ಅಂತರಾಷ್ಟ್ರೀಯ ಸಿನೆಮೋತ್ಸವಗಳ ನಕಾಶೆಯಲ್ಲಿ ಬೆಂಗಳೂರು ಫಿಲ್ಮ್ ಫೆಸ್ಟಿವಲ್ ಗುರುತಿಸಿಕೊಂಡಿದೆ. ಈ ದಿಶೆಯಲ್ಲಿ ಹೆಚ್ಚಿನ ನಿರೀಕ್ಷೆಗಳಿರುತ್ತವೆ. ಈ ಬಾರಿಯ 15ನೇ ಫೆಸ್ಟಿವಲ್ ವಿಶೇಷತೆಗಳ ಬಗ್ಗೆ ಉತ್ಸವದ ಕಲಾತ್ಮಕ ನಿರ್ದೇಶಕ ಎನ್. ವಿದ್ಯಾಶಂಕರ್ ಮಾತನಾಡಿದ್ದಾರೆ. ಇದರಿಂದ ಸಿನೆಮೋತ್ಸವದ ಒಟ್ಟು ಆಶಯ, ಕಾರ್ಯಕ್ರಮಗಳ ಚೌಕಟ್ಟು ಅರ್ಥವಾಗುತ್ತದೆ.

ಕುಮಾರ ರೈತ: ಈ ಬಾರಿಯ ಸಿನೆಮೋತ್ಸವದ ತುಂಬ ವಿಶೇಷ ಸಂಗತಿ ಯಾವುದು ?

ಎನ್. ವಿದ್ಯಾಶಂಕರ್: ಸಾಮಾನ್ಯವಾಗಿ ಎಲ್ಲ ಚಿತ್ರೋತ್ಸವಗಳಲ್ಲಿಯೂ ಸಮಕಾಲೀನ ಚಿತ್ರಗಳ ಪ್ರದರ್ಶನ ಆಗುತ್ತದೆ.  ಇವುಗಳನ್ನು ವರ್ಲ್ಡ್ ಸಿನೆಮಾ ಎಂದು ಹೇಳ್ತೀವಿ.  ಇಂಡಿಯಾದ ಯಾವುದೇ ಚಿತ್ರೋತ್ಸವದಲ್ಲಿ  ಅಂದರೆ ಗೋವಾ, ಪೂನಾ ಮತ್ತು ಕೇರಳದಲ್ಲಿ ಪ್ರದರ್ಶಿತವಾಗದ 30 ಸಿನೆಮಾಗಳು  ಬೆಂಗಳೂರು ಫೀಲ್ಡ್ ಫೆಸ್ಟಿವಲ್ ನಲ್ಲಿ ಪ್ರದರ್ಶಿವಾಗಲಿವೆ. ನಮ್ಮದು ಭಾರತದಲ್ಲಿ ಕಡೆಯ ಚಿತ್ರೋತ್ಸವ. ಆದರೂ ಇಷ್ಟು ಸಂಖ್ಯೆಯ ಜಾಗತಿಕ ಸಿನೆಮಾಗಳು ಬರುತ್ತಿರುವುದು ವಿಶೇಷ ಎಂದೇ ಹೇಳಬಹುದು.  ಅಲ್ಲಿ ಪ್ರದರ್ಶಿತವಾದ ಚಿತ್ರಗಳನ್ನೇ ಮತ್ತೆಮತ್ತೆ ಪ್ರದರ್ಶಿಸುವುದರಲ್ಲಿ ಅರ್ಥವಿಲ್ಲ. ಏಕೆಂದರೆ ಸಾಕಷ್ಟು ಸಿನೆಮಾಸಕ್ತರು ಅವುಗಳನ್ನು ನೋಡಿರುತ್ತಾರೆ.

