ಮನಸಿನಲ್ಲಿ ಹೊರ ಮನಸು, ಒಳಮನಸು ಇರುತ್ತದೆ. ಇದನ್ನು ಮನೋವಿಜ್ಞಾನಿಗಳು ಸುಪ್ತಮನಸು ಎನ್ನುತ್ತಾರೆ. ಅದು ಬಿಡುವಿಲ್ಲದ ಕಾರ್ಖಾನೆ. ನೋಡಿದ, ಕೇಳಿದ ಘಟನೆಗಳೆಲ್ಲವನ್ನೂ ಕೊಲಾಜ್ ಥರ, ವಿಡಿಯೋ ಥರ ಮಾಡಿ ನಿದ್ದೆಯಲ್ಲಿರುವಾಗ ತೇಲಿಬಿಡುತ್ತದೆ. ಕೆಲವೊಮ್ಮೆ ಎಚ್ಚರದಲ್ಲಿದ್ದಾಗ ಒಳಮನಸಿನ ಮಾತುಗಳು ಹೊರಬಂದು ಬಿಡುತ್ತವೆ. ಬಿಜೆಪಿ ನಾಯಕರು ಇಂಥ ಸ್ಥಿತಿ ಅನುಭವಿಸುತ್ತಿದ್ದಾರೆ.
ದಾವಣಗೆರೆಯಲ್ಲಿ ಮಾರ್ಚ್ 27ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ‘ದೇಶದಲ್ಲಿ ಭ್ರಷ್ಟಾಚಾರದ ಸ್ಪರ್ಧೆ ನಡೆದರೆ ಯಡಿಯೂರಪ್ಪ ಸರ್ಕಾರ ನಂಬರ್ 1 ಸ್ಥಾನ ಗಳಿಸುತ್ತದೆ’ ಎಂದರು. ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ಬಿ.ಎಸ್. ಯಡಿಯೂರಪ್ಪ ಪ್ರಕರಣ ಅವರ ಮನಸಿನಲ್ಲಿ ಇದೆ. ಇದು ಚುನಾವಣಾ ಪ್ರಚಾರದ ವೇಳೆ ಬಿಜೆಪಿಗೆ ಬಾಧಕವಾಗಬಹುದು ಎಂಬ ಆತಂಕವೂ ಅವರಲ್ಲಿದೆ. ಆದ್ದರಿಂದಲೇ ಏನನ್ನೋ ಹೇಳಲು ಹೋಗಿ ಮನಸಿನಲ್ಲಿದಿದ್ದನ್ನು ಹೊರಹಾಕಿಬಿಟ್ಟರು.
ತಮ್ಮ ಪಕ್ಷದ ಅಧ್ಯಕ್ಷರ ಮಾದರಿಯನ್ನೇ ಸಂಸದ ಪ್ರಹ್ಲಾದ್ ಜೋಶಿಯೂ ಅನುಕರಿಸಿದರು. ಇದೇ ದಿನ ಚಳ್ಳಕೆರೆಯಲ್ಲಿ ಶಾ ಹಿಂದಿಯಲ್ಲಿ ಮಾಡಿದ ಭಾಷಣವನ್ನು ಕನ್ನಡದಲ್ಲಿ ಹೇಳುವ ಹೊಣೆಗಾರಿಕೆಯನ್ನು ಇವರೇ ಹೊತ್ತುಕೊಂಡಿದ್ದರು. ಆಗ ‘ ದೀನದಲಿತರಿಗೆ ಮೋದಿ ಸರ್ಕಾರ ಏನೂ ಮಾಡಿಲ್ಲ. ಅವರಿಂದ ದೇಶ ಅಭಿವೃದ್ಧಿಯಾಗಿಲ್ಲ’ ಎಂದು ಬಿಟ್ಟರು. ಶಾ ಹೇಳಿದ್ದು ದೀನದಲಿತರಿಗೆ ಮಖ್ಯಮಂತ್ರಿ ಸಿದ್ದರಾಮಯ್ಯ ಏನೂ ಮಾಡಿಲ್ಲ. ಅವರ ಸರ್ಕಾರದಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿಯೂ ಆಗಿಲ್ಲ’ ಆದರೆ ಮೋದಿ ಬಗ್ಗೆ ಒಳಗೊಳಗೆ ಸಿಟ್ಟಿರಬಹುದಾದ ಜೋಶಿ, ತಮ್ಮ ಮನಸಿನಲ್ಲಿದ್ದ ಮಾತನ್ನು ಹೊರಹಾಕಿಬಿಟ್ಟರು ಎನಿಸುತ್ತದೆ. ಆಶ್ಚರ್ಯದ ವಿಷಯವೆಂದರೆ ಅವರು ಪುನಃ ತಮ್ಮ ಮಾತನ್ನು ತಿದ್ದಿಕೊಳ್ಳಲಿಲ್ಲ.
