ಮಂಜೇಶ್ವರ ಶಾಸಕ ಎ.ಕೆ.ಎಂ.‌ಅಶ್ರಪ್ ಕನ್ನಡದಲ್ಲಿ ಶಾಸಕತ್ವದ ಪ್ರಮಾಣ ವಚನ ಸ್ವೀಕರಿಸಿದರು. ಇದೇನು ಮಹಾ ಎಂದು ಹಲವರು ಹುಬ್ಬೇರಿಸಬಹುದು.‌ ಆದರೆ ಅನ್ಯಾಯವಾಗಿ ಕಾಸರಗೋಡನ್ನು ಕೇರಳಕ್ಕೆ ಸೇರಿಸಿಕೊಂಡ‌ ನಂತರ ಅಲ್ಲಿನ ಸರ್ಕಾರಗಳು ಈ ಪ್ರದೇಶದಲ್ಲಿ ಕನ್ನಡದ ಕಲರವ ಅಡಗಿಸುವ ಹುನ್ನಾರಗಳನ್ನು ಮಾಡುತ್ತಲೇ ಬಂದಿವೆ. ಈ ಕನ್ನಡ ವಿರೋಧಿ ಕೆಲಸಗಳ ನಡುವೆ ಕಾಸರಗೋಡು ಜಿಲ್ಲೆ, ಮಂಜೇಶ್ವರ ಕ್ಷೇತ್ರದ ಎ.ಕೆ.ಎಂ‌. ಅಶ್ರಪ್ ಶಾಸಕತ್ವ ಪ್ರಮಾಣ ವಚನವನ್ನು ಕನ್ನಡದಲ್ಲಿ‌‌ ಸ್ವೀಕರಿಸಿರುವುದು ಐತಿಹಾಸಿಕ ಕ್ಷಣ. ನಾನಂತೂ ರೋಮಾಂಚಿತನಾದೆ.

ಮಂಜೇಶ್ವರದ ಶಾಸಕರು ಕನ್ನಡಿಗರು – ಕನ್ನಡವನ್ನು ಪ್ರತಿನಿಧಿಸುವವರು. ಮೇಲಾಗಿ ಸರಕಾರವೇ ರಚಿಸಿದ ಜಿಲ್ಲಾ ಭಾಷಾ ಅಲ್ಪಸಂಖ್ಯಾತ ಸಮಿತಿಯ ಪ್ರಮುಖ ಪದಾಧಿಕಾರಿ. ಜೊತೆಗೆ ರಾಜ್ಯಮಟ್ಟದ ಭಾಷಾ ಅಲ್ಪಸಂಖ್ಯಾತರ ಸಮಿತಿಯ ಸದಸ್ಯರು. ಯಾರೇ ಕಾಸರಗೋಡು, ಮಂಜೇಶ್ವರದ ಎಂ.ಎಲ್.ಎ.ಗಳಾಗಲಿ ಅವರಿಗೆ ಈ ಸ್ಥಾನಮಾನ ಸಹಜವಾಗಿಯೇ ದೊರೆಯುತ್ತದೆ.

ಸಂವಿಧಾನ ನೀಡಿದ ಹಕ್ಕಿರಲಿ , ವೈಯಕ್ತಿಕ ನೆಲೆಯಲ್ಲಿ‌ ನೋಡುವುದಾದರೆ ಅಶ್ರಫ್ ಅವರು 1 ರಿಂದ 10ನೇ ತರಗತಿ ತನಕ ಓದಿದ್ದು ಕನ್ನಡ ಮಾಧ್ಯಮದಲ್ಲಿ. ಪಿಯುಸಿಯಲ್ಲಿ ಮತ್ತು ಪದವಿಯಲ್ಲಿ ಕನ್ನಡವನ್ನು ಐಚ್ಛಿಕವಾಗಿ ತೆಗೆದುಕೊಂಡು ಅಧ್ಯಯನ ಮಾಡಿದ್ದಾರೆ.‌ ಇಂಥವರು, ಅದೂ ಕನ್ನಡಿಗರನ್ನು ಪ್ರತಿನಿಧಿಸುವವರು ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸುವುದು ತಪ್ಪೇ ? ಖಂಡಿತ ತಪ್ಪಲ್ಲ. ಇದೇ ಸರಿ. ಅವರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸದಿದ್ದರೆ ತಪ್ಪಾಗುತ್ತಿತ್ತು.