ಕು: ಸ್ಪರ್ಧಾತ್ಮಕ ಸಿನೆಮಾ ವಿಭಾಗದ ಕುರಿತು ಹೇಳಿ

ವಿ: ಇಂಟರ್ ನ್ಯಾಷನಲ್ ಕಾಂಪಿಟೇಶನ್ ವಿಭಾಗದ ಕಾರಣದಿಂದ ಬೆಂಗಳೂರು ಫಿಲ್ಡ್ ಫೆಸ್ಟಿವಲ್ ಗೆ ಮಾನ್ಯತೆ ಸಿಕ್ಕಿದೆ. ಇಲ್ಲಿ ಒಟ್ಟು ಮೂರು ಸ್ಪರ್ದಾತ್ಮಕ ವಿಭಾಗಗಳಿರುತ್ತವೆ. ಕಂಟ್ರಿ ಫೋಕಸ್ ನಲ್ಲಿ  ಈ ಬಾರಿ ಜರ್ಮನಿಯ ಚಿತ್ರೋದ್ಯಮದ ಬೆಳವಣಿಗೆಯ ಪ್ರಮುಖ ಹಂತಗಳನ್ನು ತೋರಿಸುವ ಬೇರೆಬೇರೆ ನಿರ್ದೇಶಕರ ಸಿನೆಮಾಗಳು ಪ್ರದರ್ಶಿತವಾಗುತ್ತಿವೆ.  ಇದರಿಂದ ಆ ದೇಶದ ಸಿನೆಮಾ ಸಂಸ್ಕೃತಿ ಬಗ್ಗೆ ಹೆಚ್ಚಿನ ಅರಿವು ಮೂಡುತ್ತದೆ.  ಬೇರೆ ದೇಶದಲ್ಲಿ ಭಾರತದ ಬೇರೆಬೇರೆ ರಾಜ್ಯಗಳ ಸಿನೆಮಾಗಳನ್ನು ತೆಗೆದುಕೊಂಡು ತೋರಿಸಿದರೆ ಅದಕ್ಕೆ ಒಂದು ಮಹತ್ವ ಇರುತ್ತದೆಯಲ್ಲವೇ ಹಾಗೆ ಕಂಟ್ರಿ ಫೋಕಸ್ ಗೂ ಇರುತ್ತದೆ.

ಕು: ಕಂಟ್ರಿ ಫೋಕಸ್ ಸಿನೆಮಾಗಳನ್ನು ಒಂದೇ ಸ್ಕ್ರೀನ್ ನಲ್ಲಿ ತೋರಿಸುತ್ತೀರಾ ?

ವಿ: ಸಾಮಾನ್ಯವಾಗಿ ಕಾಂಪಿಟೇಶನ್ ಗೆ ಬಂದ ಸಿನೆಮಾಗಳನ್ನು ಉದ್ದಕ್ಕೂ ಒಂದೇ ಸ್ಕ್ರೀನ್ ನಲ್ಲಿ ತೋರಿಸುತ್ತಾ ಹೋಗುತ್ತೇವೆ. ಉದಾಹರಣೆಗೆ ಹೇಳುವುದಾದರೆ ಸ್ಪರ್ಧಾತ್ಮಕ ವಿಭಾಗದ ಕನ್ನಡ ಸಿನೆಮಾ, ಏಶೀಯನ್ ಕಾಂಪಿಟೇಶನ್, ಜಾಗತಿಕ ಸಿನೆಮಾಗಳನ್ನು ನಿರ್ದಿಷ್ಟ ಸ್ಕ್ರೀನ್ ನಲ್ಲಿ ತೋರಿಸುತ್ತೇವೆ. ಅದನ್ನು ಹೊರತುಪಡಿಸಿದರೆ ಉಳಿದ ವಿಭಾಗಗಳ ಸಿನೆಮಾಗಳನ್ನು ಬೇರೆಬೇರೆ ಸ್ಕ್ರೀನ್ ನಲ್ಲಿ ತೋರಿಸಲಾಗುತ್ತದೆ.  ಆದರೆ ಈ ಬಾರಿ ಕಂಟ್ರಿ ಫೋಕಸ್ ಸಿನೆಮಾಗಳನ್ನು ಒಂದೇ ಸ್ಕ್ರೀನ್ ನಲ್ಲಿ ತೋರಿಸಲು ಪ್ರಯತ್ನಿಸುತ್ತೇವೆ. ಕೆಲವೊಂದು ಸಿನೆಮಾಗಳನ್ನು ಎರಡೆರಡು ಭಾರಿ ಪ್ರದರ್ಶಿಸುತ್ತೇವೆ. ಆಗ ಬೇರೆಬೇರೆ ಸ್ಕ್ರೀನ್ ನಲ್ಲಿ ಪ್ರದರ್ಶಿತವಾಗುವ ಸಾಧ್ಯತೆ ಹೆಚ್ಚು.

