ಸಾಹಿತ್ಯ ಎಂದಿಗೂ ವಿಚಾರ ಪ್ರಚೋದಕವಾಗಿರಬೇಕು. ಇದನ್ನು ಹೊರತುಪಡಿಸಿ ಅವೈಚಾರಿಕತೆಯ ಬೀಡಾಗಬಾರದು. ಸಂತಸದ ಸಂಗತಿಯೆಂದರೆ ಕುವೆಂಪು ಆದಿಯಾಗಿ ಅನೇಕ ಸಾಹಿತಿಗಳು ವೈಚಾರಿಕತೆಯ ಸಾಹಿತ್ಯಪಥವನ್ನೇ ನಿರ್ಮಿಸಿಕೊಟ್ಟಿದ್ದಾರೆ. ಈ ಬೆಳಕಿನಲ್ಲಿ ಸಾಗಬೇಕಾದ ಸಾಹಿತ್ಯ ಪರಿಷತ್ ಆ ಹೆದ್ದಾರಿಯನ್ನೇ ಮರೆತಿದೆ.
ಪೂರ್ಣಕುಂಭ ಸ್ವಾಗತ – ಮೆರವಣಿಗೆ ಇದಕ್ಕೊಂದು ನಿದರ್ಶನ. ಕಳಸ ಹೊತ್ತು ಬರೀಗಾಲಿನಲ್ಲಿ ಕಿಲೋಮೀಟರುಗಳ ದೂರ ನಡೆಯುವುದು ಸುಲಭವಲ್ಲ.
ಪಾದ – ನೆತ್ತಿ ಸುಡುವ ಬಿಸಿಲು, ಸುಸ್ತು – ಬಾಯಾರಿಕೆಗಳಿಂದ ಅವರು ಪಡುವ ಕಷ್ಟ ಅಪಾರ. ಮೆರವಣಿಗೆಯಲ್ಲಿ ಪೂರ್ಣಕುಂಭವನ್ನಷ್ಟೆ ಅಲ್ಲ. ಜಾನಪದ ಕಲಾಪ್ರಕಾರಗಳ ಮೆರವಣಿಗೆಯನ್ನು ನಿಷೇಧಿಸಬೇಕು. ಈ ಮಾತು ನಿಮಗೆ ವಿಚಿತ್ರ – ಅಸಂಬದ್ಧ ಎನಿಸಬಹುದು…
ಜಾನಪದ ಕಲಾಪ್ರಕಾರಗಳನ್ನು ಕಲಿಯುವವರು ಸಾಮಾನ್ಯವಾಗಿ ಸಣ್ಣರೈತರು ಮತ್ತು ಕೃಷಿಕಾರ್ಮಿಕರು. ಇವರ ಆರ್ಥಿಕ ಪರಿಸ್ಥಿತಿ ನಿಮಗೆಲ್ಲ ಗೊತ್ತೆ ಇದೆ. ಇವರಿಗೆ ದೊರೆಯುವುದು ಅತ್ಯಲ್ಪ ಸಂಭಾವನೆ. ಇದಕ್ಕಾಗಿ ಅವರು ಮೈಲಿಗಟ್ಟಲೇ ದೂರ ಬಿಸಿಲಿನಲ್ಲಿ ಕಲಾಪ್ರಕಾರ ಪ್ರದರ್ಶಿಸುತ್ತಾ ಸಾಗಬೇಕು. ಬಿಸಿಲಿನಲ್ಲಿ ಕಾಲಿಗೆ ಪಾದರಕ್ಷೆ ತೊಟ್ಟು, ಛತ್ರಿ ಹಿಡಿದು ಕೂಡ ಯಾರೂ ಐದಾರು ಕಿಲೋಮೀಟರ್ ನಡೆಯುವುದು ಕಷ್ಟ. ಹೀಗಿರುವಾಗ ಭಾರವಾದ ವೇಷಭೂಷಣ ತೊಟ್ಟು, ಬರೀಗಾಲಿನಲ್ಲಿ ಬಹುದೂರ ಕಲೆ ಪ್ರದರ್ಶಿಸುತ್ತಾ ಸಾಗುವುದು ಹಿಂಸೆಯ ಕೆಲಸ. ನೋಡುವವರಿಗೆ ಸಂತಸವಾಗಬಹುದು.. ಆದರೆ ಪ್ರದರ್ಶಕರಿಗೆ... ?
ಸಂಗೀತ – ಸಿನೆಮಾ ಹಾಡುಗಾರರು, ಭರತನಾಟ್ಯ, ಕುಚಿಪುಡಿ ನಾಟ್ಯ ಕಲಾವಿದರು ಜನಪದ ಕಲಾವಿದರ ರೀತಿ ಬಿಸಿಲಿನಲ್ಲಿ ಒಣಗುತ್ತಾ ತಮ್ಮ ಕಲೆ ಪ್ರದರ್ಶಿಸುತ್ತಾ ಸಾಗುವುದಿಲ್ಲ. ಅವರಿಗಾಗಿ ಸಂಘಟಕರು ನೆರಳು, ಕೃತಕ ಗಾಳಿ ಇರುವ ವೇದಿಕೆಗಳಲ್ಲಿ ಅವಕಾಶ ಕಲ್ಪಿಸಿಕೊಡುತ್ತಾರೆ. ಇವರಿಗೆ ನೀಡುವ ಸಂಭಾವನೆಗೂ ಜನಪದ ಕಲಾವಿದರಿಗೆ ನೀಡುವ ಸಂಭಾವನೆಯಲ್ಲಿಯೂ ಅಪಾರ ವ್ಯತ್ಯಾಸ. ಈ ತಾರತಮ್ಯವೇಕೆ ? ಜನಪದ ಕಲಾವಿದರಿಗೇಕೆ ಇಂಥ ಉತ್ತಮ ಸಂಭಾವನೆ, ಪುರಸ್ಕಾರ ದೊರೆಯುವುದಿಲ್ಲ.
ಸಾಹಿತ್ಯ ಪರಿಷತ್ತಿಗೆ ಜನಪದ ಕಲಾಪ್ರಕಾರಗಳು, ಕಲಾವಿದರ ಬಗ್ಗೆ ನಿಜಕ್ಕೂ ಅಭಿಮಾನವಿದ್ದರೆ ಅವರ ಕಲೆ ಪ್ರದರ್ಶಿಸಲು ವೇದಿಕೆಗಳಲ್ಲಿ ಅವಕಾಶ ಕಲ್ಪಿಸಲಿ. ಸಿನೆಮಾ – ಸಂಗೀತ- ನಾಟ್ಯಗಳ ಕಲಾವಿದರಿಗೆ ನೀಡುವಷ್ಟೆ ಸಂಭಾವನೆ ನೀಡಲಿ