ಅಂದ ಹಾಗೆ ಹೀಗೆ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮಂಜೇಶ್ವರದ ಶಾಸಕರಲ್ಲಿ ಇವರು ಮೊದಲಿಗರೇನಲ್ಲ. ಹಿಂದಿನ ಶಾಸಕರುಗಳು ಕೂಡ ಹೀಗೆಯೇ ಮಾಡಿದ್ಸಾರೆ. ಅವರ ಪರಂಪರೆಯನ್ನು ಅಶ್ರಫ್ ಮುಂದುವರಿಸಿದ್ದಾರೆ. ಕನ್ನಡಿಗರ ಹಕ್ಕುಗಳನ್ನು ಎತ್ತಿ ಹಿಡಿಯುವ ಭರವಸೆ ಮೂಡಿಸಿದ್ದಾರೆ.

ಈ ಸುದ್ದಿ ತಿಳಿದ ನಂತರ ನನ್ನಂತೆಯೇ ಇನ್ನೂ ಸಹಸ್ರಾರು ಕನ್ನಡಿಗರು ಸಂಭ್ರಮಿಸಿದರು. ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ / ಟ್ವೀಟ್ ಮಾಡಿ ಶಾಸಕ ಅಶ್ರಫ್ ಅವರನ್ನು ಅಭಿನಂದಿಸಿದರು. ಕಾಸರಗೋಡಿನಲ್ಲಿ, ಕರ್ನಾಟಕದಲ್ಲಿ ಇಂಥದೊಂದು ಖುಷಿಯ ಅಲೆಯ ನಡುವೆಯೇ ನಗಣ್ಯ ಎನ್ನುವಂತ ಅಪಸ್ವರವೂ ಕೇಳಿತು.

“ಕೇರಳ ಶಾಸಕ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸುವುದನ್ನು ಸಂಭ್ರಮಿಸುವವರು ಮರಾಠಿ ಮಾತೃಭಾಷೆಯ ಕರ್ನಾಟಕದ ಶಾಸಕ ಮರಾಠಿಯಲ್ಲಿ ಪ್ತಮಾಣ ವಚನ ಸ್ವೀಕರಿಸಿದರೆ ಏಕೆ ವಿರೋಧಿಸಬೇಕು.‌ಇದು ವೈವಿಧ್ಯತೆ ವಿರೋಧಿ, ಭಾಷಾ ಸಾಂಸ್ಕೃತಿಕ ಅಲ್ಪ ಸಂಖ್ಯಾತ ವಿರೋಧಿ” ಎಂದು ಪತ್ರಕರ್ತ ಸುಗತ ಶ್ರೀನಿವಾಸರಾಜು ಟ್ವೀಟ್ ಮಾಡಿದರು. ಪತ್ರಕರ್ತ ನವೀನ್ ಸೂರಿಂಜೆ, ಕನ್ನಡ ಚಳವಳಿಗಾರ ಭೈರಪ್ಪ ಹರೀಶ್ ಕುಮಾರ್ “ ಮಂಜೇಶ್ವರ ಶಾಸಕ ಅಶ್ರಫ್ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ತಪ್ಪು. ಅವರು ಮಲೆಯಾಳಂನಲ್ಲಿಯೇ ಪ್ರಮಾಣ ವಚನ ಸ್ವೀಕರಿಸಬೇಕಿತ್ತು ಎನ್ನುವುದರ ಜೊತೆ ಕೇರಳ ಸರ್ಕಾರ ಕನ್ನಡಿಗರ ಬಗ್ಗೆ ಮಲತಾಯಿ ಧೋರಣೆ ತೋರಿಲ್ಲ ಎಂದು ಕೂಡ ಷರಾ ಬರೆದುಬಿಟ್ಟರು.