ಕು: ಚಿತ್ರೋತ್ಸವ ಆಯೋಜನೆಯನ್ನು ಕಡಿಮೆ ದಿನಗಳ ಅಂತರದಲ್ಲಿ ಗಡಿಬಿಡಿಯಿಂದ ಮಾಡಿದಾಗ ವಿದೇಶದಿಂದ ಪ್ರಮುಖ ಸಿನೆಮಾಗಳನ್ನು ತರಿಸುವುದರ ಮೇಲೆ ಪರಿಣಾಮ ಬೀರುವುದಿಲ್ಲವೇ ?

ವಿ: ಗಡಿಬಿಡಿ  ಇದ್ದೇ ಇರುತ್ತದೆ. ಎರಡು ತಿಂಗಳ ಅಂತರವಷ್ಟೇ ಇಟ್ಟುಕೊಂಡು ಮಾಡಿದಾಗ ಇದೆಲ್ಲ ಸಾಮಾನ್ಯವಾಗಿ ಇರುತ್ತದೆ. ಆದರೆ ಬೇರೆಬೇರೆ ದೇಶಗಳು, ನಮ್ಮದೇ ದೇಶದ ಬೇರೆಬೇರೆ ರಾಜ್ಯಗಳಲ್ಲಿ ನಡೆದ ಚಿತ್ರೋತ್ಸವಗಳ ಬಗ್ಗೆ ಪೂರ್ಣ ಮಾಹಿತಿ ಇರುವುದರಿಂದ ಸಾಧ್ಯವಾದಷ್ಟೂ ಅತ್ಯುತ್ತಮ ಚಿತ್ರಗಳನ್ನೇ ತರಿಸುತ್ತೇವೆ. ಆದರೆ ಹೆಚ್ಚು ಸಮಯ ಬೇಕು ಎಂಬುದಂತೂ ನಿಜ. ಇದು ನಮಗೆ ಮಾತ್ರವಲ್ಲ; ಬೇರೆ ದೇಶಗಳವರು ತಮ್ಮತಮ್ಮ ಉತ್ತಮ ಸಿನೆಮಾಗಳನ್ನು ಕಳಿಸಿಕೊಡಲು ಅವರು ಪ್ರಸ್ತಾವನೆ ಕಳಿಸುವುದಕ್ಕೂ ಸಮಯ ಬೇಕಾಗುತ್ತದೆ. ಆದ್ದರಿಂದ ಪ್ರಮುಖವಾಗಿ ಸಂವಹನದ ಸಮಸ್ಯೆ ಇರುತ್ತದೆ.

ಕು: ಈ ಬಾರಿ ಸಿನೆಮೋತ್ಸವದಲ್ಲಿ ಗುಣಾತ್ಮಕವಾದ ಕನ್ನಡ ಸಿನೆಮಾಗಳು ಪ್ರದರ್ಶಿತವಾಗುತ್ತಿವೆ ಎಂಬ ಮಾತು ಕೇಳುತ್ತಿದೆ. ಇದಕ್ಕೇನಾದರೂ ವಿಶೇಷ ಕಾರಣಗಳಿವೆಯೇ ?

ವಿ: ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳ ಚಿತ್ರಗಳನ್ನು ಚಿತ್ರೋತ್ಸವಕ್ಕೆ ನಾವು ಅಂದರೆ ಅಕಾಡೆಮಿ ಅವರು ಮಾಡುವುದಿಲ್ಲ.  ಆರ್ಟಿಸ್ಟಿಕ್ ವಿಭಾಗದವರು ಇವುಗಳನ್ನು ಬಿಟ್ಟು ಉಳಿದ ಎಲ್ಲ ವಿಭಾಗಗಳ ಸಿನೆಮಾಗಳನ್ನು ಆಯ್ಕೆ ಮಾಡುತ್ತೇವೆ. ಭಾರತೀಯ ಸಿನೆಮಾಗಳ ಆಯ್ಕೆಗಾಗಿ ಸಮಿತಿಗಳನ್ನು ಮಾಡಿರುತ್ತೇವೆ.  ಆಯ್ಕೆ ಸಮಿತಿ ಕನ್ನಡದ 107 ಸಿನೆಮಾಗಳನ್ನು ನೋಡಿ ಅದರಲ್ಲಿ 12 ಸಿನೆಮಾಗಳನ್ನು ಆಯ್ಕೆ ಮಾಡಿದೆ. ಇದೆಲ್ಲ ಆಯಾ ವರ್ಷ ಯಾವ ಸಿನೆಮಾ ಬಂತು ಎನ್ನುವುದರ ಮೇಲೆ ಅವಲಂಬಿತವಾಗುತ್ತದೆ.

