ಮಂಗೋಲಿಯಾ ದೇಶ ಎಂದ ಕೂಡಲೇ ನಮ್ಮ ಚಿತ್ತದಲ್ಲಿ ಕುದುರೆ ಮೇಲೆ ಕುಳಿತ ಅಲೆಮಾರಿಗಳು, ದನ, ಕುದುರೆಗಳ ಹಿಂಡು, ಪಾರಂಪಾರಿಕಾ ವೃತ್ತಾಕಾರದ ವಸತಿಗಳು ಇವೇ ಕಣ್ಮುಂದೆ ಬರುತ್ತವೆ. ಈಗಲೂ ಅಲ್ಲಿನ ಗ್ರಾಮೀಣದಲ್ಲಿ ಇಂಥದ್ದೇ ಚಿತ್ರ ಇದೆ. ಆದರೆ ಅಲ್ಲಿಯೂ ಬದಲಾವಣೆಯ ಪರ್ವ ಆರಂಭವಾಗಿ ಮೂರುವರೆ ದಶಕ ಆಗುತ್ತಾ ಬಂದಿದೆ. ಹೀಗಿದ್ದರೂ ಗ್ರಾಮೀಣ – ನಗರ ಎಂಬ ಬೇಧವಿಲ್ಲದೇ ಮಂಗೋಲಿಯನರು ತಮ್ಮ ಪಾರಂಪಾರಿಕಾ ಧಾರ್ಮಿಕ ನಂಬಿಕೆಗಳ ಮೇಲೆ ಇನ್ನೂ ವಿಶ್ವಾಸ ಇಟ್ಟಿದ್ದಾರೆ. ಆದರೆ ಅಲ್ಲಿನ ಯುವಜನತೆಯಲ್ಲಿ ಇಂಥ ನಂಬಿಕೆಗಳನ್ನು ಪ್ರಶ್ನೆ ಮಾಡುವವರು, ಅಪನಂಬಿಕೆ ಇರುವವರೂ ಇದ್ದಾರೆ.
ಈ ಹಿನ್ನೆಲೆಯಲ್ಲಿ ಅಲ್ಲಿನ “ಸಿಟಿ ಆಫ್ ವಿಂಡ್” ಅರ್ಥಾತ್ ಗಾಳಿ ನಗರ ಸಿನೆಮಾ ಇದೆ. ಭಾರತದಲ್ಲಿ ದೈವ ಆರಾಧಕರು, ದೈವ ಆವಾಹಕರು ಇರುವಂತೆ ಅಲ್ಲಿಯೂ ಇದ್ದಾರೆ. ಇದು ಪಾರಂಪಾರಿಕವಾಗಿ ಅನುಸರಿಸಲಾಗುವ ಪದ್ಧತಿ. ತೀವ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರದಲ್ಲಿ ಇರುವ ಮಧ್ಯಮ ವರ್ಗದ ಕುಟುಂಬದ ತರುಣ (ಹದಿನೇಳು ವರ್ಷದವನು) ಜೆ, ಶಾಮನ್ ಅಂದರೆ ದೈವಾಹಕ.
ಮಂಗೋಲಿಯಾದ ಹಿರಿಯ ದೈವ (ದೊಡ್ಡಪ್ಪ) ವನ್ನು ತಮ್ಮಲ್ಲಿ ಆಹ್ವಾನಿಸಿಕೊಳ್ಳುವ ಶಾಮನ್ ಆಗುವ ಸಂದರ್ಭಕ್ಕೆ ತರುಣ ಜೆ ಬೇರೆಯೇ ವ್ಯಕ್ತಿ. ಆತನ ಸಹಜ ಧ್ವನಿ, ಹಾವಾಭಾವ ಎಲ್ಲವೂ ಬದಲಾಗುತ್ತದೆ. ಕಷ್ಟಗಳಿರುವವರು ಆಗ ಪರಿಹಾರ ಕೋರುತ್ತಾರೆ. ಸಂಕಷ್ಟಗಳನ್ನು ಪರಿಹರಿಸುತ್ತೇನೆ ಎಂದು ದೈವ ಭರವಸೆ ನೀಡುತ್ತದೆ.
