಿಳು ಸಂಸದರು ತಮ್ಮ ನೆಲ ಜಲ ಭಾಷೆ ವಿಚಾರಗಳಿಗಾಗಿ ದೊಡ್ಡ ಲಾಬಿ ಮಾಡ್ತಾರೆ. ಆದರೆ ನಮ್ಮ ಸಂಸದರು ಇಂಥ ವಿಷಯಗಳಲ್ಲಿ ನಿಷ್ಕ್ರೀಯರು. ಇವರು ತಮ್ಮತಮ್ಮ ಊರುಗಳಲ್ಲಿ ದೊಡ್ಡವರು. ಆದರೆ ದೆಹಲಿಗೆ ಬಂದಾಗ ಅಂಥದ್ದೇ ಪ್ರಭಾವ ಗಳಿಸಿಕೊಳ್ಳಲು ಪ್ರಯತ್ನಿಸುವುದಿಲ್ಲ. ಸಂಸತ್ ಭವನದ ಹೊರಗೆ ಕಡಲೇಕಾಯಿ ತಿಂದುಕೊಂಡು ಇರ್ತಾರೆ ಅಷ್ಟೆ. ನಮ್ಮ ಕನ್ನಡಿಗರು ರಾಜ್ಯದ ಹೊರಗೂ ಪ್ರಭಾವ ಇರುವವರನ್ನು ಗೆಲ್ಲಿಸಬೇಕು ಅಥವಾ ಗೆದ್ದವರು ಅಂಥ ಪ್ರಭಾವ ಗಳಿಸಿಕೊಳ್ಳಲು ಪ್ರಯತ್ನಿಸಬೇಕು. ಇಲ್ಲದಿದ್ದರೆ ಕನ್ನಡ ನೆಲ ಜಲ ಭಾಷೆಗೆ ದೊಡ್ಡ ನಷ್ಟ.
ರಾಷ್ಟ್ರಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಲು ಶಕ್ತಿ ಬೇಕು. ನಮ್ಮ ರಾಜಕಾರಣಿಗಳಿಗೆ ರಾಜಕೀಯವಾಗಿ ಅಂಥ ಶಕ್ತಿ ಇಲ್ಲ ಎಂಬುದು ಕಾವೇರಿ ವಿಷಯದಲ್ಲಿಯೇ ಗೊತ್ತಾಗಿದೆ. ಭಾಷೆ ಕುರಿತಂತೆ ಉದಾಹರಣೆ ಹೇಳಬೇಕೆಂದರೆ ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ವಿಷಯ. ಈ ಸಂಬಂಧ 2002ರಲ್ಲಿ ನಾವು ಕೆಲವರು ಸೇರಿಕೊಂಡು ಕೆಲಸ ಮಾಡಿದ್ದೆವು. ಆಗ ಡೋಗ್ರಿ, ಮೈಥಿಲಿ, ಸಂತಾಲ್, ಬೋಡೋ ಮತ್ತು ತಮಿಳು ಭಾಷೆಗಳನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಸಂಬಂಧ ಚರ್ಚೆ ನಡೆಯಿತು.
ಡೋಗ್ರಿ ಭಾಷೆ ಪರವಾಗಿ ಕರಣ್ ಸಿಂಗ್ ಮಾತನಾಡಿದರು. ಬೋಡೋ ಪರವಾಗಿ ವಾಜಪೇಯಿ ಮಾತನಾಡಿದರು. ಮೈಥಿಲಿ ಬಗ್ಗೆ ಅಡ್ವಾಣಿ ಮಾತನಾಡಿದರು. ಸಂತಾಲಿ ಬಗ್ಗೆ ಬಸುದೇವ ಭಟಾಚಾರ್ಯ ಮಾತನಾಡಿದರು. ಆದರೆ ತುಳು ಬಗ್ಗೆ ರಾಜ್ಯದ ಯಾರೊಬ್ಬ ಸಂಸದರೂ ಮಾತನಾಡಲಿಲ್ಲ. ಆಗ ತುಳುವೊಂದನ್ನು ಬಿಟ್ಟು ಉಳಿದ ನಾಲ್ಕು ಭಾಷೆಗಳನ್ನು 8ನೇ ಪರಿಚ್ಛೇದಕ್ಕೆ ಸೇರಿಸಿದರು. ತುಳು ಹೊರಗೆ ಉಳಿಯಿತು. ರಾಜ್ಯದ 28 ಎಂಪಿಗಳಲ್ಲಿ ಯಾರಾದರೊಬ್ಬರು ತುಳು ಬಗ್ಗೆ ಮಾತನಾಡಿದ್ದರೂ ಆ ಕೆಲಸ ಆಗುತ್ತಿತ್ತು.
ಪ್ರಸ್ತುತ ಈ ಕೆಲಸ ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಈಗಂತೂ 8ನೇ ಪರಿಚ್ಚೇದದಲ್ಲಿ ಸೇರಲು ಅನೇಕ ಭಾಷೆಗಳ ಸಾಲಿನಲ್ಲಿವೆ. ಮೊದಲಾಗಿದ್ದರೆ ನಾಲ್ಕೈದು ಭಾಷೆಗಳಷ್ಟೆ ಸರತಿಯಲ್ಲಿದ್ದವು. ಈಗ ಕಷ್ಟ ಎನಿಸುತ್ತದೆ.
ಅಡಿ ಟಿಪ್ಪಣಿ: ದಕ್ಷಿಣದ ಪಂಚಭಾಷೆಗಳಲ್ಲಿ ತುಳು ಸಹ ಒಂದು. ಇದಕ್ಕೂ ಸುದೀರ್ಘ ಇತಿಹಾಸವಿದೆ. ಕರಾವಳಿ ಭಾಗದ ಈ ಭಾಷೆಯಲ್ಲಿಯೂ ಜಾನಪದ, ಶಿಷ್ಟ ಸಾಹಿತ್ಯ ಸಮೃದ್ಧವಾಗಿದೆ. ಈ ಭಾಷೆಗೂ ತನ್ನದೇ ಆದ ಲಯ ಮತ್ತು ಸೊಗಡಿದೆ. ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಸಂಬಂಧ ಒಂದು ನಿರ್ಣಯ ಮಾಡಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ಈ ನಿರ್ಣಯಕ್ಕೆ ಒತ್ತಾಸೆಯಾಗಿ ರಾಜ್ಯದ ಆಗಿನ ಸಂಸದರು ನಿಂತಿದ್ದರೆ ಅಂದೇ ತುಳುವಿಗೆ ಸಾಂವಿಧಾನಿಕ ಸ್ಥಾನಮಾನ ದೊರೆಯುತ್ತಿತ್ತು. ಇಂಥ ಮಾನ್ಯತೆ ದೊರೆಯುವುದರಿಂದ ಭಾಷಾ ಬೆಳವಣಿಗೆಗೆ ಸಾಕಷ್ಟು ಅನುಕೂಲಗಳಿವೆ.
ವಿನಂತಿ: ಈ ವೆಬ್ ಸೈಟಿನಲ್ಲಿರುವ ಯಾವುದೇ ಲೇಖನವನ್ನು ಇತರ ಬ್ಲಾಗ್ / ವೆಬ್ ಸೈಟ್/ ಪತ್ರಿಕೆಗಳಲ್ಲಿ ಪ್ರಕಟಿಸುವ ಮುನ್ನ ದಯವಿಟ್ಟು ನನ್ನ ಗಮನಕ್ಕೆ ತರಬೇಕೆಂದು ಕೋರಿಕೆ