ಕು: ಚಿತ್ರೋತ್ಸವದಲ್ಲಿ ತುಂಬ ಗಮನ ಸೆಳೆದ ಸಿನೆಮಾಗಳ ತಂತ್ರಜ್ಞರು ಮತ್ತು ಆಸಕ್ತ ಪ್ರೇಕ್ಷಕರ ನಡುವೆ ಸಂವಾದ ಆಯೋಜಿಸಬೇಕೆಂಬ ಪ್ರಯತ್ನ ಇನ್ನೂ ಕಾರ್ಯಗತವಾಗಿಲ್ಲ. ಈ ಬಾರಿ ಆಗಬಹುದೇ ?

ವಿ: ಸಿನೆಮಾಕ್ಕೆ ಸಂಬಂಧಪಟ್ಟ ನಿರ್ದೇಶಕರು ಬಂದಿದ್ದರೆ ಆಯಾ ಸಿನೆಮಾ ಪ್ರದರ್ಶನಗಳ ಮುಕ್ತಾಯದ ನಂತರ ಸಂವಾದ ಆಯೋಜಿಸಲು ಪ್ರಯತ್ನಿಸುತ್ತೇವೆ., ಏಶಿಯನ್ ಕಾಂಪಿಟೇಶನ್ ಚಿತ್ರಗಳ ನಿರ್ದೇಶಕರುಗಳನ್ನು ಸಂಪರ್ಕಿಸಿದ್ದೇವೆ.  ಕಡಿಮೆ ಅವಧಿಯಲ್ಲಿ ಆಗುತ್ತಿರುವುದರಿಂದ ಕೆಲವಾರು ನಿರ್ದೇಶಕರುಗಳಿಗೆ ಬರಲು ಸಾಧ್ಯವಾಗುತ್ತಿಲ್ಲ.  ಬಂದವರ ಜೊತೆ ಸಂವಾದ ಏರ್ಪಡಿಸಲು ಖಂಡಿತ ಪ್ರಯತ್ನಿಸುತ್ತೇವೆ.

ಕು: ಅಕಾಡೆಮಿಕ್ ಶಿಸ್ತಿನ ಚೌಕಟ್ಟಿನಲ್ಲಿ ಸಿನೆಮಾ ಅರಿಯುವ ಕುರಿತ ಕಾರ್ಯಾಗಾರಗಳ ಬಗ್ಗೆ ಹೇಳಿ

ವಿ: ಚಿತ್ರೋತ್ಸವದಲ್ಲಿ ಸಾಕಷ್ಟು ಅಕಾಡೆಮಿಕ್ ಕಾರ್ಯಕ್ರಮಗಳಿವೆ. ಈ ಬಾರಿ 11 ಕಾರ್ಯಕ್ರಮಗಳಿವೆ.  ಉದಾಹರಣೆಗೆ ಹೇಳುವುದಾದರೆ ಖ್ಯಾತ ನಿರ್ದೇಶಕ ಡಾ. ಜಬ್ಬಾರ್ ಪಟೇಲ್ ಅವರು ಡಾ. ಅಂಬೇಡ್ಕರ್ ಅವರ ಮೇಲೆ ದೀರ್ಘ ಸಿನೆಮಾ ಮಾಡಿದ್ದಾರೆ. ಅವರು ಉಪನ್ಯಾಸ ಕೊಡುತ್ತಾರೆ. ಅದೇ ರೀತಿ ಮಹಿಳಾ ಪ್ರಜ್ಞೆ ದೃಷ್ಟಿಯಿಂದ ಉತ್ತರ ಈಶಾನ್ಯದ ಬೋಡೋ ಭಾಷೆಯಲ್ಲಿ ಆಗಿರುವ ಒಂದು ಸಿನೆಮಾದ ಬಗ್ಗೆ ಪ್ರದರ್ಶನದ ನಂತರ ನಿರ್ದೇಶಕಿ ರಜನಿ ಅವರ ಜೊತೆ ಸಂವಾದ ನಡೆಯಲಿದೆ. ಇವರೊಂದಿಗೆ ಕರ್ನಾಟಕ ಲೇಖಕಿಯರ ಸಂಘದ ಸದಸ್ಯರು ಚರ್ಚೆ ನಡೆಸಲಿದ್ದಾರೆ. ಇದು ಒರಾಯನ್ ಮಾಲ್ ನಲ್ಲಿಯೇ ಆಯೋಜಿತವಾಗಿದೆ.