ಇವರೆಲ್ಲ ಹೇಳಿಕೆ ನೀಡುವ ಮುನ್ನ ಇತಿಹಾಸದ ಕಡೆಗೆ ತುಸು ಕಣ್ಣು ತಿರುಗಿಸಿ‌ ನೋಡಬೇಕಿತ್ತು. ಇಂದು ಬೆಳಗಾವಿಯಾಗಿರುವ ಅಂದಿನ ಬಳ್ಳಿಗಾಮೆಯನ್ನು ಕಟ್ಟಿ ಬೆಳೆಸಿದವರು ಕನ್ನಡಿಗರು. ಉದ್ಯೋಗಾವಕಾಶಗಳನ್ನು ಅರಸಿ ಬಂದು ನೆಲಸಿದ ಮರಾಠಿಗರನ್ನು ಆದರಿಸಿದವರು. ಬಂದವರು ಇಲ್ಲಿಯವರೇ ಆದರು. ಮನೆಮಾತು‌ ಮರಾಠಿಯಾದರು ಕಲಿಯುವ ಭಾಷೆ ಕನ್ನಡ, ಉದ್ಯೋಗ ಹಿಡಿಯುವುದು ಕನ್ನಡನಾಡಿನಲ್ಲಿಯೇ ಆಗಿದೆ. ಇಂದು ಕರ್ನಾಟಕದ ಉನ್ನತ ಸ್ಥಾನಗಳಲ್ಲಿ‌ ಮರಾಠಿ ಮಾತೃಭಾಷಿಕರಿದ್ದಾರೆ.‌ಕನ್ನಡಿಗರೆಂದು ಅಸೂಯೆ ಪಟ್ಟವರಲ್ಲ.

ಇಂಥ ನಾಡಿನಲ್ಲಿ ಇತ್ತೀಚೆಗೆ ಭಾಷಾ ರಾಜಕೀಯ ಆರಂಭಿಸಿದವರು, ಆದರಿಸಿದ ಬೆಳಗಾವಿಯನ್ನು ತಮ್ಮದೆಂದು ಕೂಗು ಹಾಕಿದವರು ಎಂ.ಇ.ಎಸ್.ನವರು. ಸಲ್ಲದ ರಾಜಕಾರಣ ಮಾಡುತ್ತಾ, ಬೊಬ್ಬೆ ಹಾಕಿದರೆ ಬೆಳಗಾವಿ ತಮ್ಮದಾಗುತ್ತದೆಂದು ಭ್ರಮೆಯಲ್ಲಿರುವವರು. ಇಂಥವರು ಕರ್ನಾಟಕ ವಿಧಾನಸಭೆಯಲ್ಲಿ ಮರಾಠಿಯಲ್ಲಿ ಪ್ರಮಾಣ ವಚನ ಸ್ವೀಕರಿಸುವುದರ ಹಿಂದೆ ಕುತಂತ್ರದ ರಾಜಕೀಯವಿದೆ.

ಆದರೆ ಕಾಸರಗೋಡು‌ ಜಿಲ್ಲೆ ಮಂಜೇಶ್ವರದ ಶಾಸಕ ಎ.ಕೆ.ಎಂ.‌ಅಶ್ರಪ್ ಅವರು ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರ ಹಿಂದೆ ಕನ್ನಡದ ಅಸ್ಮಿತೆಯನ್ನು ಮೆರೆಸುವ ಉದ್ದೇಶವಿದೆ.

ಕಾಸರಗೋಡು ಕನ್ನಡಮಯ ಪ್ರದೇಶ. ಅಲ್ಲಿನ ಕನ್ನಡಿಗರಲ್ಲದೇ ತುಳುವರು, ಕೊಂಕಣಿಗರು, ಕಾನಾಡರು, ಮರಾಠಿಗರು, ಉರ್ದು, ಬ್ಯಾರಿ ಭಾಷಿಕರು, ಭಾಷಾವಾರು ಪ್ರಾಂತ್ಯ ರಚನೆಗೂ ಮುನ್ನ ಬಂದ ಮಲೆಯಾಳ ಮಾತೃ ಭಾಷಿಕರು ಕನ್ನಡದಲ್ಲಿಯೇ ಕಲಿತು ಕನ್ನಡನಾಡಿನಲ್ಲಿ ಉದ್ಯೋಗ ಕಂಡವರು.‌ಇವರೆಂದೂ ತಾವು ಕನ್ನಡಿಗರಲ್ಲ ಎಂದು ಕನಸುಮನಸಿನಲ್ಲಿಯೂ ಯೋಚಿಸಿದವರಲ್ಲ.

