ವಿಶಿಷ್ಟ ಕಾಣ್ಕೆ, ವಿಶಿಷ್ಟ ಕಥೆ – ಚಿತ್ರಕಥೆ, ವಿಶಿಷ್ಟ ನಿರ್ದೇಶನ ಇವು ಅತೀ ವಿರಳ ವ್ಯಕ್ತಿತ್ವದ ಋತ್ವಿಕ್ ಘಟಕ್ ವಿಶಿಷ್ಟತೆ ! ಇವರು ಬದುಕಿದ ತೀವ್ರತೆ ನೋಡಿದರೆ ಅಚ್ಚರಿಯಾಗುತ್ತದೆ. ನಾನಾ ಆಯಾಮಗಳಲ್ಲಿ ಧೀಮಂತವಾಗಿ ಚಾಚಿಕೊಂಡರು. ಸಿನೆಮಾ ಪ್ರೇಮಿಗಳು ಸದಾ ಸೋಜಿಗದ ನೋಟ ಬೀರುವ, ತಮ್ಮ ಸೃಜನಾತ್ಮಕ ಕಲೆಗಾರಿಕೆಯ ಮೂಲಕ ಸಾವಿಲ್ಲದ ಬದುಕು ಪಡೆದ ಘಟಕ್ ಅವರಿಗೆ ಇದೇ 2025ಕ್ಕೆ ನೂರು ವರ್ಷ (ಅವಿಭಜಿತ ಭಾರತದ ಢಾಕಾದಲ್ಲಿ ಜನನ: ನವೆಂಬರ್ 4, 2025) ಬಹು ರಭಸದಿಂದ ಹರಿಯುವ ನದಿ ಕ್ಷಿಪ್ರ ಹಾದಿಯಲ್ಲಿ ಸಾಗರ ಸೇರುವಂತೆ ತಮ್ಮ 50ನೇ ವಯಸಿನಲ್ಲಿ ಭೌತಿಕವಾಗಿಯಷ್ಟೆ (ಸ್ವತಂತ್ರ ಭಾರತದ ಕೊಲ್ಕೋತ್ತಾದಲ್ಲಿ ಮರಣ: ಫೆಬ್ರವರಿ 6, 1976) ಇಲ್ಲವಾದರು.
ಋತ್ವಿಕ್ ಘಟಕ್ ವಿಚಾರದಲ್ಲಿ ವಿಶಿಷ್ಟ ಎಂಬುದನ್ನು ಮತ್ತೆಮತ್ತೆ ಬಳಸಿದ್ದೇನೆ. ಇದರ ಜೊತೆಗೆ ಅವರದು ವಿಕ್ಷಿಪ್ತ ವ್ಯಕ್ತಿತ್ವ !! ಹೀಗೆನ್ನಲು ಕಾರಣವೂ ಕಾರಣವೂ ಇದೆ. ಇವರು ಭಾರತೀಯ ಕಮ್ಯುನಿಸ್ಟ್ ಪಾರ್ಟಿಯ ಕಾರ್ಯಕರ್ತ. ಕಮ್ಯುನಿಸಂ ವಿಚಾರಧಾರೆ ಇವರ ಕೃತಿಗಳಲ್ಲಿ ನೆರಳು ಚಾಚಿದೆ. ಡಿಸೆಂಬರ್ 16, 1971 ಭಾರತದ ಇತಿಹಾಸದ ಮಹತ್ವದ ದಿನಗಳಲ್ಲಿ ಒಂದು ! ಇದೇ ದಿನ ಅಂದಿನ ಪ್ರಧಾನಿ ಇಂದಿರಾ ಗಾಂಧಿ ನಿರ್ದೇಶನದಲ್ಲಿ ಭಾರತೀಯ ಸೇನೆ ಪಾಕಿಸ್ತಾನದ ತೆಕ್ಕೆಗೆ ಹೋಗಿದ್ದ ಪೂರ್ವ ಬಾಂಗ್ಲಾವನ್ನು ವಿಮೋಚನೆಗೊಳಿಸಿತು. ಬಾಂಗ್ಲಾದೇಶ ಉದಯಕ್ಕೆ ಕಾರಣವಾಯಿತು. ಈ ಬೆಳವಣಿಗೆ ಪಕ್ಷಾತೀತವಾಗಿ ರಾಜಕೀಯ ನಾಯಕರ ಪ್ರಶಂಸೆಗೆ ಕಾರಣವಾಯಿತು.