ಕು: ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ ಚಿತ್ರೋತ್ಸವದ ಕೊನೆ ಕ್ಷಣದ ಗಡಿಬಿಡಿ ತಪ್ಪಿಸಲು ನಿರ್ದಿಷ್ಟ ದಿನಾಂಕಗಳಂದು ನಿಗದಿ ಪಡಿಸಲು ಸಾಧ್ಯವಿಲ್ಲವೇ ?

ವಿ: ಬೆಂಗಳೂರು ಚಿತ್ರೋತ್ಸವವನ್ನು ಫೆಬ್ರವರಿ – ಮಾರ್ಚ್ ತಿಂಗಳುಗಳಲ್ಲಿ ನಡೆಸಲು ಅನುಮತಿ ಸಿಕ್ಕಿದೆ. ಕಳೆದ ಎರಡು ವರ್ಷದಿಂದ ಇದೇ ತಿಂಗಳುಗಳಲ್ಲಿಯೇ ಚಿತ್ರೋತ್ಸವ ನಡೆಯುತ್ತಿದೆ. ಆದರೆ ನಿರ್ದಿಷ್ಟ ದಿನಾಂಕಗಳದು ಮಾತ್ರ ನಡೆಯುತ್ತಿಲ್ಲ. ಮೇ ತಿಂಗಳಿನಲ್ಲಿ ಕಾನ್ ಫಿಲ್ಡ್ ಫೆಸ್ಟಿವಲ್, ಫೆಬ್ರವರಿ ತಿಂಗಳಿನಲ್ಲಿ ಬರ್ಲಿನ್ ಫಿಲ್ಡ್ ಫೆಸ್ಟಿವಲ್ ನಡೆಯುತ್ತವೆ. ಅಲ್ಲಿಯೂ ನಿರ್ದಿಷ್ಟ ದಿನಾಂಕಗಳಂದೇ ಆಗುತ್ತದೆ ಎಂಬ ಖಚಿತತೆಯಿಲ್ಲ. ಆದರೆ ಅದೇ ತಿಂಗಳಿನಲ್ಲಿ ನಡೆಯುವುದು ಖಚಿತ. ಹಾಗೆ ಬೆಂಗಳೂರು ಫಿಲ್ಡ್ ಫೆಸ್ಟಿವಲ್ ಸಹ ಫೆಬ್ರವರಿ – ಮಾರ್ಚ್ ತಿಂಗಳಿನಲ್ಲಿ ನಿಗದಿತವಾಗಿದೆ. ಅದರಂತೆ ಈಗ ಫೆಬ್ರವರಿ ಕೊನೆ ದಿನಾಂಕ ಉದ್ಘಾಟನೆಯಾಗಿ ಮಾರ್ಚ್ ಮೊದಲ ವಾರದಲ್ಲಿ ನಡೆಯುತ್ತಿದೆ. ಕಳೆದ ವರ್ಷ ಮಾರ್ಚ್ ಕೊನೆ ವಾರದಲ್ಲಿ ಫೆಸ್ಟಿವಲ್ ಆಯಿತು. ಆದರೆ ಇಲ್ಲಿ ಗಮನಾರ್ಹ ಎಂದರೆ ಪೂರ್ವಸಿದ್ಧತೆ ಯಾವಾಗ ಆರಂಭ ಎಂಬುದು ಡೋಲಾಯಮಾನವಾಗಿರುತ್ತದೆ. ನಿರ್ದಿಷ್ಟವಾಗಿ ಗೊತ್ತಿರುವುದಿಲ್ಲ.  ಆದ್ದರಿಂದ ಸಾಕಷ್ಟು ಸಮಯ ಮೊದಲೇ ಪೂರ್ವ ತಯಾರಿ ಆರಂಭವಾಗುವುದು ಸೂಕ್ತ. ಆದ್ದರಿಂದ ಈ ದಿಶೆಯಲ್ಲಿ ಮನವಿ ಮಾಡಿದ್ದೇವೆ. ಸಾಕಷ್ಟು ದಿನಗಳ ಅಂತರ ಇದ್ದರೆ ಸಿನೆಮಾಗಳನ್ನು ಸಬ್ ಮಿಟ್ ಮಾಡುವುದಕ್ಕೂ ಹೆಚ್ಚು ಕಾಲಾವಕಾಶ ದೊರೆಯುತ್ತದೆ. ಈ ಬಾರಿ ಸಿನೆಮಾ ಸಬ್ ಮಿಟ್ ಮಾಡಲು ಕೇವಲ 10 ದಿನ ಮಾತ್ರ ಅವಕಾಶ ನೀಡಲು ಸಾಧ್ಯವಾಯಿತು. ವಿಶೇಷವಾಗಿ ಇದು ವಿದೇಶಗಳ ಸಿನೆಮಾ ತಂಡಗಳಿಗೆ ಸಮಸ್ಯೆ ಉಂಟು ಮಾಡುತ್ತದೆ.