ಇಂಥ ಸಂದರ್ಭದಲ್ಲಿ ಓರ್ವ ಹುಡುಗಿಯ ಸಂಕಷ್ಟವನ್ನು ಪರಿಹರಿಸಲು ಆಕೆಯ ತಾಯಿ ಶಾಮನ್ ಮೊರೆ ಹೋಗುತ್ತಾಳೆ. ಹದಿಹರೆಯದ (ಹದಿನಾರು ವರ್ಷ) ಹುಡುಗಿಗೆ ಈ ದೈವಾಚರಣೆಯಲ್ಲಿ ನಂಬಿಕೆ ಇಲ್ಲ. ದೈವ ಆಹ್ವಾನ ಪ್ರಕ್ರಿಯೆ ನಂತರ ಆಕೆ ಜೆಗೆ ಇದೊಂದು ನಾಟಕ ಎನ್ನವಂತೆ ಕಟುವಾಗಿ ಪ್ರತಿಕ್ರಿಯಿಸುತ್ತಾಳೆ. ಗಮನಾರ್ಹ ಎಂದರೆ ಜೆ ಸಹಪಾಠಿಗಳಲ್ಲಿ ಹೆಚ್ಚಿನವರು ಕೂಡ ಆತನ ದೈವ ಆಚರಣೆ ಛೇಡಿಸುತ್ತಿರುತ್ತಾರೆ.
ಇಲ್ಲಿ ನಿರ್ದೇಶಕಿ ಲ್ಖಗ್ವದುಲಂ ಪುರೆವ್-ಓಚಿರ್ ಅವರು ಯುವ ಮಂಗೋಲಿಯಾದ ಬೇರೆಬೇರೆ ಆಯಾಮಗಳನ್ನೂ ಹೇಳುತ್ತಿದ್ದಾರೆ. ಒಂದು ಧಾರ್ಮಿಕ ನಂಬಿಕೆಯ ವರ್ಗ ಇನ್ನೊಂದು ಅಪನಂಬಿಕೆ ವರ್ಗ.
ಈ ನಂತರ ಜೆ ಬದುಕಿನಲ್ಲಿ ತಾರುಣ್ಯ ಸಹಜ ಬದಲಾವಣೆಗಳು ಆಗುತ್ತವೆ. ಈ ಪ್ರಕ್ರಿಯೆ ಹಂತದ ಬೆಳವಣಿಗೆಗಳನ್ನು ನಾನು ವಿವರಿಸಲು ಹೋಗುವುದಿಲ್ಲ. ಇದರಿಂದ ಸಿನೆಮಾ ನೋಡುವ ನಿಮ್ಮ ಆಸಕ್ತಿಗೆ ಕುಂದುಂಟಾಗಬಹುದು.
ತರುಣ ಜೆ. ನಲ್ಲಿ ಉಂಟಾಗುವ ತಾರುಣ್ಯ ಸಹಜ ಕುತೂಹಲ, ನಡವಳಿಕೆ ನಂತರ ಆತ ದೈವಕ್ಕೆ ಆಹ್ವಾನ ನೀಡಿದರೆ ದೈವಾಹನ ಆಗುವುದಿಲ್ಲ. ಆತ ಮಾಡಬಾರದೆನ್ನೆಲ್ಲ ಮಾಡಿದ್ದಾನೆ ಎನ್ನುವಂತೆ ಕುಟುಂಬದವರು, ನೆರೆಹೊರೆಯವರು ಮಾತನಾಡುತ್ತಾರೆ. ವಾಸ್ತವವಾಗಿ ಆತ ಮುಗ್ದ. ಇದು ಆತನ ನಟನೆಯಲ್ಲ. ಸಹಜ ಸ್ವಭಾವ. ತಾರುಣ್ಯದ ಪ್ರಭಾವಕ್ಕೆ ಆತ ಒಳಗಾಗಿದ್ದಾನೆ.
