ಒಂದು ಕಡೆ ಕೇರಳ ಸರಕಾರ ನಿರಂತರವಾಗಿ ಕಾಸರಗೋಡಿನಲ್ಲಿ ಕನ್ನಡದ ಉಸಿರು ನಿಲ್ಲಿಸುವ ಕಾರ್ಯ ಮಾಡುತ್ತಿದೆ. ಜೊತೆಗೆ ಸ್ಥಳನಾಮಗಳನ್ನು ಮನಸಿಗೆ ಬಂದಂತೆ ಬದಲಿಸುತ್ತಿದೆ. ಇನ್ನೊಂದೆಡೆ ಬೇರೆಡೆಗಳಿಂದ ಇತ್ತೀಚಿನ ದಶಕಗಳಲ್ಲಿ ವಲಸೆ ಬಂದ ಮಲೆಯಾಳಿಗಳೂ ಸ್ಥಳೀಯ ಹೆಸರುಗಳನ್ನು ವಿರೂಪಗೊಳಿಸುತ್ತಿದ್ದಾರೆ.

ಇದು ಉದ್ದೇಶಪೂರ್ವಕವಾಗಿ ನಡೆಯುತ್ತಿರುವ ವಿರೂಪ. ಕಾರಡ್ಕ, ಬೇಡಡ್ಕ, ಪಿಲಿಕುಂಜೆ, ಆನೆಬಾಗಿಲು, ಮೈರಡ್ಕ, ಮಂಜೇಶ್ವರ, ಹೊಸದುರ್ಗ ಹೆಸರುಗಳನ್ನು ಕ್ರಮವಾಗಿ ಕಾಡಗಂ, ಬೇಡಗಂ, ಪುಲಿಕುನ್ನು, ಆನೆವಾಗಿಲ್,ಶೇಣಿ ಮಂಜೇಶ್ವರಂ, ಪುದಿಯಕೋಟ ಎಂದು ಕರೆಯುತ್ತಿದ್ದಾರೆ. ಇದೇರೀತಿ ಪಾದೆ-ಪಾರೆ, ಮಧೂರು-ಮಧೂರಂ, ಮಲ್ಲ – ಮಲ್ಲಂ ಹೀಗೆ ದೈವ ಕ್ಷೇತ್ರಗಳ ಹೆಸರೂ ಕೂಡಾ ರೂಪಾಂತರವಾಗುತ್ತಿವೆ

ಸಸಿಹಿತ್ಕು – ಶೈವಳಪ್ಪ್ , ನೆಲ್ಲಿಕುಂಜ – ನೆಲ್ಲಿಕುನ್ನು, ಕುಂಬಳೆ – ಕುಂಬಳ ಹೀಗೆಲ್ಲ ಬದಲಾವಣೆ ಆಗಿವೆ. ಇವು ನನಗೆ ಗೊತ್ತಿರುವ ಮಾಹಿತಿ. ಇನ್ನೂ ಸಾಕಷ್ಟು ಊರುಗಳ ಹೆಸರುಗಳನ್ನು ಮನಬಂದಂತೆ ಬದಲಿಸಲಾಗಿದೆ.ಎಂದು ಸ್ಥಳೀಯರು ಹೇಳುತ್ತಾರೆ.

ಊರುಗಳ ಹೆಸರು ಆಕಸ್ಮಿಕವಾಗಿ ಬಂದಿರುವುದಿಲ್ಲ.‌ಅದಕ್ಕೆ ಐತಿಹಾಸಿಕ ಕಾರಣಗಳು, ಸ್ಥಳೀಯ ಸಂಸ್ಕೃತಿ ಕಾರಣವಾಗಿರುತ್ತದೆ. ಅಲ್ಲಿಯೇ ಹುಟ್ಟಿ ಬೆಳೆದವರಿಗೆ ಭಾವನಾತ್ಮಕ ನೆಂಟು ಇರುತ್ತದೆ. ಜೊತೆಗೆ ಅವುಗಳು ಆಯಾ ಪ್ರದೇಶದ ಅಸ್ಮಿತೆಯೂ ಆಗಿರುತ್ತದೆ.

