ಕೇರಳ ರಾಜ್ಯವನ್ನು “ದೇವರ ನಾಡು” ಎಂದು ಅಲ್ಲಿನ ಸರ್ಕಾರ ಕರೆದುಕೊಂಡಿದೆ. ನಿಜ; ಅಲ್ಲಿ ಪ್ರಾಕೃತಿಕ ಸೌಂದರ್ಯ ಮನೆ ಮಾಡಿದೆ. ಆದರೆ ನಿಜವಾದ ಅರ್ಥದಲ್ಲಿ “ಪ್ರಕೃತಿ ದೇವರು ನೆಲೆಸಿರುವ ನಾಡು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆ. ಏನು ಮಾಡುವುದು ಇಲ್ಲಿಯ ಜನ ಪ್ರತಿನಿಧಿಗಳಿಗಾಗಲಿ; ರಾಜ್ಯ ಸರ್ಕಾರಕ್ಕಾಗಲಿ ಇದರ ಅರಿವಿಲ್ಲ. ರಕ್ಷಿಸುವ ಸ್ವಾಭಿಮಾನವಂತೂ ಇಲ್ಲವೇ ಇಲ್ಲ.
ಗೊತ್ತಿಲ್ಲದವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಏನಿದೆ ಎಂದರೆ ಏನಿಲ್ಲ ಹೇಳಿ ಎಂದು ಮರು ಪ್ರಶ್ನಿಸಬೇಕಾಗುತ್ತದೆ. ವಿಶಾಲವಾದ ಸಾಗರ ತೀರ, ಪ್ರಾಕೃತಿಕ ಬಂದರುಗಳು, ವೈವಿಧ್ಯಮಯ ನಿಸರ್ಗ ಸಂಪತ್ತಿನ ವಿಶಾಲ ಕಾಡು, ಅಪರಿಮಿತ ವನ್ಯಮೃಗಗಳು, ವಿಶ್ವದಲ್ಲಿಯೇ ಅಪರೂಪದ ಹಾರ್ನ್ ಬಿಲ್ ನೆಲೆ, ಅಸಂಖ್ಯಾತ ಜಲಪಾತಗಳು, ಪುರಾಣ ಪ್ರಸಿದ್ದ ದೇಗುಲಗಳು, ವೈವಿಧ್ಯಮಯ ಭಾಷೆ, ಸಂಸ್ಕೃತಿ, ಇವೆಲ್ಲಕ್ಕಿಂತಲೂ ಮಿಗಿಲಾಗಿ ಅತೀ ಸೌಮ್ಯಶೀಲ ನಿವಾಸಿಗಳು. ಹೀಗೆ ಹೇಳುತ್ತಾ ಹೋದರೆ ಇದಕ್ಕೆ ಕೊನೆ ಮೊದಲಿಲ್ಲ.
ಕನ್ನಡಿಗರೇ ಸೌಮ್ಯಶೀಲರು. ಆದರೆ ಉತ್ತರ ಕನ್ನಡಿಗರು ಅತೀ ಸೌಮ್ಯಶೀಲರು. ಇವರ ರಟ್ಟೆಯಲ್ಲಿರುವ ಬಲ, ಬಾಯಿಯಲ್ಲಿ ಇಲ್ಲ. ಇದೇ ಇವರಿಗೆ ಮುಳುವಾಗಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಇದನ್ನೇ ಬಂಡವಾಳ ಮಾಡಿಕೊಂಡು ಇಲ್ಲಿನ ಪ್ರಾಕೃತಿಕ ಸಂಪತ್ತಿಗೆ ಮುಳುವಾಗುವ ಯೋಜನೆಗಳನ್ನು ರೂಪಿಸಿವೆ, ರೂಪಿಸುತ್ತಿವೆಯೇನೋ ಎನಿಸುತ್ತದೆ.
ಇಂಥ ಹಲವು ಸಂಗತಿಗಳ ಬಗ್ಗೆ ಶ್ರೀದೇವಿ ಕೆರೆಮನೆ ಅವರು ಬರೆದ “ಕಡಲು ಕಾನನಗಳ ನಡುವೆ” ಕೃತಿ ಕನ್ನಡಿ ಹಿಡಿಯುತ್ತದೆ. ಇಲ್ಲಿನ ವಿಶೇಷತೆ ಎಂದರೆ ಲೇಖಕಿ ಇದೇ ಜಿಲ್ಲೆಯವರೇ ಆಗಿರುವುದು. ಆದ್ದರಿಂದ ವಾಸ್ತವ ಸಂಗತಿಗಳನ್ನು ಯಾವುದೇ ಬಣ್ಣವಿಲ್ಲದೇ ಹೇಳುವ ಶಕ್ತಿ ಅವರಿಗೆ ಲಭಿಸಿದೆ. ತಾನು ನಿತ್ಯ ಕಂಡ, ಕಾಣುತ್ತಿರುವ ಸಂಗತಿಗಳನ್ನು ನಿರ್ಭಯವಾಗಿ ಅವರು ವಿವರಿಸಿದ್ದಾರೆ.