ಕು: ಭಾರತೀಯ ಸಣ್ಣಸಣ್ಣ ಭಾಷೆಗಳ ಸಿನೆಮಾಗಳ ಪ್ರದರ್ಶನ ಕುರಿತಂತೆ ತಿಳಿಸಿ

ವಿ: ಭಾರತದಲ್ಲಿ ಅಸಂಖ‍್ಯಾತ ಸಣ್ಣಸಣ್ಣ ಭಾಷೆಗಳಿವೆ. ಇವುಗಳು ಜನಸಂಖ್ಯಾ ದೃಷ್ಟಿಯಿಂದ ಮಾತ್ರ ಸಣ್ಣ ಭಾಷೆ. ಉಳಿದಂತೆ ಪ್ರಬುದ್ಧ ಭಾಷೆಗಳು. ಇಂಥ ಭಾಷೆಗಳಲ್ಲಿ ತಯಾರಾದ ಸಿನೆಮಾಗಳ ಪ್ರದರ್ಶನ ಬೆಂಗಳೂರು ಅಂತರಾಷ್ಟ್ರೀಯ ಸಿನೆಮೋತ್ಸವದಲ್ಲಿ ಆರಂಭವಾಯಿತು. ನಂತರ ಇದು ಸ್ಥಗಿತವಾಯಿತು. ಪ್ರಸ್ತುತ ವರ್ಷದಿಂದ ಇದಕ್ಕೆ ಮರು ಚಾಲನೆ ನೀಡಿದ್ದೇವೆ. ಇಲ್ಲಿ ಕೊಡವ, ತುಳು, ಈಶಾನ್ಯ ರಾಜ್ಯಗಳು ಸೇರಿದಂತೆ ಅನೇಕ ಭಾಷೆಗಳ ಸಿನೆಮಾಗಳಿವೆ.

ಕು: ಪ್ರತಿವರ್ಷ ಫೀಲ್ಮ್ ಫೆಸ್ಟಿವಲ್ ನಲ್ಲಿ ಅಗತ್ಯಕ್ಕಿಂತ ಹೆಚ್ಚು ಪಾಸುಗಳನ್ನು ವಿತರಿಸಲಾಗುತ್ತದೆ. ಇದರಿಂದ ಮುಖ್ಯ ಪ್ರದರ್ಶನ ಕೇಂದ್ರದಲ್ಲಿ ಹೆಚ್ಚು ಒತ್ತಡ ಉಂಟಾಗುತ್ತದೆ ಎಂಬ ದೂರುಗಳಿವೆ. ಈ ಬಾರಿ ವ್ಯವಸ್ಥೆ ಹೇಗಿರಲಿದೆ ?

