ಸಿನಿಮಾ

ಸಹಜಾಭಿನಯದ ಕಲಾವಿದ ಅಶ್ವಥರಿಗೆ ಕರ್ನಾಟಕ ರತ್ನ ಬೇಡವೇ ?

ದನಿಯಿಲ್ಲದ ಪೋಷಕ ಪಾತ್ರಧಾರಿಗಳ ಪರವಾಗಿ ದನಿಯೆತ್ತುವವರು ಯಾರು‌‌ ? ಅಶ್ವಥರಿಗೆ ಕರ್ನಾಟಕ ರತ್ನ ಬೇಡವೇ
ಕನ್ನಡ ಚಿತ್ರರಂಗದ ಚಾಮಯ್ಯ ಮೇಷ್ಟ್ರು ‌ಅರ್ಥಾತ್ ಕೆ.ಎಸ್. ಅಶ್ವಥ್ ಅವರಿಗೆ ಇದೇ 2025ಕ್ಕೆ (ಜನನ ಮಾರ್ಚ್ 25, 1925) ನೂರು ವರ್ಷ ! ಮೈಸೂರಿನ ಕರಗನಹಳ್ಳಿ ಸುಬ್ಬರಾಯ ಅಶ್ವಥನಾರಾಯಣ ಅಂದರೆ ಕೆ.ಎಸ್. ಅಶ್ವಥ್ ತಾವು ಅಭಿನಯಿಸಿದ ಪಾತ್ರಗಳಿಗೆ ಮಾಡಿದ ಪರಕಾಯ ಪ್ರವೇಶದಿಂದ ಕನ್ನಡಿಗರ ಮನದಲ್ಲಿ ಎಂದೂ ಜೀವಂತ. ಇಂಥ ಕಲಾವಿದರಿಗೆ ಸಾವಿಲ್ಲ ಎನ್ನುವುದು ಅತಿಶಯೋಕ್ತಿ ಅಲ್ಲ !
ಅಶ್ವಥ್ ಅವರು ಮೈಸೂರು ಮಹಾರಾಜ ಕಾಲೇಜು ವಿದ್ಯಾರ್ಥಿ. ಈ ಕಾಲೇಜು ಅಂಗಳ ಅನೇಕಾನೇಕ ಹೆಸರಾಂತ ಕಲಾವಿದರು, ತಂತ್ರಜ್ಞರು, ರಾಜಕಾರಣಿಗಳು, ಆಡಳಿತಗಾರರನ್ನು ಸೃಷ್ಟಿಸಿದೆ. ಇಲ್ಲಿನ ಕಲೆ ಮತ್ತು ಸಾಂಸ್ಕೃತಿಕ ವಾತಾವರಣ ಅಶ್ವಥರಲ್ಲಿದ್ದ ಕಲಾವಿದನನ್ನು ಪೋಷಿಸಿದೆ. ಬಹುಶಃ ಈ ಹಂಬಲವೇ ಅವರು ರಾಜ್ಯ ಸರ್ಕಾರದ ನೌಕರಿ ತೊರೆಯುವಂತೆ ಮಾಡಿ ಕಲೆಯನ್ನು ಅಪ್ಪುವಂತೆ ಮಾಡಿತು !
ಆರಂಭದಲ್ಲಿ ಅಶ್ವಥ್ ಅವರ ಕಲೆಯ ಸಸಿಗೆ ಮೈಸೂರ ಆಕಾಶವಾಣಿ ಸಹ ನೀರೆರದು ಪೋಷಿಸಿದೆ. ಅಂದಿನ ಕಾಲಕ್ಕೆ ರೇಡಿಯೂ ನಾಟಕಗಳು ಪ್ರಖ್ಯಾತ ! ಇಲ್ಲಿಂದ ಮುಂದೆ ರಂಗಭೂಮಿಯಲ್ಲಿಯೂ ಕಾಣಿಸಿಕೊಂಡರು. ಇವರಲ್ಲಿದ್ದ ಸಮರ್ಥ ಕಲಾವಿದನನ್ನು ಕನ್ನಡ ಚಿತ್ರರಂಗ ಗುರುತಿಸಿತು. ಅಂದಿನ ಖ್ಯಾತ ಸಿನೆಮಾ ನಿರ್ದೇಶಕ ಕೆ. ಸುಬ್ರಮಣ್ಯಂ ಅವರು “ಸ್ತ್ರೀರತ್ನ”ದಲ್ಲಿ ಪ್ರಮುಖ ಪಾತ್ರ ನೀಡಿದರು. ಇದು 1956ರಲ್ಲಿ ತೆರೆ ಕಂಡಿತು. ಈ ಚಿತ್ರದ ಮೂಲಕವೇ ಸಿನೆರಂಗದತ್ತ ಪಯಣ ಬೆಳೆಸಿದರೂ ಇವರು ಅಭಿನಯಿಸಿದ “ಶಿವಶರಣೆ ನಂಬಿಯಕ್ಕಾ” ಮೊದಲು 1955ರಲ್ಲಿ ತೆರೆ ಕಂಡಿತು.
