ಇಂದಿಗೂ ಸಹ ಓರ್ವ ಮಹಿಳೆ ಸಿಗರೇಟು ಸೇದುತ್ತಿದ್ದರೆ ಹೆಚ್ಚಿನವರು ಕುತೂಹಲ, ಆಶ್ಚರ್ಯದಿಂದ ಅತ್ತ ಕಣ್ಣರಳಿಸುತ್ತಾರೆ. ಇನ್ನು ವೈನ್ ಸ್ಟೋರ್, ಬಾರ್ ಗಳಿಗೆ ಮಹಿಳೆಯರೇ ಹೋದರಂತೂ ಮತ್ತಷ್ಟೂ ಕುತೂಹಲದ ಕಣ್ಣುಗಳು ಅತ್ತಲೇ ತಿರುಗಿರುತ್ತವೆ. ಇದಕ್ಕೆ ಭಾರತೀಯ ಮಾಧ್ಯಮಗಳೂ ಹೊರತಲ್ಲ. ಕೊರೊನಾ ಅವಧಿಯಲ್ಲೇ ಇವುಗಳ ಬಣ್ಣ ಬಯಲಾಗಿದೆ. ಮದ್ಯದಂಗಡಿಗಳಿಗೆ ಇದ್ದ ಕಟ್ಟುಪಾಡು ಸಡಿಲಿಸಿದಾಗ ಮದ್ಯ ಖರೀದಿಸಲು ಸರದಿ ಸಾಲಿನಲ್ಲಿ ನಿಂತ ಯುವತಿಯರತ್ತಲೇ ಅವುಗಳ ಕ್ಯಾಮೆರಾ ಕಣ್ಣು ನೆಟ್ಟಿದ್ದನ್ನು ಮರೆಯಲ್ಲಂತೂ ಸಾಧ್ಯವಿಲ್ಲ.
ಇಂಥ ಸಂಗತಿಗಳನ್ನೇ ಆಧರಿಸಿ “ಸಜನಿ ಶಿಂಧೆ ಕಾ ವೈರಲ್ ವಿಡಿಯೋ” ಸಿನೆಮಾ ರೂಪುಗೊಂಡಿದೆ. ಸಂಪ್ರದಾಯಸ್ಥ ಆದರೆ ಈ ಇಲ್ಲಿನ ಗಂಡಸರ್ಯಾರು ಸಹ ಮಹಿಳೆಯರನ್ನು ಗೌರವಿಸದ ಕುಟುಂಬದ ಸಜನಿ ಅಥವಾ ಅಂಥ ಲಕ್ಷಾಂತರ, ಕೋಟ್ಯಂತರ ಸಜ್ನಿಗಳ ಕಥೆಯನ್ನು ಚಿತ್ರ ಬಹು ಪರಿಣಾಮಕಾರಿಯಾಗಿ ಹೇಳುತ್ತದೆ.
ಪ್ರಾಥಮಿಕದಿಂದ ಹಿಡಿದು ಪ್ರೌಢಶಾಲೆ ತನಕದ ಶಿಕ್ಷಣ ಸಂಸ್ಥೆಯಲ್ಲಿ ಸಜ್ನಿ, ಭೌತಶಾಸ್ತ್ರದ ಶಿಕ್ಷಕಿ. ಸಂಸ್ಥೆಯ ಪರವಾಗಿ ವಿದೇಶಕ್ಕೆ ಪಯಣ. ಅದರ ಕೆಲಸ ಮುಗಿಸಿದ ನಂತರ ಈಕೆಯ ಜನ್ಮದಿನ ಆಚರಿಲು ಗೆಳತಿಯರು ನೈಟ್ ಕ್ಲಬ್ ಗೆ ಕರೆದೊಯ್ಯುತ್ತಾರೆ. ಕೇಕ್ ಕತ್ತರಿಸಿದ ನಂತರ ಡ್ರಿಂಕ್ಸ್ ತೆಗೆದುಕೊಳ್ಳಲು ಒತ್ತಾಯಿಸುತ್ತಾರೆ. ಆಕೆ ತನ್ನ ಮದುವೆಯಾಗಲಿರುವ ಹುಡುಗನಿಗೆ ಪೋನ್ ಮಾಡುತ್ತಾಳೆ. ಆತನೂ “ಆಧುನಿಕವಾಗಿರು” ಅಂತೇಳ್ತಾನೆ… ಮುಂದಿನದೇ ತಿರುವು.