ನಿರ್ದೇಶಕ ಘಟಕ್ 1972ರಲ್ಲಿ ಬಾಂಗ್ಲಾ ವಿಮೋಚನೆ ಕುರಿತು ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಮುಂದಾದರು. ಸಂದರ್ಶನ ನೀಡುವ ಸಲುವಾಗಿಯೇ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು 1972ರಲ್ಲಿ ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ ನಿಗದಿತ ಸಮಯಕ್ಕಿಂತ ತುಸು ಮುಂಚಿತವಾಗಿಯೇ ಬಂದು ನಿರೀಕ್ಷೆ ಮಾಡುತ್ತಿದ್ದರು. ಬಹಳ ಹೊತ್ತು ನಿರೀಕ್ಷೆ ಮಾಡಿದರೂ ಘಟಕ್ ಬರಲಿಲ್ಲ. ಹೀಗಾಗಿ ಈ ಸಾಕ್ಷ್ಯಚಿತ್ರ ಅಪೂರ್ಣವಾಯಿತು. ತೆರೆಯೂ ಕಾಣಲಿಲ್ಲ. ಹಣಕಾಸಿನ ಮುಗ್ಗಟ್ಟು, ವಿಕ್ಷಿಪ್ತತೆ ಕಾರಣದಿಂದಾಗಿಯೂ ಇವರ ಕೆಲವು ಸಿನೆಮಾಗಳು, ಸಾಕ್ಷ್ಯಚಿತ್ರಗಳು ಅಪೂರ್ಣವಾಗಿ ತೆರೆ ಕಾಣಲೇ ಇಲ್ಲ !
ಋತ್ವಿಕ್ ಘಟಕ್ ಅವರು 1950ರಲ್ಲಿ ನಿಮೈ ಘೋಷ್ ಅವರ “ಚಿನ್ನಮುಲ್” ಮೂಲಕ ನಟ ಮತ್ತು ಸಹಾಯಕ ನಿರ್ದೇಶಕರಾಗಿ ಪಶ್ಚಿಮ ಬಂಗಾಳದ ಸಿನೆಮಾ ರಂಗ ಪ್ರವೇಶಿಸಿದರು. ಇದಾದ ಎರಡು ವರ್ಷಗಳ ಬಳಿಕಕ “ನಾಗರಿಕ್”ನಲ್ಲಿ ತೊಡಗಿಸಿಕೊಂಡರು. ಇವರ ಜೀವಿತಾವಧಿಯಲ್ಲಿ ತೆರೆ ಕಾಣದ ನಾಗರಿಕ್ 1977ರಲ್ಲಿ ತೆರೆ ಕಂಡಿತು.
ಅಜಂತ್ರಿಕ್, ಬಾರಿ ಥೆಕ್ಕೆ ಪಾಲಿಯೆ, ಮೇಘೆ ಢಾಕಾ ತಾರಾ, ಕೋಮಲ್ ಗಾಂಧರ್, ಸುಬರ್ಣಾರೇಖಾ, ತೀತಾಶ್ ಏಕ್ತಿನಾದೀರ್ ನಾಮ್, ಜುಕ್ತಿ ತಕ್ಕೋ ಅರ್ ಗಪ್ಪೊ ಇವರು ಚಿತ್ರಕಥೆ ಬರೆದು, ನಿರ್ದೇಶಿಸಿದ ಸಿನೆಮಾಗಳು. ಪ್ರತಿಯೊಂದು ಸಿನೆಮಾ ಕೂಡ ಪ್ರೇಕ್ಷಕರನ್ನು ಗಾಢವಾಗಿ ತಟ್ಟುತ್ತದೆ.
