ಮಡಿಕೇರಿಲೀ ಮಂಜು ಎಂದು ಗುನುಗಲಿಲ್ಲ !!
ನನ್ನ ಬೈಕಿನ ಗಾಲಿಗಳು ಕಾಸರಗೋಡು, ಮಂಗಳೂರು ಹಾದು ಸಂಪಾಜೆ ಘಾಟು ಹತ್ತಿ ಮಡಿಕೇರಿ ತಲುಪಿದ್ದವು. ಹಾದಿಯುದ್ದಕ್ಕೂ ವಿಪರೀತ ಮಳೆ. ಕೇವಲ 120 ರೂ. ಕೊಟ್ಟು ಖರೀದಿಸಿದ್ದ ಪ್ಲಾಸ್ಟಿಕ್ ಪಾಂಚೋ ನನ್ನನ್ನು, ನನ್ನ ಬೆನ್ನ ಚೀಲದಲ್ಲಿದ್ದ ಲ್ಯಾಪ್ ಟಾಪ್ ಅನ್ನು ಒದ್ದೆಯಾಗದಂತೆ ಕಾಪಾಡುತ್ತಿತ್ತು. ಮಡಿಕೇರಿಯಲ್ಲಿ ಮಳೆ ಜೊತೆ ವಿಪರೀತ ಮಂಜು!
ಮಧ್ಯಾಹ್ನವಾಗಿತ್ತು. ಪುಟ್ಟ ಮೆಸ್ ಹೊಕ್ಕವನು ಪುಷ್ಕಳ ಬಾಡೂಟ ಉಂಡು ಹೊರಗೆ ಬಂದೆ. ಎದುರುಗಡೆ ಏನೂ ಕಾಣಿಸದಷ್ಟು ಮಿಸ್ಟ್ ಮಿಸ್ಟ್ ಮತ್ತು ಮಿಸ್ಟ್ ! ಮಡಿಕೇರಿಲೀ ಮಂಜು ಹಾಡು ನೆನಪಿಗೆ ಬಂದರೂ ಗುನುಗಲಿಲ್ಲ ! ಮುಂದೆ ಹೋದರೆ ಡೇಂಜರ್ರೆ ಎಂದು ತಿಳಿದು ಅಲ್ಲೇ ಹೋಮ್ ಸ್ಟೇಯಲ್ಲಿ ತಂಗಿದೆ. ಸೀಸನ್ ಇಲ್ಲದ ಕಾರಣ ಅದರ ಓನರ್ ಅಗ್ಗದ ದರದಲ್ಲಿಯೇ ರೂಮ್ ದಯಪಾಲಿಸಿದ್ದ.
ಕುದಿಯುತ್ತಿದ್ದ ನೀರಿನಲ್ಲಿ ಸ್ನಾನ ಮಾಡಿ ಹೊರ ಬಂದೆ. ಆಗಲೇ ಸಂಜೆಯಾಗಿತ್ತು. ಬ್ಯಾಗ್ ನಿಂದ ಲ್ಯಾಪ್ ಟಾಪ್ ತೆಗೆದೆ. ಒಂದಷ್ಟು ಸುದ್ದಿ ಓದಿ, ಎಂದಿನಂತೆ ನನ್ನ ಇಷ್ಟದ ಮೋಟೋ ಬ್ಲಾಗ್ ನೋಡಿದೆ. ಮಲಗಿ ಎದ್ದಾಗ ಬೆಳಗ್ಗಿನ ಜಾವ 6. ಅವಸರವೇನೂ ಇರಲಿಲ್ಲ. ಹೊರಗೆ ಬಂದೆ. ಮಂಜಿನಲ್ಲಿ ಮಡಿಕೇರಿ ಮೀಯುತ್ತಿತ್ತು. ರಾತ್ರಿಯಿಡೀ ಸುರಿದ ಮಳೆ ಮೈಯನ್ನು ಗದಗುಟ್ಟುವಂತೆ ಮಾಡುತ್ತಿತ್ತು ! ನೆನೆದ ಮೆಟ್ಟಿಲುಗಳ ಮೇಲೆ ಜಾರದಂತೆ ಹೆಜ್ಜೆಯ ಮೇಲೆ ಹೆಜ್ಜೆಯಿಟ್ಟು ಕೆಳಗಿಳಿದು ಬಂದೆ. ಸ್ಟೇ ಕೇರ್ ಟೇಕರ್ ಬಿಸಿಬಿಸಿ ಕಾಫಿ ತಂದುಕೊಟ್ಟರು. ಗುಟುಕರಿಸುತ್ತಾ ಕುಳಿತವನಿಗೆ ಕುಳಿರ್ಗಾಳಿ ಮೈ ತಾಕಿಕೊಂಡು ಚಳಿ ಹೆಚ್ಚಿಸುತ್ತಿತ್ತು.