ಇದ್ಯಾವುದನ್ನೂ ಕೇರಳ ಸರ್ಕಾರ ಉದ್ದೇಶಪೂರ್ವಕವಾಗಿಯೇ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಹೇಗಾದರೂ ಸರಿ ಕನ್ನಡ – ತುಳು ಸಂಸ್ಕೃತಿಯನ್ನು ಮಲೆಯಾಳಂ ಸಂಸ್ಕೃತಿಯಾಗಿ ಪರಿವರ್ತಿಸಬೇಕು, ಎಲ್ಲವನ್ನೂ ಮಲೆಯಾಳೀಕರಣ ಮಾಡಬೇಕು ಎಂದು ಹೊರಟಿದೆ. ಈ ನಡೆಯ ಹಿಂದೆ ಕುಯುಕ್ತಿಯೂ ಇದೆ.

ಸ್ಥಳನಾಮ ಬದಲಿಸಿದರೆ ಅದರ ಜೊತೆ ಅದಕ್ಕಿರುವ ಐತಿಹಾಸಿಕತೆ, ಅಸ್ಮಿತೆ ಮರೆಯಾಗಿ ಬಿಡುತ್ತದೆ. ಇದರ ಜೊತೆಗೆ ಸ್ಥಳೀಯ ಸಂಸ್ಕೃತಿ ಜೊತೆ ಮಿಳಿತವಾಗಿ ಬಂದ ಹೆಸರು, ಸ್ಥಳೀಯರಿಗೆ ಇರುವ ಭಾವನಾತ್ಮಕ ನೆಂಟನ್ನು ಅಳಿಸಿದಂತೆ ಆಗುತ್ತದೆ. ಪಾರಂಪಾರಿಕ ಹೆಸರುಗಳ ಬದಲು ಮಲೆಯಾಳಂ ಹೆಸರನ್ನೇ ಇಟ್ಟರೆ ಮೊದಲಿನಿಂದಲೂ ಆ ಹೆಸರೇ ಇತ್ತು ಎಂದು ಬಿಂಬಿಸಬಹುದು ಎಂಬ ದುರಾಲೋಚನೆಯೂ ಇದೆ. ಜೊತೆಗೆ ಹೊಸ ಹೆಸರಿಗೆ ಏನೋ ಒಂದು ಪೊಳ್ಳು ಕಥೆ ಕಟ್ಟಿ ಕನ್ನಡ – ತುಳು ಸಂಸ್ಕೃತಿಯನ್ನು ಕೊಲ್ಲುವ ಯೋಜನೆಯೂ ಇದೆ.

ಇನ್ನೊಂದು ಗಮನಾರ್ಹ ಸಂಗತಿ ಎಂದರೆ ಕಾಸರಗೋಡಿನಲ್ಲಿ ಇದ್ದ – ಇರುವ ಸ್ಥಳನಾಮಗಳೆವೂ ಕನ್ನಡ ಮತ್ತು ತುಳು ಭಾಷೆಗಳ ಹೆಸರೇ ಆಗಿವೆ. ಹಲವು ಊರುಗಳಲ್ಲಿ ಕನ್ನಡ – ತುಳು ಹೆಸರುಗಳು ಮಿಶ್ರಣವಾಗಿವೆ. ಇದು ಇಂದು ನಿನ್ನೆ ಆಗಿದ್ದಲ್ಲ. ಕೆಲವು ಹೆಸರುಗಳಿಗೆ ಸಾವಿರಕ್ಕೂ ಮಿಕ್ಕ ಚರಿತ್ರೆಯಿದ್ದರೆ ಉಳಿದವುಗಳಿಗೆ ನೂರಾರು ವರ್ಷಗಳ ಇತಿಹಾಸವಿದೆ. ಇವುಗಳನ್ನೇ ಬದಲಿಸಿಬಿಟ್ಟರೆ ಮೊದಲಿನಿಂದಲೂ ಆ ಪ್ರದೇಶಗಳೆಲ್ಲ ಮಲೆಯಾಳಂ ಪ್ರಾಬಲ್ಯದ ಪ್ರದೇಶವೇ ಆಗಿತ್ತು ಎಂದು ಬಿಂಬಿಸುವುದು ಸುಲಭ ಎನ್ನುವ ಸಂಚೂ ಇದೆ.