ಕೇರಳ ರಾಜ್ಯದ ಲೆಫ್ಟ್ ಡೆಮಾಕ್ರೆಟಿಕ್ ಫ್ರಂಟ್ ಅಥವಾ ಯುನೈಟೆಡ್ ಡೆಮಾಕ್ರೆಟಿಕ್ ಫ್ರಂಟ್ ಸರಕಾರಗಳಾಗಲೀ ತಮ್ಮ ರಾಜ್ಯದ ಭಾಷಾ ಅಲ್ಪ ಸಂಖ್ಯಾತರ ವಿಷಯದಲ್ಲಿ ಯಾವ ಪರಿ ಸಂವಿಧಾನಾತ್ಮಕವಾಗಿ‌ ನಡೆದುಕೊಂಡಿವೆ ಎಂಬುದನ್ನೂ ಗಮನಿಸಬೇಕಾಗಿದೆ.‌

ವಯನಾಡು ಭೌಗೋಳಿಕವಾಗಲೀ ಅಥವಾ ಸಾಮಾಜಿಕವಾಗಲೀ ಅಥವಾ ಭಾಷಾ ಶಾಸ್ತ್ರೀಯ ವಿಷಯದಲ್ಲಾಗಲೀ ಕೇರಳದ ಇದೇ ಮಾದರಿಗಳಿಗೆ ತದ್ವಿರುದ್ಧವಾಗಿದೆ. ಅದು ಸಂಪೂರ್ಣ ಕನ್ನಡಮಯ ಪ್ರದೇಶ. ‌ನಾನು‌ ಬಾಲ್ಯದಲ್ಲಿ ಅಲ್ಲಿ ತಿರುಗಾಡುವಾಗ ಇದ್ದ ಕನ್ನಡಮಯ ವಾತಾವರಣ ಇಂದಿಲ್ಲ. ವಯನಾಡು ಬುಡಕಟ್ಟು ಜನಾಂಗಗಳೇ ಹೆಚ್ಚಿರುವ ಪ್ರದೇಶ…‌ ಅವರಾಡುವ ವಿವಿಧ ನುಡಿಗಳು‌ ಕನ್ನಡಾಧರಿತ. ಒಂದು ಕಡೆ ತಮಿಳುನಾಡು ಮತ್ತೊಂದು‌ ಕಡೆ ಪಾತಾಳದಲ್ಲಿ‌ ಕೇರಳ ತುದಿ ಹೊಂದಿರುವ ವಯನಾಡನಲ್ಲಿ ಇದ್ದ ಇರುವ ಬಹು ಸಂಖ್ಯಾತರು ಜೈನ ಧರ್ಮದವರು. ಇವರ ಮನೆಮಾತು, ವ್ಯವಹಾರಿಕ ಮಾತು ಕನ್ನಡ. ಇಂಥ ಪ್ರದೇಶ ಭಾಷಾವಾರು ಪ್ರಾಂತ್ಯ ಆಧಾರಿತ ವಿಂಗಡಣೆಯಲ್ಲಿ ಕೇರಳಕ್ಕೆ ಸೇರಿತು. ಸೇರ್ಪಡೆಯಾಗಿದ್ದಾದರೂ ಹೇಗೆ ಎಂಬುದೂ ಮುಖ್ಯ

ಕಾಸರಗೋಡು ಅಚ್ವಕನ್ನಡ ನಾಡು. ಇದನ್ನು ಕಟ್ಟಿದವರು ಕೆಳದಿ ಸಂಸ್ಥಾನದ ಶಿವಪ್ಪನಾಯಕ ಮತ್ತು ಆತನ ವಂಶದವರು. ದಕ್ಷಿಣ ಕನ್ನಡ ಜಿಲ್ಲಾಡಳಿತದ ವ್ಯಾಪ್ತಿಯಲ್ಲಿದ್ದ ಈ ಪ್ರದೇಶವೂ ಕೇರಳಕ್ಕೆ ಸೇರಿ ಹೋಯಿತು. ಭಾಷಾವಾರು ಪ್ರಾಂತ್ಯ ಆಧರಿತ ರಾಜ್ಯ ರಚನೆ ಸಮಿತಿಯಲ್ಲಿದ್ದ ಕೇರಳದ ಪಣಿಕ್ಕರ್ ಅವರಿಗೆ ಇಲ್ಲಿನ ಕನ್ನಡಿಗರು ನೀಡಿದ ಮನವಿಗಳು – ಅರ್ಜಿಗಳು ಕಸದ ಬುಟ್ಟಿ ಸೇರಿತು. ಈ ನಂತರ ಅಲ್ಲಿ ಬಂದ ಸರಕಾರಗಳು ನಿಧಾನವಾಗಿ  ಕನ್ನಡದ ಕತ್ತು ಹಿಚುಕುವ ಕೆಲಸ. ಮಾಡತೊಡಗಿದವು.