ಒಂಟಿಯಾಗಿ ನಿಂತಿದ್ದ ಬೈಕ್ ಒರೆಸಿ ಇಗ್ನಿಷನ್ ಆನ್ ಮಾಡಿದೆ.ದಡದಡ ಸದ್ದು ಮಾಡುತ್ತಾ ಚಾಲೂ ಆಯಿತು. ಒಂದೈದು ನಿಮಿಷ ಅದರ ಇಂಜಿನ್ ಬಿಸಿ ಮಾಡಿ ಆಫ್ ಮಾಡಿದೆ. ಮತ್ತೆ ಮೇಲೆ ಬಂದು ಫ್ರೆಷ್ ಆದೆ. ಕೆಳಗಿಳಿದು ಬಂದವನು ಬೈಕ್ ಸ್ಟಾರ್ಟ್ ಮಾಡಿದೆ. ನಿಲ್ಲಿಸಿದ್ದು ಪಿರಿಯಾಪಟ್ಟಣ ಬಳಿಯ ನನ್ನ ನೆಚ್ಚಿನ ಲೆವಿಸ್ಟಾ ಕೆಫೆ ಮುಂದೆ. ಹೊಟ್ಟೆ ಚುರುಗುಟ್ಟುತ್ತಿತ್ತು.
ಬಿಸಿಬಿಸಿ ಎಗ್ ಪಪ್ಸ್ ಜೊತೆ ಹಬೆಯಾಡುತ್ತಿದ್ದ ಕಾಫಿ ಕುಡಿಯುತ್ತಿದ್ದಾಗ ಥಟ್ಟನೇ ನೆನಪಾದವರು ನೆಬೆ ಸಚ್ಚಿತ್. ಪೋನಾಯಿಸಿದೆ. “ಶಾಲೆಯಲ್ಲಿದ್ದೇನೆ ಬನ್ನಿ” ಎಂದರು. ಪುಟ್ಟ ಊರಿನ ದೊಡ್ಡ ಶಾಲೆ! ಸೆಕ್ಯುರಿಟಿ, ಚೆಂಬರ್ ಹಾದಿ ತೋರಿಸಿದರು. ಹೋದೊಡನೆ ಮುಗುಳ್ನಗುವಿನ ಸ್ವಾಗತ ಕಾದಿತ್ತು. ನಮ್ಮಿಬ್ಬರ ನೆಚ್ಚಿನ ಕಾಡು, ವನ್ಯಜೀವನದ ಸುತ್ತಾ ಮಾತು ಗಂಟೆಗಟ್ಟಲೇ ಗಿರಗಿಟ್ಲೆ ಹೊಡೆಯಿತು ! ಪೋನಿನಲ್ಲೇ ಒಂದಿಬ್ಬರನ್ನು ಪರಿಚಯಿಸಿದರು. ನಂತರ ಅವರು ಅಚಾನಕ್ ಆಗಿ ಹುಣಸೂರಿನಲ್ಲೇ ಭೇಟಿಯಾಗಿ ಕಾಡಿನ ಕಥೆಗಳನ್ನು ಸಾಕಷ್ಟು ಹೇಳಿದರು. ಮತ್ತೆ ನನ್ನ ಬೈಕ್ ತನ್ನ ಹಾದಿ ಹಿಡಿಯಿತು.