ಸಜ್ನಿಗೆ ಆಕೆಯ ಗೆಳತಿ ಬಲವಂತದಿಂದ ಕುಡಿಸುತ್ತಾಳೆ. ಅರೆಬರೆ ಜ್ಞಾನ, ಅರೆಬರೆ ಬಟ್ಟೆಯಲ್ಲಿ ಸಜ್ನಿ ನೃತ್ಯ ಮಾಡುವುದನ್ನು ಆಕೆ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾಗೆ ಅಫ್ ಲೋಡ್ ಮಾಡುತ್ತಾಳೆ. ದಿನ ಕಳೆಯುವುದರಲ್ಲಿ ವಿಡಿಯೋ ವೈರಲ್ ಆಗುತ್ತದೆ. ಮದುವೆಯಾಗಲಿರುವವ ಯಾವ ನೈತಿಕ ಬೆಂಬಲವನ್ನೂ ಕೊಡದೇ ಪಲಾಯನ ಮಾಡುತ್ತಾನೆ… ಶಿಕ್ಷಣ ಸಂಸ್ಥೆಯ ಪ್ರಿನ್ಸಿಪಾಲ್ ಮೇಲೆ ಶಿಕ್ಷಕಿಯನ್ನು ವಜಾ ಮಾಡುವಂತೆ ಒತ್ತಡ ಹೆಚ್ಚುತ್ತದೆ. ಮಹಿಳಾ ಪ್ರಿನ್ಸಿಪಾಲ್ ಬೆಂಬಲ ಕೇಳಿಕೊಂಡು ಸಜ್ನಿ ಬರುತ್ತಾಳೆ.. ಇಲ್ಲಿಂದ ಮತ್ತೊಂದು ತಿರುವು.
ನಾಪತ್ತೆಯಾದ ಸಜ್ನಿಯನ್ನು ಹುಡುಕಲು ಪೊಲೀಸರು ಶುರು ಮಾಡುತ್ತಾರೆ. ತನಿಖಾ ತಂಡದ ನೇತೃತ್ವವನ್ನು ಮಹಿಳಾ ಅಧಿಕಾರಿ ವಹಿಸಿರುತ್ತಾರೆ. ಸಜ್ನಿಯ ಹೆಸರಾಂತ ರಂಗಭೂಮಿ ನಟ ಅಪ್ಪನ ಮೇಲೆ, ಭಾವಿ ವರನ ಮೇಲೆ ಹೀಗೆ ಎಲ್ಲರ ಮೇಲೂ ಸಂಶಯದ ಕಣ್ಣು ತಿರುಗುತ್ತದೆ.. ಅಸಲಿಗೆ ಅಪರಾಧಿ ಅಥವಾ ಅಪರಾಧಿಗಳ್ಯಾರು… ? ಇದರ ಬಗ್ಗೆಯೇ ಇಡೀ ಚಿತ್ರ ಫೋಕಸ್ ಆಗಿದೆ.
ಒಂದು ಸಮಾಜ ತನ್ನೆಲ್ಲ ಸಾಂಪ್ರದಾಯಿಕ ಮೌಲ್ಯಗಳನ್ನು ಕಾಪಾಡುವ ಹೊಣೆಯನ್ನು ಹೆಣ್ಣೆ ಹೊತ್ತಿದ್ದಾಳೆ ಎಂದು ವರ್ತಿಸುವುದೇಕೆ ಎಂದು ಯಾವುದೇ ವಾಚ್ಯವೂ ಇಲ್ಲದೇ ಸಿನೆಮಾ ಪ್ರಶ್ನಿಸುತ್ತಲೇ ಸಾಗುತ್ತದೆ. ಇದಕ್ಕೆ ಬಿಗಿಯಾದ ಚಿತ್ರಕಥೆ, ಅದನ್ನು ತೆರೆಗೆ ತಂದಿರುವ ರೀತಿ ಮನ ಮುಟ್ಟುತ್ತದೆ.
ಹಿಂದಿ ಭಾಷೆಯ “ಸಜನಿ ಶಿಂಧೆ ಕಾ ವೈರಲ್ ವಿಡಿಯೋ” ಸಿನೆಮಾದ ಕಥೆ, ಚಿತ್ರಕಥೆಯನ್ನು ಮಿಖಿಲ್ ಮುಸಾಲೆ ಬರೆದು ಅವರೇ ಉತ್ತಮವಾಗಿ ನಿರ್ದೇಶಿಸಿದ್ದಾರೆ. ಛಾಯಾಗ್ರಹಣ, ಹಿನ್ನೆಲೆ ಸಂಗೀತ ಚಿತ್ರಕಥೆಗೆ ಪೂರಕವಾಗಿ ಕೆಲಸ ಮಾಡಿವೆ. ಸಂಕಲನವೂ ಉತ್ತಮ.
ತಮ್ಮ ಅಭಿನಯದಿಂದ ರಾಧಿಕಾ ಮದನ್, ನಿಮ್ರತ್ ಕೌರ್, ಭಾಗ್ಯಶ್ರೀ, ಸುಭೋದ್ ಬಾವೆ ಗಮನ ಸೆಳೆಯುತ್ತಾರೆ. ಮಹಾರಾಷ್ಟ್ರದ ಮಡೋಕ್ ಫಿಲ್ಮ್ಸ್ ನಿರ್ಮಿಸಿರುವ ಈ ಚಿತ್ರ ಅಕ್ಟೋಬರ್ 27, 2023ರಲ್ಲಿ ಥಿಯೇಟರ್ ನಲ್ಲಿ ಬಿಡುಗಡೆಯಾಗಿದೆ. ಪ್ರಸ್ತುತ ನೆಟ್ ಫ್ಲಿಕ್ ನಲ್ಲಿ ನೋಡಲು ಲಭ್ಯವಿದೆ.