ದೇಶದ ವಿಭಜನೆ ಅದರಲ್ಲಿಯೂ ಬಾಂಗ್ಲಾ ವಿಭಜನೆಯಾಗಿದ್ದು ಮೂಲತಃ ಅಂದಿನ ಅವಿಭಜಿತ ಬಾಂಗ್ಲಾದಲ್ಲಿ ಜನಿಸಿ, ಬಾಲ್ಯ, ಯೌವನದ ನೆನಪುಗಳನ್ನು ಹೊದ್ದ ಘಟಕ್ ಅವರಿಗೆ ತೀವ್ರ ನೋವು ಉಂಟು ಮಾಡಿತು. ಈ ವೇದನೆಯನ್ನು ಜೀವಿತಾವಧಿ ಮರೆಯಲಿಲ್ಲ. ಮೇಘೆ ಢಾಕಾ ತಾರಾ, ಕೋಮಲ್ ಗಾಂಧರ್ ಮತ್ತು ಸುಬರ್ಣಾರೇಖಾ ಸಿನೆಮಾಗಳು ದೇಶದ ವಿಭಜನೆಯ ಸಂಕಟವನ್ನು ದಟ್ಟವಾಗಿ ಚಿತ್ರಿಸುತ್ತವೆ.
ಋತ್ವಿಕ್ ಘಟಕ್ ಅವರು ಇತರ ಮುಖ್ಯ ನಿರ್ದೇಶಕರು ಮಾಡಿರುವ ಸಿನೆಮಾಗಳಿಗೂ ಕಥೆ – ಚಿತ್ರಕಥೆ ರಚಿಸಿದ್ದಾರೆ. ಇವುಗಳಲ್ಲಿ ಕಮರ್ಷಿಯಲ್ ಆಗಿ ಭಾರೀ ಯಶಸ್ಸು ಕಂಡ ಸಿನೆಮಾ ಎಂದರೆ 1958ರಲ್ಲಿ ತೆರೆ ಕಂಡ ಬಿಮಲ್ ರಾಯ್ ನಿರ್ದೇಶನದ “ಮಧುಮತಿ” ಅಂದಿನ ಕಾಲಕ್ಕೆ ಇದು 4 ಕೋಟಿ ರೂಪಾಯಿಗಳಿಗೂ ಹೆಚ್ಚು ಗಳಿಕೆ ಮಾಡಿತು ! ಇದರ ಯಶಸ್ಸಿನ ಅಲೆಗಳು ಇದೇ ಸ್ವರೂಪದ ಕಥೆ ಆಧರಿಸಿ ಭಾರತೀಯ ಚಿತ್ರರಂಗದ ಬೇರೆಬೇರೆ ಭಾಷೆಗಳಲ್ಲಿಯೂ ಸಿನೆಮಾಗಳ ನಿರ್ಮಾಣಕ್ಕೆ ಕಾರಣವಾಯತು.
ಭಾರತೀಯ ಚಿತ್ರರಂಗದ ಮೇರು ಸಿನೆಮಾ ತಂತ್ರಜ್ಞ, ನಿರ್ದೇಶಕ ಸತ್ಯಜೀತ್ ರೇ ಅವರು ಸ್ವತಃ ಋತ್ವಿಕ್ ಘಟಕ್ ಅವರ ಸಿನೆಮಾ ಕಲೆಗಾರಿಕೆಯ ಅಭಿಮಾನಿ. ಮೆಚ್ಚುಗೆಯ ನುಡಿಗಳನ್ನು ಆಡಿದ್ದಾರೆ. 1950 – 60ರ ದಶಕದ ಬಂಗಾಳದ ಬಹು ಸಿನೆಮಾ ನಿರ್ಮಾತೃ ಎಂದು ಕರೆದಿದ್ದಾರೆ. ಆದರೆ ಭಾರತೀಯ ಚಿತ್ರರಂಗಕ್ಕೆ ಘಟಕ್ ಅಂಥ ಮಹಾನ್ ಪ್ರತಿಭೆಯ ವಿರಾಟ ರೂಪ ಗೊತ್ತಾಗಿದ್ದು ಅವರ ಮರಣ ನಂತರವೇ ಎಂಬುದು ವಿಷಾದಕರ ಸಂಗತಿ !