ಕನ್ನಡದ ಕಲರವ ಅಡಗಿಸುವ ದೃಷ್ಟಿಯಿಂದಲೇ 36 ವರ್ಷಗಳ‌ ಹಿಂದೆ ಕಾಸರಗೋಡನ್ನು ಜಿಲ್ಲೆಯಾಗಿಸಿದರು. ಕೇರಳದಲ್ಲಿದ್ದ ಮಲೆಯಾಳಿಗರು ಅತ್ತ ಬಂದು‌ ನೆಲೆಸುವಂತೆ ಮಾಡಿದರು.‌ಇದಲ್ಲದೇ ನಿರಂತರವಾಗಿ ಕನ್ನಡದ ಉಸಿರು ಕಟ್ಟಿಸುವ ಕೆಲಸ‌ ಮಾಡ ತೊಡಗಿದರು.

ಕಾಸರಗೋಡು ಜಿಲ್ಲೆ ಕನ್ನಡ ಭಾಷಾ ಅಲ್ಪಸಂಖ್ಯಾತರ ಪ್ರದೇಶ.‌ ಭಾರತದ ಸಂವಿಧಾನದ ಅನುಸಾರವೇ ಈ ಸ್ಥಾನಮಾನ ಸಿಕ್ಕಿದೆ. ಇದರಡಿ ಬರುವ ಪರಿಚ್ಚೇಧಗಳಲ್ಲಿ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ಬಗ್ಗೆ ನಿರ್ದೇಶನ ನೀಡಲಾಗಿದೆ.

ಕೇರಳದಲ್ಲಿ ಕಾಸರಗೋಡು ಹೇಗೆ ಕನ್ನಡ ಭಾಷಾ ಅಲ್ಪ ಸಂಖ್ಯಾತ ಪ್ರದೇಶವೂ ಹಾಗೇ ಪಾಲಕ್ಕಾಡ್ ಮತ್ತು ಇಡುಕ್ಕಿ ಸಹ ತಮಿಳು ಭಾಷಾ ಅಲ್ಪಸಂಖ್ಯಾತ ಪ್ರದೇಶಗಳು. ಇವರಿಗೂ ಸಂವಿಧಾನದತ್ತ ಹಕ್ಕುಗಳು ಇವೆ.

MLA A RAJA

ಇಡುಕ್ಕಿ‌ ಜಿಲ್ಲೆಯ ದೇವಿಕುಳ್ಳಂ ಕ್ಷೇತ್ರದಿಂದ CPI (M) ಪಕ್ಷದ ಎ. ರಾಜಾ ಅವರು ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಬಾರಿಯ ಕೇರಳ ವಿಧಾನಸಭೆಯಲ್ಲಿ ತಮಿಳಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ತಮ್ಮ ಕ್ಷೇತ್ರದ ಬಹು ಸಂಖ್ಯಾತ ತಮಿಳಿಗರಿಗಷ್ಟೆ ಅಲ್ಲ, ತಮಿಳುನಾಡು ರಾಜ್ಯದವರಿಗೂ ರೋಮಾಂಚನ ಮೂಡಿಸಿದರು. ಆದರೆ ಅಲ್ಲಿ ಯಾರೊಬ್ಬರೂರಾಜಾ ಏಕೆ ತಮಿಳಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು ಎಂದು ಅಪಸ್ವರ ಹೊರಡಿಸಲಿಲ್ಲ.

Similar Posts

Leave a Reply

Your email address will not be published. Required fields are marked *