ಮೊದಲಿಗೆ “ಕಡಲು ಕಾನನದ ನಡುವೆ” ಶೀರ್ಷಿಕೆಯೇ ನನ್ನ ಗಮನ ಸೆಳೆಯಿತು. ಇದರ ಬಗ್ಗೆ ತುಸು ತಿಳಿದ ಮೇಲೆ ಆಸಕ್ತಿ ಹೆಚ್ಚಾಯಿತು. ಕೂಡಲೇ ಪುಸ್ತಕ ತರಿಸಿಕೊಂಡೆ. ಬಂದ ದಿನವೇ ಕಚೇರಿ ಕೆಲಸ ಮುಗಿಸಿ ಬಂದೊಡನೆ ಸಂಜೆ ಓದಲು ಶುರು ಮಾಡಿದವನನ್ನು ಕೃತಿಯ ಗಂಭೀರತೆ ಸೆಳೆಯತೊಡಗಿತು. ಕಚೇರಿಯಿಂದ ಬಂದಾಕ್ಷಣ ಮಾಡುತ್ತಿದ್ದ ಕೆಲಸ ಎಂದರೆ ಈ ಕೃತಿಯ ಓದನ್ನು ಮುಂದುವರಿಸುವುದು. ಇದರಿಂದ ಮೂರು ದಿನದಲ್ಲಿ ಪೂರ್ಣ ಓದಲು ಸಾಧ್ಯವಾಯಿತು.
ಈ ಲೇಖನದ ಶೀರ್ಷಿಕೆಯೇ ಹೇಳುವ ಹಾಗೆ “ಕಡಲು ಕಾನನದ ನಡುವೆ” ಕೃತಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರಾಕೃತಿಕ ಸೌಂದರ್ಯದ ವಿವರಣೆ ಇದೆ. ಇದರ ಜೊತೆಗೆ ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಆಪೋಶನ ತೆಗೆದುಕೊಳ್ಳುತ್ತಿರುವ ಯೋಜನೆಗಳ ಬಗ್ಗೆ ಆಕ್ರೋಶವಿದೆ. ಜಗತ್ತಿನ ಕಣ್ಣಿಗೆ ಹೆಚ್ಚಾಗಿ ಬೀಳದ ದ್ವೀಪ, ಜಲಪಾತಗಳ ಪರಿಚಯವಿದೆ. ಅಪರೂಪದ ಶಾಸನಗಳ ವಿವರವಿದೆ.
ಇಲ್ಲಿನ ಸುಂದರತೆ, ಸಮಸ್ಯೆಗಳನ್ನು ಪರಿಚಯ ಮಾಡುವ ಲೇಖಕಿ, ಸಮಸ್ಯೆಗಳನ್ನು ಹೇಳಿ ಸುಮ್ಮನಾಗುವುದಿಲ್ಲ; ಅವುಗಳಿಗೆ ಪರಿಹಾರವನ್ನು ಸೂಚಿಸುತ್ತಾರೆ. ಇದು ಗಮನಾರ್ಹ. ಹೆಚ್ಚಿಗೆ ಹೇಳುತ್ತಾ ಹೋದರೆ ನಿಮ್ಮ ಕುತೂಹಲ ಕಮರಬಹುದು. ಈ ಪುಸ್ತಕದ ಓದು ಖಂಡಿತ ನಿರಾಶೆ ಉಂಟು ಮಾಡುವುದಿಲ್ಲ.
ನನ್ನ ಬಲವಾದ ಅಭಿಪ್ರಾಯವೆಂದರೆ ಉತ್ತರ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ್ ನಿಂದ ಆರಂಭಿಸಿ, ವಿಧಾನ ಸಭೆ, ವಿಧಾನ ಪರಿಷತ್, ಲೋಕಸಭೆಯ ಜನ ಪ್ರತಿನಿಧಿಗಳು, ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಪಾಲಿಸಿ ನಿರೂಪಕರು, ರೂಪಕರು ಓದಲೇ ಬೇಕಾದ ಕೃತಿಯಿದು. ಆಗಲಾದರೂ ನಿರ್ಲಕ್ಷಿತ ಜಿಲ್ಲೆಯತ್ತ ಅವರ ನಿಜ ಗಮನ ಹರಿಯಬಹುದು.
“ಕಡಲು ಕಾನನದ ನಡುವೆ” ಕೃತಿ 2023 ರಲ್ಲಿ ಮೊದಲ ಮುದ್ರಣ ಕಂಡಿದೆ. ಡೆಮಿ 1/8 ಅಕಾರದಲ್ಲಿದೆ. ಒಟ್ಟು ಪುಟಗಳ ಸಂಖ್ಯೆ 244. ಗುಣಮಟ್ಟದ ಕಾಗದ ಹೊಂದಿದೆ. ಬೆಲೆ: 250. ನೀವು ಪುಸ್ತಕದ ಖರೀದಿಗಾಗಿ ನೇರ ಪ್ರಕಾಶಕರನ್ನು ಸಂಪರ್ಕಿಸಬಹುದು. ವಿಳಾಸ: ಅಕ್ಷರ ಮಂಟಪ, # 1667, 6ನೇ ಕ್ರಾಸ್, 6ನೇ ಸಿ ಮೈನ್, ಹಂಪಿ ನಗರ, ಬೆಂಗಳೂರು – 560 104

ದೂರವಾಣಿ:99861 67684

Similar Posts

Leave a Reply

Your email address will not be published. Required fields are marked *