ಇದೇ ದಿನವೇ ಕೆ.ಎಸ್. ಈಶ್ವರಪ್ಪ ಚಿಕ್ಕಮಗಳೂರಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಸಹಜವಾಗಿ ಪತ್ರಕರ್ತರು ಅಮಿತಾ ಶಾ ಹೇಳಿದ ಮಾತಿನ ಬಗ್ಗೆ ಕೆಣಕಿದ್ದಾರೆ. ಸಮಾಧಾನವಾಗಿ ಉತ್ತರ ನೀಡಬೇಕಾದವರು ‘ಯಾರೋ ಕುಡಿದು ಈ ರೀತಿ ಹೇಳಿರಬೇಕು’ ಎಂದರು. ನಂತರ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆಲ್ಲ ನಾನು ಉತ್ತರಿಸಬೇಕಿಲ್ಲ ಎಂದರು. ಇವರಿಗೂ ಅಮಿತ್ ಶಾ ತಮ್ಮನ್ನು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸದೇ ಇರುವ ಬಗ್ಗೆ ಸಿಟ್ಟು ಇದ್ದಿರಬಹುದೇನೋ ಪಾಪ !
ಅಮಿತ್ ಶಾ ಮದ್ಯ ಸೇವಿಸುತ್ತಾರೋ ಇಲ್ಲವೋ ನಮಗೆ ಗೊತ್ತಿಲ್ಲ. ಈ ವಿಚಾರ ಅತ್ತ ಇರಲಿ… ಆದರೆ ಭ್ರಷ್ಟಾಚಾರದ ಪ್ರಕರಣದಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೇ ಯಡಿಯೂರಪ್ಪ ಜೈಲಿಗೆ ಹೋಗಿ ಬಂದರು. ಇವರ ಸರ್ಕಾರದ ಅವಧಿಯಲ್ಲಿಯೇ ಬೇರೆಬೇರೆ ಪ್ರಕರಣಗಳಲ್ಲಿ ಕೆಲ ಸಚಿವರು ರಾಜಿನಾಮೆ ಕೊಟ್ಟರು. ಇದೆಲ್ಲ ಅಮಿತ್ ಶಾ ಒಳಮನಸನ್ನು ಬಾಧಿಸುತ್ತಿರಬಹುದು.
ಇನ್ನು ಪ್ರಹ್ಲಾದ್ ಜೋಶಿ ಹೇಳಿರುವುದರಲ್ಲಿ ಅಸತ್ಯವಾದರೂ ಏನಿದೆ. ದೀನದಲಿತರ ಅಭಿವೃದ್ಧಿಗೆ ಮೋದಿ ಸರ್ಕಾರ ಕೈಗೊಂಡ ಕ್ರಮಗಳಾದರೂ ಏನು, ದೇಶ ಕಂಡ ಅಭಿವೃದ್ಧಿಯಾದರೂ ಏನು. ಅತಾರ್ಕಿಕ ನೋಟು ಅಮಾನ್ಯೀಕರಣದಿಂದ ದೇಶದ ಅಭಿವೃದ್ಧಿ ಕುಂಠಿತವಾಗಿದೆ. ಸುಧಾರಿಸಿಕೊಳ್ಳಲು ಇನ್ನೂ ಕೆಲವಾರು ವರ್ಷಗಳೇ ಬೇಕಾಗಬಹುದೇನೋ…
ಅಂತೂ ಬಿಜೆಪಿ ನಾಯಕರು ತಮ್ಮ ಒಳಮನಸು ನುಡಿದಿದನ್ನೇ ಹೊರಹಾಕಿಬಿಟ್ಟಿದ್ದಾರೆ. ಇದೆಲ್ಲವನ್ನೂ ಜನತೆ ಬಹುಬೇಗನೇ ಮರೆತುಬಿಡುತ್ತಾರೆ ಎಂದು ಅವರು ಭಾವಿಸಿರಬಹುದು. ಆದರೆ ಜನತೆ ಇಂಥದನ್ನೆಲ್ಲ ಮರೆಯಲಾರರು. ಅಂದಹಾಗೆ ದೀನದಲಿತರ ಬಗ್ಗೆ ಹೋದಡೆಯೆಲ್ಲ ಮಾತನಾಡುವ ಅಮಿತ್ ಶಾ ಚಿತ್ರದುರ್ಗಕ್ಕೆ ಭೇಟಿ ನೀಡಿದಾಗ ಕೋಟೆನಾಡಿನ ವೀರಪ್ರತೀಕಗಳಾದ ಮದಕರಿ ನಾಯಕ, ಒನಕೆ ಓಬವ್ವ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು. ಇದೇನೋ ಸರಿ. ಆದರೆ ಮದಕರಿ ನಾಯಕರ ಪ್ರತಿಮೆ ರಸ್ತೆಯಲ್ಲಿಯೇ ಇರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಿಲ್ಲ. ಸ್ಥಳೀಯರಲ್ಲದ ಇವರಿಗೆ ಯಾವ ಪ್ರತಿಮೆ ಎಲ್ಲಿದೆ ಎಂದು ಗೊತ್ತಾಗುವುದಿಲ್ಲ. ಆದರೆ ಸ್ಥಳೀಯ ನಾಯಕರು ಈ ಬಗ್ಗೆ ಶಾಗೆ ಮಾಹಿತಿ ನೀಡಬೇಕಿತ್ತಲ್ಲವೇ… ಇದು ಬಿಜೆಪಿಗೆ ದಲಿತ ನಾಯಕರ ಬಗ್ಗೆ ಗೌರವವಿಲ್ಲ ಎಂಬುದನ್ನು ತೋರಿಸುತ್ತದೆ ಅಲ್ಲವೇ…
ತಂದಿಕ್ಕುವ ಕಾರ್ಯ ಮಾಡುವಿರೇಕೆ ಶಾ ಜೀ….