ಪೂನಾ ಫಿಲ್ಮ್ ಇನ್ಸ್ಟ್ಯೂಟಿನಲ್ಲಿಯೂ ಘಟಕ್ ಅವರು ಕೆಲಸ ಮಾಡಿದ್ದು ಇವರಿಗಲ್ಲ; ಇವರ ವಿದ್ಯಾರ್ಥಿಗಳಾಗಿದ್ದವರಿಗೆ ಅಪೂರ್ವ ಸದವಕಾಶ. ಭಾರತೀಯ ಸಿನೆಮಾ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ ಮಣಿ ಕೌಲ್, ಅಡೂರು ಗೋಪಾಲಕೃಷ್ಣನ್, ಸಯೀದ್ ಅಖ್ತರ್ ಮಿರ್ಜಾ, ಜಾನ್ ಅಬ್ರಾಹಂಕುಮಾರ್ ಸಹಾನಿ , ಸುಭಾಷ್ ಘಾಯ್ ಇವರುಗಳು ಘಟಕ್ ಅವರ ಸಿನೆಮಾ ನೋಟದಿಂದ ಪ್ರಭಾವಿತರಾದರು !
ಕರ್ನಾಟಕದ ವಿವಿಧೆಡೆಯ ಪರ್ಯಾಯ ಸಿನೆಮಾ (ಮುಖ್ಯವಾಹಿನಿಗೆ ಹೊರತಾದದ್ದು) ಗಳ ಅಧ್ಯಯನಾಸ್ತಕರು ಸೇರಿಕೊಂಡು “ಮನುಜಮತ ಸಿನಿಯಾನ” ಎಂಬ ಬಳಗ ರೂಪಿಸಿಕೊಂಡಿದ್ದೇವೆ. 2014ರಿಂದ ಇದು ಸಕ್ರಿಯವಾಗಿದೆ. 9 ವರ್ಷಗಳ ಹಿಂದೆ ಹಾಸನದಲ್ಲಿ ಫಿಲ್ಮ್ ಫೆಸ್ಟಿವಲ್ ಮಾಡಿದ್ದೆವು (ಈ ಬಳಗದಿಂದ ಪ್ರತಿವರ್ಷ ಕನಿಷ್ಟ ನಾಲ್ಕು ಬಾರಿ ರಾಜ್ಯದ ಬೇರೆಬೇರೆ ಭಾಗಗಳಲ್ಲಿ ಫಿಲ್ಮ್ ಫೆಸ್ಟಿವಲ್ ನಡೆಯುತ್ತದೆ. ಇವುಗಳ ಆಯೋಜನೆಗೆ ಸರ್ಕಾರದಿಂದ ಹಣ ಸೇರಿದಂತೆ ಯಾವುದೇ ನೆರವು ಪಡೆಯುತ್ತಿಲ್ಲ) ಈ ಸಂದರ್ಭದಲ್ಲಿ ಸಿನೆಮಾ ಅಧ್ಯಯನಕಾರ ಪ್ರದೀಪ್ ಕೆಂಚನೂರು ಅವರು ಋತ್ವಿಕ್ ಘಟಕ್ ಅವರ ಸಿನೆಮಾಗಳು, ಧ್ವನಿ ಬಗ್ಗೆ ಉಪನ್ಯಾಸ ನೀಡಿದರು. ಇದು ನನ್ನನ್ನು ಮತ್ತೆ ಘಟಕ್ ಸಿನೆಮಾಗಳ ಮರು ಓದಿಗೆ ಅಣಿಗೊಳಿಸಿತು. ಈ ಲೇಖನ ಬರೆಯಲು ಹೊರಟಾಗ ಪ್ರದೀಪ್ ನೆನಪಾದರು.