ಇಷ್ಟರಲ್ಲಾಗಲ್ಲೇ ಅಂದರೆ 1954ರಲ್ಲಿ ಬೇಡರ ಕಣ್ಣಪ್ಪ ಮೂಲಕ ರಾಜ್ ಕುಮಾರ್ ತಾರೆಯಾಗಿ ಬೆಳಗತೊಡಗಿದ್ದರು. ರಾಜ್ ಕುಮಾರ್, ಉದಯ ಕುಮಾರ್, ಕಲ್ಯಾಣ್ ಕುಮಾರ್ ಮತ್ತು ಅಶ್ವಥ್ ಸಮಕಾಲೀನ ನಟರು. ಆರಂಭದ ನಾಲ್ಕು ಸಿನೆಮಾಗಳಲ್ಲಿ ಅಶ್ವಥ್ ಪ್ರಮುಖ ಪಾತ್ರಗಳಲ್ಲಿ ನಟಿಸಿದರು. ನಂತರ ಪೋಷಕ ಪಾತ್ರಗಳು ಅರಸಿ ಬಂದವು.
ಗಮನಾರ್ಹ ಸಂಗತಿ ಎಂದರೆ ತಮ್ಮ ಸಮ ವಯಸಿನ ರಾಜ್, ಉದಯ ಕುಮಾರ್, ಕಲ್ಯಾಣ ಕುಮಾರ್ ಅವರುಗಳಿಗೆ ತಂದೆಯಾಗಿ, ಅಣ್ಣನಾಗಿ ಅಶ್ವಥ್ ಅಭಿಯಿಸಿದ್ದಾರೆ. ಈ ಮೂಲಕ ವಯಸಿಗೂ ಅಭಿನಯಿಸುವ ಪಾತ್ರಗಳಿಗೂ ಸಂಬಂಧವಿಲ್ಲ ಎಂಬುದನ್ನೂ ನಿರೂಪಿಸಿದ್ದಾರೆ. ಸಮರ್ಥ ಅಭಿನಯ ಬೇಡುವ ಪೋಷಕ ಪಾತ್ರಗಳಿಗೆ ಅಶ್ವಥ್ ಜೀವ ತುಂಬಿರುವ ಪರಿ ಬೆರಗು ಮೂಡಿಸುತ್ತದೆ. ಯಾವುದೇ ಪಾತ್ರ ನೀಡಿದರೂ ಅದರಲ್ಲಿ ಪರಕಾಯ ಪ್ರವೇಶ ಪಾತ್ರ ಮಾಡುತ್ತಿದ್ದರು. ಬಹುಶಃ ಈ ಕಾರಣದಿಂದಲೇ ಸಿನೆಮಾಗಳ ಆದರ್ಶ ತಂದೆ, ಹಿರಿಯ ಸಹೋದರ ಎಂದರೆ ಇವರೇ ನೆನಪಾಗುತ್ತಾರೆ. ಅಷ್ಟರ ಮಟ್ಟಿಗೆ ಪೋಷಕ ಪಾತ್ರಗಳಿಗೆ ಅಶ್ವಥತನ ತುಂಬಿದರು.
ಗಾಳಿ ಗೋಪುರ ಸಿನೆಮಾದಲ್ಲಿನ ಇವರ ಅಭಿನಯಕ್ಕೆ ಕನ್ನಡಿಗರಷ್ಟೇ ಅಲ್ಲ; ದಕ್ಷಿಣ ಭಾರತೀಯ ಚಿತ್ರರಂಗವೇ ನಿಬ್ಬೆರಗಾಯಿತು. ವರನಟ ರಾಜ್ ಕುಮಾರ್ ಸಹ ಮಾರು ಹೋದರು. ಅಭಿಮಾನಿಯಾದರು. ಇದರಿಂದಲೇ ರಾಜ್ ಕುಮಾರ್ ಅಭಿನಯದ ಬಹುತೇಕ ಎಲ್ಲ ಸಿನೆಮಾಗಳಲ್ಲಿಯೂ ಅಶ್ವಥ್ ಇದ್ದಾರೆ. 