ಚಳ್ಳಕೆರೆಯಲ್ಲಿ ಮಾತನಾಡಿದ ಅಮಿತ್ ಶಾ ‘ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಟಿಪ್ಪು ಸುಲ್ತಾನ್ ಜಯಂತಿ ನೆನಪಾಗುತ್ತದೆ. ಆದರೆ ವೀರ ಮದಕರಿ ನಾಯಕರ ಜಯಂತಿ ನೆನಪಾಗುವುದಿಲ್ಲ ಎಂದು ಟೀಕಿಸಿದರು. ಚಳ್ಳಕರೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ನಾಯಕ ಸಮುದಾಯದವರು ಹೆಚ್ಚಾಗಿದ್ದಾರೆ. ಅವರ ಮತಗಳನ್ನು ಸೆಳೆಯುವ ಸಲುವಾಗಿಯೇ ಶಾ ಹೀಗೆ ಹೇಳಿರುತ್ತಾರೆ.
ಯಡಿಯೂರಪ್ಪ ಸರ್ಕಾರ ನಂಬರ್ 1 ಭ್ರಷ್ಟ ಸರ್ಕಾರ ಎಂದ ಇವರಿಗೆ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಮಾಡಿದೆ ಎಂಬುದು ಮರೆತುಹೋಯಿತೆ !? ಆ ಸರ್ಕಾರದ ಅವಧಿಯಲ್ಲಿಯೇ ಈ ಕಾರ್ಯವನ್ನು ಮಾಡಬಹುದಿತ್ತಲ್ಲ. ಮದಕರಿ ನಾಯಕರ ಬಗ್ಗೆ ಚಿತ್ರದುರ್ಗದಲ್ಲಿಯಷ್ಟೆ ಅಲ್ಲ, ಇಡೀ ರಾಜ್ಯದಲ್ಲಿಯೇ ಗೌರವದ ಭಾವನೆಗಳಿವೆ. ಎಲ್ಲರೂ ಇದನ್ನು ಸ್ವಾಗತಿಸುತ್ತಿದ್ದರು. ಹೀಗಿರುವಾಗ ಆಗಿನ ಬಿಜೆಪಿ ಸರ್ಕಾರ ಈ ಕಾರ್ಯ ಮಾಡಲಿಲ್ಲವೇಕೆ.
ಅಮಿತ್ ಶಾ ಸೇರಿದಂತೆ ಇತರ ಬಿಜೆಪಿ ನಾಯಕರು ಮಾತನಾಡುತ್ತಿರುವ ರೀತಿ ಹತಾಶೆಗೊಂಡವರ ಮಾತುಗಳಂತಿವೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತನಾಡಲು ಯಾವುದೇ ಹಗರಣಗಳು ಇಲ್ಲದಿರುವುದು ಅವರ ತಳಮಳ ಹೆಚ್ಚಿಸಿದೆ. ಬೇರೆಬೇರೆ ಯೋಜನೆಗಳಿಂದ ರಾಜ್ಯದಲ್ಲಿ ಸಿದ್ದರಾಮಯ್ಯ ವರ್ಚಸ್ಸು ಹೆಚ್ಚಿಸಿರುವುದು ಅವರಿಗೆ ಕಸಿವಿಸಿ ಉಂಟು ಮಾಡಿದೆ. ಸೋಲಿನ ಭಯ ಕಾಡುತ್ತಿದೆ ಎಂಬುದು ಅವರ ಮಾತುಗಳಿಂದಲೇ ಸ್ಪಷ್ಟವಾಗುತ್ತಿದೆಯಲ್ಲವೇ… ?
ಹಳ್ಳಿಗಳ ಕಡೆ ಇಬ್ಬರ ನಡುವೆ ಮನಸ್ತಾಪ ತರುವವರಿಗೆ ತಂದಿಕ್ಕುವ ಕೆಲ್ಸ ಏಕೆ ಮಾಡ್ತೀರಿ ಎಂದು ಕೇಳುತ್ತಾರೆ. ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿ ಕಡೆಗಾಣಿತವಾಗಿಲ್ಲ. ವಿಶೇಷವಾಗಿ ಈ ಸಮುದಾಯಗಳಿಗೆ ಸಿದ್ದರಾಮಯ್ಯ ಬಗ್ಗೆ ಗೌರವ –ಮೆಚ್ಚುಗೆ ಇದೆ. ಹೀಗೆ ಇಬ್ಬರೂ ಚೆನ್ನಾಗಿರುವಾಗ ಶಾ ಮಾಡಿರುವುದು ತಂದಿಕ್ಕಲು ಮಾಡುವ ಕಾರ್ಯವಲ್ಲವೇ…