ವಿ: ಜಾಗತಿಕವಾಗಿ ಎಲ್ಲೇ ನೋಡಿದ್ರೂ ಈ ಸಮಸ್ಯೆ ಇದ್ದೇ ಇದೆ. ಸಿನೆಮಾ ಪ್ರದರ್ಶನ ಸಂಕೀರ್ಣದಲ್ಲಿ ಇರುವ ಸೀಟುಗಳಷ್ಟೇ ಪಾಸುಗಳನ್ನು ವಿತರಣೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ನಾವು ಸಾರ್ವಜನಿಕರಿಗೆ ಒಂದಿಷ್ಟು ವಿತರಿಸುತ್ತೇವೆ. ಚಲನಚಿತ್ರ ಉದ್ಯಮದವರಿಗೆ ವಿತರಿಸುತ್ತೇವೆ.ಸರ್ಕಾರದ ಕಾರ್ಯಕ್ರಮ ಆದ್ದರಿಂದ ಸರ್ಕಾರಿ ವಲಯಕ್ಕೂ ಪಾಸುಗಳನ್ನು ವಿತರಣೆ ಮಾಡುತ್ತೇವೆ. ಸಾಮಾನ್ಯವಾಗಿ 2:3ರಷ್ಟು ಹೆಚ್ಚಿಗೆ ಕೊಟ್ಟೆ ಕೊಡುತ್ತಾರೆ. ಉದಾಹರಣೆಗೆ ಹೇಳುವುದಾದರೆ ಕಾನ್ ಚಿತ್ರೋತ್ಸವದಲ್ಲಿ 60 ಸಾವಿರ ಜನ ಬರುತ್ತಾರೆ.  ಆದರೆ ಅಲ್ಲಿ ಅಷ್ಟೊಂದು ಸೀಟುಗಳಿರುವುದಿಲ್ಲ. ಆದರೂ ಏಕೆ ಅಷ್ಟೊಂದು ಜನ ಬರುತ್ತಾರೆ ಎಂದರೆ ಅಲ್ಲಿ ಸಿನೆಮಾ ಮಾರುಕಟ್ಟೆಯೂ ಇರುತ್ತದೆ. ಆದರೆ ಅಲ್ಲಿಯೂ ಕಷ್ಟ. ಅಲ್ಲಿ ಪ್ರತಿದಿನ ಬೆಳಗ್ಗೆ 7.05ರೊಳಗೆ ಎಲ್ಲ ಟಿಕೇಟುಗಳು ಮುಗಿದು ಹೋಗಿರುತ್ತವೆ. ಆದ್ದರಿಂದ ಸೀಟು ಎಷ್ಟಿದೆಯೋ ಅಷ್ಟು ಟಿಕೇಟುಗಳನ್ನೇ ವಿತರಿಸದೇ ಹೆಚ್ಚು ಟಿಕೇಟು ಅಥವಾ ಪಾಸುಗಳನ್ನು ವಿತರಿಸಲಾಗಿರುತ್ತದೆ.  ಪಾಸು ವಿತರಿಸಿದಷ್ಟು ಜನ ಬಾರದೇ ಇರಬಹುದು. ಆ ದೃಷ್ಟಿಯಿಂದ ಹೆಚ್ಚು ಪಾಸು/ಟಿಕೇಟ್ ವಿತರಿಸುತ್ತೇವೆ.

ಕು: ಈ ಬಾರಿ ಆನ್ ಲೈನ್ ಸಿನೆಮಾ ಪ್ರದರ್ಶನವಿಲ್ಲ;  ಏಕೆ ?

ವಿ: ಆನ್ ಲೈನ್ ನಲ್ಲಿ ಸಿನೆಮಾಗಳನ್ನು ತೋರಿಸಲು ಸಮಯ ಬೇಕಾಗುತ್ತದೆ. ಸಮಯಾಭಾವದ ಕಾರಣ ಅದನ್ನು ವ್ಯವಸ್ಥೆ ಮಾಡಲಾಗಿಲ್ಲ.