“ಭಾರತೀಯ ಸಂದರ್ಭದಲ್ಲಿ ಸೃಜನಾತ್ಮಕ ಜಗತ್ತಿನಲ್ಲಿ ಬಹಳಷ್ಟು ಬಾರಿ ಪೈಪೋಟಿಗಳನ್ನು ನೋಡುತ್ತೇವೆ. ಆರ್ಟ್ ಹೌಸ್ ಸಿನೆಮಾ ಕ್ಷೇತ್ರದಲ್ಲಿ ಸತ್ಯಜಿತ್ ರೇ ಮತ್ತು ಋತ್ವಿಕ್ ಘಟಕ್ ಕುರಿತು ಇಂಥದ್ದನ್ನು ಕಾಣುತ್ತೇವೆ. ಇವರಿಬ್ಬರ ವಿಚಾರಧಾರೆಗಳು ಎರಡು ಸಿದ್ಧಾಂತಗಳ ರೀತಿ ಇವೆ (School of thought) ಇವರಿಬ್ಬರಿಗೂ ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳಿದ್ದಾರೆ. ಘಟಕ್ ಅವರ ಸಿನೆಮಾಗಳು ತುಂಬ ಆಸಕ್ತಿದಾಯಕ ! ಇವರ ಸಿನೆಮಾಗಳಲ್ಲಿ ವಿಗ್ರಹ ಭಂಜನೆ ಮಾದರಿಯ ವಿಚಾರಧಾರೆಗಳು ಕಾಣುತ್ತವೆ. ಅದುವರೆಗೂ ಪರ್ಯಾಯ ಸಿನೆಮಾ ಕ್ಷೇತ್ರದಲ್ಲಿ ಇದ್ದ ಸಿದ್ಧ ಮಾದರಿಗಳನ್ನು ಮುರಿದರು. ಮೊದಲಿಗೆ ಸಿನೆಮಾದಲ್ಲಿ ಸಿಂಕ್ ಸೌಂಡ್ ಶುರು ಮಾಡಿದರು. ಛಾಯಾಗ್ರಹಣದ ದೃಷ್ಟಿಕೋನಗಳಲ್ಲಿಯೂ ಹೊಸತನಗಳನ್ನು ತಂದರು. ಇವರ ಸಿನೆಮಾಗಳ ಸಂಗೀತದಲ್ಲಿಯೂ ವಿಭಿನ್ನತೆ ಇದೆ. ರೇ ಅವರು ಹಿನ್ನೆಲೆ ಸಂಗೀತಕ್ಕೆ ಸಿತಾರ್ ಬಳಸಿದರೆ ಘಟಕ್ ಅವರು ಸರೋದ್ ಬಳಸುತ್ತಾರೆ. ಇವುಗಳ ವೈಶಿಷ್ಟ ಗಮನಿಸಿದರೂ ಅವರು ಎರಡು ಧ್ರುವಗಳಾಗಿಯೂ ಕಾಣಿಸುತ್ತಾರೆ. ಈ ಎರಡೂ ವಾದ್ಯಗಳು ಸಿನೆಮಾದ ಆಯಾ ಸಂದರ್ಭಕ್ಕೆ ಹೊರಡಿಸುವ ರಾಗಗಳು ವಿಶೇಷ ಭಾವಾರ್ಥ ಕಟ್ಟಿಕೊಡುತ್ತವೆ. ಘಟಕ್ ಸಿನೆಮಾಗಳು ಮನ ಕಲಕುವುದಷ್ಟೆ ಅಲ್ಲ; ಸಂವೇದನಾಶೀಲ ಪ್ರೇಕ್ಷಕರನ್ನು ಅಲುಗಾಡಿಸುತ್ತವೆ, ದಿಗ್ಬ್ರಮೆಗೊಳಿಸುತ್ತವೆ. ಸುಬರ್ಣಾರೇಖಾ (ಸುವರ್ಣ ರೇಖೆ) ಇದಕ್ಕೊಂದು ಉದಾಹರಣೆಯಷ್ಟೆ. ಅವರ ಎಲ್ಲ ಸಿನೆಮಾಗಳು ವೀಕ್ಷಕರನ್ನು ತೀವ್ರ ಚಿಂತನೆಗೆ ಹಚ್ಚುತ್ತವೆ” ಎಂದು ಪ್ರದೀಪ್ ಕೆಂಚನೂರು ವಿವರಿಸಿದರು.