ಸಂವಿಧಾನ – ಮಹಾಜನ ಆಯೋಗ – ನ್ಯಾಯಾಲಯ:

ಕಾಸರಗೋಡಿಗೆ ಸಂವಿಧಾನದತ್ತ ಭಾಷಾ ಅಲ್ಪಸಂಖ್ಯಾತ ಸ್ಥಾನಮಾನವಿದೆ. ಸಂವಿಧಾನದ ನಿರ್ದಿಷ್ಟ ಶೆಡ್ಯೂಲ್ ಗಳಲ್ಲಿ ಇದರ ಸ್ಪಷ್ಟ ಉಲ್ಲೇಖವಿದೆ. ಮೇಲಾಗಿ ಮಹಾಜನ ಆಯೋಗದ ವರದಿ ಅನ್ವಯ. ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು. ಈಗ ಮಹಾಜನ ಆಯೋಗದ ವರದಿ ಜಾರಿ ವಿಷಯ ನ್ಯಾಯಾಲಯದ ಅಂಗಳದಲ್ಲಿದೆ. ವಿಷಯ ಇಷ್ಟು ಸೂಕ್ಷ್ಮವಾಗಿರುವಾಗ ಕೇರಳ ಸರಕಾರದ ಕ್ರಮಗಳು ಸಂವಿಧಾನ ವಿರೋಧಿ, ಮಹಾಜನ ಆಯೋಗದ ವಿರೋಧಿ ಜೊತೆಗೆ ನ್ಯಾಯಾಲಯದ ನಿಂದನೆಯೂ ಆಗುತ್ತದೆ.

ಇಂಥ ಮಹತ್ವದ ವಿಚಾರಗಳಿಗೆ ಬೆಲೆ ಕೊಡದೇ ಕನ್ನಡ ಪ್ರದೇಶದಲ್ಲಿ ಮಲೆಯಾಳೀಕರಣ ಮಾಡುತ್ತಿರುವ ಕೇರಳ ಸರ್ಕಾರದ ಹುನ್ನಾರಗಳನ್ನು ಕರ್ನಾಟಕದ ಕನ್ನಡಿಗರು ನೋಡಿಕೊಂಡು ತೆಪ್ಪಗಿದ್ದೇವೆ. ಕಾಸರಗೋಡಿನ ಕನ್ನಡಿಗರ ಪರವಾಗಿ ಧ್ವನಿಯೆತ್ತುವ ಪ್ರಯತ್ನವನ್ನೂ ಮಾಡುತ್ತಿಲ್ಲ.‌ಸರಕಾರದ ಕಥೆ ಬಿಡಿ, ರಾಜಕಾರಣಿಗಳಿಗೂ ಸಂಸ್ಕೃತಿಗೂ ಎಣ್ಣೆ ಸೀಗೆಕಾಯಿ ಸಂಬಂಧ. ಅವರುಗಳದ್ದೂ ಪ್ರತಿಯೊಂದರಲ್ಲಿಯೂ ರಾಜಕೀಯ ಲೆಕ್ಕಾಚಾರ.  ಆದರೆ ನಾವು ಕನ್ನಡಿಗರಾದರೂ ಆಕ್ರೋಶಗೊಳ್ಳದಿದ್ದರೆ ಹೇಗೆ ?

 ನ್ನಡಿಗರು ಕೂಡಲೇ ಎಚ್ಚೆತ್ತುಕೊಂಡು ಪ್ರತಿಭಟಿಸದಿದ್ದರೆ ಇನ್ನು ಕೆಲವೇ ವರ್ಷಗಳಲ್ಲಿ ಇಡೀ ಕಾಸರಗೋಡು ಜಿಲ್ಲೆಯೇ ಸಂಪೂರ್ಣ ಮಲೆಯಾಳೀಕರಣಗೊಂಡು ಕನ್ನಡ – ತುಳು ಸಂಸ್ಕೃತಿಯ ಅವಸಾನವಾಗುತ್ತದೆ.

Similar Posts

Leave a Reply

Your email address will not be published. Required fields are marked *