50-60 -70ರ ದಶಕದ ಸಿನೆಮಾಗಳಲ್ಲಿ ರಾಜ್, ಅಶ್ವಥ್, ನರಸಿಂಹರಾಜು, ಬಾಲಕೃಷ್ಣ ಒಟ್ಟಿಗೆ ಇರುವ ಸಿನೆಮಾ ಎಂದರೆ ಕನ್ನಡಿಗರ ಪಾಲಿಗೆ ರಸದೌತಣ! ಪಾರ್ವತಮ್ಮ ರಾಜ್ ಕುಮಾರ್ ಅವರು ನಿರ್ಮಿಸಿದ ಸಿನೆಮಾಗಳಲ್ಲಿಯೂ ಪ್ರಧಾನ ಪಾತ್ರ ಇದ್ದೇ ಇರುತ್ತಿತ್ತು.
ಡಿಸೆಂಬರ್ 29, 1972 ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ತೆರೆಕಂಡಿತು. ಈ ಮೂಲಕ ಚಿರಂತನ ನೆನಪಿನಲ್ಲಿರುವ ಎರಡು ಪಾತ್ರಗಳು ಕನ್ನಡಿಗರ ಕಣ್ಮುಂದೆ ಬಂದವು. ಚಾಮಯ್ಯ ಮತ್ತು ರಾಮಾಚಾರಿ. ತಂಟೆಕೋರ ವಿದ್ಯಾರ್ಥಿಯನ್ನು ನಿಯಂತ್ರಿಸುವ ಮೇಷ್ಟ್ರ ಪಾತ್ರದಲ್ಲಿ ಅಶ್ಚಥ್ ಅವರ ಅಭಿನಯ ಮತ್ತಷ್ಟೂ ಪ್ರಕಾಶಿಸಿತು. ಅಂದಿನಿಂದ ಅಶ್ವಥ್ ಅವರು ಕನ್ನಡಿಗರ ಪಾಲಿಗೆ ಚಾಮಯ್ಯ ಮೇಷ್ಟ್ರು ಸಹ ಆದರು.
ಅಶ್ವಥ್ ಅವರು ಅಧ್ಯಯನಶೀಲರು. ಯಾವುದೇ ಪಾತ್ರ ಒಪ್ಪಿಕೊಂಡರು ಅದರ ರೀತಿನೀತಿಗಳನ್ನು ಗಂಭೀರವಾಗಿ ಅಧ್ಯಯನ ಮಾಡುತ್ತಿದ್ದರು. ಇಂಥ ಚಾಮಯ್ಯ ಮೇಷ್ಟ್ರು ಜನವರಿ 18, 2010ರಲ್ಲಿ ಕಾಲನ ಮಡಿಲಿಗೆ ಸರಿದು ಹೋದರು. ಆದರೆ ಕನ್ನಡಿಗರ ನೆನಪಿನಂಗಳಲ್ಲಿ ಜೀವಂತವಾಗಿದ್ದಾರೆ.
ಇದೀಗ ಚಾಮಯ್ಯ ಮೇಷ್ಟ್ರ ನೆಚ್ಚಿನ ಶಿಷ್ಯನಿಗೆ “ಕರ್ನಾಟಕ ರತ್ನ’ ಘೋಷಣೆಯಾಗಿದೆ. ಇದೇ ಸಂದರ್ಭದಲ್ಲಿ ಗುರುವಿಗೂ ” ಕರ್ನಾಟಕ ರತ್ನ” ದೊರೆತರೆ ಗುರುಶಿಷ್ಯರನ್ನು ಒಟ್ಟಿಗೆ ಗೌರವಿಸಿದಂತೆ ಆಗುತ್ತದೆ ಅಲ್ಲವೇ ?

Leave a Reply

Your email address will not be published. Required fields are marked *

error: Content is protected !!