ಇಲ್ಲಿ ನಿರ್ದೇಶಕಿ ಹಿಂದಿನ ಅಂದರೆ ಹಳೆಯ ನಂಬಿಕೆಯನ್ನೇ ಪ್ರತಿಪಾದಿಸುತ್ತಿದ್ದಾರೆಯೇ ? ಏಕೆಂದರೆ ಓರ್ವ ತರುಣ ತನ್ನ ಹರೆಯದ ತವಕಗಳಿಗೆ ಸ್ಪಂದಿಸುವುದನ್ನು ದೈವ ಸಹಿಸುವುದಿಲ್ಲ ಎಂದು ಅವರು ಹೇಳಲು ಹೊರಟಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ.
ಮಂಗೋಲಿಯಾದ ಸಮಾಜ ಹಿಂದಿನಂತಿಲ್ಲ. ಅದು ಸಂಕ್ರಮಣಕ್ಕೆ ಒಳಗಾಗಿದೆ. ಹಳೇ ತಲೆಮಾರು- ಹೊಸ ತಲೆಮಾರು ಮತ್ತು ಹೊಸ ತಲೆಮಾರಿನಲ್ಲಿಯೇ ಭಿನ್ನ ನಂಬಿಕೆ ಹೊಂದಿರುವವರನ್ನು ಕಾಣುತ್ತಿದೆ. ಸುತ್ತಲಿನ ಪರಿಸರದ ಪ್ರಭಾವ ಸಹಜವಾಗಿಯೇ ಆಗುತ್ತದೆ. ಇದಕ್ಕೆ ಜೆ ಹೊರತಾಗಿಲ್ಲ. ಆದರೂ ನಿರ್ದೇಶಕಿ ಕಥನ ಕಟ್ಟಿದ ರೀತಿ ದೈವ ಆಹ್ವಾನ ಮಾಡುವವರು ಬದಲಾದ ಸಮಾಜದ ಬದಲಾವಣೆ ಪ್ರಭಾವಕ್ಕೆ ಯುವ ಶಾಮನ್ ಗಳು ಒಳಗಾಗಲೇ ಬಾರದು ಎನ್ನುವ ರೀತಿ ಇರುವುದು ಮಾತ್ರ ಅಚ್ಚರಿ !
ಈ ಕಥನವನ್ನು ನಿರ್ದೇಶಕಿ ನಿರೂಪಿಸಿರುವ ರೀತಿ, ಪಾತ್ರಗಳಿಗಾಗಿ ಮಾಡಿರುವ ಆಯ್ಕೆ, ಚಿತ್ರೀಕರಣಕ್ಕೆ ಆಯ್ಕೆ ಮಾಡಿರುವ ಸ್ಥಳ ಅನನ್ಯ. ಯುವ ಶಾಮನ್ ಪಾತ್ರದಲ್ಲಿ ಟೆರ್ಗೆಲ್ ಬೋಲ್ಡ್ ಎರ್ಡೆನ್ ಅಭಿನಯ ಮೆಚ್ಚುಗೆಗೆ ಪಾತ್ರವಾಗುತ್ತದೆ.
ಛಾಯಾಗ್ರಹಣ- ಸಂಗೀತ – ಸಂಕಲನ ಅಚ್ಚುಕಟ್ಟು. ನಾನು ಈ ಸಿನೆಮಾವನ್ನು ಬೆಂಗಳೂರಿನಲ್ಲಿ ಫೆಬ್ರವರಿ ೨೯ ರಿಂದ ಆರಂಭವಾಗಿರುವ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲಿ ನೋಡಿದೆ. ಈ ಸಿನೆಮಾ ಮರು ಪ್ರದರ್ಶನ ಕಂಡರೆ ಆಸಕ್ತರು ನೋಡಿ !