ಕು: ಈ ಬಾರಿ ಡೈಲಿ ಪಾಸು/ಟಿಕೇಟ್ ಲಭ್ಯವಿರುತ್ತದೆಯೇ ?

ವಿ: ಮೊದಲ ಮೂರು ದಿನ ಆಯಾ ದಿನವೇ ವಿತರಿಸುವ ಡೈಲಿ ಪಾಸು/ಟಿಕೇಟ್ ವಿತರಣೆ ಇರುವುದಿಲ್ಲ. ಕಡೇ ನಾಲ್ಕು ದಿನ ಡೈಲಿ ಟಿಕೇಟ್ ವಿತರಿಸುವ ಉದ್ದೇಶವಿದೆ.

ಕು: ಕಳೆದ ಮೂರು ವರ್ಷದಿಂದ ನೋಂದಾಯಿಸಿದ ಎಲ್ಲ ಪ್ರತಿನಿಧಿಗಳಿಗೂ ಕಿಟ್ ದೊರೆಯದೇ ಸಮಸ್ಯೆ ಆಗಿದೆ. ಈ ಸಲದ ವ್ಯವಸ್ಥೆ ಹೇಗಿದೆ ?

ವಿ: ಈಗಾಗಲೇ ಬ್ಯಾಗ್, ಕ್ಯಾಟಲಾಗ್,  ಸಿನೆಮಾ ಶೆಡ್ಯೂಲ್ ಲಿಸ್ಟ್ ರೆಡಿಯಾಗಿದೆ. ಅದು ಸಮರ್ಪಕವಾಗಿ ವಿತರಣೆಯಾಗಲಿದೆ. ಮುಖ್ಯವಾಗಿ ನಾವು ಕಿಟ್ ವಿತರಿಸುವುದು ಹಣ ಪಾವತಿ ಮಾಡಿ ಪಾಸು ಪಡೆದವರಿಗೆ ಮಾತ್ರ.

ಕು: ಸಾಕ್ಷ್ಯಚಿತ್ರಗಳಿಗೆ ಸಂಬಂಧಿಸಿದಂತೆ ಏನು ವ್ಯವಸ್ಥೆ ?

ಸಾಕ್ಷ್ಯಚಿತ್ರಗಳಿಗೆ ಸಂಬಂಧಿಸಿದಂತೆ ಥಿಮ್ಯಾಟಿಕ್ ಆಗಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಈ ಬಾರಿ ಇದರ ಥೀಮ್ “ಮಾನವ ಘನತೆ” ಜೊತೆಗೆ ಮನುಷ್ಯ ಎದುರಿಸುತ್ತಿರುವ ಪರಿಸರ ಸಮಸ್ಯೆಗಳು. ಲಿಂಗ ತಾರತಮ್ಯ ಸಂಗತಿಗಳಿಗೆ ಸಂಬಂಧಿಸಿದಂತೆ ಸುಮಾರು ಒಟ್ಟು 15 ಗಂಟೆಗಳ ಸಾಕ್ಷ್ಯಚಿತ್ರ ಪ್ರದರ್ಶನವಿದೆ.

ಕು: ಈ ಬಾರಿ ರೆಟ್ರೋಸ್ಪೆಕ್ಟೀವ್ ವಿಭಾಗದಲ್ಲಿ ವಿಶೇಷತೆ ಏನು ?

ವಿ: ಆಯ್ದ ನಿರ್ದೇಶಕರ ಸಿನೆಮಾಗಳ ಪುನರಾವಲೋಕನ ಮಾಡುವುದು ಇದರ ವಿಶೇಷ. ಈ ಬಾರಿ ಭಾರತದ ಖ್ಯಾತ ಸಿನೆಮಾ ನಿರ್ದೇಶಕ ಮೃಣಾಲ್ ಸೇನ್, ಇರಾನಿನ ಖ್ಯಾತ ಸಿನೆ ನಿರ್ದೇಶಕ ಅಬ್ಬಾಸ್ ಕಿರೋಸ್ತಮಿ ಅವರ ಸಿನೆಮಾಗಳ ಪ್ರದರ್ಶನವಿದೆ.

Similar Posts

Leave a Reply

Your email address will not be published. Required fields are marked *